ಆತಂಕಪಡುವ ಅಗತ್ಯವಿಲ್ಲ: ದಿನೇಶ್ ಗುಂಡೂರಾವ್
ಬೆಂಗಳೂರು: ಚೀನಾದಲ್ಲಿ ಕಾಣಿಸಿಕೊಂಡಿರುವ ನ್ಯೂಮೋನಿಯಾ ಸಾಂಕ್ರಾಮಿಕ ರೋಗದ ಬಗ್ಗೆ ಎಚ್ಚರವಿರಲಿ. ಆದರೆ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಇಂದಿಲ್ಲಿ ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕೇಂದ್ರ ಸರ್ಕಾರ ರೋಗಕ್ಕೆ ಸಂಬಂಧಿಸಿದಂತೆ ನೀಡಿರುವ ಮಾರ್ಗಸೂಚಿಗಳ ಅನ್ವಯ ರಾಜ್ಯದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸೂಚಿಸಲಾಗಿದೆ.
ಕರ್ನಾಟಕದಲ್ಲಿ ಸೋಂಕು ಕಂಡುಬಂದಿಲ್ಲ
ಇದುವರೆಗೂ ಕರ್ನಾಟಕದ ಯಾವುದೇ ಭಾಗದಲ್ಲಿ ಇಂತಹ ಸೋಂಕು ಕಂಡುಬಂದಿಲ್ಲ. ಆದರೆ, ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಸಿದ್ಧತೆ ಮಾಡಿಕೊಳ್ಳುವಂತೆ ಆದೇಶ ಮಾಡಿದ್ದೇವೆ.
ಚೀನಾ ಸೋಂಕು ಮತ್ತು ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಇಲಾಖಾ ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯೂಮೋನಿಯಾ ಬಗ್ಗೆ ಕೆಲವು ಸಂಶಯ ಪ್ರಕರಣಗಳು ವರದಿಯಾಗಿದ್ದು ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ.
ಕೇಂದ್ರದ ಮಾರ್ಗಸೂಚಿಯಂತೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿ ಮಾಸ್ಕ್‌ಗಳನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಯಾರಲ್ಲಿಯೇ ತೀವ್ರ ಜ್ವರ ಕಂಡುಬಂದಲ್ಲಿ ತಕ್ಷಣವೇ ವೈದ್ಯರ ಬಳಿ ತೆರಳಿ ವಿವಿಧ ಪರೀಕ್ಷೆಗೆ ಒಳಪಡಬೇಕು, ಈ ಶೀತ ಜ್ವರ ಸಾಮಾನ್ಯವಾಗಿ ಐದು ದಿನಗಳವರೆಗೆ ಇರುತ್ತದೆ.
ಮಕ್ಕಳು ಹಾಗೂ ವೃದ್ಧರು ಎಚ್ಚರಿಕೆಯಿಂದ ಇರಬೇಕು. ಅಲ್ಲದೆ, ಇತರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರದಿಂದ ಬಾಯಿ-ಮೂಗು ಮುಚ್ಚಿಕೊಳ್ಳಿ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿದರೆ ಒಳ್ಳೆಯದು. ಹಾಗೆಯೇ ಆಗಿಂದಾಗ್ಯೆ ಸೋಪಿನಿಂದ ಕೈಗಳನ್ನು ಸ್ವಚ್ಛ ಮಾಡಿಕೊಳ್ಳಿ.
ಮುಂಜಾಗ್ರತಾ ಕ್ರಮ ವಹಿಸಿ
ಸೋಂಕಿಗೆ ಸಂಬಂಧಿಸಿದಂತೆ ಪ್ರತಿನಿತ್ಯ ಅಧಿಕಾರಿಗಳು ನಿಗಾವಹಿಸಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ. ಇಷ್ಟರ ನಡುವೆಯೂ ಸೋಂಕಿನ ಬಗ್ಗೆ ಎಚ್ಚರವಿರಲಿ, ಆದರೆ, ಆತಂಕ ಬೇಡ ಎಂದರು.
