ಬೆಂಗಳೂರು:ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್ ರಕ್ಷಣೆಗೆ ಯಾವ ರಾಜಕಾರಣಿಯೂ ಪ್ರಯತ್ನ ಮಾಡಿಲ್ಲ, ಸರ್ಕಾರದಿಂದ ನಾವ್ಯಾರೂ ಮಧ್ಯ ಪ್ರವೇಶಿಸುವುದಿಲ್ಲ, ಮುಕ್ತವಾಗಿ ತನಿಖೆ ನಡೆಸಲು ಪೊಲೀಸರಿಗೆ ಅವಕಾಶವಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿನಲ್ಲಿ ಏನೆಲ್ಲ ಕ್ರಮ ತೆಗೆದುಕೊಳ್ಳಲು ಅವಕಾಶವಿದೆಯೋ ಅದನ್ನು ಪೊಲೀಸರು ಮಾಡುತ್ತಾರೆ, ಎಲ್ಲರಿಗೂ ಕಾನೂನು ಒಂದೇ, ನಟ ದರ್ಶನ್‌ಗೂ ಒಂದೇ ಕಾನೂನು, ಪರಮೇಶ್ವರ್‌ಗೂ ಒಂದೇ ಕಾನೂನು, ಯಾರು ಸಹ ಕಾನೂನು ಕೈಗೆತ್ತಿಕೊಳ್ಳಬಾರದು ಎಂದರು.
ದರ್ಶನ್ ದೂರು ಕೊಡಬಹುದಾಗಿತ್ತು
ರೇಣುಕಾಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್ ಅವರ ಆಪ್ತೆ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ಎನ್ನಲಾಗಿದೆ, ಈ ಬಗ್ಗೆ ದರ್ಶನ್ ದೂರು ಕೊಡಬಹುದಾಗಿತ್ತು, ಪೊಲೀಸರು ಕೂಡಲೇ ಕ್ರಮ ತೆಗೆದುಕೊಳ್ಳುತ್ತಿದ್ದರು, ಅದನ್ನು ಬಿಟ್ಟು, ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದು ಹೊಡೆದು ಸಾಯಿಸಿದ್ದಾರೆ ಎಂಬ ಮಾಹಿತಿ ಇದೆ.
ದೂರು ಕೊಟ್ಟಿದ್ದರೆ ಇದೆಲ್ಲವನ್ನು ತಡೆಯಲು ಅವಕಾಶವಿತ್ತು, ಆದರೆ, ಘಟನೆ ನಡೆದು ಹೋಗಿದೆ, ಯಾರೂ ಏನೂ ಮಾಡಲು ಆಗುವುದಿಲ್ಲ, ತನಿಖೆಯಲ್ಲಿ ಬರುವ ಅಂಶಗಳನ್ನು ಆಧರಿಸಿ ಕಾನೂನು ಪ್ರಕಾರ ಇಲಾಖೆ ಕ್ರಮ ತೆಗೆದುಕೊಳ್ಳುತ್ತದೆ.
ಕೊಲೆಯಾದ ರೇಣುಕಾಸ್ವಾಮಿ ಕುಟುಂಬ ವರ್ಗದ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುತ್ತೇನೆ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ, ಪ್ರಕರಣದಲ್ಲಿ ಭಾಗಿಯಾಗಿದ್ದ ೧೩ ಜನರನ್ನು ಈಗಾಗಲೇ ಬಂಧಿಸಲಾಗಿದೆ, ಪ್ರಕರಣದ ತನಿಖೆಯನ್ನು ಬೇರೆ ಏಜೆನ್ಸಿಗೆ ಕೊಡುವ ಅಗತ್ಯವಿಲ್ಲ.
ತನಿಖೆ ನಂತರ ಎಲ್ಲ ಮಾಹಿತಿ
ತನಿಖೆ ಪೂರ್ಣಗೊಂಡ ನಂತರ ಎಲ್ಲ ಮಾಹಿತಿ ಗೊತ್ತಾಗುತ್ತದೆ, ಅಲ್ಲಿಯವರೆಗೆ ಈ ಬಗ್ಗೆ ಅಧಿಕಾರಿಗಳನ್ನು ನಾವು ಕೇಳುವುದಿಲ್ಲ, ಅವರೂ ನಮಗೆ ಹೇಳುವುದಿಲ್ಲ ಎಂದರು.
