ರಾಜಕೀಯಕ್ಕೆ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಕರೆತರುವ ಯತ್ನ
ಬೆಂಗಳೂರು: ಖ್ಯಾತ ಹೃದಯತಜ್ಞ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರನ್ನು ರಾಜಕೀಯಕ್ಕೆ ಕರೆತರುವ ಯತ್ನ ನಡೆದಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ತವರು ಹಾಸನ ಲೋಕಸಭಾ ಕ್ಷೇತ್ರದಿಂದ ಮಂಜುನಾಥ್ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ಮುಂದಾಗಿದೆ.
ದೇವೇಗೌಡ ಅವರನ್ನು ಹಾಸನದಿಂದ ಕಣಕ್ಕಿಳಿಸುವ ಬಗ್ಗೆ ಒಂದೆಡೆ ಚಿಂತನೆ ನಡೆಸಿದ್ದರೆ, ಮತ್ತೊಂದೆಡೆ ಅವರ ಆರೋಗ್ಯ ಚುನಾವಣಾ ಕಣಕ್ಕಿಳಿಯಲು ಅವಕಾಶ ಕೊಡಲಿದೆಯೇ ಎಂಬ ಜಿಜ್ಞಾಸೆಯೂ ಇದೆ.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಜಂಟಿಯಾಗಿ ಹೆಚ್ಚು ಸ್ಥಾನ ಗಳಿಸಬೇಕು. ಇದಕ್ಕಾಗಿ ತಮ್ಮಗೆ ದೊರೆಯುವ ಕ್ಷೇತ್ರಗಳಲ್ಲಿ ವರ್ಚಸ್ವಿ ಹಾಗೂ ಪ್ರಭಾವಿ ಮುಖಂಡರನ್ನು ಕಣಕ್ಕಿಳಿಸಲು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ.
ಮಂಜುನಾಥ್ ಅವರು ಲೋಕಸಭೆಗೆ ಆಯ್ಕೆಯಾಗಿ ಮತ್ತೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ, ಪ್ರಧಾನಿ ನರೇಂದ್ರ ಮೋದಿ ಅವರು, ಇಂಥವರನ್ನು ಗುರುತಿಸಿ ಕೇಂದ್ರದಲ್ಲಿ ಮಂತ್ರಿ ಮಾಡಬಹುದು.
ಒಂದು ವೇಳೆ ಮಂಜುನಾಥ್ ಮಂತ್ರಿಯಾದರೆ, ಜಯದೇವ ಆಸ್ಪತ್ರೆಯ ಮಾದರಿಯಲ್ಲಿ ರಾಷ್ಟ್ರಮಟ್ಟಕ್ಕೆ ಆರೋಗ್ಯಕ್ಕೆ ಒತ್ತು ಕೊಟ್ಟು ಜನಸೇವೆ ಮಾಡುತ್ತಾರೆ ಎಂಬ ಚಿಂತನೆ ಕುಮಾರಸ್ವಾಮಿ ಅವರಲ್ಲಿದೆ.
ಜಯದೇವ ಸಂಸ್ಥೆಯ ನಿರ್ದೇಶಕರ ಹುದ್ದೆಯ ವಿಸ್ತರಣೆ ಸಮಯ ಇನ್ನು ಮೂರು ತಿಂಗಳು ಮಾತ್ರ. ಈಗಾಗಲೇ ಮೂರು ಬಾರಿ ಅವಧಿಯನ್ನು ಸರ್ಕಾರಗಳು ವಿಸ್ತರಣೆ ಮಾಡಿವೆ.
ಡಾ.ಸುಧಾಕರ್ ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಈ ಸಂಸ್ಥೆಯ ನಿರ್ದೇಶಕ ಹುದ್ದೆಗೆ ಬೇರೆಯವರನ್ನು ನೇಮಕ ಮಾಡಲು ಮುಂದಾಗಿದ್ದರು. ಆದರೆ, ಮಾಹಿತಿ ತಂತ್ರಜ್ಞಾನದ ಖ್ಯಾತ ಉದ್ಯಮಿಯೊಬ್ಬರು ಮಧ್ಯೆ ಪ್ರವೇಶಿಸಿದ ಹಿನ್ನೆಲೆಯಲ್ಲಿ ಒಂದು ವರ್ಷದ ಮಟ್ಟಿಗೆ ವಿಸ್ತರಣೆ ಮಾಡಲಾಗಿತ್ತು.
