ಜೀರ್ಣ ಕ್ರಿಯೆಗೆ ಸಹಕಾರಿ
ಬೆಂಗಳೂರು: ಬದಲಾದ ಜೀವನ ಶೈಲಿ, ಆಹಾರ ಪದ್ಧತಿ, ಕಡಿಮೆಯಾದ ದೈಹಿಕ ಶ್ರಮ- ಹೀಗೆ ನಾನಾ ಕಾರಣಗಳಿಂದ ಪ್ರತಿಯೊಬ್ಬರು ಒಂದಲ್ಲ ಒಂದು ಆರೋಗ್ಯ ಸಮಸ್ಯೆಗೆ ಒಳಗಾಗಿರುವುದು ಮಾಮೂಲಾಗಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರು ಮೊದಲ ಗ್ಯಾಸ್ಟ್ರಬಲ್ ಸಮಸ್ಯೆ ಬಗ್ಗೆ ನಿಗಾವಹಿಸಬೇಕು.
ಇದು ಹಲವು ತೊಂದರೆಗಳಿಗೆ ದಾರಿ ಮಾಡಿಕೊಡುತ್ತದೆ. ಕೇವಲ ಗ್ಯಾಸ್ಟ್ರಬಲ್ ಅಲ್ಲವೇ, ಏನೂ ಆಗುವುದಿಲ್ಲ ಎಂದು ನಿರ್ಲಕ್ಷಿಸಬಾರದು. ಮಧುಮೇಹ, ಅಧಿಕ ರಕ್ತದೊತ್ತಡದಂತೆ ಗ್ಯಾಸ್ಟ್ರಬಲ್ ಕೂಡ ಸಾಮಾನ್ಯವಾಗಿದೆ. ದೀರ್ಘಾವಧಿಯವರೆಗೂ ಇರುತ್ತದೆ. ಬಹುತೇಕರು ಇದರ ಸಮಸ್ಯೆಗೆ ಸಿಲುಕಿದ್ದಾರೆ; ಈ ಸಮಸ್ಯೆಗೆ ಒಳಗಾಗದವರು ಇಲ್ಲವೆಂದರೆ ತಪ್ಪಾಗಲಾರದು.
ಗ್ಯಾಸ್ಟ್ರಬಲ್ ಸಮಸ್ಯೆ ಹೆಚ್ಚಾದವರು ನಿಯಮಿತವಾಗಿ ಔಷಧವನ್ನು ಸೇವಿಸುವುದು ಕಾಮನ್ ಆಗಿದೆ. ಆದರೂ ಪೂರ್ಣ ಪರಿಹಾರ ಮಾತ್ರ ವಿರಳ. ಗ್ಯಾಸ್ಟ್ರಬಲ್ ನಿಂದ ಹೊಟ್ಟೆ ನೋವು, ಹೊಟ್ಟೆ ಉರಿ, ಹೊಟ್ಟೆ ಕಚ್ಚು ಹಿಡಿಯುವುದು, ಜಠರದಲ್ಲಿ ಹುಣ್ಣು(ಅಲ್ಸರ್), ಗಂಟಲು ನೋವು, ಹುಳಿ ತೇಗು, ಕೆಲವರಿಗೆ ವಾಕರಿಕೆ ಹೀಗೆ ಹಲವು ಸಮಸ್ಯೆಗಳು ಉಂಟಾಗುತ್ತವೆ. ನಿಯಂತ್ರಣ ಮಾಡದಿದ್ದರೆ ಅಜೀರ್ಣತೆಗೂ ಕಾರಣವಾಗಬಹುದು. ಹೃದಯ ಸಂಬಂಧಿ ರೋಗಕ್ಕೆ ದಾರಿ ಮಾಡಿಕೊಡಬಹುದು. ಹೀಗಾಗಿ ಎಚ್ಚರ ವಹಿಸುವುದು ಅಗತ್ಯ.
