ಚಳಿಗಾಲಕ್ಕೂ ಉತ್ತಮ ತರಕಾರಿ
ಬೆಂಗಳೂರು: ದೈನಂದಿನ ಬಳಕೆಯ ಪ್ರಮುಖ ತರಕಾರಿಗಳಲ್ಲಿ ಮೂಲಂಗಿಯೂ ಒಂದು. ಬಿಳಿ ಬಣ್ಣದಿಂದ ಕೂಡಿರುವ ಇದು ತರಕಾರಿ ಮಾತ್ರವಲ್ಲದೆ, ಬಹು ಉಪಯೋಗಿ. ಮನೆಯೌಷಧಿ ಕೂಡ. ಅಲ್ಪಾವಧಿ ತರಕಾರಿ ಬೆಳೆ. ಬೆಳೆಯಲು ತಗಲುವ ಖರ್ಚು ಕಡಿಮೆ. ಇದರ ಆಯಸ್ಸು ಕೂಡ ಅಲ್ಪಾವಧಿ. ಅಂದರೆ ಸೊಪ್ಪಿನಂತೆ ಮೂಲಂಗಿ ಬೆಳೆ ಒಂದರಿಂದ ಎರಡು ತಿಂಗಳಲ್ಲಿ ಮುಗಿಯುತ್ತದೆ.
ಬಹುತೇಕ ಕೃಷಿಕರು ನಿತ್ಯ ಬಳಕೆಗಾಗಿ ಕೈ ತೋಟದಲ್ಲಿ ಸದಾ ಬೆಳೆಯುತ್ತಾರೆ. ವಾಣಿಜ್ಯ ಉದ್ದೇಶಕ್ಕೂ ಬೆಳೆಯುವುದುಂಟು. ವರ್ಷವಿಡೀ ಸಾಧಾರಣ ಧಾರಣೆ ಹೊಂದಿರುವ ತರಕಾರಿ ಎಂದರೂ ತಪ್ಪಾಗಲಾರದು. ದುಬಾರಿಯೂ ಆಗುವುದಿಲ್ಲ; ಬೆಲೆ ಕುಸಿತವೂ ಆಗುವುದಿಲ್ಲ. ಇದಕ್ಕೆ ಕಾರಣ ಅಲ್ಪಾವಧಿಯಲ್ಲಿ ಬೆಳೆಯುವ ಅದರ ಸ್ವಭಾವ.
ಹಸಿ ಮೂಲಂಗಿಯನ್ನು ಬಹಳಷ್ಟು ಮಂದಿ ಸೇವಿಸುವುದುಂಟು. ತಿಂದವರ ಬಾಯಿ ಮೂಲಂಗಿ ವಾಸನೆ ಬರಲಿದೆ ಎಂಬ ಕಾರಣಕ್ಕೆ ಹಿಂಜರಿಯುತ್ತಾರೆ. ಹಸಿಯಾಗಿದ್ದಾಗ ಖಾರವಾಗಿರುವುದರಿಂದ ಇತರೆ ತರಕಾರಿ ಸಾಲಡ್ ಜತೆ ಬಳಸಲಾಗುವುದು. ರುಚಿಗೆ ತಕ್ಕಷ್ಟು ಉಪ್ಪು ಬಳಸಿದರೆ ಖಾರ ಕಡಿಮೆಯಾಗಲಿದೆ.
ಅಡುಗೆಯಲ್ಲಿ ಇದನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸಲಾಗುತ್ತದೆ. ಮೂಲಂಗಿಯ ಮಸಾಲೆ, ಇತರೆ ತರಕಾರಿಗಳ ಮಿಶ್ರಣದೊಂದಿಗೆ ಸಾಂಬಾರ್, ಪಲ್ಯ ಮಾಡುವುದು ರೂಢಿಯಲ್ಲಿದೆ. ಮೂಲಂಗಿಯ ಸೊಪ್ಪು ಕೂಡು ಹೆಚ್ಚು ಉಪಯುಕ್ತವಾಗಿದೆ. ಸೊಪ್ಪನ್ನು ಪಲ್ಯ, ಮೊಟ್ಟೆ ಪಲ್ಯ ಹೀಗೆ ನಾನಾ ರೀತಿಯಲ್ಲಿ ಬಳಸಲಾಗುವುದು.
ಆರೋಗ್ಯ ವರ್ಧಕವಾಗಿ ಸಹಕಾರಿ
ನಿತ್ಯ ಬಳಕೆಯ ತರಕಾರಿಯಾದರೂ ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ. ಜೀರಿಗೆ ಕಾಳಿನಂತೆ ಮೂಲಂಗಿ ಕೂಡ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕಡಿಮೆ ಮಾಡಲಿದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಮಲಬದ್ಧತೆ ನಿವಾರಿಸಲಿದೆ. ಕೆಲವೊಂದು ಹೊಟ್ಟೆಯ ಸಮಸ್ಯೆಗೂ ಪರಿಹಾರ ನೀಡಲಿದೆ.
