ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ವಿರೋಧ ಪಕ್ಷ ನಾಯಕ ಸ್ಥಾನದ ಜವಾಬ್ದಾರಿ ವಹಿಸಿಕೊಂಡಿರುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಅಭಿಪ್ರಾಯಪಟ್ಟರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆಯಲ್ಲಿ ಬಿಜೆಪಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಎದುರಿಸಲು ರಾಹುಲ್ ಗಾಂಧಿ ಸೂಕ್ತ ವ್ಯಕ್ತಿ, ಅವರಿಗೆ ತುಂಬು ಹೃದಯದ ಅಭಿನಂದನೆ.
ಲೋಕಸಭಾ ವಿರೋಧ ಪಕ್ಷದ ಸ್ಥಾನ ಸ್ವೀಕರಿಸಬೇಕೆಂದು ಪಕ್ಷದ ಕಾರ್ಯಕಾರಿಣಿ ಸಮಿತಿ ಒತ್ತಾಯಿಸಿತ್ತು, ನಾನು ಕೂಡ ಸಲಹೆ ನೀಡಿದ್ದೆ ಎಂದರು.
ಕಾಫಿ, ಚಹಾ ಬೆಲೆ ಏರಿಕೆ ಸಲ್ಲದು
ಹಾಲಿನ ಬೆಲೆ ಹೆಚ್ಚಳ ಮಾಡಿಲ್ಲ, ಹೆಚ್ಚುವರಿ ಉತ್ಪಾದನೆಯನ್ನು ಗ್ರಾಹಕರಿಗೆ ನೀಡಿ, ಸೂಕ್ತ ದರವನ್ನಷ್ಟೇ ನಿಗದಿ ಪಡಿಸಲಾಗಿದೆ, ಈ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರ ಸಂಘದವರು ಕಾಫಿ, ಟೀ ದರ ಹೆಚ್ಚಳ ಮಾಡುವುದು ಸರಿಯಲ್ಲ, ಹಾಲಿನ ಬೆಲೆ ಏರಿದ್ದರೆ ಮಾತ್ರ ಹೆಚ್ಚಿಸಬೇಕು, ಉತ್ಪಾದಿತ ಹೆಚ್ಚುವರಿ ಹಾಲನ್ನು ರೈತರಿಂದ ಖರೀದಿಸಲೇಬೇಕು, ಚೆಲ್ಲಲು ಆಗುವುದಿಲ್ಲ ಎಂದರು.