ವರದಿ ವೈಜ್ಞಾನಿಕವಲ್ಲ ಎಂದು ನಿಮ್ಮವರೇ ಸಭೆಗಳನ್ನು ಮಾಡಿದ್ದಾರೆ
ಬೆಂಗಳೂರು: ಕಾಂತರಾಜ್ ವರದಿಯನ್ನು ತಾಕತ್ತಿದ್ದರೆ ಸ್ವೀಕರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂತರಾಜ್ ವರದಿ ಅತ್ಯುತ್ತಮವಾಗಿದ್ದರೆ ಸ್ವೀಕರಿಸಿ, ನಿಮ್ಮವರೇ ವರದಿ ವೈಜ್ಞಾನಿಕವಾಗಿಲ್ಲ ಎಂದು ಸಭೆಗಳನ್ನು ಮಾಡಿದ್ದಾರೆ. ಇಂತಹ ವರದಿಯನ್ನು ಸ್ವೀಕರಿಸಿ ಅನುಷ್ಟಾನ ಮಾಡಲು ನಿಮ್ಮಿಂದ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಮುಂದೆ ಪಾಪದ ಫಲ ಅನುಭವಿಸುತ್ತೀರಿ
ನಾಡಿನ ಜನರಿಗೆ ಅದರಲ್ಲೂ ಬಡ ವರ್ಗದ ಎಲ್ಲರಿಗೂ ಅನುಕೂಲವಾಗುವುದಾದರೆ ಜಾರಿಗೆ ತನ್ನಿ, ಅದನ್ನು ಬಿಟ್ಟು ನಿಮ್ಮ ದೃಷ್ಟಿಕೋನದಡಿ ಅನುಷ್ಟಾನಗೊಳಿಸಲು ಹೊರಟರೆ ಮುಂದೆ ಅದರ ಪಾಪದ ಫಲ ಅನುಭವಿಸುತ್ತೀರಿ ಎಂದು ಎಚ್ಚರಿಸಿದ್ದಾರೆ.
ನಾನು ಅಧಿಕಾರದಲ್ಲಿದ್ದಾಗ ಆ ವರದಿ ಸ್ವೀಕರಿಸಿಲ್ಲ ಎಂದು ಆರೋಪಿಸುವ ನೀವು, ಅಧಿಕಾರಕ್ಕೆ ಬಂದು ವರ್ಷವಾಗುತ್ತಿದ್ದರೂ ಇನ್ನು ಏಕೆ ತಾವು ವರದಿ ಸ್ವೀಕರಿಸಿಲ್ಲ ಎಂದು ಪ್ರಶ್ನಿಸಿದರು.
ಆಯೋಗದ ಸದಸ್ಯ ಕಾರ್ಯದರ್ಶಿ ಸಹಿ ಹಾಕದ ವರದಿಯನ್ನು ಸ್ವೀಕರಿಸಬಹುದೇ ಎಂದು ಪ್ರಶ್ನಿಸಿದ ಅವರು, ಎಲ್ಲ ಸಮುದಾಯದ ಬಡ ಕುಟುಂಬಗಳಿಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ನೆರವಾಗುವುದಾದರೆ ನಮ್ಮ ಪಕ್ಷ ಎಲ್ಲ ರೀತಿಯ ಸಹಕಾರ ಕೊಡಲಿದೆ. ಪ್ರಾಮಾಣಿಕವಾಗಿ ಅನುಷ್ಠಾನ ಮಾಡುವುದಾದರೆ ಷರತ್ತು ರಹಿತ ಬೆಂಬಲ ಕೊಡುತ್ತೇವೆ. ಇದು ನೀವು (ಮುಖ್ಯಮಂತ್ರಿ) ಬರೆಸಿರುವ ವರದಿ ಎಂದು ಆರೋಪಿಸಿದರು.
ಅನ್ಯಾಯವನ್ನು ಏಕೆ ಸರಿಪಡಿಸಲಿಲ್ಲ
ಶೋಷಿತ ವರ್ಗಗಳ ಅನ್ಯಾಯದ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು ರಾಜಕೀಯಕ್ಕೆ ಬಂದು 35 ವರ್ಷಕ್ಕೂ ಹೆಚ್ಚಾಗಿದೆ. ಅಂದಿನಿಂದ ಇಂದಿನವರೆಗೂ ಏಕೆ ಆಗಿರುವ ಅನ್ಯಾಯವನ್ನು ಅವರು ಸರಿಪಡಿಸಲಿಲ್ಲ ಎಂದು ಪ್ರಶ್ನಿಸಿದರು.
ಶೋಷಿತರ ಜಾಗೃತಿ ಸಮಾವೇಶ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈವರೆಗೆ ಮೀಸಲು ಸೌಲಭ್ಯವನ್ನು ಯಾರೆಲ್ಲಾ ಪಡೆದುಕೊಂಡಿದ್ದಾರೆ ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಒಬ್ಬ ಕುರಿ ಕಾಯುವವನ ಮಗ ಮುಖ್ಯಮಂತ್ರಿ ಆದ ಅಂತಾ ನನ್ನ ಮೇಲೆ ವಿಷ ಕಾರ್ತಾರೆ ಅಂತ ಅಳಲು ತೋಡಿಕೊಂಡಿದ್ದಾರೆ, ಕುರಿ ಕಾಯುವ ಮಗನನ್ನೇ ಅಂದು ದೇವೇಗೌಡರು ಆರ್ಥಿಕ ಸಚಿವರನ್ನಾಗಿ ಮಾಡಿದ್ದರು, ನಿಮ್ಮ ಇಷ್ಟು ವರ್ಷದ ರಾಜಕೀಯದಲ್ಲಿ ಎಷ್ಟು ಸಲ ಸಚಿವರಾಗಿದ್ದಿರಿ, ಮುಖ್ಯಮಂತ್ರಿ ಆಗಿದ್ದೀರಿ, ಉಪಮುಖ್ಯಮಂತ್ರಿ ಆಗಿದ್ದೀರಿ, ಜಾತಿವ್ಯವಸ್ಥೆ, ಶೋಷಣೆ ಅಂತ್ಯ ಮಾಡಲು ಅವಕಾಶ ಇತ್ತು, ಯಾಕೆ ಮಾಡಲಿಲ್ಲ ಎಂದು ಅವರು ಸಿದ್ದರಾಮಯ್ಯ ಅವರನ್ನು ಖಾರವಾಗಿ ಪ್ರಶ್ನಿಸಿದರು.