ನಂತರ ಬದಲಾದ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಅಲ್ಪ ಸಮಯದಲ್ಲಿ ಮುಗಿದಿದ್ದಅವರ ಅವಧಿಯನ್ನು ಆರು ತಿಂಗಳ ಮಟ್ಟಿಗೆ ವಿಸ್ತರಣೆ ಮಾಡಿದ್ದಾರೆ.
ನಿರ್ದೇಶಕ ಹುದ್ದೆಯಿಂದ ನಿವೃತ್ತರಾದ ನಂತರ ರಾಜಕೀಯಕ್ಕೆ ಬಂದು ಜನಸೇವೆ ಮಾಡಲಿ ಎಂಬುದು ಗೌಡರು ಕುಟುಂಬದ ಅಪೇಕ್ಷೆಯಾಗಿದೆ.
ಹಾಸನ ಲೋಕಸಭಾ ಕ್ಷೇತ್ರದಿಂದ ದೇವೇಗೌಡರು ಕಣಕ್ಕಿಳಿದರೆ, ಪಕ್ಷ ಆ ಕ್ಷೇತ್ರವನ್ನು ಉಳಿಸಿಕೊಳ್ಳಲಿದೆ. ಅವರನ್ನು ಹೊರತುಪಡಿಸಿದರೆ ಮಂಜುನಾಥ್ ಅವರಿಂದ ಮಾತ್ರ ಸಾಧ್ಯ ಎಂಬುದು ಚುನಾವಣಾ ಪೂರ್ವ ಸಮೀಕ್ಷೆಯಿಂದ ಗೊತ್ತಾಗಿದೆ.
ಮಾಜಿ ಪ್ರಧಾನಿ ಹಾಗೂ ರಾಜಕೀಯದ ಕುಟುಂಬದಲ್ಲಿದ್ದರೂ ಎಂದೂ ಕೂಡ ಮಂಜುನಾಥ್ ರಾಜಕೀಯ ಮಾಡಿರಲಿಲ್ಲ. ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಅವರು, ರಾಜಕೀಯಕ್ಕೂ ಪ್ರವೇಶ ಮಾಡಲಿದ್ದಾರೆಯೇ ಎಂಬ ತೀವ್ರ ಕುತೂಹಲ ಕೆರಳಿಸಿದೆ.
ಮೂಲತಃ ಚನ್ನರಾಯಪಟ್ಟಣದವರಾದ ಅವರು, ಚುನಾವಣೆ ಸ್ಪರ್ಧೆ ಅಥವಾ ರಾಜಕೀಯ ಪ್ರವೇಶದ ಕುರಿತಂತೆ ಯಾವ ನಿಲುವು ತಳೆಯಲಿದ್ದಾರೆ ಎಂಬುದು ಕೂಡ ಸ್ಪಷ್ಟವಿಲ್ಲ.
ಕುಮಾರಸ್ವಾಮಿ ಅವರ ಪ್ರಯತ್ನಕ್ಕೆ ಸಹಮತ ವ್ಯಕ್ತಪಡಿಸುತ್ತಾರೆಯೋ ಅಥವಾ ನಿರಾಕರಿಸುತ್ತಾರೆಯೋ ಎಂಬುದನ್ನು ಕಾದು ನೋಡಬೇಕು. ಇದುವರೆಗೂ ರಾಜಕೀಯ ಪ್ರವೇಶದ ಬಗ್ಗೆ ಬಹಿರಂಗವಾಗಿ ಅವರಾಗಲಿ, ಅವರ ಕುಟುಂಬದವರಾಗಲಿ ಹೇಳಿಕೆ ನೀಡಿಲ್ಲ.
ಅವರ ಸಹೋದರ ಸಿ.ಎನ್.ಬಾಲಕೃಷ್ಣ ಅವರು, ಚನ್ನರಾಯಪಟ್ಟಣ ಒಳಪಡುವ ಶ್ರವಣಬೆಳಗೊಳ ಕ್ಷೇತ್ರದಿಂದ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಕರ್ನಾಟಕದಲ್ಲಿ ಮನೆ ಮಾತಾಗಿರುವ ಮಂಜುನಾಥ್ ಚುನಾವಣಾ ಕಣಕ್ಕೆ ಧುಮಿಕಿದರೆ ಭಾರೀ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ಹೊಂದಿದ್ದಾರೆ.