ಬೆಂಗಳೂರು:ಸರ್ಕಾರದ ಮಟ್ಟದಲ್ಲಿ ನಡೆದಿದ್ದ ಭ್ರಷ್ಟಾಚಾರ ಪ್ರಕರಣಗಳ ತನಿಖೆಗಳು ತಾರ್ಕಿಕ ಅಂತ್ಯ ಕಾಣುವ ಹಂತಕ್ಕೆ ಬಂದಿವೆ ಎಂದಿರುವ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಆಡಳಿತದಲ್ಲಿ ಪಾರದರ್ಶಕತೆ ತರುವಲ್ಲಿ ಕೆಲಸ ಮಾಡುತ್ತಿದೆ ಎಂದು ಹಾಡಿ ಹೊಗಳಿದ್ದಾರೆ.
ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಒಂದು ವರ್ಷದಲ್ಲಿ ತಮ್ಮ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳನ್ನು ಜನರ ಮುಂದಿಟ್ಟರು.
ಕೌನ್ಸಿಲಿಂಗ್ ವ್ಯವಸ್ಥೆ ಜಾರಿ
ವಿವಿಧ ಇಲಾಖೆಗಳಲ್ಲಿ ಅಧಿಕಾರ, ನೌಕರರ ವರ್ಗಾವಣೆಗಳಿಗಾಗಿ ಕೌನ್ಸಿಲಿಂಗ್ ವ್ಯವಸ್ಥೆ ಜಾರಿಗೆ ತರುವ ಜೊತೆಗೆ ಸರ್ಕಾರದ ಸವಲತ್ತುಗಳನ್ನು ಮಧ್ಯವರ್ತಿ ರಹಿತವಾಗಿ ನೀಡಲು ಕ್ರಮ ವಹಿಸಲಾಗಿದೆ ಎಂದಿದ್ದಾರೆ.
ರಾಜ್ಯದ ಅಭಿವೃದ್ಧಿ ವೇಗ ಚುರುಕುಗೊಳಿಸುವುದರಲ್ಲಿ ಮತ್ತು ಸರ್ಕಾರದ ಹಣಕಾಸು ವ್ಯವಸ್ಥೆ ಇನ್ನಷ್ಟು ಸದೃಢಗೊಳಿಸುವಲ್ಲಿ ನನ್ನ ಸರ್ಕಾರ ಯಶಸ್ವಿಯಾಗಿದೆ ಎಂಬುದನ್ನು ಹೆಮ್ಮೆಯಿಂದ ಹೇಳಲು ಬಯಸುತ್ತೇನೆ.
ಗ್ಯಾರಂಟಿ ಯೋಜನೆಗಳ ಅನುಷ್ಟಾನದಿಂದ ರಾಜ್ಯ ಅಭಿವೃದ್ಧಿಯಲ್ಲಿ ಹಿಂದೆ ಬೀಳುತ್ತದೆ ಮತ್ತು ಹಣಕಾಸು ವ್ಯವಸ್ಥೆ ಹದಗೆಡುತ್ತದೆ ಎಂಬ ಕೆಲವರ ಭವಿಷ್ಯ ಸುಳ್ಳು ಮಾಡಿ ಸರ್ಕಾರದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ ಎಂಬುದನ್ನು ತೋರ್ಪಡಿಸಿದ್ದಾರೆ.
ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮ
ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕವೂ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನ ಮಾಡುತ್ತಿದೆ.
ಕಳೆದ 19 ತಿಂಗಳ ಆಡಳಿತದಲ್ಲಿ ಗಂಭೀರವಾದ ಕಾನೂನು-ಸುವ್ಯವಸ್ಥೆ ಸಮಸ್ಯೆಗಳು ಉದ್ಭವಿಸಿಲ್ಲ, ಪೋಲಿಸ್ ಠಾಣೆಗಳು ಜನಸ್ನೇಹಿಯಾಗಿ ಕೆಲಸ ಮಾಡುತ್ತಿವೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ, ತೀವ್ರರೂಪದ ಅತಿವೃಷ್ಟಿ, ಅನಾವೃಷ್ಟಿಗಳಿಲ್ಲದೆ ರೈತರ ಕೈಗೆ ಉತ್ತಮ ಫಸಲು ಸಿಕ್ಕಿದೆ, ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಂದ ಸುಮಾರು 149 ಲಕ್ಷ ಟನ್‌ಗಳಷ್ಟು ಕೃಷಿ ಉತ್ಪಾದನೆ ನಿರೀಕ್ಷಿಸಲಾಗಿದೆ.
