ವಾಯು ದೋಷ ಅತ್ಯಂತ ಹಾನಿಕಾರಕ
ಯೋಗ ವಿಜ್ಞಾನದಲ್ಲಿ ನಮ್ಮ ದೇಹವು ಗಾಳಿ, ಭೂಮಿ, ಆಕಾಶ, ನೀರು, ಅಗ್ನಿ ಎಂಬ ಪಂಚಭೂತಗಳ ಅಂಶದಿಂದ ರೂಪಿಸಲ್ಪಟ್ಟಿದೆ ಎಂದು ತಿಳಿಸುತ್ತದೆ. ಈ ಪಂಚಭೂತಗಳಲ್ಲಿನ ಒಂದು ಅಂಶವು ದೇಹದ ಒಳಗಡೆ ಅಸಮತೋಲನವಾದಾಗಲೇ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಎಲ್ಲಾ ದೋಷಗಳಲ್ಲಿ ವಾಯು ದೋಷ ಅತ್ಯಂತ ಹಾನಿಕಾರಕವಾದದ್ದು. ಪ್ರಾಚೀನ ಭಾರತದ ಆಯುರ್ವೇದದ ಪ್ರಕಾರ ವಾತದೋಷವನ್ನು ದೋಷಗಳ ರಾಜನೆಂದು ಕರೆಯಲಾಗುತ್ತದೆ. ವಾಯುವು ದೇಹದಲ್ಲಿನ ಜಠರ, ಕರುಳಿನ ಮೇಲೆ ತನ್ನ ಕಾರ್ಯವನ್ನು ನಿಯಂತ್ರಿಸುತ್ತದೆ. ಗ್ಯಾಸ್ಟಿಕ್ ನಂತಹ ಸಮಸ್ಯೆಗಳು ವಾಯು ದೋಷದಿಂದಲೇ ಕಾಣಿಸಿಕೊಳ್ಳುವುದು.
ಈ ದೋಷ ಪರಿಹಾರಕ್ಕೆ ವಾಯು ಮುದ್ರೆ ರಾಮಬಾಣದಂತೆ ಕಾರ್ಯ ನಿರ್ವಹಿಸುತ್ತದೆ. ವಾಯು ಮುದ್ರೆಯನ್ನು ಗಾಳಿ ಮುದ್ರೆ ಎಂದು ಕರೆಯಲಾಗುತ್ತದೆ. ದೇಹದಲ್ಲಿರುವ ವಾಯುವಿನ ಅಂಶವನ್ನು ಸಮತೋಲನಕ್ಕೆ ತಂದು ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗಿದೆ. ಈ ಮುದ್ರೆಯನ್ನು ಹಾಕುವುದರಿಂದ 150ಕ್ಕೂ ಹೆಚ್ಚಿನ ರೋಗಗಳು ದೇಹದಿಂದ ದೂರವಾಗುತ್ತವೆ. ಆರ್ಥರೈಟೀಸ್, ಪಾರ್ಕಿನ್ಸನ್, ಸರ್ವಿಕಲ್ ಸ್ಪಾಂಡಲೈಟೀಸ್, ಗ್ಯಾಸ್ಟ್ರಿಕ್ ಸಮಸ್ಯೆ, ಅಧಿಕ ರಕ್ತದೊತ್ತಡ, ಹೊಟ್ಟೆ ಉಬ್ಬರಿಸುವಿಕೆ, ಸೊಂಟನೋವು, ಬೆನ್ನು ನೋವು, ವಾತ, ಮೊಣಕಾಲು ಮತ್ತು ಕೀಲು ನೋವು ಸಮಸ್ಯೆ, ಪಾರ್ಶವಾಯು, ಅಸ್ತಮಾದಂತಹ ಉಸಿರಾಟ ಸಂಬಂಧಿ ಸಮಸ್ಯೆಗಳಿಗೆ ಪರಿಹಾರವಾಗಿದೆ.
ಉತ್ತಮ ಕೂದಲಿನ ಬೆಳವಣಿಗೆಗೆ ಸಹಕಾರಿ
ಕಿವಿ ಮತ್ತು ಕಣ್ಣಿಗೆ ವಾಯು ಮುದ್ರೆ ಪ್ರಯೋಜನಕಾರಿಯಾಗಿದೆ. ಕಿವಿಗಳ ಕಾರ್ಯನಿರ್ವಹಣೆಯನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ. ಕಣ್ಣುರೆಪ್ಪೆಗಳ ಸೆಳೆತವನ್ನು ಕಡಿಮೆ ಮಾಡುವುದರ ಜೊತೆಗೆ ಕಣ್ಣಿನ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ. ವಾಯು ಮುದ್ರೆ ಹಾಕುವುದರಿಂದ ಶುಷ್ಕಯುತವಾದ ಚರ್ಮ ಸಹಜಸ್ಥಿತಿಗೆ ಮರಳುತ್ತದೆ. ಉಗುರಿನ ಮತ್ತು ಕೂದಲಿನ ದುರ್ಬಲತೆ ಕಡಿಮೆ ಮಾಡುವುದಲ್ಲದೆ, ಉತ್ತಮ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ.
