ಒಂದು ವರ್ಷದ ಬಡ್ಡಿ ಸರ್ಕಾರವೇ ತುಂಬಲು ಶಾಸಕ ಜಿ.ಟಿ.ದೇವೇಗೌಡ ಆಗ್ರಹ
ಬೆಳಗಾವಿ: ಸಂಕಷ್ಟದಲ್ಲಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ರೈತರ ಸಾಲವನ್ನು ಮನ್ನಾ ಮಾಡಿ ಇಲ್ಲವೇ 2025 ರ ಜನವರಿ ವರೆಗೆ ಸಾಲದ ಮರುಪಾವತಿಯನ್ನು ವಿಸ್ತರಿಸಬೇಕು. ಒಂದು ವರ್ಷದ ಬಡ್ಡಿಯನ್ನು ಸರ್ಕಾರವೇ ತುಂಬುವಂತೆ ಶಾಸಕ ಹಾಗೂ ಮಾಜಿ ಸಚಿವ ಜಿ ಟಿ ದೇವೇಗೌಡ ಸರ್ಕಾರವನ್ನು ಆಗ್ರಹಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಮಳೆ ಇಲ್ಲದೆ ರೈತರು ಬೆಳೆದ ಬೆಳೆಗಳೆಲ್ಲ ಸಂಪೂರ್ಣ ಹಾಳಾಗಿವೆ. ರೈತರು ಸಕಾಲಕ್ಕೆ ಮರುಪಾವತಿ ಮಾಡದೇ ಹೋದರೆ ಆ ವರ್ಷದ ಪೂರ್ತಿ ಬಡ್ಡಿಯನ್ನು ಕಟ್ಟಬೇಕಾಗಿರುವುದರಿಂದ ರೈತರು ಬೆಳೆ ಇಲ್ಲದೆ, ಸಾಲವನ್ನು ಮರುಪಾವತಿ ಮಾಡಲಾಗದೆ ರೈತರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ ಎಂದರು.
ವಿಧಾಸಭೆಯಲ್ಲಿ ನಡೆದ ಬರಗಾಲದ ಚರ್ಚೆಯಲ್ಲಿ ಪಾಲ್ಗೊಂಡು ಮಾತಾಡಿದ ಅವರು ಜೂನ್ ಕೊನೆ ವಾರದಲ್ಲಿ ಸ್ವಲ್ಪ ಮಳೆ ಬಂತು ಉತ್ತರ ಕರ್ನಾಟಕ ಭಾಗದ ರೈತರು ತೊಗರಿ, ಹೆಸರು, ಉದ್ದು, ಹಲಸಂದೆ ಬಿತ್ತನೆ ಮಾಡಿದರು. ಬಿತ್ತನೆ ಸಮಯಕ್ಕೆ ಬೇಕಾದ ಬಿತ್ತನೆ ಬೀಜ, ಗೊಬ್ಬರವನ್ನು ಸರ್ಕಾರ ನೀಡಲಿಲ್ಲ. ಈ ಮಳೆಯೂ ಬಾರದೆ ಮೊಳಕೆ ಬಂದು ಎಲ್ಲಾ ಬೆಳೆಗಳು ಸಂಪೂರ್ಣ ನಾಶವಾಯಿತು ಎಂದು ಹೇಳಿದರು.
ಯಾವ ಸಚಿವರು ರೈತರ ಜಮೀನುಗಳಿಗೆ ತೆರಳಿ ಬೆಳೆ ನಾಶದ ಬಗ್ಗೆ ವಿಚಾರಿಸಲಿಲ್ಲ
ಸರ್ಕಾರದ ಯಾವ ಸಚಿವರು ಕೂಡ ರೈತರ ಜಮೀನುಗಳಿಗೆ ತೆರಳಿ ಬೆಳೆ ನಾಶವಾದ ಬಗ್ಗೆ ವಿಚಾರಿಸಲಿಲ್ಲ. ರೈತರಿಗೆ ಆತ್ಮಸ್ಥೈರ್ಯದ ಮಾತುಗಳಾಡಲಿಲ್ಲ, ನಿಮ್ಮ ಗಮನ ಏನಿದ್ದರೂ ಐದು ಗ್ಯಾರಂಟೀ ಹಣ ಹೊಂದಿಸುವುದು ಮತ್ತು ಪಂಚಾರಾಜ್ಯ ಚುನಾವಣೆ ಕಡೆ ಗಮನ ಕೊಟ್ಟು ಬರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸರ್ಕಾರವವನ್ನು ತರಾಟೆಗೆ ತೆಗೆದುಕೊಂಡರು.
ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ 6 ಸಾವಿರ ರೂ. ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ 4 ಸಾವಿರ ರೂ. ಸೇರಿ ಒಟ್ಟಾರೆ ರೈತರಿಗೆ 10 ಸಾವಿರ ರೂ. ನೀಡುತ್ತಿದ್ದರು. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 4 ಸಾವಿರ ಕೊಡುವುದನ್ನು ನಿಲ್ಲಿಸಲಾಗಿದೆ.
ಹಳೆಯ ಪಿಂಚಣಿ ಯೋಜನೆ (ಓಪಿಎಸ್) ಜಾರಿಗೆ ಭಾಗಶಃ ಪ್ರಯತ್ನ
ಮೊದಲ್ಲಿದ್ದ ಸರ್ಕಾರಗಳು ಬರ ಪರಿಹಾರ ಎಂದು ಖರ್ಚು ಮಾಡಿ ಆಮೇಲೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದವು. ಆದರೆ, ಈ ರಾಜ್ಯ ಸರ್ಕಾರದಲ್ಲಿ ಹಣವಿಲ್ಲ, ಕೇಂದ್ರ ಸರ್ಕಾರ ಕೊಡಲಿಲ್ಲ ಎಂದು ಕೇಂದ್ರ ಸರ್ಕಾರವನ್ನು ದೂರುತ್ತಿರಿ. ಬಾಯಿಗೆ ಬಂದಂಗೆ ಮಾತಾಡುತ್ತೀರಿ, ಇವೆಲ್ಲವನ್ನೂ ನೋಡಿ ಅವರು ಹೇಗೆ ತಾನೇ ಸಹಾಯ ಮಾಡುತ್ತಾರೆ. ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಜೊತೆ ಉತ್ತಮ ಬಾಂಧವ್ಯ, ಒಡನಾಟ ಇಟ್ಟುಕೊಂಡರೆ ಅವರು ಸಹಾಯ ಮಾಡುತ್ತಾರೆ. ಇನ್ನಾದರೂ ರಾಜ್ಯದ ರೈತರ ಹಿತ ದೃಷ್ಟಿಯಿಂದ ಕೇಂದ್ರ ಸರ್ಕಾರದ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ರಾಜ್ಯ ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷ ರೂ.ಗೆ ಏರಿಸಿ ಆದೇಶ ಹೊರಡಿಸಿದ್ದೀರಿ. ಆದರೆ ಇದುವರೆಗೂ ಅದು ಜಾರಿಗೆ ಬಂದಿಲ್ಲ ಎಂದು ಆರೋಪಿಸಿದರು.
ಹಿಂದೆ ಇದ್ದ ಸರ್ಕಾರಗಳು ರೈತರಿಗೆ 7 ಗಂಟೆ ವಿದ್ಯುತ್ ನೀಡುತ್ತಿದ್ದವು. ಆದರೆ ಈಗ 3 ರಿಂದ 4 ಘಂಟೆ ನೀಡುತ್ತಿಲ್ಲ, 5 ಘಂಟೆ ನೀಡುತ್ತೇವೆ ಎಂದು ಹೇಳಿದ್ದಿರಿ. ಅದನ್ನು ಸಹ ನೀಡಲಿಲ್ಲ, ರಾಜ್ಯದ ಎಲ್ಲಾ ಕಡೆ ರೈತರು ಪ್ರತಿಭಟನೆ ಮಾಡಿದರು. ನಂತರ 7 ಘಂಟೆ ನೀಡುವುದಾಗಿ ಘೋಷಣೆ ಮಾಡಿದ್ದೀರಿ. ಒಂದು ಕಡೆ ಬೆಳಿಗ್ಗೆ 3 ಘಂಟೆ, ರಾತ್ರಿ 4 ಘಂಟೆ ನೀಡುತ್ತೇವೆ ಎಂದು ಹೇಳುತ್ತೀರಿ; ಮತ್ತೊಂದು ಕಡೆ ಬೆಳಿಗ್ಗೆ ಸಮಯದಲ್ಲೇ 7 ಘಂಟೆ ನೀಡುತ್ತೇವೆ ಎಂದು ಹೇಳುತ್ತೀರಿ ಅದನ್ನು ಸಹ ಸರಿಯಾಗಿ ಪೂರೈಸುತ್ತಿಲ್ಲಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ1,300 ಮೆಗಾ ವ್ಯಾಟ್ ವಿದ್ಯುತ್ ಕೊರತೆ
ಇಂಧನ ಸಚಿವರೇ ರಾಜ್ಯದಲ್ಲಿ1,300 ಮೆಗಾ ವ್ಯಾಟ್ ವಿದ್ಯುತ್ ಕೊರತೆ ಇರುವುದನ್ನು ಹೇಳಿದ್ದಾರೆ. ಸೆಂಟ್ರಲ್ ಗ್ರೀಡ್ ನಲ್ಲಿ ವಿದ್ಯುತ್ ಲಭ್ಯವಿದೆ. ಆದರೆ ಫ್ರೀಯಾಗಿ ಸಿಗುವುದ್ದಿಲ್ಲ, ದುಡ್ಡು ಕೊಟ್ಟು ಖರೀದಿ ಮಾಡಬೇಕು. ಖರೀದಿಗೆ ನಿಮ್ಮಲ್ಲಿ ದುಡ್ಡಿಲ್ಲ. ಈ ಕಡೆ ವಿದ್ಯುತ್ ಇಲ್ಲ, ಇನ್ನೆಲ್ಲಿ ವಿದ್ಯುತ್ ಪೋರೈಸುತ್ತಿರಿ ಎಂದು ದೇವೇಗೌಡ ತರಾಟೆಗೆ ತೆಗೆದುಕೊಂಡರು.
