ಬೆಂಗಳೂರು:ಮುಖ್ಯಮಂತ್ರಿ ಬದಲಾವಣೆ, ಉಪಮುಖ್ಯಮಂತ್ರಿಗಳ ನೇಮಕ ವಿಚಾರ ಪ್ರದೇಶ ಕಾಂಗ್ರೆಸ್‌ನಲ್ಲಿ ಬೆಂಕಿ ಹೊತ್ತಿಕೊಳ್ಳುವಂತೆ ಮಾಡಿದೆ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲಿಗೆ ಸಚಿವ ಕೆ.ಎನ್.ರಾಜಣ್ಣ ಪ್ರತಿ ಸವಾಲು ಹಾಕಿದ್ದಾರೆ.
ಶಿಸ್ತುಕ್ರಮದ ಎಚ್ಚರಿಕೆ
ಸಿಎಂ, ಡಿಸಿಎಂ ವಿಚಾರ ಸಾರ್ವಜನಿಕವಾಗಿ ಹಾಗೂ ಮಾಧ್ಯಮಗಳ ಮುಂದೆ ಮಾತನಾಡುವವರಿಗೆ ವಿಧಿಯಿಲ್ಲದೆ ನೋಟಿಸ್ ಕೊಟ್ಟು ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
’ಶಿವಕುಮಾರ್ ಅವರ ವಾರ್ನಿಂಗನ್ನು ಕೇಳುತ್ತೀನೇನ್ರಿ’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಷ್ಟೇ ಖಾರವಾಗಿ ಉತ್ತರಿಸಿರುವುದಲ್ಲದೆ, ’ರಾಜಣ್ಣ, ರಾಜಣ್ಣನೇ’ ಎಂದಿದ್ದಾರೆ.
’ಎಲ್ಲರ ಬಾಯಿಗೂ ಬೀಗ ಹಾಕಿದರೆ, ನಾನೂ ಸುಮ್ಮನಿರುತ್ತೇನೆ, ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದರೆ, ಕೇಳಿಕೊಂಡು ಸುಮ್ಮನಿರಕ್ಕೆ ಆಗುತ್ತಾ’ ಎಂದು ಸುದ್ದಿಗಾರರ ಮುಂದೆ ಕಿಡಿಕಾರಿದ್ದಾರೆ.
ವಿಧಾನಸಭೆ ವಿಸರ್ಜಿಸಿ
ಇದರ ನಡುವೆ ಮಾಜಿ ಸಂಸದ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್, ಉಪಮುಖ್ಯಮಂತ್ರಿ ಮತ್ತು ನಾಯಕತ್ವ ಕೇಳುವವರು ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ ನಂತರ ಎಷ್ಟು ಮುಖ್ಯಮಂತ್ರಿ ಹಾಗೂ ಎಷ್ಟು ಉಪಮುಖ್ಯಮಂತ್ರಿಗಳನ್ನಾದರೂ ಮಾಡಿಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಸಾರ್ವಜನಿಕವಾಗಿ ಹಾಗೂ ಮಾಧ್ಯಮಗಳ ಮುಂದೆ ಪ್ರಸ್ತಾಪಿಸುವ ಸಚಿವರು ಮತ್ತು ಪಕ್ಷದ ಶಾಸಕರಿಗೆ ನೋಟಿಸ್ ನೀಡಿ, ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಬಹಿರಂಗ ಹೇಳಿಕೆ ನೀಡುವವರು ಎಐಸಿಸಿ ಮತ್ತು ರಾಜ್ಯ ಘಟಕದಿಂದ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ.
ಪಕ್ಷಕ್ಕೆ ಶಿಸ್ತು ಮುಖ್ಯ
ಪಕ್ಷಕ್ಕೆ ಶಿಸ್ತು ಮುಖ್ಯ, ಶಿಸ್ತಿಲ್ಲದೆ ಪಕ್ಷವಿಲ್ಲ, ಪಕ್ಷವನ್ನು ಅಧಿಕಾರಕ್ಕೆ ತರಲು ಎಷ್ಟು ಕಷ್ಟ ಪಟ್ಟಿದ್ದೇವೆ ಎಂಬುದು ನಮಗೆ ಗೊತ್ತಿದೆ, ಕೆಲವರು ಸುಖಾಸುಮ್ಮನೆ ಮಾತನಾಡುವ ಅವಶ್ಯಕತೆಯಿಲ್ಲ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾನು ಹಾಗೂ ಸಿದ್ದರಾಮಯ್ಯ ಪಕ್ಷದ ಹಿತದೃಷ್ಟಿಯಿಂದ ಹೇಗೆ ಕೆಲಸ ಮಾಡಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೇವೆ ಎಂದರು.
ಮುಖ್ಯಮಂತ್ರಿ ಬದಲಾವಣೆ ಹಾಗೂ ಉಪಮುಖ್ಯಮಂತ್ರಿಗಳ ನೇಮಕ ಬಗ್ಗೆ ಹೈಕಮಾಂಡ್ ಬಳಿ ಚರ್ಚೆಯಾಗಿಲ್ಲ, ಸ್ವಾಮೀಜಿಗಳು ಅಭಿಮಾನಪೂರ್ವಕವಾಗಿ ಮಾತನಾಡಿದ್ದಾರೆ, ಸ್ವಾಮೀಜಿಗಳ ಆಶೀರ್ವಾದ ಇದ್ದರೆ ಸಾಕು, ಅವರು ಮನಸ್ಸಿನಿಂದ ಹರಸಿದರೆ ಸಾಕು.
