ಜಿಲ್ಲಾ, ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲೂ ಪ್ರಚಂಡ ಗೆಲುವು
ಬೆಂಗಳೂರು : ಮೇಕೆ ದಾಟು ಹಾಗೂ ಮಹದಾಯಿ ಸೇರಿದಂತೆ ನನೆಗುದಿಗೆ ಬಿದ್ದಿರುವ ಯೋಜನೆಗಳ ಜೊತೆಗೆ ಹೊಸ ಕಾರ್ಯಕ್ರಮಗಳನ್ನು ರಾಜ್ಯಕ್ಕೆ ತರುವ ಮೂಲಕ ಮತದಾರರ ಋಣ ತೀರಿಸುವುದಾಗಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಭರವಸೆ ನೀಡಿದ್ದಾರೆ.
ಕಳೆದ ಲೋಕಸಭಾ ಚುಣಾವಣೆಯಲ್ಲಿ ಎನ್‌ಡಿಎ ಕೂಟದ 19 ಸಂಸದರನ್ನು ದೆಹಲಿಗೆ ಕಳುಹಿಸಿದ್ದೀರಿ. ನಾವು ಒಂದಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಲಾಖೆಗಳಿಗೆ ಸಂಬಂಧಪಟ್ಟ ಕೇಂದ್ರ ಸಚಿವರ ಮನವೊಲಿಸಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇವೆ.
ಪ್ರಲ್ಹಾದ್ ಜೋಷಿ ಅವರು ಕೇಂದ್ರ ಸಂಪುಟದಲ್ಲಿ ಹಿರಿಯರಿದ್ದಾರೆ. ಅವರು ಎಲ್ಲರ ಜೊತೆಯೂ ಒಳ್ಳೆ ಸಂಬಂಧ ಇಟ್ಟುಕೊಂಡಿದ್ದಾರೆ. ಅಲ್ಲದೆ, ಶೋಭಾ ಕರಂದ್ಲಾಜೆ ಅವರು ಕೇಂದ್ರ ಸಂಪುಟದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರ ಸಹಕಾರದಿಂದ ಹಳೆ ಯೋಜನೆಗಳ ಜೊತೆಗೆ ಹೊಸ ಕಾರ್ಯಕ್ರಮಗಳನ್ನು ತಂದು ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ದುಡಿಯುತ್ತೇವೆ.
ಲೋಕಸಭಾ ಚುಣಾವಣೆಯಲ್ಲಿ ಆಯ್ಕೆಗೊಂಡ ಎನ್‌ಡಿಎ ಕೂಟದ ನೂತನ ಸಂಸದರಿಗೆ ರಾಜ್ಯ ಬಿಜೆಪಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಲ್ವರು ಸಚಿವರೂ ಸೇರಿ 19 ಸಂಸದರು ರಾಜ್ಯದ ಧ್ವನಿಯಾಗಿ ಕಾರ್ಯಕ್ರಮಗಳನ್ನು ಜಾರಿಗೆ ತರುವುದಾಗಿ ತಿಳಿಸಿದರು.
ಅದರಲ್ಲೂ ಮುಖ್ಯವಾಗಿ ಜಲಶಕ್ತಿ ಮತ್ತು ರೈಲ್ವೆ ಇಲಾಖೆ ನಮ್ಮ ಸೋಮಣ್ಣ ಅವರ ಬಳಿಯೇ ಇದೆ. ಅವರ ಸಹಕಾರದಿಂದ ಕಾರ್ಯಕ್ರಮಗಳನ್ನು ಸುಲಭವಾಗಿ ಅನುಷ್ಟಾನಗೊಳಿಸಲು ಮುಂದಾಗುತ್ತೇವೆ.
ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ದುಡಿದ ಪ್ರತಿಫಲದಿಂದ ನಮಗೆ 19 ಸ್ಥಾನಗಳು ದೊರೆತಿವೆ.
ನಮ್ಮ ನಿರೀಕ್ಷೆ 27 ಇತ್ತು. ಕಾಂಗ್ರೆಸ್‌ನ ಗ್ಯಾರಂಟಿ ಹಾಗೂ ಅಪಪ್ರಚಾರದಿಂದ ನಮ್ಮ ಗುರಿಯನ್ನು ಮುಟ್ಟಲಾಗಲಿಲ್ಲ, ಆದರೂ ನಾಲ್ಕೈದು ಕ್ಷೇತ್ರಗಳಲ್ಲಿ ಅಲ್ಪಮತಗಳಿಂದ ಸೋಲನುಭವಿಸಿದ್ದೇವೆ.
ಗ್ಯಾರಂಟಿಯೇ ಬೆಲೆ ಏರಿಕೆಗೆ ಮೂಲ
ಆಸೆಯೇ ದುಃಖಕ್ಕೆ ಮೂಲ ಎಂದು ಗೌತಮ ಬುದ್ಧ ಹೇಳಿದ್ದರು. ಸಿದ್ದರಾಮಯ್ಯ ಅವರು ಗ್ಯಾರಂಟಿಯೇ ಬೆಲೆ ಏರಿಕೆಗೆ ಮೂಲ ಎಂದು ಹೇಳುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಹೆಣಗಾಡುತ್ತಿದೆ. ಅದಕ್ಕಾಗಿ ಜನರನ್ನು ದೋಚುತ್ತಿದೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲಾ ಸಾಮಗ್ರಿಗಳ ಬೆಲೆ ಏರಿಕೆಗೆ ಗ್ಯಾರಂಟಿಗಳೇ ಕಾರಣ ಎಂದು ದೂರಿದರು.
ಭ್ರಷ್ಟಾಚಾರದಲ್ಲಿ ಮುಳುಗಿರುವ ಸಿದ್ದರಾಮಯ್ಯ ಸರ್ಕಾರಕ್ಕೆ, ಗ್ಯಾರಂಟಿಗಳಿಂದಲೇ ಗೆಲ್ಲಬಹುದೆಂಬ ಭ್ರಮೆ ಹುಸಿಯಾಗಿದೆ, ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಹೋರಾಟ ಮಾಡಿದರೆ ಮುಂಬರುವ ಬೆಂಗಳೂರು, ಮೈಸೂರು ನಗರಪಾಲಿಕೆ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಬಹುದು ಎಂದರು.
ಸ್ಥಳೀಯವಾಗಿ ಉಭಯ ಪಕ್ಷದ ಕಾರ್ಯಕರ್ತರಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ಅದನ್ನು ಬಗೆಹರಿಸಿಕೊಂಡು ಮುಂಬರುವ ಚುನಾವಣೆಗಳನ್ನು ಎದುರಿಸಲು ಸಿದ್ಧರಾಗಿ.
ನಾವು ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಅನ್ನು ಧೂಳೀಪಟ ಮಾಡುವುದಲ್ಲದೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಕೂಟ ಅಧಿಕಾರ ಹಿಡಿಯುವುದು ಶತಸಿದ್ಧ ಎಂದರು.