ಹಾರ್ಮೋನಿನ ಅಸಮತೋಲನವನ್ನು ನಿವಾರಿಸಲು ಸಹಾಯ ಮಾಡುತ್ತದೆ. ವಿಫರೀತ ನಡುಕ, ಕೈಕಾಲು ಮತ್ತು ಬೆರಳುಗಳ ಅಲುಗಾಡುವಿಕೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ವಾಯು ಮುದ್ರೆ ಹಾಕುವುದರಿಂದ ಮುಕ್ತಿಯನ್ನು ಕಾಣುತ್ತಾರೆ. ಕೆಲವರಿಗೆ ಮಾನಸಿಕ ಒತ್ತಡಕ್ಕೆ ಒಳಗಾದಂತೆ ಕುತ್ತಿಗೆಯ ಬಿಗಿತದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ದೀರ್ಘಕಾಲದವರೆಗೆ ಕುತ್ತಿಗೆ ಗಟ್ಟಿಯಾಗಿದ್ದು, ಬಿಗಿತ ಸೆಳೆತ ಅಧಿಕವಾಗಿದ್ದರೂ ಸಹ ವಾಯು ಮುದ್ರೆಯಿಂದ ಪ್ರಯೋಜನವನ್ನು ಪಡೆಯಬಹುದಾಗಿದೆ.

ಸಂಧಿವಾತದಂತಹ ಸಮಸ್ಯೆಗಳು ಕಾಣಿಸಿಕೊಂಡಾಗ ಬೆನ್ನು, ಕಾಲಿನ ಹೊರಭಾಗ, ಕೀಲುಗಳಲ್ಲಿ ಶ್ರವಿಸುವ ದ್ರವ, ಉರಿಯೂತ- ಇವೆಲ್ಲದಕ್ಕೂ ವಾತದೋಷವೇ ಕಾರಣವಾಗಿದ್ದು, ವಾಯು ಮುದ್ರೆ ಮಾಡುವುದರಿಂದ ಅತ್ಯುತ್ತಮ ಪ್ರಯೋಜನ ಪಡೆಯಬಹುದು. ಸಣ್ಣ ಸಣ್ಣ ವಿಚಾರಗಳಿಗೂ ಆತಂಕಕ್ಕೆ ಒಳಗಾಗುವವರು ಪ್ರತಿನಿತ್ಯ ವಾಯು ಮುದ್ರೆ ಹಾಕುವುದರಿಂದ ಉತ್ತಮವಾದ ಆರೋಗ್ಯ ಪಡೆಯುತ್ತಾರೆ.
ಮಾನಸಿಕ ಆರೋಗ್ಯಕ್ಕೆ ಉತ್ತಮ
ದೀರ್ಘಕಾಲದ ನಿದ್ರಾಹೀನತೆ, ಅಜ್ಞಾತ ಕಾರಣಗಳಿಂದ ತಲೆ ತಿರುಗುವಿಕೆಯಂತಹ ಸಮಸ್ಯೆಗಳು ಕೂಡ ವಾಯು ಮುದ್ರೆಯಿಂದ ನಿವಾರಿಸಬಹುದು. ಮಾನಸಿಕ ಆರೋಗ್ಯಕ್ಕೆ ಉತ್ತಮ ಪ್ರಯೋಜನಕಾರಿಯಾಗಿದೆ. ವಾಯುಮುದ್ರೆಯ ನಿಯಮಿತ ಅಭ್ಯಾಸದಿಂದ ಹೊಟ್ಟೆಯ ಉಬ್ಬಸ ನಿವಾರಣೆ ಆಗುವುದಲ್ಲದೆ, ಮಲಬದ್ಧತೆಯ ಸಮಸ್ಯೆ ಕೂಡ ದೂರವಾಗುತ್ತದೆ. ಊಟದ ನಂತರ ವಜ್ರಾಸನದಲ್ಲಿ ವಾಯುಮುದ್ರೆಯನ್ನು ಹಾಕುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಹೊಟ್ಟೆಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.
ವಾಯು ಮುದ್ರೆ ಮಾಡುವುದು ಹೇಗೆ?
