ಬೇಸಿಗೆಯ ನಿರ್ಜಲೀಕರಣ ನಿವಾರಣಗೂ ಸಹಕಾರಿ
ಬಿಸಿಲಿನ ಬೇಗೆ ಅಧಿಕವಾದಂತೆ ದೇಹದಲ್ಲಿ ನಿರ್ಜಲೀಕರಣವೂ ಹೆಚ್ಚಾಗುವುದು. ನಿರ್ಜಲೀಕರಣದಿಂದ ಚರ್ಮಬಾಧೆ, ಚರ್ಮದ ಹೊಳಪು ಕಳೆದುಕೊಳ್ಳುವಿಕೆ. ಸೋರಿಯಾಸಿಸ್ ನಂತಹ ಸಮಸ್ಯೆಗಳು, ಸನ್ ಟ್ಯಾನ್(ಬಂಗು)ನಂತಹ ತೊಂದರೆಗಳು ಉಲ್ಬಣಗೊಳ್ಳುವುದಲ್ಲದೆ, ಕಣ್ಣಿನಲ್ಲಿನ ತೇವಾಂಶ ಕಡಿಮೆಯಾಗಿ ಮುಖದ ಕಾಂತಿ ಕುಂದುತ್ತದೆ. ದೇಹದಲ್ಲಿ ಉಷ್ಣತೆ ಅಧಿಕವಾಗಿ ತಲೆಯ ಕೂದಲು ಉದುರುವಿಕೆಯೂ ಹೆಚ್ಚಾಗಿ ಬೊಕ್ಕತಲೆಯಾಗಿ ಕಾಣಿಸಿಕೊಳ್ಳುತ್ತದೆ.
ಎಷ್ಟೇ ನೀರು ಕುಡಿದರೂ, ಹಣ್ಣುಗಳನ್ನು ಸೇವಿಸಿದರೂ ದೇಹದಲ್ಲಿನ ನೀರಿನ ಸಮತೋಲನ ಸರಿದೂಗಿಸಲು ಸಾಧ್ಯವಾಗದೇ ಹೋಗಬಹುದು. ಇದರಿಂದ ಉರಿಮೂತ್ರದಂತಹ ಸಮಸ್ಯೆಗಳು ಅಧಿಕವಾಗಿ ಪಚನ ಕ್ರಿಯೆಗೂ ಕೂಡ ತೊಂದರೆ ಉಂಟಾಗಬಹುದು. ಮಾನವನ ದೇಹವು ಶೇ.70ರಷ್ಟು ನೀರಿನ ಅಂಶದಿಂದಲೇ ಕೂಡಿರುವಂತದ್ದು.
ನಿರ್ಜಲೀಕರಣಕ್ಕೆ ಒಳಗಾದಂಥವರು ವರುಣ ಮುದ್ರೆ ಮಾಡುವುದರಿಂದ ದೇಹದಲ್ಲಿ ನೀರಿನ ಅಂಶವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ವರುಣ ಮುದ್ರೆಯನ್ನು ‘ ಜಲವರ್ಧಕ ಮುದ್ರಾ’ ಎಂದು ಸಂಸ್ಕೃತದಲ್ಲಿ ಕರೆಯಲಾಗುತ್ತದೆ. ವರುಣ ಮುದ್ರೆ ಮಾಡುವುದರಿಂದ ಗೊಂದಲಗಳು ದೂರವಾಗಿ ಮಾನಸಿಕ ನೆಮ್ಮದಿ ಮತ್ತು ಶಾಂತತೆ ದೊರೆಯಲಿದೆ. ದೇಹದಲ್ಲಿ ಅಧಿಕವಾಗಿರುವ ಕೊಲೆಸ್ಟ್ರಾಲ್ ಕಡಿಮೆ ಮಾಡಲು ವರುಣ ಮುದ್ರೆ ಸಹಕಾರಿಯಾಗಲಿದೆ. ಹೊಟ್ಟೆಯಲ್ಲಿ ಕಂಡುಬರುವ ಹುಣ್ಣುಗಳ ಶಮನಕ್ಕಾಗಿ ವರುಣ ಮುದ್ರೆ ಪ್ರಯೋಜನಕಾರಿಯಾದದ್ದು. ದೇಹದಿಂದ ವಿಷಕಾರಿ ತ್ಯಾಜ್ಯವನ್ನು ಹೊರ ಹಾಕಲು ಈ ಮುದ್ರೆಯನ್ನು ಹಾಕಬಹುದು.
