ಸೋಂಕು ಎದುರಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ
ಬೆಂಗಳೂರು: ಕೋವಿಡ್ ರೂಪಾಂತರಿ ತಳಿ ಜೆಎನ್.1 ಸೋಂಕು ತುಂಬಾ ವೇಗವಾಗಿ ಹರಡುವ ಸಾಧ್ಯತೆ ಇದೆಯಾದರೂ ಇದು ಪ್ರಾಣಾಂತಿಕವಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆತಂಕಪಡುವ ಅವಶ್ಯಕತೆಇಲ್ಲದಿದ್ದರೂ ಮುನ್ನೆಚ್ಚರಿಕೆ ಅಗತ್ಯ ಎಂದಿದ್ದಾರೆ.
ಗುಂಪು ಸೇರುವ ಮತ್ತು ಸಾರ್ವಜನಿಕ ಸಮಾರಂಭದ ಕಡೆಗಳಲ್ಲಿ ಮಾಸ್ಕ್ ಧರಿಸಿ, ಆದರೆ ಇದನ್ನು ಕಡ್ಡಾಯ ಮಾಡುತ್ತಿಲ್ಲ, ಮುಂಜಾಗ್ರತೆಯಾಗಿ ಸರ್ಕಾರ ಸಲಹೆ ಮಾಡುತ್ತಿದೆ.
ರೂಪಾಂತರಿ ತಳಿಯಿಂದ ಯಾರೂ ಪ್ರಾಣ ಕಳೆದುಕೊಂಡಿಲ್ಲ
ರೂಪಾಂತರಿ ತಳಿಯಿಂದ ಯಾರೂ ಪ್ರಾಣ ಕಳೆದುಕೊಂಡಿಲ್ಲ, ಆದರೆ ಅನ್ಯ ಖಾಯಿಲೆಯಿಂದ ಬಳಲುತ್ತಿದ್ದವರು ಸೋಂಕು ತಗುಲಿ ಮೃತಪಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು.
ರೂಪಾಂತರ ಜೆ.ಎನ್.1 ಸೋಂಕು ಕಾಣಿಸಿಕೊಂಡಿದ್ದರೂ ಇದು ಮನುಷ್ಯರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ತಜ್ಞರೇ ಹೇಳಿದ್ದಾರೆ. ಆದರೂ ಇದರ ಬಗ್ಗೆ ಮೈ ಮರೆಯದೆ, ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಪ್ರಸ್ತುತ ಕೇಂದ್ರ ಸರ್ಕಾರ ರಾಜ್ಯಕ್ಕೆ 30 ಸಾವಿರ ಕೋವಿಡ್ ವ್ಯಾಕ್ಸಿನ್ ಕಳುಹಿಸಿಕೊಟ್ಟಿದೆ, ವ್ಯಾಕ್ಸಿನ್ ಕೊರತೆಯಾಗದಂತೆ ಎಲ್ಲ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿದ್ದೇವೆ. ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡುವ ಅಗತ್ಯವಿಲ್ಲ, 60 ವರ್ಷ ಹಾಗೂ ದೀರ್ಘ ವ್ಯಾಧಿಯಿಂದ ಬಳಲುತ್ತಿರುವವರು ನಾಳೆಯಿಂದಲೇ (ಬುಧವಾರ) ಜಿಲ್ಲಾಸ್ಪತ್ರೆಗಳಿಗೆ ತೆರಳಿ ಕೋವಿಡ್ ವಾಕ್ಸಿನ್ ತೆಗೆದುಕೊಳ್ಳಬಹುದು.
ಒಂದು ಮತ್ತು 2ನೇ ಕೋವಿಡ್ ಸಂದರ್ಭದಲ್ಲಿ ಯಾವ ಲಸಿಕೆಯನ್ನು ನೀಡಲಾಗಿತ್ತೋ ಅದೇ ಲಸಿಕೆಯನ್ನು ನೀಡಲಿದ್ದೇವೆ. ಹೊಸ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ ಎಂದರು.
ಅಗತ್ಯ ಉಪಕರಣಗಳು ಲಭ್ಯವಿವೆ
ಆಕ್ಸಿಜನ್, ಬೆಡ್, ಐಸಿಯು, ವೆಂಟಿಲೇಟರ್, ಔಷಧಗಳು, ಸೇರಿದಂತೆ ಅಗತ್ಯ ಉಪಕರಣಗಳು ಲಭ್ಯವಿವೆ. ಕೆಲವು ಆಸ್ಪತ್ರೆಗಳಲ್ಲಿ ಸಿಬ್ಬಂದಿ ನೇಮಕ, ಉಪಕರಣಗಳ ಖರೀದಿಸುವ ಬಗ್ಗೆ ಗಮನಕ್ಕೆ ತಂದಿದ್ದಾರೆ, ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ, ಕೋವಿಡ್ ಸಂಬಂಧ ಔಷಧಗಳನ್ನು ಖರೀದಿಗೆ ಹಣಕಾಸಿನ ಕೊರತೆ ಇಲ್ಲ.
ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ 50 ಬೆಡ್‌ಗಳನ್ನು ಮೀಸಲಿಡಬೇಕು, ವೈದ್ಯಕೀಯ ಕಾಲೇಜಿನಲ್ಲಿ 18,141 ಸರ್ಕಾರಿ ಆಸ್ಪತ್ರೆಗಳಲ್ಲಿ 10 ಸಾವಿರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಸ್ಪತ್ರೆಗಳಲ್ಲಿ 11,500 ಹಾಸಿಗೆಗಳು ಇವೆ.
ಕೇರಳದಲ್ಲಿ ಕಾಣಿಸಿಕೊಂಡ ರೂಪಾಂತರ ಜೆಎನ್.1 ಸೋಂಕು ಕ್ರಮೇಣವಾಗಿ ಕಡಿಮೆಯಾಗುತ್ತಿದೆ, ರಾಜ್ಯದಲ್ಲೂ ಒಂದು ವೇಳೆ ಹಬ್ಬಿದರೆ ಏನೆಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅದೆಲ್ಲವನ್ನು ತೆಗೆದುಕೊಂಡಿದ್ದೇವೆ. ಕೋವಿಡ್ ವಾರಿಯರ್ಸ್‌ಗಳು ಫ್ಲೂ-ಲಸಿಕೆ ಪಡೆಯಬೇಕು.
ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಲಾಗುತ್ತಿದೆ, ಜೊತೆಗೆ ಆರೋಗ್ಯ ಸೌಲಭ್ಯಗಳ ಕಾರ್ಯ ಸಿದ್ಧತೆ ನಡೆಸಲಾಗಿದೆ ಎಂದರು.