ಸದಾ ಮನೆ ಊಟ ಸೇವಿಸುವವರು, ಅದರಲ್ಲೂ ಸಕಾಲಕ್ಕೆ ಊಟ, ತಿಂಡಿ ತಿನ್ನುವವರಿಗೆ ಇದರ ಸಮಸ್ಯೆ ಕಡಿಮೆ. ಆದರೆ, ದುಡಿಯುವ ವರ್ಗ, ಪದೇ ಪದೇ ಪ್ರಯಾಣ ಮಾಡುವವರು ಅಕಾಲ ಭೋಜನ ಮಾಡುವುದು ಸಹಜ. ಅಲ್ಲದೆ, ಹೊರಗಡೆ ಊಟ, ತಿಂಡಿ ಮಾಡುವ ಅನಿವಾರ್ಯತೆ ಉಂಟಾಗುತ್ತದೆ. ಅದರಲ್ಲೂ ಅವಿವಾಹಿತರು ಬೇಗ ಗ್ಯಾಸ್ಟ್ರಬಲ್ ಸಮಸ್ಯೆಗೆ ಒಳಗಾಗುತ್ತಾರೆ.
ಹೊಟ್ಟೆ ಸಮಸ್ಯೆಗೆ ಉತ್ತಮ ಉಪಶಮನ, ಬಹು ಉಪಯೋಗಿ
ಊಟ, ತಿಂಡಿಗೆ ಸದಾ ಹೋಟೆಲ್ ಗಳನ್ನೇ ಆಶ್ರಯಿಸುವ, ಔತಣ ಕೂಟಗಳು, ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಅಡುಗೆ ಸೋಡಾ ಬಳಿಸಿದ ಆಹಾರ, ಸದಾ ಮಸಾಲೆ ಮಿಶ್ರಿತ ಆಹಾರ ಸೇವನೆ ಮಾಡುವುದು. ಹಸಿ ಮೆಣಸಿನಕಾಯಿ ಹೆಚ್ಚು ಬಳಸುವುದು. ದ್ವಿದಳ ಧಾನ್ಯಗಳು ಹೀಗೆ ಹತ್ತಾರು ರೀತಿಯಲ್ಲಿ ಕೂಡ ಗ್ಯಾಸ್ಟ್ರಬಲ್ ಗೆ ಕಾರಣವಾಗುತ್ತವೆ. ಆಗಂತ ಪೂರ್ಣ ನಿಲ್ಲಿಸಬೇಕಿಲ್ಲ. ಮಿತಿ ಮೀರದಿದ್ದರೆ ಸಾಕು.
ಎಲ್ಲರಿಗೂ ಅಚ್ಚುಮೆಚ್ಚು ಹಾಗೂ ಎಷ್ಟು ತಿಂದರೂ ಬೇಡವೆನ್ನುವುದು ಬಡವರ ಬಾದಾಮಿ ಎಂದೇ ಕರೆಯುವ ಶೇಂಗಾ ಅಥವಾ ಕಡಲೆಕಾಯಿ ಬೀಜ. ಇದು ಅತಿಯಾದರೆ ಗ್ಯಾಸ್ಟ್ರಬಲ್ ಗೆ ಎಡೆ ಮಾಡಿಕೊಡುತ್ತದೆ. ಮಿತಿಯಾಗಿ ಯಾವುದನ್ನೂ ಬೇಕಾದರೂ ಬಳಸಬಹುದು. ಕೆಲವರಿಗೆ ಒಂದೊಂದು ಆಹಾರ ಅಲರ್ಜಿಯಾಗುತ್ತದೆ. ಅದನ್ನು ಮಿತಿಯಾಗಿ ಬಳಸಿ ಒಗ್ಗಿಸಿಕೊಳ್ಳಬೇಕು. ಸಂಪೂರ್ಣ ದೂರ ಸರಿಯುವುದು ಪರಿಹಾರವಲ್ಲ. ಏಕೆಂದರೆ ಅದೇ ಅನಿವಾರ್ಯವಾದಾಗ ಪರಿತಪಸಬೇಕಾಗಬಹುದು.
ಅಂದರೆ, ಕಡಲೆ ಕಾಯಿ ಅವರ ದೇಹ ಪ್ರಕೃತಿಗೆ ಒಗ್ಗುವುದಿಲ್ಲ. ಅಂಥವರು ಅದನ್ನು ಬಳಸದಿರುವುದು ಸೂಕ್ತ. ಇಲ್ಲವೆ ಆಗೊಮ್ಮೆ ಈಗೊಮ್ಮೆ ಬಳಸುವುದ ಒಳ್ಳೆಯದು. ಯಾವುದು ಶರೀರಕ್ಕೆ ಒಗ್ಗುತ್ತದೆ ಅಥವಾ ಒಗ್ಗುವುದಿಲ್ಲ ಎಂಬುದನ್ನು ಸೇವಿಸುವ ಆಹಾರ ಅದರಿಂದ ದೇಹದಲ್ಲಾಗುವ ಬದಲಾವಣೆ ಗಮನಿಸಿ ತಿಳಿಯುವುದು ಅಗತ್ಯ.