ಮುಖದಲ್ಲಿನ ಮೊಡವೆ ಕಡಿಮೆಯಾಗುವುದು; ಚರ್ಮದ ಕಾಂತಿ ಹೆಚ್ಚಲಿದೆ
ರಕ್ತದ ಶುದ್ಧೀಕರಣಕ್ಕೆ ವರುಣ ಮುದ್ರೆ ಪ್ರಯೋಜನಕಾರಿಯಾಗಿದೆ. ಸ್ನಾಯುಗಳಲ್ಲಿರುವ ನೀರಿನ ಅಂಶವನ್ನು ಸಮತೋಲನಗೊಳಿಸಿ ಕೀಲುಗಳನ್ನು ನಯಗೊಳಿಸುವುದಲ್ಲದೆ, ಸಂಧಿವಾತದಂತಹ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುತ್ತದೆ. ಕಣ್ಣಿನಲ್ಲಿನ ತೇವಾಂಶವನ್ನು ಹೆಚ್ಚಿಸಿ, ಶುಷ್ಕತೆಯನ್ನು ಕಡಿಮೆ ಮಾಡಿ ದೃಷ್ಟಿ ಮಂದವಾಗಿರುವುದನ್ನು ಕ್ರಮೇಣವಾಗಿ ಸರಿಪಡಿಸುತ್ತದೆ. ಒಣ ಕಣ್ಣುಗಳು ಮತ್ತೆ ತ್ವಚೆಯುಕ್ತ ಹೊಳಪಿನ ಕಣ್ಣುಗಳಾಗಿ ಕಂಗೊಳಿಸುತ್ತವೆ. ಸತ್ತ ಚರ್ಮದ ಕೋಶವನ್ನು ಮರು ಸೃಷ್ಟಿಸುವುದಲ್ಲದೆ, ಚರ್ಮದಲ್ಲಿ ದೀರ್ಘ ಕಾಲದವರೆಗೂ ತೇವಾಂಶವನ್ನುಕಾಪಾಡಲಿದೆ. ಚರ್ಮದ ಸುಕ್ಕುಗಳು ದೂರವಾಗುವುದಲ್ಲದೆ, ಮುಖದಲ್ಲಿನ ಮೊಡವೆ ಕ್ರಮೇಣವಾಗಿ ಕಡಿಮೆಯಾಗುವುದು.
ಚರ್ಮದ ಮೇಲೆ ಅಲ್ಲಲ್ಲಿ ಕಂಡುಬರುವ ಕೆಂಪು ಅಥವಾ ನೇರಳೆ ಕಲೆಗಳನ್ನು ತೊಡೆದುಹಾಕುವುದು. ಕ್ಯಾನ್ಸರ್ ರೋಗಿಗಳು ಕಿಮೋ ಥೆರಪಿ ಪಡೆದ ನಂತರ ನಾಲಿಗೆಯ ರುಚಿ ಕಳೆದುಕೊಳ್ಳುವ ಸಾಧ್ಯತೆ ಇದೆ. ನಿಯಮಿತವಾದ ವರುಣ ಮುದ್ರೆಯ ಅಭ್ಯಾಸದಿಂದ ರುಚಿಯ ಪ್ರಜ್ಞೆಯು ಜಾಗೃತವಾಗುವುದು. ಲಾಲಾರಸದ ಉತ್ಪಾದನೆಯಲ್ಲಿ ಸುಧಾರಣೆ ಕಂಡುಬರಲಿದೆ. ಬಾಯಿ ಒಣಗುವಿಕೆಯೂ ಕಡಿಮೆಯಾಗಲಿದೆ.
