ಬೆಂಗಳೂರು:ಸರ್ಕಾರ ಮತ್ತು ಪಕ್ಷದ ಆಂತರಿಕ ವಿಚಾರಗಳನ್ನು ಹಾದಿ-ಬೀದಿಯಲ್ಲಿ ಮಾತನಾಡುವುದನ್ನು ನಿಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸಚಿವರು ಮತ್ತು ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಅವರ ಬದಲಾವಣೆ ಆಗಲಿ, ಉಪಮುಖ್ಯಮಂತ್ರಿ ಅವರಿಗೆ ಬಡ್ತಿ ವಿಚಾರವೂ ಸೇರಿದಂತೆ ಅನಗತ್ಯ ಹೇಳಿಕೆ ನೀಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ ಎಂದಿದ್ದಾರೆ.
ದೆಹಲಿ ವರಿಷ್ಠರಿಂದ ಪರಿಹಾರ ತನ್ನಿ
ಇನ್ನೊಂದೆಡೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹೆಚ್ಚುವರಿ ಉಪಮುಖ್ಯಮಂತ್ರಿ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಬದಲು ದೆಹಲಿಗೆ ತೆರಳಿ ವರಿಷ್ಠರಿಂದ ಪರಿಹಾರ ತನ್ನಿ ಎಂದು ಅಪಸ್ವರ ಎತ್ತುತ್ತಿರುವ ಸಚಿವರುಗಳಿಗೆ ತಿರುಗೇಟು ನೀಡಿದ್ದಾರೆ.
ಮುಂದುವರೆದು ಮಾತನಾಡಿದ ಮುಖ್ಯಮಂತ್ರಿ ಅವರು, ಪಕ್ಷ ಮತ್ತು ಸರ್ಕಾರದಲ್ಲಿ ಯಾವ ಸಮಯಕ್ಕೆ ಏನಾಗಬೇಕೋ ಅದನ್ನು ವರಿಷ್ಠರು ತೀರ್ಮಾನಿಸುತ್ತಾರೆ, ಅನಗತ್ಯ ಹೇಳಿಕೆ ನೀಡಿ ಗೊಂದಲ ಸೃಷ್ಠಿಸುವುದು ಬೇಡ ಎಂದಿದ್ದಾರೆ.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಹೆಚ್ಚುವರಿ ಉಪಮುಖ್ಯಮಂತ್ರಿ ಬಗ್ಗೆ ನೀಡಿರುವ ಹೇಳಿಕೆಗೆ ವರಿಷ್ಠರು ಗರಂ ಆಗಿದ್ದಾರೆ ಎನ್ನಲಾಗಿದೆ.
ರಾಜಣ್ಣ ಅವರಿಗೆ ಎಚ್ಚರಿಕೆ
ಮುಖ್ಯಮಂತ್ರಿ ಅವರು ಈ ಸಂಬಂಧ ಪತ್ರಕರ್ತರ ಮುಂದೆ ಹೇಳಿಕೆ ನೀಡುವುದಕ್ಕೂ ಮುನ್ನ ರಾಜಣ್ಣ ಅವರನ್ನು ಸಂಪರ್ಕಿಸಿ, ಇಂತಹ ವಿಚಾರಗಳ ಬಗ್ಗೆ ಇನ್ನು ಮುಂದೆ ಬಹಿರಂಗವಾಗಿ ಮಾತನಾಡಬಾರದೆಂದು ಎಚ್ಚರಿಕೆ ನೀಡಿದ್ದಾರೆ. ಅದೇ ಸಂದರ್ಭದಲ್ಲಿ ಕೆಲವು ಸಚಿವರು ಮತ್ತು ಶಾಸಕರಿಗೂ ಕಿವಿಮಾತು ಹೇಳಿದ್ದಾರೆ.
ಸಚಿವರಾದ ರಾಜಣ್ಣ ಮತ್ತು ಜಾರಕಿಹೊಳಿ ನೀಡುತ್ತಿರುವ ಹೇಳಿಕೆ ಬಗ್ಗೆ ಗರಂ ಆಗಿರುವ ಉಪಮುಖ್ಯಮಂತ್ರಿ ಶಿವಕುಮಾರ್, ಮಾಧ್ಯಮದ ಮುಂದೆ ಬಲ ತೋರಿಸುವ ಬದಲು ವರಿಷ್ಠರಿಂದ ಪರಿಹಾರ ತನ್ನಿ ಎಂದು ಖಾರವಾಗಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬ ಕಾರ್ಯಕರ್ತನಿಗೂ, ಮುಖಂಡನಿಗೂ ಪಕ್ಷ ಮತ್ತು ಸರ್ಕಾರದಲ್ಲಿ ಅಧಿಕಾರ ಪಡೆಯುವ ಹಕ್ಕಿದೆ, ಅದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ.
ವರಿಷ್ಠರ ಭೇಟಿಗೆ ಅಡ್ಡಿ ಇಲ್ಲ
ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಪ್ರಚಾರ ಪಡೆಯುವ ಬದಲು ಸಚಿವರುಗಳು ವರಿಷ್ಠರನ್ನು ಭೇಟಿ ಮಾಡಲಿ, ಅವರನ್ನು ಭೇಟಿ ಮಾಡಲು ಬೇಲಿಗಳು ಅಡ್ಡ ಇಲ್ಲ ಎಂದರು.
ನೀವೂ ಅಷ್ಟೇ ಮಾಧ್ಯಮದವರು, ಅಂತಹವರು ಸಿಕ್ಕರೆ, ಕೇಳಿದ್ದನ್ನೇ ಕೇಳಿ, ಅದನ್ನೇ ಬೆಳಗ್ಗಿನಿಂದ ಸಂಜೆವರೆಗೂ ಹೇಳುತ್ತಿರುತ್ತೀರಿ ಎಂದು ಕಿಡಿಕಾರಿದರು.