ಕಳೆದ ವಾರ ರಾಜ್ಯ ಬಿಜೆಪಿಯ ನಾಯಕರೊಬ್ಬರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಸಂಪರ್ಕಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಜತೆ ಮಾತನಾಡಿದ ಸಂತೋಷ್ ಅವರು, ಆರು ತಿಂಗಳ ಕಾಲ ಸಹನೆಯಿಂದಿರಿ, ಎಲ್ಲವೂ ಸರಿ ಹೋಗುತ್ತದೆ ಎಂದರಂತೆ.
ಅವರ ಈ ಮಾತು ಕರ್ನಾಟಕದ ಬಿಜೆಪಿ ಪಾಳಯದಲ್ಲಿ ಕುತೂಹಲ ಮೂಡಿಸಿದೆಯಷ್ಟೇ ಅಲ್ಲ, ಮುಂದಿನ ಆರು ತಿಂಗಳಲ್ಲಿ ನಡೆಯಬಹುದಾದ ಬೆಳವಣಿಗೆಗಳ ಬಗ್ಗೆ ಚರ್ಚೆ ಶುರುವಾಗುವಂತೆ ಮಾಡಿದೆ.
ಅಂದ ಹಾಗೆ ವಿಧಾನಸಭಾ ಚುನಾವಣೆಯ ನಂತರ ಮಂಕಾಗುತ್ತಾ ಹೋಗಿದ್ದ ಬಿ.ಎಲ್.ಸಂತೋಷ್ ಸುತ್ತಲಿನ ಪ್ರಭಾವಳಿ ಲೋಕಸಭಾ ಚುನಾವಣೆಯ ನಂತರ ಹೊಳಪು ಪಡೆಯುತ್ತಿರುವುದು ನಿಜ.
ಇತ್ತೀಚೆಗೆ ಕೇಂದ್ರದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂತಲ್ಲ, ಈ ಸಂದರ್ಭದಲ್ಲಿ ಕರ್ನಾಟಕದಿಂದ ಸೋಮಣ್ಣ ಅವರ ಹೆಸರು ಸಂಪುಟಕ್ಕೆ ಸೇರುವಂತೆ ಮಾಡಿದವರು ಸಂತೋಷ್.
ಅಂದ ಹಾಗೆ ಈ ಹಿಂದೆ ಸೋಮಣ್ಣ ಅವರ ವಿಷಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ದೊಡ್ಡ ಮಟ್ಟದ ವಿಶ್ವಾಸ ಬೆಳೆಯಲು ಕಾರಣರಾದವರೇ ಅವರು.
ಕರ್ನಾಟಕದ ಲಿಂಗಾಯತರು ಸಾಲಿಡ್ಡಾಗಿ ಯಡಿಯೂರಪ್ಪ ಅವರ ಜತೆಗಿದ್ದಾರೆ ಎಂಬುದು ಸುಳ್ಳು, ಅವಕಾಶ ಕೊಟ್ಟರೆ ಲಿಂಗಾಯತ ಶಕ್ತಿಯನ್ನು ಸೆಳೆಯಲು ಸೋಮಣ್ಣ ಸಮರ್ಥರು ಅಂತ ಸಂತೋಷ್ ಕೊಟ್ಟ ಭರವಸೆ ಅಮಿತ್ ಷಾ ಅವರಿಗೆ ಅಪ್ಯಾಯಮಾನವಾಗಿ ಕೇಳಿಸಿತ್ತು.
ಹೀಗಾಗಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕಕ್ಕೆ ಬಂದ ಅಮಿತ್ ಷಾ ಅವರು ಸ್ವತಃ ಯಡಿಯೂರಪ್ಪ ಉಪಸ್ಥಿತರಿದ್ದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ, ಈ ಸಲ ಸೋಮಣ್ಣ ಅವರು ಗೆದ್ದು ಪಕ್ಷ ಅಧಿಕಾರಕ್ಕೆ ಬಂದರೆ ಸೋಮಣ್ಣ ತುಂಬ ಎತ್ತರದ ಸ್ಥಾನಕ್ಕೆ ಹೋಗುತ್ತಾರೆ ಎಂದಿದ್ದರು.
