ಬೆಂಗಳೂರು:ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅಗತ್ಯವಿದ್ದರೆ ಸಿಐಡಿ ಅವರು ಬಂಧಿಸಲಿದ್ದಾರೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 15ರೊಳಗೆ ಚಾರ್ಜ್‌ಶೀಟ್ ಸಲ್ಲಿಸಬೇಕು, ಹೀಗಾಗಿ ಯಡಿಯೂರಪ್ಪ ಅವರು ತನಿಖೆಗೆ ಬರಲು ನೋಟಿಸ್ ನೀಡಿದ್ದರು, ಆದರೆ ಅವರು ಹಾಜರಾಗಲಿಲ್ಲ.
ಕಾನೂನು ವ್ಯಾಪ್ತಿಯಲ್ಲಿ ಕ್ರಮ
ತನಿಖಾ ಸಂಸ್ಥೆ ಕಾನೂನು ವ್ಯಾಪ್ತಿಯಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಕೈಗೊಳ್ಳಲಿದೆ, ಈ ಬಗ್ಗೆ ನಾನು ಬಂಧಿಸುತ್ತಾರೆ, ಇಲ್ಲ ಎಂದು ಹೇಳಲು ಸಾಧ್ಯವಿಲ್ಲ.
ನಿಗದಿತ ಸಮಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಬೇಕಿರುವುದರಿಂದ ಯಡಿಯೂರಪ್ಪನವರ ಹೇಳಿಕೆ ಸಿಐಡಿ ಅವರಿಗೆ ಅತ್ಯಗತ್ಯ, ಅವರು ಹಾಜರಾಗದಿರುವುದರಿಂದ ಏನು ಕ್ರಮ ಕೈಗೊಳ್ಳುತ್ತಾರೋ ನನಗೆ ತಿಳಿಯದು ಎಂದರು.
ನ್ಯಾಯಾಲಯದ ಮೊರೆ
ಈ ಮಧ್ಯೆ ಯಡಿಯೂರಪ್ಪ ಅವರು ಪ್ರಕರಣ ರದ್ದುಪಡಿಸಲು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಜೊತೆಗೆ ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣ ರದ್ದು ಕೋರಿರುವ ಅರ್ಜಿಯಲ್ಲಿ, ನನ್ನ ವಿರುದ್ಧ ದೂರು ನೀಡಿರುವಾಕೆ ಹಲವು ಪ್ರಕರಣಗಳಲ್ಲಿ ಇದೇ ರೀತಿ ಸುಳ್ಳು ದೂರುಗಳನ್ನು ದಾಖಲಿಸಿದ್ದಾರೆ, ಈ ಪ್ರಕರಣದಲ್ಲಿ ನನ್ನ ಯಾವುದೇ ಪಾತ್ರ ಇಲ್ಲ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಯಡಿಯೂರಪ್ಪನವರ ವಿರುದ್ಧ ಪ್ರಕರಣ ದಾಖಲಿಸಿದ್ದಾಕೆ ಮೃತಪಟ್ಟಿದ್ದು, ಅವರ ಕುಟುಂಬ ವರ್ಗದವರು ಸಂತ್ರಸ್ತೆ ಪರವಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.