ಸಮಾಜ ಒಡೆಯುವ ರಾಜಕಾರಣ ನಿಲ್ಲಿಸಿ
ಸಮಾಜವನ್ನು ಒಡೆಯುವ ರಾಜಕಾರಣ ನಿಲ್ಲಿಸಿ, ಎಷ್ಟು ದಿನ ಅಧಿಕಾರದಲ್ಲಿ ಇರ್ತೀರಾ, ಕದ್ದುಮುಚ್ಚಿ ನಿಮ್ಮ ಹಾಗೆ ರಾಜಕೀಯ ಮಾಡೋನಲ್ಲ ನಾನು, ನೇರವಾಗಿಯೇ ನಾನು ಬಿಜೆಪಿ ಜೊತೆ ಕೈ ಜೋಡಿಸಿದ್ದೇನೆ. ನಿಮ್ಮ ಹಾಗೆ ಹೊಂದಾಣಿಕೆ ರಾಜಕಾರಣ ಮಾಡಲ್ಲ, ಜನಪರ ತೀರ್ಮಾನಗಳು ಇದ್ದರೆ ನಾವು ಕೂಡ ಬೆಂಬಲ ಕೊಡುತ್ತೇವೆ, ಕಮೀಷನ್ ಹೊಡೆಯುವುದನ್ನು ನಿಲ್ಲಿಸಿ, ಕೆಲಸ ಮಾಡಿ ಎಂದು ಸಿದ್ದರಾಮಯ್ಯ ಮೇಲೆ ಹರಿಹಾಯ್ದರು.
ನಾನು ಬೆಂಕಿ ಹಚ್ಚಲು ಮಂಡ್ಯಕ್ಕೆ ಹೋಗಿರಲಿಲ್ಲ, ಬೆಂಕಿ ಹಚ್ಚಿದ್ದು ನೀವು ಎಂದು ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರಕ್ಕೆ ಇದೇ ಸಂದರ್ಭದಲ್ಲಿ ತಿರುಗೇಟು ನೀಡಿದರು. ಕೆರಗೋಡು ಘಟನೆಗೂ, ನನಗೂ ಸಂಬಂಧವಿಲ್ಲ. ಕೆರಗೋಡು ಘಟನೆಗೆ ಸರ್ಕಾರದ ನಡವಳಿಕೆಗಳೇ ಕಾರಣ ಎಂದು ವಾಗ್ದಾಳಿ ನಡೆಸಿದರು.
ಕೆರಗೋಡು ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ನನಗೆ ಆಹ್ವಾನ ನೀಡಲಾಗಿತ್ತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ.
ಕುಮಾರಸ್ವಾಮಿ ಕೇಸರಿ ಶಾಲು ಹಾಕಿಕೊಂಡು ಜೆಡಿಎಸ್ ಕಾರ್ಯಕರ್ತರ ಶಕ್ತಿ ಕೊನೆಗೊಳಿಸಲು ಹೊರಟ್ಟಿದ್ದಾರೆ ಎಂದು ಪಾಪ ಹಳೆಯ ಸ್ನೇಹಿತರು (ಸಚಿವ ಚಲುವರಾಯಸ್ವಾಮಿ) ಹೇಳಿದ್ದಾರೆ, ನಾನು ಕೇಸರಿ ಶಾಲು ಹಾಕಿಕೊಂಡಿದ್ದು ಮಹಾ ಅಪರಾಧನಾ, ಕಾಂಗ್ರೆಸ್ನವರಿಗೆ ಕೇಸರಿ ಮೇಲೆ ಯಾಕೆ ಇಷ್ಟೊಂದು ಸಂಕುಚಿತ ಮನೋಭಾವ, ಮಂಡ್ಯ ಉಸ್ತುವಾರಿ ಸಚಿವರಿಂದ ನಾನು ನನ್ನ ಪಕ್ಷವನ್ನು ಹೇಗೆ ಉಳಿಸಿಕೊಳ್ಳಬೇಕೆಂಬುದನ್ನು ಕಲಿಯಬೇಕಿಲ್ಲ, ನನಗೆ ಜನ ಕೊಟ್ಟಿರುವ ಪ್ರೀತಿ ಇದೆ ಎಂದು ಹೇಳಿದರು.
ದಲಿತ ಸಮಾವೇಶದಲ್ಲಿ ಜೈಭೀಮ್ನ ನೀಲಿ ಶಾಲನ್ನು ನಾನು ಹಾಕಿಕೊಂಡಿದ್ದೆ, ಅದು ಕಾಂಗ್ರೆಸ್ ನಾಯಕರಿಗೆ ಕಾಣಿಸಲಿಲ್ಲವೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ತ್ರಿವರ್ಣ ಧ್ವಜದಲ್ಲೂ ಕೇಸರಿ ಬಣ್ಣವಿದೆ ಎಂದರು.

1 comment
[…] ರಾಜಕೀಯ […]