ಬೆಂಗಳೂರು:ದುರಾಡಳಿತ ಮತ್ತು ಭ್ರಷ್ಟಾಚಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ವಂಚನೆ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಟೀಕಿಸಿದ್ದಾರೆ.
ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿ ಸ್ಥಗಿತಗೊಳಿಸಿ ಜನರಿಗೆ ದ್ರೋಹ ಬಗೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇಂತಹ ಸರ್ಕಾರವನ್ನು ಕಿತ್ತೊಗೆಯುವವರೆಗೂ ವಿಶ್ರಮಿಸಬಾರದು ಎಂದರು.
ಕಳೆದ ವಿಧಾನಸಭಾ ಚುಣಾವಣೆಯಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದವರಿಗೆ ಲೋಕಸಭಾ ಚುನಾವಣೆಯಲ್ಲಿ ಮತದಾರರು ಪಾಠ ಕಲಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುಣಾವಣೆ
ಮುಂದೆ ಎದುರಾಗುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುಣಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಒಗ್ಗಟ್ಟಿನಿಂದ ಕೆಲಸ ಮಾಡಿ ಕಾಂಗ್ರೆಸ್ಸನ್ನು ಧೂಳೀಪಟ ಮಾಡಬೇಕು.
ಲೋಕಸಭಾ ಚುಣಾವಣೆಯಲ್ಲಿ ಆಯ್ಕೆಗೊಂಡ ಎನ್‌ಡಿಎ ಕೂಟದ ನೂತನ ಸಂಸದರಿಗೆ ರಾಜ್ಯ ಬಿಜೆಪಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾಣೆಯಲ್ಲಿ 135 ರಿಂದ 140 ಸ್ಥಾನಗಳನ್ನು ಗಳಿಸುವ ಮೂಲಕ ಸ್ಪಷ್ಟ ಬಹುಮತದಿಂದ ಅಧಿಕಾರ ಹಿಡಿಯುವ ಸೂಚನೆಯನ್ನು ಮತದಾರರು ಈಗಲೇ ನೀಡಿದ್ದಾರೆ ಎಂದರು.
ಆಡಳಿತಾರೂಢ ಕಾಂಗ್ರೆಸ್‌ನ ಅಪಪ್ರಚಾರದ ನಡುವೆಯೂ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 19 ಸ್ಥಾನ ಗಳಿಸಿದೆ, ನಾಲ್ಕು ಸ್ಥಾನಗಳಲ್ಲಿ ಅಲ್ಪಮತದಿಂದ ಸೋತಿದ್ದೇವೆ, ಈ ಫಲಿತಾಂಶವೇ ಮುಂದಿನ ಚುನಾವಣೆಯಲ್ಲೂ ಬರಲಿದೆ.
ಭ್ರಷ್ಟಾಚಾರದಲ್ಲಿ ಮುಳುಗಿದ ಸರ್ಕಾರ
ಭ್ರಷ್ಟಾಚಾರದಲ್ಲಿ ಮುಳುಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದ ಕಾಂಗ್ರೆಸ್‌ನವರು ಬರೀ ಗ್ಯಾರಂಟಿಯಿಂದಲೇ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲುತ್ತೇವೆಂಬ ಅತ್ಯುತ್ಸಾಹದಿಂದ ಇದ್ದರು.
ಅಭಿವೃದ್ಧಿ ಕೈಗೊಳ್ಳದ ಕಾಂಗ್ರೆಸ್ಸನ್ನು ಜನತೆ ಮೂಲೆ ಗುಂಪು ಮಾಡಿದ್ದಾರೆ, ಮುಂಬರುವ ಚುನಾವಣೆಗಳಲ್ಲೂ ಅವರಿಗೆ ಇದೇ ಪರಿಸ್ಥಿತಿ ಬರಲಿದೆ.
ಎನ್‌ಡಿಎ ಕೂಟದಿಂದ ಆಯ್ಕೆಗೊಂಡಿರುವ ಸದಸ್ಯರು ಮತ್ತು ಪ್ರಧಾನಿ ನರೇಂದ್ರ ಮೋದಿ ಸಂಪುಟ ಸೇರಿರುವ ಸಚಿವರು, ನಿಮಗೆ ನೀಡಿರುವ ಜನಾದೇಶಕ್ಕೆ ಪ್ರತಿಯಾಗಿ ರಾಜ್ಯದ ಧ್ವನಿಯಾಗಿ ಕೆಲಸ ಮಾಡಿ.
ನನೆಗುದಿಗೆ ಬಿದ್ದಿರುವ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಚಾಲನೆ ನೀಡಿ, ಹೊಸ ಯೋಜನೆಗಳನ್ನು ತರುವ ಮೂಲಕ ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಿ, ’ಸಾಧನೆ ಮಾತಾಗಬೇಕು, ಮಾತು ಸಾಧನೆ ಆಗಬಾರದು’ ಆ ರೀತಿ ಕೆಲಸ ನಿರ್ವಹಿಸಿ ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಬಿಜೆಪಿ ಭದ್ರಕೋಟೆ
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಜೆಪಿ ಭದ್ರಕೋಟೆ ಎಂಬುದು ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ, ಬಿಜೆಪಿ-ಜೆಡಿಎಸ್ ಒಟ್ಟಾಗಿರುವುದಕ್ಕೆ ರಾಜ್ಯದ ಜನರ ಆಶೀರ್ವಾದ ಲಭಿಸಿದೆ, ರಾಜ್ಯದಲ್ಲಿ 19 ಎನ್‌ಡಿಎ ಸಂಸದರ ಆಯ್ಕೆಗೆ ಕಾರಣಕರ್ತರಾದ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದರು.
ಕಾಂಗ್ರೆಸ್‌ನ ಅಪಪ್ರಚಾರ, ಆಮಿಷಗಳ ನಡುವೆ ರಾಜ್ಯದ ಜನತೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಆಶೀರ್ವಾದ ಮಾಡಿದ್ದಾರೆ, ಹಿಂದೆ ಒಂದು ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈಗ 9 ಸ್ಥಾನ ಗೆದ್ದಿರಬಹುದು, ಆದರೆ, ರಾಜ್ಯದ 145ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುನ್ನಡೆ ಸಾಧಿಸಿವೆ, ಕಾಂಗ್ರೆಸ್ ಸಚಿವರಿರುವ ಕ್ಷೇತ್ರದಲ್ಲೂ ಎನ್‌ಡಿಎ ಅಭ್ಯರ್ಥಿಗಳು ಲೀಡ್ ಪಡೆದಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಮುಂದಿನ 4 ವರ್ಷ ಹೋರಾಟ ಮಾಡಬೇಕಿದೆ, ಬಿಜೆಪಿ ಅಧಿಕಾರದಲ್ಲಿದ್ದಾಗ ಕರ್ನಾಟಕ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿತ್ತು, ಕಳೆದ ಒಂದು ವರ್ಷದ ಕಾಂಗ್ರೆಸ್ ದುರಾಡಳಿತದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಹಿನ್ನಡೆಯಾಗಿದೆ ಎಂದರು.