ಅವತ್ತು ಅವರಾಡಿದ ಮಾತು ಯಡಿಯೂರಪ್ಪ ಕ್ಯಾಂಪಿಗೆ ಕಹಿಯಾಗಿ ಕೇಳಿಸಿತ್ತಲ್ಲದೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಸೋಮಣ್ಣ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿರುತ್ತಾರೆ ಎಂಬ ಮೆಸೇಜು ತಲುಪುವಂತೆ ಮಾಡಿತ್ತು.
ಪರಿಣಾಮ, ಯಡಿಯೂರಪ್ಪ ಕ್ಯಾಂಪು ಸೋಮಣ್ಣ ಅವರ ವಿರುದ್ಧ ಮುಗಿಬಿದ್ದು ಚಾಮರಾಜನಗರ ಮತ್ತು ವರುಣಾ ಕ್ಷೇತ್ರಗಳಲ್ಲಿ ಸೋಲುವಂತೆ ಮಾಡಿತ್ತು.
ವಾಸ್ತವವಾಗಿ ಸೋಮಣ್ಣ ಅವರ ಸೋಲು ಪರೋಕ್ಷವಾಗಿ ಸಂತೋಷ್ ಅವರ ಸೋಲೇ ಆಗಿತ್ತು. ಹೀಗಾಗಿ ಈ ಅವಮಾನಕ್ಕೆ ಪ್ರತಿಯಾಗಿ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಸಂತೋಷ್, ಲೋಕಸಭಾ ಚುನಾವಣೆಯ ಫಲಿತಾಂಶ ಬರುತ್ತಿದ್ದಂತೆಯೇ ಆಕ್ಟೀವ್ ಆದರು.
ಅಂದ ಹಾಗೆ ಈ ಸಲ ಮೋದಿ ಸಂಪುಟಕ್ಕೆ ಲಿಂಗಾಯತರ ಕೋಟಾದಿಂದ ಯಾರನ್ನು ಪರಿಗಣಿಸಬೇಕು ಎಂಬ ವಿಷಯ ಬಂದಾಗ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಮತ್ತು ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಅವರ ಹೆಸರುಗಳು ರೇಸಿನಲ್ಲಿದ್ದವು.
ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ ಅಂತ ತಿರುಗಿಬಿದ್ದು ಕಾಂಗ್ರೆಸ್ ಸೇರಿದ್ದ, ಮತ್ತದೇ ಕಾಲಕ್ಕೆ ತಮ್ಮನ್ನು ಚುಚ್ಚಿದ್ದ ಜಗದೀಶ್ ಶೆಟ್ಟರ್ ಮಂತ್ರಿಯಾಗುವುದನ್ನು ಸಂತೋಷ್ ಸಹಿಸುವುದು ಹೇಗೆ.
ಇದೇ ರೀತಿ ಯಡಿಯೂರಪ್ಪ ಮತ್ತು ಪ್ರಹ್ಲಾದ್ ಜೋಷಿ ಕ್ಯಾಂಪಿನ ನಡುವೆ ಜೀಕಾಡುವ ಬಸವರಾಜ ಬೊಮ್ಮಾಯಿ ವಿಷಯದಲ್ಲೂ ಸಂತೋಷ್ ಅವರಿಗೆ ಸಮಾಧಾನವಿಲ್ಲ, ಉಳಿದಂತೆ ರಾಘವೇಂದ್ರ ಅವರ ಹೆಸರನ್ನು ಸಂತೋಷ್ ಒಪ್ಪುವ ಮಾತು ದೂರವೇ ಉಳಿಯಿತು.
ಹಾಗಂತಲೇ ಅಮಿತ್ ಷಾ ಆವರ ಜತೆ ಚರ್ಚಿಸುವಾಗ ಬೊಮ್ಮಾಯಿ ಕಾಲದಲ್ಲಿ ನಾವು ರಾಜ್ಯ ಕಳೆದುಕೊಂಡೆವು, ಇನ್ನು ಪಕ್ಷ ಬದಲಿಸುವುದನ್ನು ಹವ್ಯಾಸ ಮಾಡಿಕೊಂಡಿರುವ ಶೆಟ್ಟರ್ ಅವರನ್ನು ನಂಬುವುದು ಹೇಗೆ ಅಂತ ಸಂತೋಷ್ ಹೇಳಿದರಂತೆ.
