ಡಿ.ಕೆ.ಶಿವಕುಮಾರ್ ಬೆಂಬಲಿಗ ಸಂಸದರು, ಸಚಿವರು, ಶಾಸಕರು ಪಟ್ಟು
ಬೆಂಗಳೂರು : ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಿರುವ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಬಲಿಗ ಸಂಸದರು, ಸಚಿವರು, ಶಾಸಕರು ಪಟ್ಟುಹಿಡಿದಿದ್ದಾರೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ರಾಜಣ್ಣ ಅವರು ಮೂರು ಉಪ ಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಸಿ ಶಿವಕುಮಾರ್ ಅಧಿಕಾರಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಬೆನ್ನಲ್ಲೇ ಈ ಪಟ್ಟು ಎದುರಾಗಿದೆ.
ಪಕ್ಷದ ವರಿಷ್ಠರು ತೆಗೆದುಕೊಂಡ ತೀರ್ಮಾನಗಳನ್ನೇ ಆಗಿಂದ್ಯಾಗೆ ಪ್ರಶ್ನೆ ಮಾಡುತ್ತಾ ಮುಜುಗರ ಉಂಟು ಮಾಡುತ್ತಿರುವ ರಾಜಣ್ಣ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲೇಬೇಕೆಂದು ಪಟ್ಟು ಹಿಡಿದಿದ್ದಾರೆ.
ಲೋಕಸಭಾ ಚುಣಾವಣೆಯಲ್ಲಿ ತುಮಕೂರು ಕ್ಷೇತ್ರಕ್ಕೆ ತಾವೇ ಕೇಳಿಕೊಂಡು ಮುದ್ದಹನುಮೇಗೌಡರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು.
ಅವರನ್ನು ಕಣ್ಕಕಿಳಿಸಿದ ನಂತರ ರಾಜಣ್ಣ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಲಿಲ್ಲ, ಅಷ್ಟೇ ಅಲ್ಲ ತಾವು ಪ್ರತಿನಿಧಿಸುವ ಮಧುಗಿರಿ ಕ್ಷೇತ್ರದಲ್ಲೇ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗಿದೆ.
ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೇರಾವುದೇ ವಿಧಾನಸಭಾ ಕ್ಷೇತ್ರಗಳಲ್ಲೂ ಅವರು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡದೆ ವಿರೋಧಿ ಗೆಲುವಿಗೆ ಸಹಕರಿಸಿದಂತಿದೆ ಎಂದು ದೂರುತ್ತಿದ್ದಾರೆ. ಮುಖ್ಯಮಂತ್ರಿ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಚನೆ ಸಂದರ್ಭದಲ್ಲಿ ಎಐಸಿಸಿ ವರಿಷ್ಠರು ಕೆಲವು ನಿಬಂಧನೆಗಳನ್ನು ಹಾಕಿದ್ದರು, ಅದರಂತೆ ಸರ್ಕಾರ ನಡೆದುಕೊಂಡು ಬರುತ್ತಿದೆ.
ಇಂತಹ ನಿಬಂಧನೆಗಳನ್ನು ರಾಜಣ್ಣ ಪ್ರಶ್ನೆ ಮಾಡುತ್ತಿರುವುದಲ್ಲದೆ, ಜಾತಿಗೊಂದು ಉಪ ಮುಖ್ಯಮಂತ್ರಿ ಸ್ಥಾನ ನಿಡಬೇಕೆಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಕೆಲವು ಸಚಿವರ ಕುಮ್ಮಕ್ಕೂ ಇದೆ, ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಪಕ್ಷ ಮೇಲೆ ದುಷ್ಪರಿಣಾಮ ಬೀರುತ್ತದೆ.
ಇಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ತೆರೆಮರೆಯಲ್ಲಿ ತನ್ನ ಪ್ರಯತ್ನ ಮುಂದುವರೆಸಿದೆ. ಇಂತಹ ಸನ್ನಿವೇಶದಲ್ಲಿ ಸಚಿವರುಗಳೇ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದರೆ, ಮುಂದೆ ದೊಡ್ಡ ಅನಾಹುತ ಎದುರಿಸಬೇಕಾಗುತ್ತದೆ.
ರಾಜಣ್ಣ ಮತ್ತು ಜಾರಕಿಹೊಳಿ ವಿಷಯವನ್ನು ಶಿವಕುಮಾರ್ ಬೆಂಬಲಿತ ಸಚಿವರು ಮುಂದಿನ ಸಂಪುಟ ಸಭೆಯಲ್ಲೇ ಚರ್ಚೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
ಇದರ ಮಧ್ಯೆ ದೆಹಲಿಯಲ್ಲೇ ಉಳಿದಿರುವ ಲೋಕೋಪಯೋಗಿ ಸಚಿವ ಜಾರಕಿಹೊಳಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ತಮ್ಮನ್ನೂ ಸೇರಿದಂತೆ ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಬಡ್ತಿ ನೀಡುವಂತೆ ಒತ್ತಾಯ ತಂದಿದ್ದಾರೆ.
ಲೋಕಸಭಾ ಚುಣಾವಣೆ ನಂತರ ಈ ವಿಚಾರವನ್ನು ಕೈಗೆತ್ತಿಕೊಳ್ಳುವ ಭರವಸೆ ನೀಡಿದ್ದಿರಿ. ನೀವು ನೀಡಿದ್ದ ಆಶ್ವಾಸನೆಯನ್ನು ಈಡೇರಿಸಿ ಎಂದು ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ.