ಚಳಿಗಾಲದಲ್ಲಿ ಶೀತ ಬಾಧೆ ಅಧಿಕ
ಬೆಂಗಳೂರು: ಮಾಗಿಯ ಚಳಿ ಬಂದರೆ ಸಾಕು ಶೀತ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ. ಜ್ವರ, ಗಂಟಲು ನೋವು, ಗಂಟಲ ಕೆರೆತ, ಒಣ ಕೆಮ್ಮು, ಶ್ವಾಸನಾಳದ ಸೋಂಕು, ನೆಗಡಿ.. ಹೀಗೆ ಹತ್ತಾರು ಸಮಸ್ಯೆಗಳು ಕಾಡುತ್ತವೆ. ಬಹುತೇಕ ಎಲ್ಲರೂ ಒಮ್ಮೆಯಾದರು ಇಂತಹ ಒಂದಲ್ಲ ಒಂದು ಸಮಸ್ಯೆ ಅನುಭವಿಸಿರುತ್ತಾರೆ.
ಈ ರೀತಿಯ ಆರೋಗ್ಯ ಸಮಸ್ಯೆಗಳು ಎಲ್ಲಾ ವಯೋಮಾನದವರಿಗೂ ಕಾಡುತ್ತವೆ. ಅದರಲ್ಲೂ ಮಕ್ಕಳು ಹಾಗೂ ವಯಸ್ಸಾದ ಹಿರಿಯರಲ್ಲೇ ಹೆಚ್ಚು. ಅದರಲ್ಲೂ ಬೆಳಗಿನ ಜಾವ ಇಬ್ಬನಿ ಬೀಳುವ ಹಾಗೂ ಮಂಜು ಕವಿಯುವ ಸಂದರ್ಭದಲ್ಲಿ ಮನೆಯ ಹೊರಗೆ ಕೆಲಸ ಮಾಡುವವರಿಗೆ ಹೆಚ್ಚು ಬಾಧಿಸುತ್ತವೆ. ಇದರ ಪರಿಹಾರಕ್ಕಾಗಿ ಆಲೋಪತಿ ಹಾಗೂ ಆಯುರ್ವೇದ ಔಷಧಿಯ ಮೊರೆ ಹೋಗುವವರೇ ಅಧಿಕ.
ರೋಗ ಗುಣಪಡಿಸುವುದಕ್ಕಿಂತ ಬಾರದಂತೆ ತಡೆಯುವುದು ಉತ್ತಮ. ಅದಕ್ಕಾಗಿ ಸಮತೋಲನ ಆಹಾರ ಸೇವನೆ ಅಗತ್ಯ. ಅಂದರೆ ಅಗತ್ಯವಿರುವಷ್ಟು ನೀರು ಕುಡಿಯಬೇಕು. ಉಷ್ಣ ಸಂಬಂಧಿಸಿದ ಆಹಾರ ಹೆಚ್ಚು ಸೇವಿಸಿ ಶೀತ ಸಂಬಂಧಿಸಿದ ಆಹಾರದ ಬಳಕೆ ಕಡಿಮೆ ಮಾಡುವುದು ಒಳ್ಳೆಯದು. ಇದರಿಂದಲೇ ಊಟ ಬಲ್ಲವರಿಗೆ ರೋಗವಿಲ್ಲ ಎಂಬುದು. ಇದು ಎಂದೆಂದಿಗೂ ಸತ್ಯ.
ಚಳಿಗಾಲದಲ್ಲಿ ಸಾಮಾನ್ಯವಾಗಿ ಅತಿ ಹೆಚ್ಚು ಕಾಡುವುದು ಕೆಮ್ಮು, ನೆಗಡಿ, ಜ್ವರ. ವೈರಾಣುವಿನಿಂದ ಜ್ವರಗಳು ಹರಡುತ್ತವೆ. ಅದೇ ರೀತಿ ಕೆಮ್ಮು ಕೂಡ. ಒಮ್ಮೆ ಕೆಮ್ಮು ಶುರುವಾದರೆ ಸುಲಭವಾಗಿ ಹೋಗುವುದಿಲ್ಲ. ಸಾಕಷ್ಟು ಕಾಡುತ್ತದೆ. ಸಾಕ್ಷಷ್ಟು ಸತಾಯಿಸುತ್ತದೆ.
ಕೆಮ್ಮಿನ ಜೊತೆ ಕಫ ಸೇರಿದರೆ ಸಮಸ್ಯೆ ಉಲ್ಬಣಿಸುತ್ತದೆ. ರೋಗಿಗಳು ತೀವ್ರ ತೊಂದರೆ ಅನುಭಿಸುತ್ತಾರೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ನಮ್ಮ ಪೂರ್ವಿಕರು ಮನೆ ಮದ್ದು ಬಳಸುತ್ತಿದ್ದರು. ಮೆಣಸು ಬಳಸಿದ ಆಹಾರ ಸಾಕಷ್ಟು ಸೇವಿಸುವುದು. ಕೊತ್ತಂಬರಿ ಬೀಜದ ಪಾಯಸ, ಜೀರಿಗೆ ಕಷಾಯ ಹೀಗೆ ಹಲವು ರೀತಿಯ ಆಹಾರ ಸೇವಿಸಲಾಗುತ್ತಿತ್ತು. ತಾತ್ಕಾಲಿಕವಾಗಿ ಉಪಶಮನ ಮಾಡಲು ಇಂತಹ ಆಹಾರ ಬಳಸಿ ಹತ್ತೋಟಿಗೆ ತರುತ್ತಿದ್ದರು. ಈಗ ಜನರಿಗೆ ಅದರ ಅರಿವು ಕಡಿಮೆ.
ಇಂತಹ ಸಮಸ್ಯೆಗೆ ರಾಮಬಾಣ ‘ವನತುಳಸಿ’. ಇದರ ಉಪಯೋಗ ತಿಳಿದವರು ಮಾತ್ರ ಸಂರಕ್ಷಣೆ ಮಾಡಿ ಮನೆ ತೋಟದಲ್ಲಿ ಬೆಳೆಸಿ ಬಳಸುತ್ತಾರೆ. ಇದು ಮಾರುಕಟ್ಟೆಯಲ್ಲಿ ಸಿಗುವುದು ವಿರಳ. ನೋಡಲು ತುಳಸಿಯಂತೆ ಕಂಡರೂ ಆ ಗಿಡಕ್ಕಿಂತ ದೊಡ್ಡದಾಗಿ ಬೆಳೆಯುತ್ತವೆ. ಎಲೆಯೂ ದೊಡ್ಡದಾಗಿರುತ್ತವೆ. ಸುವಾಸೆಯ ಜತೆಗೆ ಸ್ವಲ್ಪ ಒಗರು, ಖಾರವು ಇರುತ್ತದೆ. ಆದರೆ, ಸಾಮಾನ್ಯ ತುಳಸಿಯಷ್ಟು ಇರುವುದಿಲ್ಲ.
ಬಹಳಷ್ಟು ಜನರು ತುಳಸಿಯನ್ನು ಮನೆಯ ಮುಂದೆ ಬೆಳೆಸಿ ಪೂಜಿಸುವ ಪರಿಪಾಠವಿದೆ. ನೀರಿನಲ್ಲಿ ತುಳಸಿ ಎಲೆ ಹಾಕಿ ಅದರ ನೀರು ಕುಡಿಯುವುದು ಒಳ್ಳೆಯದು. ಬಿಳಿ ತುಳಸಿ, ಕೃಷ್ಣ ತುಳಸಿಗಳನ್ನು ಎಲ್ಲರೂ ನೋಡಿರುತ್ತಾರೆ. ಇವೆರಡನ್ನು ದೇವರ ಪೂಜೆಗೆ ಹಾರವಾಗಿಯೂ ಬಳಸಲಾಗುವುದು.
ಇವಲ್ಲದೆ, ‘ನಿಂಬೆ ತುಳಸಿ’, ‘ನಾಯಿ ತುಳಸಿ’, ‘ವನತುಳಸಿ’ಯೂ ಇವೆ. ನಿಂಬೆ ಹಣ್ಣಿನ ಪರಿಮಳ ಇರುವ ನಿಂಬೆ ತುಳಸಿ ಆಯುರ್ವೇದ ಹಾಗೂ ನಾಟಿ ವೈದ್ಯದಲ್ಲಿ ಔಷಧವಾಗಿ ಬಳಸಲಾಗುತ್ತದೆ. ನಾಯಿ ತುಳಸಿ ಹೊಲಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಇದರ ಬಳಕೆ ಬಗ್ಗೆ ಮಾಹಿತಿ ಇಲ್ಲ
ಬಿಳಿ ತುಳಸಿ, ಕೃಷ್ಣ ತುಳಸಿಯ ಎಲೆಯನ್ನು ನಿಯಮಿತವಾಗಿ ಸೇವಿಸಿದರೆ ಶೀತ ಸಂಬಂಧಿಸಿದ ಸಮಸ್ಯೆ ದೂರವಾಗುತ್ತವೆ. ಜ್ವರ ಮತ್ತು ಶೀತದ ನಿರೋಧಕ ಶಕ್ತಿ ಶರೀರದಲ್ಲಿ ಹೆಚ್ಚಾಗುತ್ತದೆ ಎಂಬ ಮಾಹಿತಿ ಇದೆ.
ಇನ್ನೂ ‘ವನತುಳಸಿ’ಯು ಕಫ, ಶೀತ ಹಾಗೂ ಕೆಮ್ಮು ಪೂರ್ಣವಾಗಿ ನಿಯಂತ್ರಿಸುವ ಗುಣ ಹೊಂದಿದೆ. ನಿತ್ಯ ಬೆಳಗಿನ ವೇಳೆಯಲ್ಲಿ ಒಂದೆರಡು ಎಲೆ ತಿನ್ನುತ್ತಾ ಬಂದರೆ ಗುಣವಾಗುತ್ತವೆ. ಆಗಾಗ್ಗೆ ಸೇವಿಸುತ್ತಾ ಬಂದರೆ ಶೀತ, ಕೆಮ್ಮು ಸುಳಿಯುವುದೇ ಇಲ್ಲ ಎನ್ನುತ್ತಾರೆ ಅನುಭವವುಳ್ಳವರು.
ಕೆಮ್ಮು, ಕಫ ಇದ್ದಾಗ ಕನಿಷ್ಠ ಒಂದು ವಾರ ಸೇವನೆ ಮಾಡುವುದು ಸೂಕ್ತ. ಇದು ದೀರ್ಘಕಾಲದವರೆಗೆ ರೋಗ ನಿರೋಧಕ ಶಕ್ತಿ ವೃದ್ಧಿಸಲಿದೆ. ಇದರ ಜತೆಗೆ ದೊಡ್ಡ ಪತ್ರೆ ಸೇವನೆ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಿರಲಿದೆ. ಹೀಗಾಗಿಯೇ ಕೆಮ್ಮು, ಕಫಕ್ಕೆ’ ವನತುಳಿಸಿ’ ರಾಮಬಾಣ ಎನ್ನುವುದು.
ಈ ಮಾಹಿತಿಯು ಅಂತರ್ಜಾಲದಲ್ಲಿ ದೊರೆಯುವ ಮಾಹಿತಿ ಆಧಾರವಾಗಿದೆ. ಸ್ವಯಂ ವೈದ್ಯರಾಗುವ ಬದಲು ಕಾಲಕಾಲಕ್ಕೆ ವೈದ್ಯರ ಸಲಹೆ ಪಡೆಯುವುದು ಅಗತ್ಯ.