ಬೆಂಗಳೂರು:ಇತ್ತೀಚೆಗಷ್ಟೇ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಮೇಲೆ ಮೂರು ರೂ. ಹೆಚ್ಚಳ ಮಾಡಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಮಕ್ಕಳು ಕುಡಿಯುವ ನಂದಿನಿ ಹಾಲಿನ ದರವನ್ನೂ ಪ್ರತಿ ಲೀಟರ್‌ಗೆ ಎರಡು ರೂ.ನಂತೆ ಏರಿಕೆ ಮಾಡಿದೆ.
ಕರ್ನಾಟಕದಲ್ಲಿ ಹಾಲು ಉತ್ಪಾದನೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದರಿಂದ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಎಲ್ಲಾ ಶ್ರೇಣಿಯ ಹಾಲಿನ ದರದಲ್ಲಿ ಪ್ರತಿ ಲೀಟರ್‌ಗೆ ಎರಡು ರೂ. ಹೆಚ್ಚಳ ಮಾಡಿದ್ದು, ಇದು ತಕ್ಷಣದಿಂದಲೇ (ಜೂನ್ 26ರಿಂದ) ಜಾರಿಗೆ ಬಂದಿದೆ.
ಅರ್ಧ ಲೀಟರ್‌ಗೂ 2 ರೂ. ಹೆಚ್ಚಳ
ಇನ್ನು ಮುಂದೆ ಅರ್ಧ ಲೀಟರ್ ಹಾಲು ಖರೀದಿಗೂ ಎರಡು ರೂ. ಹೆಚ್ಚಿನ ದರ ನೀಡಬೇಕು, ಒಂದು ಲೀಟರ್ ಖರೀದಿಸಿದರೂ ಎರಡು ರೂ. ನೀಡಬೇಕು.
ಸಾಮಾನ್ಯವಾಗಿ ಜನರು ಹೆಚ್ಚು ಬಳಕೆ ಮಾಡುವ ಟೋನ್ಡ್ ಹಾಲಿನ ಬೆಲೆ ಪ್ರಸ್ತುತ ಲೀಟರ್ 42 ರೂ.ನಿಂದ 44 ರೂ.ಗೆ ಹೆಚ್ಚಳ ಮಾಡಲಾಗಿದೆ.
ಅದೇ ರೀತಿ ಅರ್ಧ ಲೀಟರ್ ಹಾಲಿನ ಬೆಲೆ 22 ರೂ.ನಿಂದ 24ಕ್ಕೆ ಏರಿಕೆ ಮಾಡಲಾಗಿದೆ.
ದರ ಹೆಚ್ಚಳ ಸಮರ್ಥನೆ
ಹಾಲಿನ ದರ ಹೆಚ್ಚಳ ಸಮರ್ಥಿಸಿಕೊಂಡಿರುವ ಒಕ್ಕೂಟ, ಹಾಲು ಉತ್ಪಾದನೆಯಲ್ಲಿ ಪ್ರತಿನಿತ್ಯ ಒಂದು ಕೋಟಿ ಲೀಟರ್ ಮೀರಿ ಸಂಗ್ರಹವಾಗುತ್ತಿದ್ದು, ಹೆಚ್ಚುವರಿ ಹಾಲನ್ನು ಗ್ರಾಹಕರಿಗೆ ತಲುಪಿಸಲು ಈ ನಿರ್ಣಯ ಅನಿವಾರ್ಯ ಎಂದಿದೆ.
ಇದುವರೆಗೂ ಗ್ರಾಹಕರಿಗೆ 500 ಎಂಎಲ್ ಹಾಲು ನೀಡುತ್ತಿದ್ದ ಜಾಗದಲ್ಲಿ ಇನ್ನು ಮುಂದೆ 550 ಎಂಎಲ್ ನೀಡಲಾಗುವುದು, ಅದೇ ರೀತಿ 1000 ಎಂಎಲ್ ಜಾಗದಲ್ಲಿ 1050 ಎಂಎಲ್ ಹೆಚ್ಚುವರಿ ಹಾಲನ್ನು ಗ್ರಾಹಕರಿಗೆ ನೀಡುವುದಾಗಿ ತಿಳಿಸಿದೆ. ಆದರೆ, ಮೊಸರಿನ ದರದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ ಎಂದು ಒಕ್ಕೂಟ ಸ್ಪಷ್ಟಪಡಿಸಿದೆ.
ವಿವಿಧ ಶ್ರೇಣಿಯ ಹಾಲಿನ ಹೊಸ ದರ
ವಿವಿಧ ಶ್ರೇಣಿಯ ಹಾಲಿನ ಹೊಸ ದರಗಳು ಹೀಗಿವೆ:- ನೀಲಿ ಪ್ಯಾಕೆಟ್ ಹಾಲು 42 ರಿಂದ 44 ರೂ., ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) 43 ರಿಂದ 45ರೂ., ಆರೆಂಜ್ ಪ್ಯಾಕೆಟ್ ಹಾಲು 46ರಿಂದ 48 ರೂ., ಆರೆಂಜ್ ಸ್ಪೆಷಲ್ ಹಾಲು 48 ರಿಂದ 50 ರೂ., ಶುಭಂ ಹಾಲು 48ರಿಂದ 50 ರೂ., ಸಮೃದ್ದಿ ಹಾಲು 51ರಿಂದ 53ರೂ., ಶುಭಂ (ಟೋನ್ಡ್ ಹಾಲು) 49ರಿಂದ 51ರೂ., ಸಂತೃಪ್ತಿ ಹಾಲು 55 ರಿಂದ 57 ರೂ., ಶುಭಂ ಗೋಲ್ಡ್ ಹಾಲು 49ರಿಂದ 51ರೂ., ಶುಭಂ ಡಬಲ್ ಟೋನ್ಡ್ ಹಾಲು 41 ರಿಂದ 43 ರೂ.ಗೆ ಏರಿಕೆಯಾಗಿದೆ.