ಮನೆಯ ಮದ್ದು ಜೀರಿಗೆ; ಸಮಸ್ಯೆಗಳಿಗೆ ರಾಮಬಾಣ
ನಾನಾ ರೀತಿಯಲ್ಲಿ ರೂಢಿಸಿಕೊಳ್ಳುವ ಹಲವು ರೀತಿಯ ತೊಂದರೆಗೆ ಕಾರಣವಾಗುವ ಗ್ಯಾಸ್ಟ್ರಬಲ್ ಸಮಸ್ಯೆಗೆ ಸರಳ ಮದ್ದು ಎಂದರೆ ಜೀರಿಗೆ! ಇದು ಬಹು ಉಪಯೋಗಿ ಕೂಡ. ನಮ್ಮಲ್ಲಿ ಬಹಳ ಹಿಂದಿನಿಂದಲೂ ಇದನ್ನು ಅಡುಗೆಯಲ್ಲಿ ಬಳಸುತ್ತಾರೆ. ಜೀರ್ಣಕ್ರಿಯೆಗೆ ಸಹಕಾರಿ ಎಂಬುದರಿಂದ. ಮಸಾಲೆ ಪದಾರ್ಥಗಳ ಜತೆ ಬೆರೆಸಿ ಅಡುಗೆ ಮಾಡುತ್ತಾರೆ. ಜೀರಿಗೆ ಅನ್ನ, ಜೀರಿಗೆ ಸಾಂಬಾರ್ ಈಗಲೂ ಬಹಳಷ್ಟು ಜನರ ಮನೆಗಳಲ್ಲಿ ಮಾಡಲಾಗುತ್ತದೆ. ಹೋಟೆಲ್ ಗಳಲ್ಲೂ ಲಭ್ಯವಿದೆ.
ಅದೇ ಕಾರಣಕ್ಕೆ ಬಹುತೇಕ ಹೋಟೆಲ್ ನಲ್ಲಿ ಬಿಲ್ ಜತೆ ಜೀರಿಗೆ ಕಾಳು, ಸೋಂಪು ಕಾಳು ಕೊಡುತ್ತಾರೆ. ಇತ್ತೀಚೆಗೆ ಸಿಹಿಮಿಶ್ರಿತವಾದ ಸೋಂಪು ಕಾಳು ಹೆಚ್ಚು ಬಳಕೆಯಲ್ಲಿವೆ. ತಾಜಾ ಜೀರಿಗೆ ಕಾಳು ಆರೋಗ್ಯ ವರ್ಧಕ ಎಂದರೆ ಅಚ್ಚರಿ ಪಡಬೇಕಿಲ್ಲ.