ಮೂಲಾಧಾರ ಚಕ್ರ ಮತ್ತು ಸ್ವಾಧೀಷ್ಟಾನ್ನ ಚಕ್ರವನ್ನು ವರುಣ ಮುದ್ರೆಯೂ ಜಾಗೃತಗೊಳಿಸುವುದು. ನೀವು ವಾತ ವ್ಯಕ್ತಿತ್ವದಿಂದ ಕೂಡಿದ್ದರೆ, ಈ ಮುದ್ರೆ ಅಭ್ಯಾಸದಿಂದ ವಾತದ ಸಮಸ್ಯೆಗಳು ನಿರಾಣೆಯಾಗಲಿವೆ. ದೇಹದಲ್ಲಿನ ರಕ್ತದ ಪರಿಚಲನೆಯನ್ನು ಸರಾಗೊಳಿಸುವುದಲ್ಲದೆ, ಅಂಗಾಂಗಗಳಿಗೆ ರಕ್ತ ಪರಿಚಲನೆ ಸರಿಯಾಗಿ ಆಗುವುದರಿಂದ ರಕ್ತ ಹೀನತೆ ಕಡಿಮೆಯಾಗುತ್ತದೆ. ಮಹಿಳೆಯರು ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ಎದುರಿಸುವ ಅನೇಕ ಸಮಸ್ಯೆಗಳಿಗೂ ಇದು ಪರಿಹಾರ ಒದಗಿಸುತ್ತದೆ.
ಸಂಧಿವಾತದಂತಹ ಸಮಸ್ಯೆಗಳಿಗೆ ಪರಿಹಾರ
ಹಾರ್ಮೋನಿನ ಅಸಮತೋಲನವನ್ನು ಸರಿಪಡಿಸುವ ಮೂಲಕ ದೇಹದ ತೂಕವನ್ನುಸರಿ ಹೊಂದಿಸುತ್ತದೆ. ವಯಸ್ಸಾದವರಲ್ಲಿ ಸರ್ವೇ ಸಾಮಾನ್ಯವಾಗಿ ಕಾಡುವ ಸಂಧಿವಾತದಂತಹ ಸಮಸ್ಯೆಗಳಿಗೆ ವರುಣ ಮುದ್ರೆಯು ಕೀಲುಗಳನ್ನು ನಯಗೊಳಿಸಿ ರೋಗ ಲಕ್ಷಣಗಳನ್ನು ದೂರ ಮಾಡುವುದು. ಚೀನಿಯರ ವೈದ್ಯ ಚಿಕಿತ್ಸೆ ಪ್ರಕಾರ, ಮೂತ್ರ ಕೋಶ ಮತ್ತು ಕಿಡ್ನಿ ಸಮಸ್ಯೆಗಳನ್ನು ಕಡಿಮೆಗೊಳಿಸುತ್ತದೆ ಎನ್ನಲಾಗಿದೆ.
ದೇಹದಲ್ಲಿನ ನಿಶ್ಶಕ್ತಿ ನಿವಾರಿಸುವುದಲ್ಲದೆ, ಆಯಾಸ, ಬಿಗಿತ, ಸೋಮಾರಿತನದ ಸಮಸ್ಯೆಗಳನ್ನು ಹೋಗಲಾಡಿಸುವುದು. ಇತ್ತೀಚಿಗೆ ಗಂಡಸರಲ್ಲಿ ಹೆಚ್ಚಾಗುತ್ತಿರುವ ನಿರ್ವೀರ್ಯ ಸಮಸ್ಯೆಗೂ ಪರಿಹಾರವಾಗಿದ್ದು, ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಂಮೋಹನ ಕೌಶಲ್ಯವನ್ನು ಬಲಪಡಿಸುವುದಲ್ಲದೆ, ಭಾವನಾತ್ಮಕ ಸಮತೋಲನವನ್ನು ಸರಿದೂಗಿಸುತ್ತದೆ. ಕೋಪ ಮತ್ತು ಭಯವನ್ನು ಕಡಿಮೆ ಮಾಡುವುದು. ಒಟ್ಟಿನಲ್ಲಿ ಮನುಷ್ಯನೊಬ್ಬ ವರುಣ ಮುದ್ರೆ ಹಾಕುವುದರಿಂದ ಸೃಜನಾತ್ಮಕವಾಗಿ, ಮನೋರಂಜನಾತ್ಮಕವಾಗಿ ಇರಲು ಸಹಾಯವಾಗುವುದು.
