ಬೆಂಗಳೂರು:ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್‌ಗಳಿಗೆ ವಿಕಲಚೇತನರ ಕೋಟಾದಲ್ಲಿ ಮೀಸಲಾತಿ ಬಯಸಿರುವ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ ಇಂದಿನಿಂದ ಆರಂಭವಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಚೇರಿಯಲ್ಲಿ ನಡೆಯುತ್ತಿರುವ ವೈದ್ಯಕೀಯ ತಪಾಸಣೆಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಚಾಲನೆ ನೀಡಿದರು.
ಬೌರಿಂಗ್ ಮತ್ತು ವಿಕ್ಟೋರಿಯಾ ಆಸ್ಪತ್ರೆಯ ಆರು ಮಂದಿ ಮೂಳೆ ರೋಗ ಮತ್ತು ಕಣ್ಣು-ಮೂಗು-ಕಿವಿ (ಇಎನ್‌ಟಿ) ತಜ್ಞ ವೈದ್ಯರು ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದರು.
ವಿಕಲಚೇತನರ ಕೋಟಾದಡಿ 783 ಅರ್ಜಿ
ಸಿಇಟಿಗೆ ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ 783 ಮಂದಿ ವಿಕಲಚೇತನರ ಕೋಟಾದಡಿ ಮೀಸಲಾತಿ ಬಯಸಿದ್ದು, ಎಲ್ಲರನ್ನು ಜೂನ್ 12ವರೆಗೆ ತಪಾಸಣೆಗೆ ಒಳಪಡಿಸಲಾಗುವುದು. ಮೊದಲ ದಿನ 250 ಮಂದಿಗೆ ವೈದ್ಯಕೀಯ ಪರೀಕ್ಷೆಗೆ ಕರೆಯಲಾಗಿದೆ.
ಕಣ್ಣಿನ ಸಮಸ್ಯೆ ಇರುವವರ ತಪಾಸಣೆ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು, ಕೆಇಎ ಸಿಬ್ಬಂದಿಯೇ ಕಣ್ಣಿನ ಸಮಸ್ಯೆ ಇರುವ ಅಭ್ಯರ್ಥಿಗಳನ್ನು ವಾಹನದಲ್ಲಿ ಕರೆದೊಯ್ಯಲಿದ್ದಾರೆ.
ವಿಕಲಚೇತನರ ಅರ್ಹತೆ ವಿಷಯದಲ್ಲಿ ವೈದ್ಯಕೀಯ ಸಮಿತಿ ನಿರ್ಧಾರವೇ ಅಂತಿಮ ಎಂದು ಪ್ರಸನ್ನ ಸ್ಪಷ್ಟಪಡಿಸಿದ್ದಾರೆ.
ವಿಕಲಚೇತನ ಕೋಟಾದಡಿ ಅರ್ಹತೆ ಪಡೆಯಲು ಅಭ್ಯರ್ಥಿಗಳು ಯುಜಿಸಿಇಟಿ ಅರ್ಜಿ ಪ್ರತಿ, ಪ್ರವೇಶ ಪತ್ರ, ಅಭ್ಯರ್ಥಿ ಭಾವಚಿತ್ರ ಇರುವ ಗುರುತಿನ ಚೀಟಿ, ವೈದ್ಯಕೀಯ ಪ್ರಮಾಣಪತ್ರ, ಕಿವುಡುತನದ ಸಮಸ್ಯೆ ಇರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ ಪಡೆದ ಪ್ರಮಾಣಪತ್ರಗಳನ್ನು ತಪಾಸಣೆ ಸಂದರ್ಭದಲ್ಲಿ ತರುವುದು ಕಡ್ಡಾಯ ಎಂದು ಅವರು ಹೇಳಿದರು.