ವಿವಾದಾತ್ಮಕ ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ವರದಿ ತರಾತುರಿಯಲ್ಲಿ ಪಡೆಯಬಾರದು
ಬೆಂಗಳೂರು:ವಿವಾದಾತ್ಮಕವಾದ ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ವರದಿಯನ್ನು ಸರ್ಕಾರ ತರಾತುರಿಯಲ್ಲಿ ಪಡೆಯಲು ಮುಂದಾದರೆ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಇಂದಿಲ್ಲಿ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪರಿಷ್ಕೃತ ವರದಿ ಸ್ವೀಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾತುರಿ ತೋರುತ್ತಿರುವುದು ಅನೇಕ ಅನುಮಾನಗಳನ್ನು ಹುಟ್ಟು ಹಾಕುತ್ತಿವೆ ಎಂದಿದ್ದಾರೆ.
ಅವೈಜ್ಞಾನಿಕ ವರದಿ ಎಂದು ಅನೇಕ ಸಮುದಾಯಗಳು ಆರೋಪಿಸಿವೆ
ವರದಿಯ ಮೂಲಪ್ರತಿ ಕಾಣೆಯಾಗಿದೆ, ಅದಕ್ಕೆ ಕಾರ್ಯದರ್ಶಿ ಸಹಿ ಇಲ್ಲ, ಇದೊಂದು ಅವೈಜ್ಞಾನಿಕ ವರದಿ ಎಂದು ಅನೇಕ ಸಮುದಾಯಗಳು ಆರೋಪಿಸಿವೆ, ವರದಿಗೆ ಸಚಿವ ಸಂಪುಟದಲ್ಲೇ ಸಹಮತ ಇಲ್ಲ, ಇಂತಹ ವಿವಾದಾತ್ಮಕ ವರದಿ ಸ್ವೀಕರಿಸಲು ಆತುರ ಏಕೆ ಎಂದು ಪ್ರಶ್ನಿಸಿದರು.
ಕೋಟಿಗಟ್ಟಲೇ ಹಣ ವೆಚ್ಚ ಮಾಡಿ ಸಿದ್ಧಪಡಿಸಿದ ವರದಿ ಹೇಗೆ ಕಳುವಾಯಿತು ಎಂಬ ಬಗ್ಗೆ ತನಿಖೆ ನಡೆಸಲಿಲ್ಲ, ಮೂಲ ವರದಿ ಕಳುವಾಗಿದ್ದರೂ ಅದರ ದತ್ತಾಂಶ ಆಧಾರದ ಮೇಲೆ ಪರಿಷ್ಕೃತ ವರದಿ ಸಿದ್ಧಪಡಿಸುವುದು ಸರಿಯಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಕರ್ನಾಟಕದ 10 ವರ್ಷಗಳ ಹಿಂದಿನ ಜನಸಂಖ್ಯೆಗೂ, ಈಗಿನ ಜನಸಂಖ್ಯೆಗೂ ಸಾಕಷ್ಟು ವ್ಯತ್ಯಾಸ ಇದೆ, ಸಮೀಕ್ಷೆ ನಡೆಸುವವರು ತಮ್ಮ ಮನೆಗಳಿಗೆ ಬಂದಿರಲಿಲ್ಲ ಎಂಬುದಾಗಿ ಸಾರ್ವಜನಿಕರಿಂದಲೂ ವ್ಯಾಪಕ ದೂರುಗಳು ಬಂದಿವೆ, ಇಷ್ಟಾದರೂ ವರದಿ ಸ್ವೀಕರಿಸುತ್ತೇನೆ ಎಂದು ಮುಖ್ಯಮಂತ್ರಿ ಆತುರ ತೋರುತ್ತಿರುವುದು ಜನರಲ್ಲಿ ಸಂಶಯ ಹುಟ್ಟು ಹಾಕಿದೆ.
ಕಾಂಗ್ರೆಸ್ ವರಿಷ್ಠರನ್ನು ಓಲೈಸುವ ಹುನ್ನಾರ
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಓಲೈಸುವ ಹುನ್ನಾರ ಇದ್ದಂತಿದೆ.
ಇಂತಹ ನಡುವಳಿಕೆಯ ಹಿಂದೆ ಏನನ್ನೂ ಮುಚ್ಚಿಡುತ್ತಿರುವ, ಯಾರನ್ನೋ ರಕ್ಷಿಸುವ ಸಂಶಯ ಮೂಡುತ್ತಿದೆ, ವರದಿಯಲ್ಲಿನ ವಿವಾದಾತ್ಮಕ ಅಂಶಗಳ ಕಾರಣ ಹಿಂದಿನ ಬಿಜೆಪಿ ಸರ್ಕಾರ ವರದಿ ಸ್ವೀಕಾರಕ್ಕೆ ಮುಂದಾಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.
ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಬೇಕು ಎಂಬುದಕ್ಕೆ ತಮ್ಮ ಪಕ್ಷದ ಸಹಮತವಿದೆ, ಆದರೆ, ಅವೈಜ್ಞಾನಿಕ ಹಾಗೂ ವಿವಾದಾತ್ಮಕ ವರದಿ ಆಧರಿಸಿ ಕ್ರಮಕ್ಕೆ ಮುಂದಾದರೆ ವಿರೋಧವಿದೆ ಎಂದರು.
ಪಾರದರ್ಶಕವಾಗಿ ಮರು ಸಮೀಕ್ಷೆ ನಡೆಸಲಿ
ದುರ್ಬಲರಿಗೆ ನಿಜವಾಗಿಯೂ ಮೀಸಲು ನೀಡುವಲ್ಲಿ ಬದ್ಧತೆ ಇದ್ದರೆ ಪಾರದರ್ಶಕವಾಗಿ ಮರು ಸಮೀಕ್ಷೆ ನಡೆಸಲಿ, ವಿರೋಧ ವ್ಯಕ್ತಪಡಿಸುತ್ತಿರುವ ಸಮುದಾಯದ ಮುಖಂಡರು ಹಾಗೂ ಸ್ವಾಮೀಜಿಗಳನ್ನು ಕರೆದು ಅಭಿಪ್ರಾಯ ಪಡೆದುಕೊಳ್ಳಲಿ ಎಂದು ಆಗ್ರಹಿಸಿದರು.
ಕಳೆದ ಅವಧಿಯಲ್ಲಿ ವೀರಶೈವರ-ಲಿಂಗಾಯತ ವಿಚಾರದಲ್ಲಿ ಕೈಹಾಕಿ ಏನಾಯಿತು, ಮತ್ತೆ ಅದೇ ರೀತಿ ಜಾತಿ-ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸಕ್ಕೆ ಸಿದ್ದರಾಮಯ್ಯ ಕೈಹಾಕಬಾರದು ಎಂದರು.
ವರದಿ ಕಳುವಿಗೆ ಕಾರಣಗಳನ್ನು ಪತ್ತೆ ಹಚ್ಚಲಿ, ವೈಜ್ಞಾನಿಕವಾಗಿ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಕಾಂತರಾಜು ಹೇಳಿರುವುದು ನಿಜವಾಗಿದ್ದರೆ ಕಾರ್ಯದರ್ಶಿ ಏಕೆ ಸಹಿ ಮಾಡಿಲ್ಲ, ಸಹಿ ಹಾಕಿಸಲು ಆಗಿಲ್ಲ ಎಂದಾದರೆ ಯಾರನ್ನೋ ಮೆಚ್ಚಿಸಲು, ಯಾರದೋ ಮನೆಯಲ್ಲಿ ಕುಳಿತು ವರದಿ ಬರೆದಿರಬಹುದು ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಗಣತಿ ವಿಷಯದಲ್ಲಿ ಗೊಂದಲ ಮೂಡಿಸುತ್ತಿದ್ದಾರೆ
ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಗಣತಿ ವಿಷಯದಲ್ಲಿ ಮೊದಲಿನಿಂದಲೂ ಗೊಂದಲ ಮೂಡಿಸುತ್ತಿದ್ದಾರೆ, ಆರಂಭದಲ್ಲಿ ಜಾತಿಗಣತಿ ಎಂದರು, ಆಮೇಲೆ ಆರ್ಥಿಕ-ಶೈಕ್ಷಣಿಕ-ಸಾಮಾಜಿಕ ವರದಿ ಅಂದರು, ಸರ್ಕಾರಿ ಆದೇಶದಲ್ಲಿ ಸಾಮಾಜಿಕ-ಶೈಕ್ಷಣಿಕ ವರದಿ ಎಂಬುದಾಗಿ ನಮೂದಿಸಲಾಗಿದೆ ಎಂದರು.
ಹಿಂದುಳಿದ ವರ್ಗಗಳ ಆಯೋಗ ಸರಿಯಾಗಿ ಸಮೀಕ್ಷೆ ಮಾಡಿಲ್ಲ, ಸದಸ್ಯರು, ಅಧ್ಯಕ್ಷರಿಗೆ ಸಾಮ್ಯತೆ ಇರಲಿಲ್ಲ, ರಾಜಕೀಯ ಹಸ್ತಕ್ಷೇಪ ಇತ್ತು, ಹಿಂದೆ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸಿದ್ದರಾಮಯ್ಯ ವರದಿ ಸ್ವೀಕರಿಸಲಿಲ್ಲ, ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಲಾಭ ಪಡೆಯಲು ಸ್ಪಷ್ಟ ವರದಿ ಬಂದ ಮೇಲೆ ತೀರ್ಮಾನ ಮಾಡುವುದಾಗಿ ಹೇಳುತ್ತಿದ್ದಾರೆ ಎಂದು ಟೀಕಿಸಿದರು.