ನ್ಯಾಯಾಲಯದ ಸೂಚನೆ ಇದ್ದರೆ ಅದರಂತೆ ಕ್ರಮ
ಕೊಪ್ಪಳ: ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನ ವಿಷಯದಲ್ಲಿ ಯಾವುದೇ ದ್ವೇಷದ ರಾಜಕಾರಣ ಮಾಡುವುದಾಗಲಿ, ನಿರಪರಾಧಿಗಳನ್ನು ಬಂಧಿಸುವ ಕೆಲಸವಾಗಲಿ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪು ಮಾಡಿದವರಿಗೆ ಏನು ಮಾಡಬೇಕು, ಸುಮ್ಮನೆ ಬಿಟ್ಟು ಬಿಡಬೇಕೇ, ಹಳೇ ಪ್ರಕರಣಗಳನ್ನು ವಿಲೇವಾರಿ ಮಾಡಲು ಸೂಚಿಸಲಾಗಿದೆ, ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ, ನ್ಯಾಯಾಲಯದ ಸೂಚನೆ ಇದ್ದರೆ ಅದರಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ರಾಮಮಂದಿರ ಉದ್ಘಾಟನೆಗೆ ಯಾರಿಗೆ ಆಹ್ವಾನ ಹೋಗಿದೆ, ಬಿಟ್ಟಿದೆ, ಗೊತ್ತಿಲ್ಲ ಆಹ್ವಾನ ಕೊಟ್ಟವರು ಹೋಗುತ್ತಾರೆ, ಇಲ್ಲದವರು ಇಲ್ಲ.
ಅತಿಥಿ ಉಪನ್ಯಾಸಕರ ಖಾಯಂ ಕಷ್ಟ
ಅತಿಥಿ ಉಪನ್ಯಾಸಕರು ಖಾಯಂ ಮಾಡಿ ಎಂಬ ಬೇಡಿಕೆ ಇಟ್ಟಿದ್ದಾರೆ, ಖಾಯಂ ಮಾಡುವುದು ಕಷ್ಟದ ಕೆಲಸ, ಪಾದಯಾತ್ರೆ ಬಗ್ಗೆ ಅವರೊಂದಿಗೆ ಮಾತನಾಡಿದ್ದರೂ ಪಾದಯಾತ್ರೆ ಮಾಡುತ್ತಿದ್ದಾರೆ.
ಬರ ಪರಿಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಬೆಳೆ ನಷ್ಟಕ್ಕೆ ತಾತ್ಕಾಲಿಕ ಪರಿಹಾರವಾಗಿ 2,000 ರೂ.ಗಳನ್ನು ನೀಡಲಾಗುತ್ತಿದೆ, ಆಧಾರ್ ಲಿಂಕ್ ನಂತರ ರೈತರಿಗೆ ಮೊತ್ತ ತಲುಪಲಿದೆ ಎಂದರು.