ತೊಗರಿ, ಕೊಬ್ಬರಿಗೆ ಪ್ರೋತ್ಸಾಹ ಧನ
ಕಲ್ಯಾಣ ಕಾರ್ಯಕ್ರಮಗಳಿಂದ ರಾಜ್ಯದ ರೈತ ಕುಟುಂಬಗಳಲ್ಲಿ ಆತ್ಮಹತ್ಯೆಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ, ನನ್ನ ಸರ್ಕಾರ ರಚನೆಯಾದಾಗಿನಿಂದ ತೊಗರಿ ಮತ್ತು ಕೊಬ್ಬರಿ ಬೆಲೆಗಳು ಕುಸಿದಾಗ ರೈತರ ನೆರವಿಗೆ ನಿಂತು ಪ್ರೋತ್ಸಾಹ ಧನ ನೀಡಿದೆ.
ಶಿಕ್ಷಣ ಇಲಾಖೆಯಲ್ಲಿ 13,000ಕ್ಕೂ ಹೆಚ್ಚು ಪದವೀಧರ ಶಿಕ್ಷಕರ ಹುದ್ದೆ ಭರ್ತಿ ಮಾಡಲಾಗಿದೆ, ಉನ್ನತ ಶಿಕ್ಷಣ ಇಲಾಖೆಯಲ್ಲಿ 1,088 ಸಹಾಯಕ ಪ್ರಾಧ್ಯಾಪಕರಿಗೆ ನೇಮಕಾತಿ ಆದೇಶ ನೀಡಲಾಗಿದೆ.
522 ಕೆಪಿಎಸ್ ಶಾಲೆಗಳನ್ನು ಪ್ರಾರಂಭಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ, 1,953 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆ ಪ್ರಾರಂಭಿಸಿ ನರ್ಸರಿ ಶಾಲೆಗಳನ್ನು ತೆರೆಯಲಾಗಿದೆ, ಅಲ್ಲದೆ, ಮಕ್ಕಳಿಗೆ ರಜಾ ದಿನ ಹೊರತುಪಡಿಸಿ ವಾರದ ಎಲ್ಲಾ ದಿನಗಳಂದು ಸರ್ಕಾರ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಷನ್ ಜಂಟಿಯಾಗಿ ಮೊಟ್ಟೆ ನೀಡುತ್ತಿವೆ.
ಟ್ರಿಲಿಯನ್ ಡಾಲರ್ ಆರ್ಥಿಕತೆ
ಕರ್ನಾಟಕ ಆರ್ಥಿಕತೆಯನ್ನು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ರೂಪಿಸಲು ಸಮಗ್ರ ಹಾಗೂ ಸಮರ್ಥ ಪ್ರಯತ್ನ ಮಾಡಲಾಗುತ್ತಿದೆ, ಜೊತೆಗೆ ಜನರಿಗೆ ಆರೋಗ್ಯ, ಶಿಕ್ಷಣ, ನೈರ್ಮಲ್ಯ ಹಾಗೂ ಸುಸ್ಥಿರ ಕೃಷಿ ವ್ಯವಸ್ಥೆಯ ರಾಜ್ಯವಾಗಿ ರೂಪಿಸಲು ಸರ್ವಪ್ರಯತ್ನ ಮಾಡುತ್ತಿದೆ.
ಸಮಾಜದ ಆರ್ಥಿಕ ದುರ್ಬಲ ಜನತೆಗೆ ಸಾಲ ವಸೂಲಾತಿ ಕಿರುಕುಳ, ಹಿಂಸೆ ಮತ್ತು ಒತ್ತಡದ ಹಲವಾರು ಘಟನೆಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಕಿರು ಸಾಲ ಮತ್ತು ಸಣ್ಣ ಸಾಲ ವಸೂಲಾತಿಯಲ್ಲಿನ ಕಿರುಕುಳ, ಹಿಂಸೆ ಮತ್ತು ಒತ್ತಡ ತಡೆಯುವಲ್ಲಿ ಪರಿಣಾಮಕಾರಿ ಗಂಭೀರ ಕ್ರಮ ಕೈಗೊಳ್ಳಲು ತಪ್ಪಿತಸ್ತ ವ್ಯಕ್ತಿಗಳಿಗೆ ಕನಿಷ್ಠ 6 ತಿಂಗಳಿಂದ ಗರಿಷ್ಠ 1೦ ವರ್ಷಗಳವರೆಗೆ ವಿಸ್ತರಿಸಬಹುದಾದ ಸೆರೆವಾಸ ಹಾಗೂ 5 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸುವ ಸುಗ್ರೀವಾಜ್ಞೆಯನ್ನು ನನ್ನ ಸರ್ಕಾರ ಅನುಷ್ಠಾನಗೊಳಿಸಿದ್ದು, ಶಾಸನಾತ್ಮಕ ಕ್ರಮಗಳಿಗೆ ಸರ್ಕಾರ ಮುಂದಾಗಿದೆ.