ಮೂಲವ್ಯಾಧಿಯ ತೀವ್ರತೆಯನ್ನು ಕಡಿಮೆ ಮಾಡುವ ಗುಣ ಮೂಲಂಗಿಗೆ ಇದೆ. ಬೆಳಗಿನ ವೇಳೆ ತಿಂಡಿ ತಿನ್ನುವ ಮೊದಲು ನಿಯಮಿತವಾಗಿ ನಾಲ್ಕೈದು ದಿನ ಹಸಿ ಮೂಲಂಗಿ ಸೇವಿಸಿದರೆ ನಿಯಂತ್ರಣಕ್ಕೆ ಬರಲಿದೆ. ಮೂಲಂಗಿಯನ್ನು ತೆಂಗಿನ ಕಾಯಿ ರೀತಿ ತುರಿದು ಮೊಸರಲ್ಲಿ ಸ್ವಲ್ಪ ನೆನೆಸಿದ ಬಳಿಕ ಸೇವಿಸಿದರೆ ಹೆಚ್ಚು ಫಲಿತಾಂಶ ಸಿಗಲಿದೆ. ಅಂದರೆ, ಮೊಸರೊಡೆ ರೀತಿ ಸೇವಿಸಬಹುದು.
ಮೂಲವ್ಯಾಧಿ ಇರುವ ಹಲವರು ಇದನ್ನು ಬಳಸುವುದುಂಟು. ಹಾಗೆಯೇ ಇತರರಿಗೂ ಸಲಹೆ ಮಾಡುವುದು ಸಾಮಾನ್ಯವಾಗಿದೆ. ಚಳಿಗಾಲದಲ್ಲಿ ಶೀತ ಸಂಬಂಧಿ ಸಮಸ್ಯೆಗಳು ಹೆಚ್ಚು. ಕೆಮ್ಮು, ಕಫದಂತೆ ಸಮಸ್ಯೆ ಇರುವವರು ಮೂಲಂಗಿಯನ್ನು ಯಾವ ಸ್ವರೂಪದಲ್ಲೂ ಬಳಸಿದರೂ ಪರಿಣಾಮಕಾರಿಯಾಗಿ ನಿವಾರಿಸಲಿದೆ.
ಮಧುಮೇಹಿಗಳು, ಅಧಿಕ ರಕ್ತದೊತ್ತಡಕ್ಕೂ ಸೈ
ಅದೇ ರೀತಿ ಮೂಲಂಗಿಯ ಸೊಪ್ಪು ಕೂಡ ಕೆಮ್ಮು ಸಮಸ್ಯೆಗೆ ಪರಿಹಾರ ಒದಗಿಸಲಿದೆ. ಜಾನುವಾರುಗಳಿಗೆ ಕೆಮ್ಮು ಬಂದಾಗ ಈ ಸೊಪ್ಪು ತಿನ್ನಿಸುವುದು ರೂಢಿಯಲ್ಲಿದೆ. ಮೂಲಂಗಿ ಹೆಚ್ಚಾಗಿ ಬಳಸುವವರಲ್ಲಿ ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಿ ಕೆಲಸ ಮಾಡಲಿದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ರಕ್ತ ಪರಿಚಲನೆ ಸರಾಗವಾಗಿರುತ್ತದೆ ಎಂಬ ಅಭಿಪ್ರಾಯವಿದೆ. ಅಷ್ಟೇ ಅಲ್ಲ, ಹೃದಯ ಸಂಬಂಧಿ ರೋಗಿಗಳಿಗೂ ಅನುಕೂಲಕರ. ಅಲ್ಲದೆ, ಮೂತ್ರಪಿಂಡದಲ್ಲಿ ಕಲ್ಲಾಗುವುದನ್ನು ತಡೆಯುವ ಗುಣವನ್ನು ಹೊಂದಿದೆ.
