ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರ ತನಿಖೆ ಬಗ್ಗೆ ಪೋಷಕರು ಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದ ರೇಣುಕಾ ಸ್ವಾಮಿ ತಂದೆ-ತಾಯಿ, ಇದುವರೆಗೂ ನಟ ದರ್ಶನ್ ಮತ್ತು ಇತರರ ವಿರುದ್ಧ ತನಿಖಾಧಿಕಾರಿಗಳು ಒಳ್ಳೆ ಕೆಲಸ ಮಾಡುತ್ತಿದ್ದು ನಮಗೆ ನ್ಯಾಯ ದೊರಕುವ ವಿಶ್ವಾಸವಿದೆ ಎಂದಿದ್ದಾರೆ.
ಮಗಳಿಗೆ ಸರ್ಕಾರಿ ಉದ್ಯೋಗಕ್ಕೆ ಮನವಿ
ಮಗನ ಹತ್ಯೆ ನಂತರ ಕುಟುಂಬ ನಿರ್ವಹಣೆ ಕಷ್ಟಕರವಾಗಿದ್ದು ಮಗಳಿಗೆ ಸರ್ಕಾರಿ ಉದ್ಯೋಗ ಕೊಡಿಸುವಂತೆ ಮಾಡಿದ ಮನವಿಗೆ ಮುಖ್ಯಮಂತ್ರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಚಿತ್ರ ನಟ ದರ್ಶನ್ ಅವರನ್ನು ರಕ್ಷಿಸಲು ಸಂಪುಟದ ಹಿರಿಯ ಸಹೋದ್ಯೋಗಿ ಸೇರಿದಂತೆ ಕಾಂಗ್ರೆಸ್ ಮತ್ತು ಬಿಜೆಪಿಯ ಐವರು ಶಾಸಕರು ಪ್ರಯತ್ನ ಮಾಡಿದರೂ ಅದಕ್ಕೆ ಸರ್ಕಾರ ತಲೆಬಾಗಲಿಲ್ಲ.
ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒತ್ತಡ ತೀವ್ರವಾಗುತ್ತಿರುವುದನ್ನು ಗಮನಿಸಿದ ಮುಖ್ಯಮಂತ್ರಿ ಅವರು, ಸಚಿವ ಸಂಪುಟ ಸಭೆಯಲ್ಲೇ, ಈ ವಿಚಾರದ ಬಗ್ಗೆ ಯಾರೂ ಬಹಿರಂಗ ಹೇಳಿಕೆ ನೀಡಬೇಡಿ ಮತ್ತು ಆತನ ಪರ ವಕಾಲತ್ತು ವಹಿಸಿ ಮಾತನಾಡಬೇಡಿ ಎಂದು ಕಿವಿಮಾತು ಹೇಳಿದ್ದರು.
17 ಆರೋಪಿಗಳು ಜೈಲಿನಲ್ಲಿ
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದರ್ಶನ್, ಆತನ ಗೆಳತಿ ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಇದೆಲ್ಲವನ್ನು ಗಮನಿಸಿ ರೇಣುಕಾಸ್ವಾಮಿ ಕುಟುಂಬದವರು ಕೃತಜ್ಞತೆ ಸಲ್ಲಿಸಿ, ಮಗಳಿಗೆ ಸರ್ಕಾರಿ ಕೆಲಸ ನೀಡುವಂತೆ ಮನವಿ ಮಾಡಿದ್ದಾರೆ.