ಗ್ಯಾಸ್ಟ್ರಬಲ್ ಸಮಸ್ಯೆಯಿಂದ ಬಳಲುವವರು ಊಟದ ನಂತರ ನಾಲ್ಕು ಕಾಳು ಜೀರಿಗೆ ಜಗಿದು ತಿಂದರೆ ಹತೋಟಿಗೆ ಬರುತ್ತದೆ. ಅಜೀರ್ಣ ಸಮಸ್ಯೆ ಇರುವವರು ಇದನ್ನು ಮಾಡಬಹುದು. ಅತಿಯಾದ ಸಮಸ್ಯೆ ಉಂಟಾದ ಸಂದರ್ಭದಲ್ಲಿ ಕುದಿಯುವ ನೀರಿಗೆ ಜೀರಿಗೆ ಹಾಕಿ ತಣ್ಣಗಾದ ಬಳಿಕ ನೀರು ಕುಡಿದರೆ ತಕ್ಷಣ ಉಪಶಮನವಾಗಲಿದೆ. ಈ ಪ್ರವೃತ್ತಿಯನ್ನು ರೂಢಿಸಿಕೊಂಡರೆ ಜೊತೆಗೆ ಸಾಕಷ್ಟು ನೀರು ಕುಡಿಯುತ್ತಿದ್ದರೆ ಗ್ಯಾಸ್ಟ್ರಬಲ್ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
ಮಾರುಕಟ್ಟೆಯಲ್ಲಿ ಜೀರಿಗೆಯ ಪಾನೀಯಗಳು ಕೂಡ ದೊರೆಯುತ್ತವೆ. ಬಿಸಿಲಿನಿಂದ ಬಳಲಿದವರು, ಅಜೀರ್ಣ ಸಮಸ್ಯೆಯಲ್ಲಿರುವವರು ಆಲೋಪತಿ ಔಷಧಿ ಬಳಕೆಗಿಂತ ಜೀರಿಗೆ ರಸ ಬಳಸುವುದು ಯೋಗ್ಯ ಎಂಬ ಅಭಿಪ್ರಾಯ ಹಲವರಲ್ಲಿದೆ. ಬಹಳಷ್ಟು ಜನರು ಪರಿಹಾರ ಕಂಡುಕೊಂಡಿದ್ದು, ಸ್ನೇಹಿತರು ಸಂಬಂಧಿಕರೊಂದಿಗೆ ಅಭಿಪ್ರಾಯ ಹಂಚಿಕೊಳ್ಳುವುದು ಉಂಟು. ಖರ್ಚು ಕಡಿಮೆ; ಪ್ರಯೋಜನ ಹೆಚ್ಚು. ಮನೆಯ ಮದ್ದು ಕೂಡ.
ಅನಾದಿ ಕಾಲದಿಂದಲೂ ಬಳಕೆ
ಜೀರಿಗೆ ಸಸ್ಯದ ವೈಜ್ಞಾನಿಕ ಹೆಸರು ಕಮಿನಮ್ ಚಿಮಿನಮ್ ಆಗಿದೆ. ಇದನ್ನು ಇ೦ಗ್ಲೀಷ್ ನಲ್ಲಿ ಕಮಿನ್ ಸೀಡ್, ಸಂಸ್ಕೃತದಲ್ಲಿ ಜೀಕರ, ಅಜಾಜೀ ಹಾಗೂ ಹಿಂದಿಯಲ್ಲಿ ಜೀರ, ಸಫೇದ್ ಜೀರಾ ಎಂದೆಲ್ಲಾ ಕರೆಯಲಾಗುವುದು.
ಮಸಾಲೆಗಳೊಂದಿಗೆ ಮನುಷ್ಯ ಬಳಸುತ್ತಾ ಬಂದಿರುವ ವಸ್ತುಗಳಲ್ಲಿ ಜೀರಿಗೆಯೂ ಒಂದು. ಹುರಿದ ಜೀರಿಗೆಯು ಜೀರ್ಣಶಕ್ತಿ ವೃದ್ಧಿಸುವುದಲ್ಲದೆ, ಹೊಟ್ಟೆಯ ಸಮಸ್ಯೆ ಪರಿಹರಿಸಲಿದೆ. ಅನಾದಿ ಕಾಲದಿಂದಲೂ ಮಾನವರ ಬಳಕೆಯಲಿದೆ.
ಭಾರತದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ಇದರ ಉಪಯೋಗವಿದೆ. ಮದುವೆ ಸಂದರ್ಭದಲ್ಲಿ ಜೀರಿಗೆ ಬಳಸುವುದನ್ನು ಎಲ್ಲರೂ ಗಮನಿಸಿರುತ್ತಾರೆ. ಸುವಾಸನೆಯುವುಳ್ಳ ಜೀರಿಗೆ ಬಹು ಉಪಯೋಗಿ ಎಂದರೆ ತಪ್ಪಾಗಲಾರದು. ಇದಕ್ಕೂ ಸುದೀರ್ಘ ಇತಿಹಾಸವಿದೆ.ಇದು ಸಾಮಾಜಿಕ ಮಾಧ್ಯಮ ಹಾಗೂ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿದೆ.
ಬೆಳಗಾವಿಗೆ ಬಿಜೆಪಿ ಸತ್ಯಶೋಧನಾ ಸಮಿತಿ ಆಗಮನ
2 comments
[…] ಶಿಕ್ಷಣ […]
[…] ಶಿಕ್ಷಣ […]