ಉಳಿದಂತೆ ರಾಘವೇಂದ್ರ ಅವರಿಗೆ ಮಂತ್ರಿಗಿರಿ ಕೊಡುವ ವಿಷಯದಲ್ಲಿ ಮೋದಿ-ಅಮಿತ್ ಷಾ ಜೋಡಿಗೇ ಆಸಕ್ತಿ ಇಲ್ಲದ್ದರಿಂದ ಸಂತೋಷ್ ಅವರು ’ಸಂಪುಟಕ್ಕೆ ಸೋಮಣ್ಣ ಸೇರಿದರೆ ಬೆಸ್ಟು, ಯಾಕೆಂದರೆ ಒಂದು ಕಡೆಯಿಂದ ಒಕ್ಕಲಿಗ ಮತ ಬ್ಯಾಂಕನ್ನು ಜೆಡಿಎಸ್‌ನ ಕುಮಾರಸ್ವಾಮಿ ಕ್ರೋಢೀಕರಿಸುತ್ತಾರೆ, ಮತ್ತೊಂದು ಕಡೆಯಿಂದ ಸೋಮಣ್ಣ ಅವರು ಗಣನೀಯ ಪ್ರಮಾಣದ ಲಿಂಗಾಯತ ಮತಗಳನ್ನು ಕ್ರೋಢೀಕರಿಸುತ್ತಾರೆ’ ಅಂತ ಹೇಳಿದಾಗ ಯಸ್ ಯಸ್ ಎಂದಿದ್ದಾರೆ ಅಮಿತ್ ಷಾ.
ಆದರೆ ಇದಕ್ಕೊಂದು ಕಾರಣ ಕೊಡಬೇಕಲ್ಲ, ಹಾಗಂತಲೇ ಮುಖ್ಯಮಂತ್ರಿಗಳಾದವರಿಗೆ ರಾಜ್ಯ ದರ್ಜೆ ಸ್ಥಾನಮಾನ ಕೊಡುವುದು ಗೌರವವಲ್ಲ, ಹೀಗಾಗಿ ಮುಂದೆ ನೋಡೋಣ ಅಂದವರು ಶೆಟ್ಟರ್, ಬೊಮ್ಮಾಯಿ ಹೆಸರನ್ನು ಬ್ಯಾಕ್ ಡೋರಿಗೆ ತಳ್ಳಿದ್ದಾರೆ.
ಬಿಜೆಪಿಯಲ್ಲಿ ಘಟಿಸಲಿದೆ ಕ್ರಾಂತಿ?
ಈ ಮಧ್ಯೆ ಆರು ತಿಂಗಳು ಸಹನೆಯಿಂದಿರಿ ಅಂತ ಸಂತೋಷ್ ಹೇಳಿದ ಮಾತು ರಾಜ್ಯ ಬಿಜೆಪಿಯನ್ನು ವಶಪಡಿಸಿಕೊಳ್ಳುವ ಮುನ್ಸೂಚನೆ ಎಂಬುದು ಯಡಿಯೂರಪ್ಪ ವಿರೋಧಿಗಳ ಮಾತು.
ಅವರ ಪ್ರಕಾರ, ವಿಧಾನಸಭಾ ಚುನಾವಣೆಯ ನಂತರ ಯಡಿಯೂರಪ್ಪ ಕ್ಯಾಂಪಿನ ಹಿಡಿತಕ್ಕೆ ಹೋದ ರಾಜ್ಯ ಬಿಜೆಪಿ, ಇನ್ನು ಆರು ತಿಂಗಳಲ್ಲಿ ಸಂತೋಷ್ ಹಿಡಿತಕ್ಕೆ ಬರಲಿದೆ.
ಅರ್ಥಾತ್, ಈಗ ರಾಜ್ಯ ಬಿಜೆಪಿಯ ಆಯಕಟ್ಟಿನಲ್ಲಿರುವ ಹಲವರು ಸೈಡ್ ಲೈನಿಗೆ ಸರಿದು ಸಿ.ಟಿ.ರವಿ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವರು ಪಕ್ಷದ ಆಯಕಟ್ಟಿನ ಜಾಗಗಳನ್ನು ಆಕ್ರಮಿಸಿಕೊಳ್ಳಲಿದ್ದಾರೆ.