ಜನವರಿ 2025ರ ಅಂತ್ಯಕ್ಕೆ 20.22 ಲಕ್ಷ ರೈತರಿಗೆ 16,942 ಕೋಟಿ ರೂ. ಬೆಳೆ ಸಾಲ ಮತ್ತು 46,000 ರೈತರಿಗೆ 1442 ಕೋಟಿ ರೂ.ಗಳ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ವಿತರಿಸಲಾಗಿದೆ, ಅಲ್ಲದೆ, ಸಹಕಾರ ಸಂಘಗಳಿಗೆ ಬಡ್ಡಿ ಸಹಾಯಧನ ನೀಡಲು 1,451 ಕೋಟಿ ರೂ. ಒದಗಿಸಿ ಖರ್ಚು ಮಾಡಲಾಗಿದೆ.
ಮೈಸೂರು ವಿಮಾನ ನಿಲ್ದಾಣ
ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಯನ್ನು 319 ಕೋಟಿ ರೂ. ವೆಚ್ಚದಲ್ಲಿ, ರಾಯಚೂರು ವಿಮಾನ ನಿಲ್ದಾಣವನ್ನು 219 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಂಡಿದೆ.
ಧರ್ಮಸ್ಥಳ, ಮಡಿಕೇರಿ ಮತ್ತು ಚಿಕ್ಕಮಗಳೂರಿನಲ್ಲಿ ರನ್‌ವೇ ಅಭಿವೃದ್ಧಿಗೆ ಭೂಮಿ ಗುರುತಿಸುವಿಕೆ ಮತ್ತು ಭೂಸ್ವಾಧೀನ ಪ್ರಕ್ರಿಯೆ ಕಾರ್ಯ ನಡೆಯುತ್ತಿದೆ.
ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ 2024-25ರ ಸಾಲಿನಲ್ಲಿ 78.9 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿದೆ, ಮಾನವ-ಆನೆ ಸಂಘರ್ಷ ತಡೆಗೆ ಬಂಡೀಪುರದಲ್ಲಿ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ರಾಜ್ಯಗಳ ಅರಣ್ಯ ಸಚಿವರು, ಅಧಿಕಾರಿಗಳ ಸಭೆ ಹಾಗೂ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಮಾವೇಶವನ್ನು ಯಶಸ್ವಿಯಾಗಿ ನಡೆಸಲಾಗಿದೆ.
1.23 ಲಕ್ಷ ನಿವೇಶನ ಹಂಚಿಕೆ
ನನ್ನ ಸರ್ಕಾರ ಜನರ ವಸತಿ ಸಮಸ್ಯೆ ನಿವಾರಣೆಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 3.02 ಲಕ್ಷ ಮನೆಗಳನ್ನು 4761.15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ನೆರವು ನೀಡಿದ್ದು, 4,096 ಎಕರೆ ಜಮೀನಿನಲ್ಲಿ 1.23 ಲಕ್ಷ ನಿವೇಶನಗಳ ಹಂಚಿಕೆಗೆ ಕ್ರಮವಹಿಸಿದೆ.
ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸುವಲ್ಲಿ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000 ರೂ. ನೀಡಲಾಗುತ್ತಿದೆ, ಸದರಿ ಯೋಜನೆಯಡಿ 1,26,24,547 ಮಹಿಳಾ ಫಲಾನುಭವಿಗಳು ನೋಂದಣಿಯಾಗಿದ್ದು ಯೋಜನೆ ಪ್ರಾರಂಭವಾದಾಗಿನಿಂದ ಈವರೆಗೆ 36,000 ಕೋಟಿ ರೂ. ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ.
ಬೆಂಗಳೂರು ಪೆರಿಫೆರಲ್ ರಿಂಗ್ ರಸ್ತೆ ಭಾಗ-೧ರ ಯೋಜನೆಗೆ ಅಗತ್ಯವಿರುವ 27,000 ಕೋಟಿ ರೂ.ಗಳನ್ನು ಹುಡ್ಕೊ ಸಂಸ್ಥೆಯಿಂದ ಸಾಲದ ರೂಪದಲ್ಲಿ ಪಡೆಯಲು ನಿರ್ಧರಿಸಿದ್ದು, ಸಾಲದ ಮೊತ್ತಕ್ಕೆ ಭದ್ರತೆ ನೀಡಲಿದೆ, ಸುಮಾರು 2,565 ಎಕರೆ ಭೂಪ್ರದೇಶ ಸ್ವಾಧೀನಕ್ಕೆ ಉದ್ದೇಶಿಸಿದ್ದು, ಸುಮಾರು 73 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತಿದೆ.