ವರುಣ ಮುದ್ರೆ ಮಾಡುವ ಕ್ರಮಗಳು:
ವರುಣ ಮುದ್ರೆಯನ್ನು ಮಾಡಲು ಮೊದಲು ನಿಮ್ಮ ಬೆರಳುಗಳನ್ನು ನೇರವಾಗಿರಿಸಿ, ನಂತರ ಹೆಬ್ಬೆರಳಿನ ತುದಿಯು ಕಿರು ಬೆರಳಿನ ತುದಿಯನ್ನು ಸ್ಪರ್ಶಿಸುವ ರೀತಿಯಲ್ಲಿ ನಿಮ್ಮ ಕಿರು ಬೆರಳನ್ನು ಬಗ್ಗಿಸಬೇಕು. ಕಿರು ಬೆರಳು ಜಲತತ್ವವಾಗಿದ್ದು, ಹೆಬ್ಬೆರಳು ಅಗ್ನಿತತ್ವವನ್ನು ಸೂಚಿಸಲಿದೆ. ಈ ಮೂಲಕ ದೇಹದಲ್ಲಿ ಜಲತತ್ವ ಸಮತೋಲನಗೊಳ್ಳಲಿದೆ. ಉಳಿದ ಮೂರು ಬೆರಳುಗಳು ನೇರವಾಗಿರಬೇಕು ಹಾಗೂ ಮುದ್ರೆಯು ಆಕಾಶ ನೋಡುತ್ತಿರಬೇಕು. ಮುದ್ರೆಯನ್ನು ಏಕಕಾಲದಲ್ಲಿ ಎರಡೂ ಕೈಗಳಿಂದ ಮಾಡಬೇಕು.
ವರುಣ ಮುದ್ರೆಯು ನೀರಿನ ಮಟ್ಟವನ್ನು ಸಮತೋಲನಗೊಳಿಸುವುದರಿಂದ ದಿನದ ಯಾವುದೇ ಸಮಯದಲ್ಲಿ ಈ ಮುದ್ರೆಯನ್ನು ಹಾಕಬಹುದು. ವಿಶೇಷವಾಗಿ ದೇಹವೂ ನಿರ್ಜಲೀಕರಣಗೊಂಡಾಗ ಬಿಸಿಲಿನ ದಿನಗಳಲ್ಲಿ ದೇಹಕ್ಕೆ ಪೋಷಣೆ ನೀಡಲು ಅಥವಾ ತಂಪಾಗಿಸಲು ಈ ಮುದ್ರೆ ಅಭ್ಯಾಸ ಮಾಡಬಹುದು. ದಿನಕ್ಕೆ ಕನಿಷ್ಠ ಪಕ್ಷ 20 ರಿಂದ 40 ನಿಮಿಷಗಳ ಕಾಲ ಅಭ್ಯಾಸ ಮಾಡಬೇಕು.
ಸುಖಾಸನದ ಭಂಗಿಯಲ್ಲಿ, ಪದ್ಮಾಸನ, ವಜ್ರಾಸನ, ಧ್ಯಾನ ಸ್ಥಿತಿ ಸೇರಿದಂತೆ ಯಾವುದೇ ಭಂಗಿಯಲ್ಲಿ ಕುಳಿತು ವರುಣ ಮುದ್ರೆಯನ್ನು ಮಾಡಬಹುದು. ಆದರೆ, ಮುದ್ರೆಗೆ ಕುಳಿತುಕೊಂಡ ಸಂದರ್ಭದಲ್ಲಿ ಬೆನ್ನು ಮತ್ತು ತಲೆಯನ್ನು ನೇರವಾಗಿರಿಸಬೇಕು. ಕುರ್ಚಿಯಲ್ಲಿ ಕುಳಿತ ಸಂದರ್ಭದಲ್ಲಿ ಮಲಗಿರುವಾಗ, ಪ್ರಯಾಣ ಮಾಡುವಾಗ ಈ ಮುದ್ರೆಯನ್ನು ಮಾಡಬಹುದು. ಮುದ್ರೆ ಅವಧಿ ಮುಗಿದ ನಂತರ ನಿಧಾನವಾಗಿ ಬೆರಳುಗಳನ್ನು ಬೇರ್ಪಡಿಸಿ ಒಂದೆರಡು ನಿಮಿಷಗಳ ಕಾಲ ಸುತ್ತಲಿನ ಪರಿಸರದ ಬಗ್ಗೆ ತಿಳಿದುಕೊಂಡು ನಂತರ ಆ ಸ್ಥಳದಿಂದ ತೆರಳವುದು ಸೂಕ್ತ.
