ಮಹಿಳಾ ಸ್ವಸಹಾಯ ಗುಂಪುಗಳ ಸಹಕಾರ ಪಡೆಯಲು ಮುಂದಾದ ಸರ್ಕಾರ
ಬೆಂಗಳೂರು : ಮಹಿಳಾ ಸ್ವಸಹಾಯ ಗುಂಪುಗಳ ಸಹಕಾರದಿಂದ ಸ್ಥಳೀಯ ಸಂಸ್ಥೆಗಳ ಆಸ್ತಿ ತೆರಿಗೆ ಬಾಕಿ ವಸೂಲಿಗೆ ಇಂದಿಲ್ಲಿ ಸೇರಿದ್ದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ವಿಶ್ವಬ್ಯಾಂಕ್‌ನಿಂದ ಸಾಲ ಪಡೆದು ಗ್ರಾಮೀಣ ರಸ್ತೆಗಳ ಅಭಿವೃದ್ಧಿಯ ಮಹತ್ವದ ತೀರ್ಮಾನವನ್ನೂ ಸಂಪುಟ ತೆಗೆದುಕೊಂಡಿದೆ.
ಅಲ್ಲದೆ, ಮೈಸೂರಿನ ಕೆ.ಆರ್.ಆಸ್ಪತ್ರೆ ಆವರಣದಲ್ಲಿ ೭೫ ಕೋಟಿ ರೂ.ಗಳ ವೆಚ್ಚದಲ್ಲಿ ಹೊರರೋಗಿಗಳ ನೂತನ ವಿಭಾಗದ ಕಟ್ಟಡ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಬೆಂಗಳೂರು ಹೊರತುಪಡಿಸಿ ಉಳಿದ ಮಹಾನಗರ ಪಾಲಿಕೆಗಳೂ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಬಾಕಿ ಇರುವ ಆಸ್ತಿ ತೆರಿಗೆ, ವಿದ್ಯುತ್, ನೀರು ಬಿಲ್ ಬಾಕಿ ವಸೂಲಿ ಅಧಿಕಾರವನ್ನು ಮಹಿಳಾ ಸ್ವಸಹಾಯ ಗುಂಪುಗಳಿಗೆ ನೀಡಲಾಗುವುದು.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ.ಪಾಟೀಲ್, ಗ್ರಾಮೀಣ ಭಾಗದಲ್ಲಿ ತೆರಿಗೆ ವಸೂಲಿ ಡ್ರೈವ್ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಕಳೆದ ಹಲವಾರು ವರ್ಷಗಳಿಂದ ತೆರಿಗೆ ವಸೂಲಾಗದೆ ಬಾಕಿ ಉಳಿದಿದೆ.
ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ ನಗರಪಾಲಿಕೆ ಸೇರಿದಂತೆ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಿಂದ 1,860 ಕೋಟಿ ರೂ. ಆಸ್ತಿ ತೆರಿಗೆ ವಸೂಲಿ ಆಗಬೇಕಿದೆ.
ಮಹಿಳಾ ಸಂಘಗಳು ವಸೂಲಿ ಮಾಡುವ ಹಣದಲ್ಲಿ ಶೇಕಡ 5ರಷ್ಟನ್ನು ಆ ಸಂಸ್ಥೆಗೆ ಸರ್ಕಾರ ಪ್ರೋತ್ಸಾಹ ಧನವನ್ನಾಗಿ ನೀಡಲಿದೆ.
ಗ್ರಾಮೀಣ, ನಗರ, ಪಟ್ಟಣವಲ್ಲದೆ, ಪಾಲಿಕೆ ವ್ಯಾಪ್ತಿಯಲ್ಲೂ ದೊಡ್ಡ ಪ್ರಮಾಣದ ಆಸ್ತಿ ತೆರಿಗೆ ಬಾಕಿ ಇರುವುದರಿಂದ ಸಭೆ ಈ ತೀರ್ಮಾನ ಕೈಗೊಳ್ಳಬೇಕಾಯಿತು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 51 ಲಕ್ಷ ಮನೆಗಳಿವೆ, 2.2 ಕೋಟಿ ಜನಸಂಖ್ಯೆ ಇದೆ, 30 ಲಕ್ಷ ಮನೆಗಳಿಗೆ ನೀರು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ.