ಹೈಕಮಾಂಡ್ ತೀರ್ಮಾನ ಮಾಡುತ್ತೆ
ನಾನು ಮುಖ್ಯಮಂತ್ರಿ ಆಗಲು ಯಾರೂ ಶಿಫಾರಸ್ಸು ಮಾಡಬೇಕಿಲ್ಲ, ನನ್ನ ಕೆಲಸ ನೋಡಿ ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ಮಾಡುತ್ತದೆ, ದಯವಿಟ್ಟು ಈ ವಿಚಾರ ಇಲ್ಲಿಗೆ ಕೈಬಿಡಿ ಎಂದು ಮನವಿ ಮಾಡಿದ್ದಾರೆ.
ಹೆಚ್ಚುವರಿ ಉಪಮುಖ್ಯಮಂತ್ರಿಗಳ ನೇಮಕ ಕುರಿತು ಕೆಲವರು ಹೇಳಿಕೆ ಕೊಡುತ್ತಿರುವುದು ನನಗೆ ಗೊತ್ತಿಲ್ಲ, ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡರೆ ಉತ್ತಮ ಎಂದರು.
ಶಿವಕುಮಾರ್ ಹೇಳಿಕೆಗೆ ಅಷ್ಟೇ ಖಾರವಾಗಿ ಉತ್ತರಿಸಿರುವ ರಾಜಣ್ಣ, ’ನೋಟಿಸ್ ಕೊಡುತ್ತಾರಾ, ಕೊಡಲಿ, ಕೊಟ್ಟಾದ ಮೇಲೆ ಮಾತನಾಡುತ್ತೀನಿ, ಹೆಚ್ಚುವರಿ ಉಪಮುಖ್ಯಮಂತ್ರಿ ಏಕೆ ಕೇಳಬಾರದು’ ಎಂದು ಕೆಪಿಸಿಸಿ ಅಧ್ಯಕ್ಷರನ್ನು ಪ್ರಶ್ನಿಸಿ, ’ಕೇಳಿದರೇನು ತಪ್ಪಾ’ ಎಂದಿದ್ದಾರೆ.
ಸಮುದಾಯದ ಸ್ವಾಮೀಜಿಗಳು
ಶಾಮನೂರು ಶಿವಶಂಕರಪ್ಪ, ಸತೀಶ್ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಆಯಾ ಸಮುದಾಯದ ಸ್ವಾಮೀಜಿಗಳು ಹೇಳುತ್ತಾರೆ.
ಸ್ವಾಮೀಜಿಗಳು ಹೇಳೋದನ್ನು ಕೇಳೋಕಾಗುತ್ತಾ, ಅವರು ಕೇಳೋದು ಪ್ರಜಾಪ್ರಭುತ್ವಕ್ಕೆ ಅವಮಾನ, ನಾನು ಹಗರಣ ಮಾಡಿದ್ದರೆ ತನಿಖೆ ಮಾಡಲಿ, ಬಡವರ ಪರ ಸಿದ್ದರಾಮಯ್ಯ ಕೆಲಸ ಮಾಡುತ್ತಾರೆ, ಅದಕ್ಕೆ ಅವರ ಜೊತೆ ನಾನಿದ್ದೇನೆ.
ಡಿ.ಕೆ.ಸುರೇಶ್ ಒಳ್ಳೆ ಸಂಸದನಾಗಿ ಕೆಲಸ ಮಾಡಿದ್ದರೂ, ಇದೇ ಸ್ವಾಮಿಜೀಗಳು ಅವರನ್ನು ಸೋಲಿಸಿದರು.
ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವುದನ್ನು ಶಾಸಕರು ಮತ್ತು ವರಿಷ್ಠರು ತೀರ್ಮಾನ ಮಾಡುತ್ತಾರೆ ಮಠಗಳಲ್ಲ ಎಂದು ಖಾರವಾಗಿ ಹೇಳಿದ್ದಾರೆ.
ಇಲ್ಲ-ಸಲ್ಲದ ಮಾತುಗಳು
ಪ್ರತ್ಯೇಕವಾಗಿ ಸುದ್ದಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ನಮ್ಮ ಗುರಿ ಇರುವುದು ಒಳ್ಳೆಯ ಆಡಳಿತ ನೀಡುವುದು, ಆದರೆ ಪ್ರತಿನಿತ್ಯ ಇಲ್ಲ-ಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ, ಡಿಸಿಎಂ ಹಾಗೂ ಸಚಿವರನ್ನು ಮಾಡುವ ಅಧಿಕಾರ ಮುಖ್ಯಮಂತ್ರಿಗಳಿಗೆ ಇದೆ, ಅವರು ಎಷ್ಟು ಜನರನ್ನಾದರೂ ಮಾಡಿಕೊಳ್ಳಲಿ.
ಜಾತ್ಯತೀತತೆ ಅಂತ ಹೇಳಿ ಅಧಿಕಾರಕ್ಕೆ ಬಂದು ಜಾತೀಯತೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.
ಅಧಿಕಾರದ ಆಸೆ ಇದ್ದವರು ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಲಿ, ನಂತರ ನಾಯಕತ್ವವನ್ನು ಪಡೆದುಕೊಳ್ಳಿ ಎಂದು ತಮ್ಮದೇ ಪಕ್ಷದವರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ಮಾಡಿದ್ದಾರೆ.