ಅಂದ ಹಾಗೆ ರಾಜ್ಯ ಬಿಜೆಪಿಯ ಮುಂಚೂಣಿಯಲ್ಲಿರುವ ಟೀಮಿನಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಯುತ್ತಿಲ್ಲ, ಈಗೇನಿದ್ದರೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಂತಹ ಹೋಲ್‌ಸೇಲ್ ವಿಷಯಗಳನ್ನು ಹಿಡಿದುಕೊಂಡು ಬೀದಿಗಿಳಿಯುವ ಕೆಲಸವಾಗುತ್ತಿದೆ.
ಆದರೆ ವಾಸ್ತವದಲ್ಲಿ ಸಿಎಂ, ಡಿಸಿಎಂ ಮತ್ತು ಮಂತ್ರಿ ಪಡೆಯ ವಿರುದ್ಧದ ಆರೋಪಗಳನ್ನು ಹಿಡಿದು ಹೋರಾಟ ಸಂಘಟಿಸಬೇಕು.
ಇವತ್ತು ಲೋಕೋಪಯೋಗಿ ಇಲಾಖೆಯಲ್ಲಿ ನಾಲ್ಕು ಸಾವಿರ ಕೋಟಿಯ ಟೆಂಡರ್ ಹಗರಣ ನಡೆದ ಆರೋಪವಿದೆ, ಬಿಬಿಎಂಪಿಯ ನೂರೈವತ್ತು ಆಸ್ತಿಗಳನ್ನು ಅಡವಿಟ್ಟು ಮೂರು ಸಾವಿರ ಕೋಟಿ ರೂ. ಸಾಲ ತರಲು ಸರ್ಕಾರ ಹೊರಟಿದೆ, ಇದೇ ರೀತಿ ಬಿಬಿಎಂಪಿಯನ್ನು ಐದು ಭಾಗಗಳಾಗಿ ವಿಭಜಿಸುವ ಹುನ್ನಾರ ನಡೆಯುತ್ತಿದೆ.
ವಾಸ್ತವವಾಗಿ ರಾಜ್ಯ ಬಿಜೆಪಿ ಇಂತಹ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಡಬೇಕು, ಆಗ ಸಿಎಂ, ಡಿಸಿಎಂ ಕನಲುತ್ತಾರೆ.
ಆದರೆ ಸಿಎಂ, ಡಿಸಿಎಂ ಕನಲುವಂತಹ ಯಾವುದೇ ವಿಷಯಗಳನ್ನು ಹಿಡಿದು ಹೋರಾಡಲು ಬಿಜೆಪಿಯ ಫ್ರಂಟ್ ಲೈನಿನಲ್ಲಿರುವ ನಾಯಕರು ರೆಡಿ ಇಲ್ಲ, ಹೀಗಾಗಿ ಇಂತಹ ವಿಷಯಗಳಲ್ಲಿ ವರಿಷ್ಟರಿಗೆ ದೂರು ರವಾನೆಯಾಗುತ್ತಲೇ ಇದೆ ಮತ್ತು ಕೆಲವೇ ಕಾಲದಲ್ಲಿ ಪಕ್ಷಕ್ಕೆ ಮೇಜರ್ ಸರ್ಜರಿ ಆಗಲಿದೆ ಎಂಬುದು ಈ ಬಣದ ಮಾತು.
ಚನ್ನಪಟ್ಟಣದಲ್ಲಿ ಡಿಕೆಶಿ ಸ್ಪರ್ಧಿಸುತ್ತಾರಾ
ಈ ಮಧ್ಯೆ ಹೆಚ್.ಡಿ.ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮೇಲೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಣ್ಣಿಟ್ಟಿದ್ದಾರೆ.
ಪಕ್ಷ ಮತ್ತು ಜನ ಬಯಸಿದರೆ ಚನ್ನಪಟ್ಟಣದ ಉಪಚುನಾವಣೆಯಲ್ಲಿ ಸ್ಪರ್ಧಿಸದೆ ವಿಧಿಯಿಲ್ಲ ಅಂತ ಡಿಕೆಶಿ ಕೂಡಾ ಹೇಳಿದ್ದಾರೆ.