ಆದರೆ, ಯಾವುದೇ ತರಕಾರಿ, ಆಹಾರ ಹಾಗೂ ಹಣ್ಣುಗಳು ಕೂಡ ಪ್ರತಿಯೊಬ್ಬರಿಗೂ ಅನುಕೂಲಕರ ಹಾಗೂ ಅಡ್ಡಪರಿಣಾಮಗಳನ್ನು ಬೀರುತ್ತವೆ. ಒಬ್ಬರಿಗೆ ವರವಾಗುವುದು ಮತ್ತೊಬ್ಬರಿಗೆ ಶಾಪವಾಗಬಹುದು. ಅವರವರ ಶರೀರ ಪ್ರಕೃತಿಗೆ ಒಗ್ಗಿದರೆ ಮಾತ್ರ ಬಳಸಬೇಕು. ಉಪಯೋಗವಿಲ್ಲದೆ ಅಮೃತ ಬಳಸಿದರೂ ವ್ಯರ್ಥ ಎಂಬುದನ್ನು ಸದಾ ನೆನಪಿನಲ್ಲಿಡಬೇಕು.
ಸಮೃದ್ಧ ಜೀವಸತ್ವವುಳ್ಳ ತರಕಾರಿ
ಬಹು ಉಪಯೋಗಿಯಾಗಿರುವಂತೆ ಹಲವು ಜೀವಸತ್ವಗಳನ್ನು ಹೊಂದಿರುವ ತರಕಾರಿ ಮೂಲಂಗಿ. ಅಂದರೆ, ಸೋಡಿಯಂ, ಪ್ರೋಟೀನ್, ವಿಟಮಿನ್-ಎ, ಬಿ, ಸಿ, ಅಯೋಡಿನ್, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಕ್ಲೋರಿನ್ ಮತ್ತು ಮೆಗ್ನೀಸಿಯಮ್ ಮೊದಲಾದ ಸತ್ವಗಳು ಹೇರಳವಾಗಿ ಮೂಲಂಗಿಯಲ್ಲಿ ದೊರೆಯುತ್ತವೆ.
ಜಠರದ ಕಲ್ಮಶಗಳನ್ನು ನಿವಾರಿಸುವುದಲ್ಲದೆ, ಕಾಮಾಲೆ ಅಥವಾ ಜಾಂಡೀಸ್ ತುತ್ತಾದವರಿಗೆ ಸಿದ್ಧೌಷಧವಾಗಿ ಕಾರ್ಯ ನಿರ್ವಹಿಸಲಿದೆ. ಇದರಿಂದಲೇ ಹೆಚ್ಚು ಬಳಸಲು ಸಲಹೆ ಮಾಡುತ್ತಾರೆ. ಪ್ರಾಚೀನ ಚಿಕಿತ್ಸಾ ಪದ್ಧತಿಗಳಲ್ಲಿ ಇದರಲ್ಲಿರುವ ಔಷಧಗುಣವನ್ನು ಅರಿತು ಬಳಸುತ್ತಾ ಬರಲಾಗಿದೆ.
ರಕ್ತ ಶುದ್ಧೀಕರಣಗೊಳಿಸಲು, ಥೈರಾಯ್ಡ್ ಗ್ರಂಥಿಯ ಸರಿಪಡಿಸುವುದರಲ್ಲೂ ಮೂಲಂಗಿಯ ಪಾತ್ರ ಪ್ರಮುಖವಾಗಿದೆ. ಮೂಲಂಗಿಯಲ್ಲಿ ಸಾಮಾನ್ಯವಾಗಿ ಹೆಚ್ಚು ಬಳಕೆಯಲ್ಲಿರುವುದು ಬಿಳಿ ಬಣ್ಣದ್ದು, ಕೆಂಪು ಮೂಲಂಗಿ, ಉದ್ದವಾದ ಕೆಂಪು ಬಣ್ಣದ, ದುಂಡಾದ ಮೂಲಂಗಿಗಳು ಇವೆ. ಯಾವುದೇ ರೀತಿಯ ಪಥ್ಯವಿರುವ ಔಷಧ ಬಳಸುವವರಿಗೂ ಮೂಲಂಗಿ ಬೇಡ ಎಂದು ಸಲಹೆ ಮಾಡುವುದಿಲ್ಲ.
ಮೂಲಂಗಿಯ ಬಗ್ಗೆ ಅಸಡ್ಡೆ ತೋರದೇ ತಿನ್ನುವುದರಲ್ಲೇ ಇದೆ ಆರೋಗ್ಯದ ಗುಟ್ಟು. ಅನಾದಿಕಾಲದಿಂದಲ್ಲೂ ಭಾರತ ಮಾತ್ರವಲ್ಲ ಜಗತ್ತಿನಾದ್ಯಂತ ತರಕಾರಿ ಮತ್ತು ಆಹಾರವಾಗಿ ಬಳಸುವುದು ಚಾಲ್ತಿಯಲ್ಲಿದೆ. ಈ ಮೇಲಿನ ವಿಚಾರವೂ ಅಂತರ್ಜಾಲ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ದೊರೆಯುವ ಮಾಹಿತಿಯನ್ನು ಅವಲಂಭಿಸಿದೆ.