ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದಿನಗಳನ್ನು ಎಣಿಸುತ್ತಿದ್ದು ಯಾವುದೇ ಕ್ಷಣದಲ್ಲಿ ಪತನಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ, ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಇಂದಿಲ್ಲಿ ಭವಿಷ್ಯ ನುಡಿದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಆಯ್ಕೆಗೊಂಡ ಎನ್‌ಡಿಎ ಕೂಟದ 19 ಸಂಸದರಿಗೆ ಅರಮನೆ ಮೈದಾನದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಇನ್ನು ಮೂರು ಅಥವಾ ಆರು ತಿಂಗಳೊಳಗೆ ಉರುಳುತ್ತದೆ ಎಂದರು.
ಈ ಸರ್ಕಾರದ ಭವಿಷ್ಯದ ಬಗ್ಗೆ ಕೇಂದ್ರದ ನನ್ನ ಹಿರಿಯ ಸಹೋದ್ಯೋಗಿ ಕುಮಾರಸ್ವಾಮಿ ಅವರು ತಿಳಿಸಬೇಕು.
ಜನರ ವಿಶ್ವಾಸ ಕಳೆದುಕೊಂಡಿದೆ
ಕಳೆದ ವಿಧಾನಸಭಾ ಚುಣಾವಣೆಯಲ್ಲಿ 135 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಒಂದೇ ವರ್ಷದಲ್ಲಿ ಜನರ ವಿಶ್ವಾಸವನ್ನು ಕಳೆದುಕೊಂಡಿದೆ.
ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತಿದ್ದಾರೆ, ಇದಕ್ಕೆ ಪ್ರತಿಫಲವಾಗಿ ಕಳೆದ ಲೋಕಸಭಾ ಚುಣಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ 145 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಈ ಫಲಿತಾಂಶವೇ ಸರ್ಕಾರಕ್ಕೆ ಮುನ್ನೆಚ್ಚರಿಕೆ, ಯಾವ ಕ್ಷಣದಲ್ಲಿ ಇದು ಅಧಿಕಾರ ಕಳೆದುಕೊಳ್ಳುತ್ತದೋ ತಿಳಿಯದು ನಾವು ಲೋಕಸಭಾ ಚುನಾವಣೆಯಲ್ಲಿ ನಮ್ಮ ಕೆಲವು ತಪ್ಪುಗಳಿಂದ ದಾವಣಗೆರೆ, ಕೊಪ್ಪಳ, ಚಿಕ್ಕೋಡಿ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದೇವೆ.
ಪಂಚಾಯತ್ ಚುನಾವಣೆ ಗೆಲುವು
ಮುಂದೆ ನಮಗೆ ಜಿಲ್ಲಾ, ತಾಲ್ಲೂಕು ಪಂಚಾಯತ್ ಚುನಾವಣೆಗಳು ಎದುರಾಗಲಿದೆ, ಅಲ್ಲಿ ಬಿಜೆಪಿ-ಜೆಡಿಎಸ್ ಒಂದಾಗಿ ಹೋರಾಟ ನಡೆಸಿ ಗೆಲುವು ಸಾಧಿಸುವ ಮೂಲಕ ರಾಜ್ಯದಿಂದಲೇ ಕಾಂಗ್ರೆಸ್ಸನ್ನು ಓಡಿಸಬೇಕು.
ಲೋಕಸಭಾ ಚುಣಾವಣೆಯಲ್ಲಿ ಒಟ್ಟಾಗಿ ಹೋರಾಟ ನಡೆಸಿದಂತೆ ಮುಂದಿನ ಚುನಾವಣೆಯಲ್ಲೂ ಕಾರ್ಯನಿರ್ವಹಿಸಿದರೆ ನಾವು ಎಲ್ಲಾ ಕಡೆ ಅಧಿಕಾರ ಹಿಡಿಯಬಹುದು.
ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿರುವ ಸರ್ಕಾರವನ್ನು ಕಿತ್ತೊಗೆಯಲು ಜನರೇ ಸಿದ್ಧರಾಗಿದ್ದಾರೆ, ಮುಂದಿನ ವಿಧಾನಸಭಾ ಚುಣಾವಣೆವರೆಗೂ ನಾವು ಕಾಯುವ ಅಗತ್ಯವಿಲ್ಲ, ಅದಕ್ಕೆ ಮುನ್ನವೇ ಈ ಸರ್ಕಾರ ಉರುಳುತ್ತದೆ ಎಂದರು.
ಬಿಜೆಪಿ-ಜೆಡಿಎಸ್ ಒಂದಾಗಿ ಹೋರಾಟ
ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಬೇಕೆಂಬ ಬಹುದಿನದ ಕಾರ್ಯಕರ್ತರ ಕನಸು ಈಡೇರಿದೆ.
ಸಣ್ಣ ಪುಟ್ಟ ವೈಮಸ್ಸು ಇದ್ದರೂ ಒಗ್ಗಟ್ಟಿನಿಂದ ಮುಂದಿನ ಚುನಾವಣೆಗಳನ್ನು ಎದುರಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.