ಆದರೆ ವಾಸ್ತವದಲ್ಲಿ ಅವರು ಸ್ಪರ್ಧೆಗೆ ತಯಾರಿದ್ದಾರಾ ಅಂತ ನೋಡಲು ಹೋದರೆ ಫಿಫ್ಟಿ ಫಿಪ್ಟಿ ಚಾನ್ಸಿನ ಲಕ್ಷಣ ಕಾಣುತ್ತದೆ. ಅರ್ಥಾತ್, ಉಪಚುನಾವಣೆಯ ಕಣದಲ್ಲಿ ದೇವೇಗೌಡರ ಕುಟುಂಬದವರು ಸ್ಪರ್ಧಿಸಿದರೆ ಮಾತ್ರ ಡಿಕೆಶಿ ಕಣಕ್ಕಿಳಿಯಲಿದ್ದಾರೆ.
ಕಾರಣ, ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ದೇವೇಗೌಡರ ಅಳಿಯ ಡಾ.ಮಂಜುನಾಥ್ ಸ್ಪರ್ಧಿಸಿ ತಮ್ಮ ಸಹೋದರ ಡಿ.ಕೆ.ಸುರೇಶ್ ಅವರನ್ನು ಸೋಲಿಸಿದ ಬೆಳವಣಿಗೆ ಡಿಕೆಶಿ ಕೆರಳುವಂತೆ ಮಾಡಿದೆ.
ಹೀಗಾಗಿ ಚನ್ನಪಟ್ಟಣದಲ್ಲಿ ದೇವೇಗೌಡರ ಕುಟುಂಬದ ಯಾರೇ ಸ್ಪರ್ಧಿಸಿದರೂ ಕಣಕ್ಕಿಳಿಯುವುದು ಡಿಕೆಶಿ ಥಿಂಕಿಂಗು.
ಈ ಮಧ್ಯೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುಮಾರಸ್ವಾಮಿ ಅವರಿಗೆ, ಚನ್ನಪಟ್ಟಣದಿಂದ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಬಯಕೆ ಇಲ್ಲ. ಹಾಗಂತ ಬಿಜೆಪಿಯ ಸಿ.ಪಿ.ಯೋಗೇಶ್ವರ್ ಅವರಿಗೆ ಕ್ಷೇತ್ರ ಬಿಟ್ಟು ಕೊಡುವ ಇರಾದೆಯೂ ಇಲ್ಲ. ಕಾರಣ, ಇದು ಹೇಳಿ ಕೇಳಿ ಜೆಡಿಎಸ್‌ನ ಭದ್ರಕೋಟೆ ಎನಿಸಿಕೊಂಡಿರುವ ಕ್ಷೇತ್ರ, ಹೀಗಾಗಿ ಯೋಗೇಶ್ವರ್ ಅವರಿಗೆ ಈ ಕ್ಷೇತ್ರ ಬಿಟ್ಟುಕೊಡುವ ವಿಷಯದಲ್ಲಿ ಜೆಡಿಎಸ್‌ನ ಸ್ಥಳೀಯ ಕಾರ್ಯಕರ್ತರಿಗೂ ಒಲವಿಲ್ಲ.
ಈ ಮಧ್ಯೆ ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಟಿಕೆಟ್ಟನ್ನು ಯೋಗೇಶ್ವರ್ ಅವರಿಗೆ ಕೊಡಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಾ ರೆಡಿ ಇಲ್ಲ, ಹೀಗಾಗಿ ಉಪಚುನಾವಣೆಯ ಕಣಕ್ಕೆ ಪಕ್ಷದ ಕಾರ್ಯಕರ್ತರೊಬ್ಬರನ್ನು ಇಳಿಸಲು ಕುಮಾರಸ್ವಾಮಿ ರೆಡಿ ಆಗಬೇಕು, ಆದರೆ ಆ ವಿಷಯದಲ್ಲೂ ಅವರಿಗೆ ಹೇಳಿಕೊಳ್ಳುವಂತಹ ಆಸಕ್ತಿ ಇಲ್ಲ, ಯಾಕೆಂದರೆ ಕಾರ್ಯಕರ್ತರೊಬ್ಬರನ್ನು ಕಣಕ್ಕಿಳಿಸಿ ತಾವು ಗೆಲ್ಲಿಸುವುದು, ಆನಂತರ ಅವರು ಆಪರೇಷನ್ ಹಸ್ತಕ್ಕೆ ಒಳಗಾಗಿ ಕಾಂಗ್ರೆಸ್ ಸೇರುವ ಕೆಲಸವಾದರೆ ಏನು ಗತಿ ಎಂಬುದು ಅವರ ಅನುಮಾನ.