ಎಲ್ಲಾ ಮೂಲಸೌಕರ್ಯ ಪಡೆದಿದ್ದರೂ ಗ್ರಾಹಕರು ಆಸ್ತಿ ತೆರಿಗೆಯನ್ನು ನಿಗದಿತ ಸಮಯದಲ್ಲಿ ಪಾವತಿಸುತ್ತಿಲ್ಲ, ವಸೂಲಿಗೆ ಸಿಬ್ಬಂದಿ ಕೊರತೆಯೂ ಕಾರಣವಾಗಿದ್ದು, ಪರ್ಯಾಯ ಮಾರ್ಗದ ಮೂಲಕ ವಸೂಲಿಗೆ ಮುಂದಾಗಿದ್ದೇವೆ.
ವಿಶ್ವಬ್ಯಾಂಕ್‌ನಿಂದ 5,190 ಕೋಟಿ ರೂ. ಸಾಲ ಪಡೆದು ಗ್ರಾಮೀಣ ಭಾಗದ 7110 ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು ಎಂದು ಪಾಟೀಲ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಈ ರಸ್ತೆಗಳ ಕಾಮಗಾರಿಯನ್ನು ಎರಡು ವರ್ಷದೊಳಗೆ ಪೂರ್ಣಗೊಳಿಸಲು ಸಮಯ ನಿಗದಿಪಡಿಸಲಾಗಿದೆ.
ಪರಿಶಿಷ್ಟ ಸಮಯದಾಯಗಳ ಮೇಲಿನ ದೌರ್ಜನ್ಯ (ಅಟ್ರಾಸಿಟಿ) ಪ್ರಕರಣಗಳ ಇತ್ಯರ್ಥ ವಿಳಂಬವಾಗುತ್ತಿರುವುದರಿಂದ 33 ಘಟಕಗಳನ್ನು ವಿಶೇಷ ಠಾಣೆಗಳಾಗಿ ಮೇಲ್ದರ್ಜೆಗೇರಿಸಲು ಸಭೆ ತೀರ್ಮಾನಿಸಿದೆ.
ಪ್ರತಿ ಜಿಲ್ಲಾ ಮಟ್ಟದಲ್ಲೂ ಒಂದು ವಿಶೇಷ ಠಾಣೆ ಇರಲಿದೆ, ಇಂತಹ ಠಾಣೆಗಳನ್ನು ಬಿ.ಸಿ.ಆರ್.ಇಗಳೆಂದು ಹೆಸರಿಸಲಾಗುವುದು, ಈ ಠಾಣೆಗಳಲ್ಲಿ ದೂರುಗಳನ್ನೂ ದಾಖಲಿಸಬಹುದಾಗಿದೆ ಎಂದರು.
ವಿಧಾನಮಂಡಲದ ಅಧಿವೇಶನ ಕರೆಯುವ ತೀರ್ಮಾನವನ್ನು ಸಭೆ ಕೈಗೊಂಡಿದ್ದು, ಅಧಿವೇಶನ ಅವಧಿ ನಿರ್ಧಾರವನ್ನು ಮುಖ್ಯಮಂತ್ರಿಗಳ ವಿವೇಚನೆಗೆ ಬಿಡಲಾಗಿದೆ.
ಕಲಬುರಗಿಯ ಕುಸನೂರು ಗ್ರಾಮದಲ್ಲಿ ವಸತಿ ಬಡಾವಣೆ ನಿರ್ಮಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ, ಸುಮಾರು 132 ಕೋಟಿ ರೂ. ವೆಚ್ಚದಲ್ಲಿ ವಸತಿ ಬಡಾವಣೆ ನಿರ್ಮಿಸಲಾಗುತ್ತದೆ ಎಂದರು.