ವರುಣ ಮುದ್ರೆಯ ಅಡ್ಡ ಪರಿಣಾಮಗಳು
ವರುಣ ಮುದ್ರೆಯನ್ನು ದೇಹದಲ್ಲಿ ಊತ, ಉಬ್ಬಸ ಅಥವಾ ದಡೂತಿ ದೇಹದಂತಹ ಸಮಸ್ಯೆಗಳನ್ನು ಹೊಂದಿದ್ದರೆ ಅಭ್ಯಾಸ ಮಾಡಬಾರದು. ಇಂತಹ ಸಂದರ್ಭದಲ್ಲಿ ವರುಣ ಮುದ್ರೆ ಅಭ್ಯಾಸ ಮಾಡುವುದರಿಂದ ಅಡ್ಡ ಪರಿಣಾಮಗಳು ಕಂಡುಬರುತ್ತವೆ. ಕೆಮ್ಮು ಮತ್ತು ಶೀತ ಸಂಬಂಧಿ ಲಕ್ಷಣಗಳಿದ್ದರೆ, ವರುಣ ಮುದ್ರೆ ಅಭ್ಯಾಸ ನಿಲ್ಲಿಸಿ. ಆ ಸಂದರ್ಭದಲ್ಲಿ ವರುಣ ಮುದ್ರೆಯನ್ನು ಮಾಡುವುದರಿಂದ ಮತ್ತಷ್ಟು ಸಮಸ್ಯೆ ಉಂಟಾಗಬಹುದು. ಪಿತ್ತ ಮತ್ತು ಕಫ ದೋಷವಿರುವರು ವರುಣ ಮುದ್ರೆಯನ್ನು ಮಾಡದಿರುವುದು ಒಳ್ಳೆಯದು. ಆದರೆ, ವಾತ ದೋಷ ಇರುವವರು ಈ ಮುದ್ರೆ ಮಾಡುವುದರಿಂದ ಪ್ರಯೋಜನವಾಗುವುದು. ಮುದ್ರೆ ಮಾಡುವ ಸಂದರ್ಭದಲ್ಲಿ ಉಸಿರಾಟದ ಕಡೆಗೆ ಗಮನವಿದ್ದು, ಮನಸ್ಸು ಶಾಂತ ಚಿತ್ತದಿಂದ ಕೂಡಿರಬೇಕು.
ಕೇವಲ ಐದು ನಿಮಿಷಗಳ ಕಾಲ ವರುಣ ಮುದ್ರೆ ಅಭ್ಯಾಸ ಮಾಡುವುದರಿಂದ ಯಾವ ಪ್ರಯೋಜನವೂ ದೊರೆಯುವುದಿಲ್ಲ. ಕನಿಷ್ಠ ಪಕ್ಷ 20 ನಿಮಿಷವಾದರೂ ಈ ಮುದ್ರೆ ಮಾಡಿದರೆ ಮಾತ್ರ ಪ್ರಯೋಜನ ಸಿಗಲಿದೆ. ಈ ಮುದ್ರೆಯನ್ನು ಸೌಂದರ್ಯ ಮುದ್ರೆ ಎಂದರೂ ತಪ್ಪಾಗಲಾರದು. ಏಕೆಂದರೆ ಮುಖದ ಮತ್ತು ಚರ್ಮದ ಕಾಂತಿಯನ್ನು ಒಳಗಿನಿಂದಲೇ ಆಕರ್ಷಣೀಯವಾಗಿ ಮಾಡುವುದು. ಹಾಗಾಗಿ ಎಲ್ಲರೂ ಎಲ್ಲಾ ಕಾಲದಲ್ಲೂ ಈ ಮುದ್ರೆಯನ್ನು ಮಾಡಬಹುದು. ಆದರೆ, ಅತಿಯಾಗಿ ಮಾಡುವುದರಿಂದ ಅಡ್ಡಪರಿಣಾಮದ ಸಮಸ್ಯೆ ಎದುರಾಗಬಹುದು. ಫಲಿತಾಂಶ ದೊರೆತ ನಂತರ ಮುದ್ರೆ ಮಾಡದಿರುವುದು ಉತ್ತಮ.