ಅನಧಿಕೃತ ಆಸ್ತಿಗೆ ಇ-ಖಾತಾ
ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬಹುದಿನಗಳಿಂದ ಬಾಕಿ ಉಳಿದಿರುವ ಸುಮಾರು 30 ಲಕ್ಷಕ್ಕೂ ಹೆಚ್ಚಿನ ಅನಧಿಕೃತ ಆಸ್ತಿಗಳಿಗೆ ಇ-ಖಾತಾ ನಮೂನೆ 3ಬಿ ನೀಡಲು ಪ್ರಾರಂಭಿಸಲಾಗಿದೆ, ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಕ್ಕೂ ಈ ಸೌಲಭ್ಯ ವಿಸ್ತರಿಸಲಾಗುತ್ತದೆ.
ರೈತರ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸುರಕ್ಷಿತವಾಗಿಡಲು ಕಂದಾಯ ಇಲಾಖೆ ‘ಭೂ ಸುರಕ್ಷಾ’ ಗ್ಯಾರಂಟಿ ನೀಡುತ್ತಿದ್ದು, ಕಂದಾಯ ಇಲಾಖೆಯಲ್ಲಿನ ದೀರ್ಘಾವಧಿ ಮತ್ತು ಮುಖ್ಯ ದಾಖಲೆಗಳ ಸ್ಕ್ಯಾನಿಂಗ್, ಡಿಜಿಟಲೀಕರಣ, ಇಂಡೆಕ್ಸಿಂಗ್ ಮತ್ತು ಕೆಟಲಾಗಿಂಗ್ ಮಾಡಿ ಜನರಿಗೆ ಭೂ ದಾಖಲೆಗಳು ಸುಲಭವಾಗಿ ಸಿಗುವಂತೆ ಮಾಡಲಾಗುವುದು.
ಈಗಾಗಲೇ 9 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಿ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಲಾಗಿದೆ, ಕಂದಾಯ ಇಲಾಖೆಯಲ್ಲಿ ಮುಟೇಶನ್‌ಗೆ ಸಂಬಂಧಿಸಿದಂತೆ ಜನರು ಅನವಶ್ಯಕವಾಗಿ ಅಲೆದಾಡುವುದನ್ನು ತಪ್ಪಿಸಲು ಮುಟೇಶನ್ ಗ್ಯಾರಂಟಿ ನೀಡಲಾಗಿದೆ.
ಆಡಳಿತಕ್ಕೆ ಚುರುಕು
ಈ ಮೊದಲು ಖಾತೆ ಬದಲಾವಣೆಗೆ ಸರಾಸರಿ 32 ದಿನಗಳ ಕಾಲಾವಧಿ ಬೇಕಾಗಿತ್ತು, ಆಡಳಿತಕ್ಕೆ ಚುರುಕು ಮುಟ್ಟಿಸಿದ ನಂತರ ಶೇ.67ರಷ್ಟು ಖಾತೆ ಬದಲಾವಣೆಗಳು ಕೆಲವೇ ಗಂಟೆಗಳಲ್ಲಿ ಆಗುತ್ತಿವೆ.
ಉಳಿದ ಶೇ.33ರಷ್ಟು ಮೈಟೇಶನ್‌ಗಳನ್ನು 9 ರಿಂದ 13 ದಿನಗಳಲ್ಲಿ ಮಾಡಲಾಗುತ್ತಿದೆ, ಕಂದಾಯ ನ್ಯಾಯಾಲಯಗಳಲ್ಲಿ ಸಾವಿರಾರು ಪ್ರಕರಣಗಳು 5-10 ವರ್ಷಗಳಿಂದಲೂ ಬಾಕಿ ಉಳಿದಿದ್ದವು.
ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲ್ಲೂಕು ಐಚನಹಳ್ಳಿ ಹಾಗೂ ಇತರೆ 50 ಕೆರೆಗಳಿಗೆ ನೀರು ತುಂಬಿಸುವ ಏತನೀರಾವರಿ ಯೋಜನೆಯನ್ನು 265.29 ಕೋಟಿ ರೂ. ಮೊತ್ತದಲ್ಲಿ ಕೈಗೊಂಡಿದ್ದು, 1ನೇ ಹಂತದ ಯೋಜನೆ ಪ್ರಾಯೋಗಿಕವಾಗಿ ಚಾಲನೆಗೊಂಡಿದೆ ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.