ಮಂಡ್ಯ-ಮೈಸೂರಿನಲ್ಲಿ ಪತ್ತೆಯಾದ ಭ್ರೂಣಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಪೋಲೀಸ್ ಇಲಾಖೆ ಜಂಟಿಯಾಗಿ ಕಣ್ಗಾವಲು ಇಡಬೇಕು ಎಂದು ಸೂಚಿಸಿದ್ದೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಇನ್ನು ಮುಂದೆ ರಾಜ್ಯದ ಆಸ್ಪತ್ರೆಗಳಲ್ಲಿ ನಿಯಮಿತವಾಗಿ ಸ್ಕ್ಯಾನಿಂಗ್ ಯಂತ್ರಗಳನ್ನು ಪರಿಶೀಲಿಸಬೇಕು. ಗರ್ಭಪಾತದಂತಹ ಪ್ರಕರಣಗಳ ಮೇಲೆ ಕಣ್ಣಿಡಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಲಾಗಿದೆ.
ಪ್ರತಿ ತಿಂಗಳು ಜಿಲ್ಲಾ ಮಟ್ಟದಲ್ಲಿ ಸಭೆ
ಪ್ರತಿ ತಿಂಗಳು ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನು ನಡೆಸಬೇಕು. ಮೂರು ತಿಂಗಳಿಗೊಮ್ಮೆ ಆರೋಗ್ಯ ಇಲಾಖೆಯ ಆಯುಕ್ತರು ಸಭೆ ನಡೆಸಿ ಇದರ ಮೇಲೆ ಕಣ್ಣಿಡಬೇಕು ಎಂದ ಅವರು, ಆರು ತಿಂಗಳಿಗೊಮ್ಮೆ ಆರೋಗ್ಯ ಸಚಿವರು ಖುದ್ದಾಗಿ ಸಭೆ ನಡೆಸಿ ಪರಿಶೀಲನೆ ನಡೆಸುವುದಾಗಿ ವಿವರಿಸಿದರು.
ಈಗ ಪತ್ತೆಯಾದ ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಬಗ್ಗೆ ಅಮೂಲಾಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಇಂತಹ ಭ್ರೂಣಹತ್ಯೆಯ ಪ್ರಕರಣಗಳು ಮಂಡ್ಯ, ಮೈಸೂರು ಮಾತ್ರವಲ್ಲದೆ ರಾಜ್ಯದ ಎಲ್ಲ ಭಾಗಗಳಲ್ಲಿ ನಡೆದಿರುವ ಸಾಧ್ಯತೆ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಹಿನ್ನೆಲೆಯಲ್ಲಿ ಇಡೀ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದ್ದು, ಇದು ಪುನರಾವರ್ತನೆಯಾಗದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು.
ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದು ನಮ್ಮ ಕಣ್ಣು ತೆರಸಿದೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ತಡೆಗೆ ಕಟ್ಟುನಿಟ್ಟಿನ ಸೂಚನೆ ಕೈಗೊಳ್ಳುವಂತೆ ಸೂಚಿಸಲಾಗಿದೆ. ನಿಯಂತ್ರಣವಾಗದಿದ್ದರೆ ಅಧಿಕಾರಗಳ ಮೇಲೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ರಾಜ್ಯಾದ್ಯಂತ ಈ ಜಾಲ ಹರಡಿರುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಲಿಂಗಾನುಪಾತ ಗಮನಿಸಿದರೆ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಈಗ ಪತ್ತೆಯಾಗಿರುವ ಪ್ರಕರಣವನ್ನು ಗಮನಿಸಿದರೆ ಭ್ರೂಣಹತ್ಯೆಯೇ ಲಿಂಗಾನುಪಾತದಲ್ಲಿ ಅಸಮಾನತೆ ಕಾಣಲು ಮುಖ್ಯ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.