ನಟ ದರ್ಶನ್ ಅವರ ಘಟನೆಗಳು ಇದೇ ಮೊದಲಲ್ಲ, ಮಾಧ್ಯಮಗಳಲ್ಲಿ ಬಂದಿರುವುದನ್ನು ಗಮನಿಸಿದ್ದೇನೆ, ಪೊಲೀಸರು ತನಿಖೆ ಮಾಡುತ್ತಾರೆ, ತನಿಖೆ ನಂತರ ವರದಿಯಲ್ಲಿ ಏನು ಶಿಫಾರಸ್ಸು ಮಾಡುತ್ತಾರೆ ನೋಡಬೇಕು, ಪೊಲೀಸರಿಗೆ ಫ್ರೀ ಹ್ಯಾಂಡ್ ಇದೆ, ಸೆಕ್ಷನ್ ಹಾಕುವುದಕ್ಕೆ ಅವರು ಸಮರ್ಥರು, ನಮ್ಮನ್ನು ಕೇಳಿಕೊಂಡು ಸೆಕ್ಷನ್ ಹಾಕುವುದಿಲ್ಲ ಎಂದರು.
ನಿಯಮದ ಚೌಕಟ್ಟಿನಲ್ಲಿ ಪೊಲೀಸರ ವರ್ಗಾವಣೆ
ಪೊಲೀಸರ ಅಂತರ ಜಿಲ್ಲಾ ವರ್ಗಾವಣೆಗೆ ಸಂಬಂಧಿಸಿದಂತೆ ಶಿಸ್ತು ಬದ್ಧವಾಗಿ ನಿಯಮದ ಚೌಕಟ್ಟಿನಲ್ಲಿ ನಡೆಯಬೇಕಾಗುತ್ತದೆ, ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ, ಪೋರ್ಟಲ್ ಅರ್ಜಿಗಳು ನಿಯಮದ ಪ್ರಕಾರ ಆಗುತ್ತವೆ.
ಪೊಲೀಸ್ ವರ್ಗಾವಣೆಗೆ ಸಂಬಂಧಿಸಿದಂತೆ ಕೆಲವು ನಿಯಮಗಳಿವೆ, ಅವನ್ನು ಮೀರಿ ವರ್ಗಾವಣೆ ಮಾಡಲು ಆಗುವುದಿಲ್ಲ, ಹಾಗೆ ಮಾಡಬೇಕಾದರೆ ನಿಯಮಗಳನ್ನು ಬದಲಾಯಿಸಬೇಕಾಗುತ್ತದೆ.
ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಒಂದು ವರ್ಷದ ನಿಯಮವಿತ್ತು, ಸದನದಲ್ಲಿ ಕಾನೂನು ಬದಲಾಯಿಸಿ ಎರಡು ವರ್ಷ ಮಾಡಲಾಗಿದೆ, ಇರುವಂತಹ ನಿಯಮ ಉಲ್ಲಂಘನೆ ಮಾಡಿ, ವರ್ಗಾವಣೆ ಮಾಡುವುದಕ್ಕೆ ಅವಕಾಶವಿಲ್ಲ, ಡಿಜಿಯಾಗಲಿ, ನಾನಾಗಲೀ ಅಥವಾ ಯಾರೇ ಆಗಲಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗುತ್ತದೆ.
ವರ್ಗಾವಣೆಗೆ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿರುವುದಕ್ಕೆ ಸಿಬ್ಬಂದಿಗಳಿಗೆ ಸಣ್ಣಪುಟ್ಟ ತೊಂದರೆಗಳು ಆಗಿದ್ದರೆ ಸರಿಪಡಿಸುವುದಕ್ಕೆ ಸೂಚನೆ ನೀಡಲಾಗುವುದು, ಅವರಿಗೂ ಕುಟುಂಬಗಳಿವೆ, ಇದನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕಾಗುತ್ತದೆ ಎಂದರು.
545 ಪಿಎಸ್‌ಐ ನೇಮಕಾತಿ
545 ಪಿಎಸ್‌ಐ ಹುದ್ದೆಗಳ ನೇಮಕಾತಿ ಕುರಿತು ಕೋರ್ಟ್‌ನಿಂದ ಆದೇಶ ತಂದಾಗ, ನಮ್ಮ ಕೈ ಕಟ್ಟಿ ಹಾಕಿದಂತಾಗುತ್ತದೆ, ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿ ಆದೇಶ ಕೊಡಬೇಕೆಂಬ ಉದ್ದೇಶದಿಂದ ಪರೀಕ್ಷೆ ಪೂರ್ಣಗೊಳಿಸಿದ್ದೇವೆ.
ಈ ಹಂತದಲ್ಲಿ ಕೆಲವರು ಕೋರ್ಟ್‌ಗೆ ಹೋಗಿದ್ದಾರೆ, ಸದರಿ ಪ್ರಕರಣ ಮುಗಿದರೆ ಮುಂದಿನ ನೇಮಕಾತಿಗಳಿಗೆ ಅನುಕೂಲವಾಗುತ್ತದೆ, 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.