ಬೆಂಗಳೂರು:ರಾಜ್ಯ ಸರ್ಕಾರಿ ನೌಕರರಿಗೆ ೭ನೇ ವೇತನ ಆಯೋಗದ ಶಿಫಾರಸು ಜಾರಿಗೆ ಸಂಬಂಧಿಸಿದಂತೆ ವೇತನ, ಭತ್ಯೆ ಹಾಗೂ ಸೌಲಭ್ಯಗಳ ಪರಿಷ್ಕರಣೆ ಅಧಿಕಾರವನ್ನು ಮುಖ್ಯಮಂತ್ರಿ ಅವರಿಗೆ ಇಂದಿಲ್ಲಿ ನಡೆದ ಸಂಪುಟ ಸಭೆ ನೀಡಿದೆ.
ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಿದರೂ ಅಂತಿಮ ನಿರ್ಧಾರಕ್ಕೆ ಬರಲಾಗಲಿಲ್ಲ.
ಸರ್ಕಾರಿ ನೌಕರರಿಗೆ ಜುಲೈ1ರಿಂದ ವೇತನ ಪರಿಷ್ಕರಣೆ ಮಾಡಬೇಕಿದೆ, ಅದಕ್ಕೂ ಮುನ್ನವೇ ಹಣಕಾಸು ಇಲಾಖೆ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಅವರು ತೀರ್ಮಾನ ಕೈಗೊಳ್ಳಲಿದ್ದಾರೆ.
ಏಳನೇ ವೇತನ ಆಯೋಗದ ಶಿಫಾರಸು ಅನುಷ್ಟಾನ ಉದ್ದೇಶದಿಂದ ಮುಖ್ಯಮಂತ್ರಿ ತಮ್ಮ ಮುಂಗಡಪತ್ರದಲ್ಲಿ 15,431 ಕೋಟಿ ರೂ. ಮೀಸಲಿಟ್ಟಿದ್ದಾರೆ.
ಶೇಕಡ 30ರಷ್ಟು ಹೆಚ್ಚಳಕ್ಕೆ ಬೇಡಿಕೆ
ನೌಕರರು ಶೇಕಡ 30ರಷ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದಾರೆ, ಆದರೆ, ಆಯೋಗ ಶೇಕಡ 27.5ರಷ್ಟು ಏರಿಕೆಗೆ ಶಿಫಾರಸು ಮಾಡಿದೆ.
ಹಿಂದಿನ ಸರ್ಕಾರ ಈಗಾಗಲೇ ಶೇಕಡ 17ರಷ್ಟು ಹೆಚ್ಚಳ ಮಾಡಿದೆ, ಇನ್ನುಳಿದ 10.5 ಹಾಗೂ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರದ ಮೇಲೆ ಹೆಚ್ಚಿನ ಹೊರೆಯಾಗುತ್ತದೆ.
ಹೆಚ್ಚುವರಿ ಹೊರೆಯನ್ನು ಸರಿದೂಗಿಸುವ ಮತ್ತು ರಾಜ್ಯ ಸಂಪನ್ಮೂಲ, ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಸಂಪುಟ ವಿಸ್ತೃತ ಚರ್ಚೆ ನಡೆಸಿತು.
ಶೇಕಡ 2ರಷ್ಟು ಕಡಿತ ಸಾಧ್ಯತೆ
ಮಾಡಿರುವ ಶಿಫಾರಸಿನಲ್ಲೇ ಶೇಕಡ 2ರಷ್ಟು ಕಡಿತ ಮಾಡಿ ಜುಲೈ 1ರಿಂದ ಜಾರಿಗೊಳಿಸುವ ಬಗ್ಗೆಯೂ ಚರ್ಚೆ ನಡೆಸಿತಾದರೂ ಸಭೆ ಅಂತಿಮ ತೀರ್ಮಾನ ಕೈಗೊಳ್ಳಲಾಗಲಿಲ್ಲ.
ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಅವರೇ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿ ನಂತರ ಸಭೆ ಅನುಮೋದನೆ ನೀಡುವ ಬಗ್ಗೆ ನಿರ್ಧರಿಸಲಾಯಿತೆಂದು ಹೇಳಲಾಗಿದೆ.