ಇಂತಹ ಅನುಮಾನದಲ್ಲಿರುವ ಕುಮಾರಸ್ವಾಮಿಯವರು ಇದ್ದಕ್ಕಿದ್ದಂತೆ ಡಾ.ಮಂಜುನಾಥ್ ಅವರ ಪತ್ನಿ ಶ್ರೀಮತಿ ಅನಸೂಯ ಅವರನ್ನು ಕಣಕ್ಕಿಳಿಸಬಹುದು ಎಂಬುದು ಡಿಕೆಶಿ ಪಡೆಯ ಥಿಂಕಿಂಗು.
ಹೀಗಾಗಿ ಉಪಚುನಾವಣೆಯ ಕಣಕ್ಕಿಳಿಯುವ ಸಂದೇಶ ರವಾನಿಸಿರುವ ಡಿಕೆಶಿ, ಆ ಮೂಲಕ ಕಾಂಗ್ರೆಸ್ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ.
ಸಿದ್ದು ಮುಂದಿದೆ ನಿಜವಾದ ಸವಾಲು
ಇನ್ನು ಐವತ್ತು ವರ್ಷಗಳ ಹಿಂದೆ ಮುಖ್ಯಮಂತ್ರಿ ದೇವರಾಜ ಅರಸು ಎದುರಿಸಿದ್ದ ಸವಾಲನ್ನು ಇವತ್ತು ಸಿಎಂ ಸಿದ್ದರಾಮಯ್ಯ ಎದುರಿಸುವ ಸನ್ನಿವೇಶ ಸೃಷ್ಟಿಯಾಗಿದೆ.
ಅವತ್ತು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು, ಉಳುವವನೇ ಹೊಲದೊಡೆಯ ಎಂಬ ಮಂತ್ರ ಜಪಿಸಿದ್ದ ಅರಸರು ಇದಕ್ಕಾಗಿ ಪ್ರಬಲ ವರ್ಗಗಳ ವಿರೋಧ ಎದುರಿಸಬೇಕಾಯಿತು, ಕಾರಣ, ಉಳುವವನೇ ಭೂ ಒಡೆಯನಾಗಲು ಪ್ರಬಲ ವರ್ಗಗಳ ಕೈಲಿದ್ದ ಭೂಮಿಯನ್ನು ಕಿತ್ತು ಕೊಡಬೇಕಿತ್ತು.
ಇಷ್ಟಾದರೂ ಅರಸರು ಜಗ್ಗಲಿಲ್ಲ, ತಮ್ಮ ಗುರಿ ಸಾಧನೆಯ ವಿಷಯದಲ್ಲಿ ಅವರು ನೂರಕ್ಕೆ ನೂರರಷ್ಟು ಯಶಸ್ವಿಯಾಗದಿದ್ದರೂ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಪರಿವರ್ತನೆ ತರುವಲ್ಲಿ ಯಶಸ್ವಿಯಾದರು.
ಅಂದ ಹಾಗೆ ಈಗ ಸಿದ್ದರಾಮಯ್ಯ ಅವರ ಸರದಿ, ಕಾರಣ, ಅವರ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಗೆ ಈಗ ಹಣ ಸಾಲುತ್ತಿಲ್ಲ, ಅದೇ ಕಾಲಕ್ಕೆ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸುವ ಕೆಲಸದಿಂದ ಶಾಸಕರಿಗೆ ನಿರೀಕ್ಷಿತ ಪ್ರಮಾಣದ ಅನುದಾನ ಸಿಗುತ್ತಿಲ್ಲ, ಪರಿಣಾಮ ಶಾಸಕರ ಅಸಮಾಧಾನ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ.