ನನ್ನ ಮತ ಕ್ಷೇತ್ರದ ಚಿಕ್ಕಾನ್ಯ, ದೊಡ್ಡಕನ್ಯಾ, ದೂರ ಮತ್ತು ಎಡಹಳ್ಳಿ ಗ್ರಾಮಗಳ ಭಾಗಗಳಲ್ಲಿ ಹುಲಿ, ಚಿರತೆಗಳ ಹಾವಳಿಯಾಗಿದ್ದು, ಆ ಭಾಗದ ಜನರು ನಮಗೆ ಬೇರೆ ಏನು ಬೇಡ ಕರೆಂಟ್ ಕೊಡಿ, ರಾತ್ರಿ ತಿರುಗಾಡುವುದಕ್ಕೆ ಕಷ್ಟ ಆಗುತ್ತಿದೆ ಎಂದು ರಾಜ್ಯದ ರೈತರು ಹಾಗೂ ಜನರು ವಿದ್ಯುತ್ ಕೊರತೆ ಇಂದ ಅನುಭವಿಸುತ್ತಿರುವ ತೊಂದರೆಯನ್ನು ಸದನಕ್ಕೆ ತಿಳಿಸಿದರು.
ರೈತರ ಯಾವ ಕಷ್ಟಕ್ಕೂ ನೀವು ಎ ಟಿ ಎಂ ಆಗಲ್ಲಿಲ್ಲ
ಮೊದಲು 20 ಸಾವಿರ ಪಾವತಿಸಿದರೆ ಸಾಕು ರೈತರ ಪಂಪ್ ಸೆಟ್ ಗಳಿಗೆ ಟ್ರಾನ್ಸ್ ಫಾರ್ಮರ್, ಕಂಬ, ವೈರ್ ಎಲ್ಲವನ್ನು ನೀಡುತ್ತಿದ್ದರು. ಆದರೆ ಈಗ 100 ಕೆ ವಿ ಟ್ರಾನ್ಸ್ ಫಾರ್ಮರ್ ಹಾಕಿಸಲು 2.5 ಲಕ್ಷ ಖರ್ಚಾಗುತ್ತದೆ. 63 ಕೆ ವಿ ಟ್ರಾನ್ಸ್ ಫಾರ್ಮರ್ ಹಾಕಿಸಲು 1.15 ಲಕ್ಷ ಖರ್ಚಾಗುತ್ತದೆ. 25 ಕೆ ವಿ ಟ್ರಾನ್ಸ್ ಫಾರ್ಮರ್ ಹಾಕಿಸಲು 80 ಸಾವಿರ ಖರ್ಚಾಗುತ್ತದೆ. 1 ಕಿಲೋ ಮೀಟರ್ ವೈರ್ ಗೆ 60 ಸಾವಿರ ವೆಚ್ಚವಾಗುತ್ತಿರುವುದರಿಂದ, ಈ ಹಿಂದಿನ ಸರ್ಕಾರಗಳು ನೀಡುತ್ತಿದ್ದ ದರದಲ್ಲೇ ನೀಡಲು ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕಾಂಗ್ರೆಸ್ ಹೈ ಕಮಾಂಡ್ ಗೆ ಎ ಟಿ ಎಂ ಹೇಳಿದ್ದರು. ಅದರಂತೆ ನೀವು ಹೈ ಕಮಾಂಡ್ ಗೆ, ಐದು ಗ್ಯಾರಂಟಿಗಳಿಗೆ ಹಾಗೂ ಪಂಚ ರಾಜ್ಯ ಚುನಾವಣೆಗಳಿಗೆ ಎ ಟಿ ಎಂ ಆದ್ರಿ. ಆದರೆ, ರೈತರ ಯಾವ ಕಷ್ಟಕ್ಕೂ ನೀವು ಎ ಟಿ ಎಂ ಆಗಲ್ಲಿಲ್ಲ ಎಂದು ಸರ್ಕಾರದ ನಡೆ ವಿರುದ್ದ ಚಾಟಿ ಬೀಸಿದರು…