ಈ ಬೆಳವಣಿಗೆ ಸಹಜವಾಗಿ ಸಿದ್ದರಾಮಯ್ಯ ಅವರಿಗೆ ಕಸಿವಿಸಿಯುಂಟು ಮಾಡಿದೆ, ಹಾಗಂತ ಅವರು ಗ್ಯಾರಂಟಿ ಯೋಜನೆಗಳನ್ನು ಕೈ ಬಿಡುವ ಸ್ಥಿತಿಯಲ್ಲಿಲ್ಲ, ಅದೇ ಕಾಲಕ್ಕೆ ಶಾಸಕರ ಅಸಮಾಧಾನವನ್ನು ನಿರ್ಲಕ್ಷಿಸುವ ಸ್ಥಿತಿಯಲ್ಲೂ ಇಲ್ಲ.
ಇಂತಹ ಸಂದಿಗ್ಧತೆಯಲ್ಲಿರುವ ಸಿದ್ದರಾಮಯ್ಯ ಗ್ಯಾರಂಟಿಗಳಿಗಾಗಿ ಪರ್ಯಾಯ ಮೂಲ ಹುಡುಕುವುದು ಅನಿವಾರ್ಯ, ಈ ದಿಸೆಯಲ್ಲಿ ಅವರಿಗೆ ಆಪ್ತರು ಹಲವು ಸಲಹೆಗಳನ್ನು ನೀಡಿದ್ದಾರೆ.
ಅದರ ಪ್ರಕಾರ, ರಾಜ್ಯದಲ್ಲಿ ಒಟ್ಟು ೧.೧೫ ಲಕ್ಷ ಎಕರೆಯಷ್ಟು ಸರ್ಕಾರಿ ಭೂಮಿ ಪ್ರಭಾವಿಗಳಿಂದ ಒತ್ತುವರಿಯಾಗಿದೆ, ಇದನ್ನು ತೆರವು ಮಾಡುವ ಕೆಲಸಕ್ಕೆ ಕೈ ಹಾಕಬೇಕು ಎಂಬುದು ಒಂದು ಸಲಹೆ.
ಇದೇ ರೀತಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ಯೋಜನೆಗೆ ಕೊಟ್ಟ ಹೆಚ್ಚುವರಿ ಭೂಮಿಯನ್ನು ವಶಪಡಿಸಿಕೊಳ್ಳಬೇಕು ಎಂಬುದು ಮತ್ತೊಂದು ಸಲಹೆ.
ಅದರ ಪ್ರಕಾರ ಈ ಯೋಜನೆಗಾಗಿ ಎಂಟು ಸಾವಿರ ಎಕರೆಯಷ್ಟು ಹೆಚ್ಚುವರಿ ಭೂಮಿ ನೀಡಲಾಗಿದೆ, ಈ ಭೂಮಿಯ ಪ್ರತಿ ಎಕರೆಗೆ ಇವತ್ತು ಹತ್ತು ಕೋಟಿ ರೂ ಮೌಲ್ಯವಿದೆ, ಹೀಗಾಗಿ ಇದನ್ನು ವಶಪಡಿಸಿಕೊಂಡರೆ ಸರ್ಕಾರದ ಆರ್ಥಿಕ ಶಕ್ತಿ ಗಟ್ಟಿಯಾಗುತ್ತದೆ.
ಆದರೆ ಇದನ್ನು ಮಾಡಲು ದೊಡ್ಡ ಮಟ್ಟದ ಇಚ್ಚಾಶಕ್ತಿ ಬೇಕು, ಯಾಕೆಂದರೆ ಪ್ರಬಲ ವರ್ಗಗಳ ಹಿಡಿತದಲ್ಲಿದ್ದ ಭೂಮಿಯನ್ನು ಕಿತ್ತು ಕೊಡುವುದಕ್ಕಿಂತ, ಪ್ರಭಾವಿಗಳ ಹಿಡಿತದಲ್ಲಿರುವ ಭೂಮಿಯನ್ನು ಕಿತ್ತುಕೊಳ್ಳುವುದು ಕಷ್ಟ.
ಸಿದ್ದರಾಮಯ್ಯ ಇದನ್ನು ಸಾಧಿಸುತ್ತಾರಾ, ಅಂತ ಕಾದು ನೋಡಬೇಕು.
ಆರ್.ಟಿ.ವಿಠ್ಠಲಮೂರ್ತಿ