ಯಾವುದೇ ಭಂಗಿಯಲ್ಲಿ ನಿಮ್ಮನ್ನು ಆರಾಮದಾಯಕವಾಗಿರಿಸಿಕೊಂಡು ಕುಳಿತಿರುವಾಗ, ನಿಂತಿರುವಾಗ, ಪ್ರಾಣಯಾಮ ಮಾಡುವಾಗ, ಅಥವಾ ನಡೆಯುವಾಗಲೂ ಸಹ ವಾಯು ಮುದ್ರೆಯನ್ನು ಮಾಡಬಹುದು. ತೋರು ಬೆರಳಿನ ತುದಿಯನ್ನು ನಿಮ್ಮ ಹೆಬ್ಬೆರಳಿನ ತಳದಲ್ಲಿ ಒತ್ತಿರಿ. ಮತ್ತು ತೋರು ಬೆರಳಿನ ಮೇಲೆ ನಿಮ್ಮ ಹೆಬ್ಬೆರಳನ್ನು ನಿಧಾನವಾಗಿ ಒತ್ತಿರಿ ಇತರ ಬೆರಳುಗಳನ್ನು ನೇರವಾಗಿ ಇರಿಸಿ. ಇದು ಭರತ ನಾಟ್ಯದಲ್ಲಿನ ಹಂಸ ಹಸ್ತವನ್ನು ಹೋಲುತ್ತದೆ. ಧ್ಯಾನ ಮಾಡುವಾಗ ಸಾಮಾನ್ಯವಾಗಿ ಬಳಸುವ ಮುದ್ರೆ ಇದಾಗಿದೆ.
ದಿನಕ್ಕೆ 45 ನಿಮಿಷದಂತೆ ಈ ಮುದ್ರೆಯನ್ನು ಅಭ್ಯಾಸ ಮಾಡಬೇಕು. ಕನಿಷ್ಠಪಕ್ಷ ಹತ್ತರಿಂದ ಇಪ್ಪತ್ತು ನಿಮಿಷ ವಾಯು ಮುದ್ರೆ ಮಾಡುವುದರಿಂದ ದೇಹದಲ್ಲಿನ ವಾಯು ಸಮತೋಲನಗೊಳ್ಳುತ್ತದೆ. ಅತಿಯಾದ ಬಿಕ್ಕಳಿಕೆಯಂತಹ ಸಂದರ್ಭದಲ್ಲಿ ವಾಯುಮುದ್ರೆ ಹಾಕಿದರೆ ಬಿಕ್ಕಳಿಕೆ ಕಡಿಮೆಯಾಗುವುದು.
ದೀರ್ಘ ಕಾಲ ವಾಯು ಮುದ್ರೆ ಅಭ್ಯಾಸ ಮಾಡಬಾರದು
ನೀವು ದೀರ್ಘ ಕಾಲದವರೆಗೆ ವಾಯು ಮುದ್ರೆಯನ್ನು ಅಭ್ಯಾಸ ಮಾಡಬಾರದು. ನೋವು ಅಥವಾ ರೋಗ ಲಕ್ಷಣಗಳು ದೂರವಾದ ನಂತರ ಈ ಮುದ್ರೆ ಮಾಡುವುದನ್ನು ನಿಲ್ಲಿಸಬೇಕು. ಆ ನಂತರವೂ ಈ ಮುದ್ರೆ ಮುಂದುವರೆಸಿದರೆ, ಪೋಷಕ ಗಾಳಿಯ ಕೊರತೆಯನ್ನು ದೇಹವು ಎದುರಿಸಬೇಕಾಗುತ್ತದೆ. ಶುದ್ಧಗಾಳಿಯ ಅಸಮತೋಲನದಿಂದ ಅನೇಕ ಕಾಯಿಲೆಗಳಿಗೆ ತುತ್ತಾಗುವ ಅಪಾಯಗಳಿವೆ. ಅಭ್ಯಾಸದ ಸಮಯದಲ್ಲಿ ತೋರು ಬೆರಳಿನ ಮೇಲೆ ಹೆಚ್ಚು ಒತ್ತಡ ಹೇರಬೇಡಿ.
ಮುದ್ರೆ ಮಾಡುವ ಮುಂಚೆ ನಿಮ್ಮ ಮನಸ್ಸನ್ನು ಶಾಂತಗೊಳಿಸಿ ಮತ್ತು ನಿಮ್ಮ ಉಸಿರಾಟವನ್ನು ಸರಾಗಗೊಳಿಸಿಕೊಳ್ಳಿ. ನಿಮ್ಮ ಕೈಗಳನ್ನು ಮೊಣಕಾಲುಗಳ ಇರಿಸಿ ಮತ್ತು ಅಂಗೈಗಳನ್ನು ಆಕಾಶ ನೋಡುವಂತೆ ಮೇಲ್ಮುಖ ಮಾಡಿ. ನೀವು ಆರಂಭದಲ್ಲಿ ಅಹಿತಕರ ಒತ್ತಡ ಕಾಣಬಹುದು. ಆದರೆ, ಅದು ಸಮಯದೊಂದಿಗೆ ಸುಲಭಗೊಳ್ಳುತ್ತದೆ.
ವಯಸ್ಕರು ದಿನಕ್ಕೆ ಸುಮಾರು 45 ನಿಮಿಷಗಳ ಕಾಲ ಈ ಮುದ್ರೆಯನ್ನು ಮಾಡಬಹುದು. ಕಿರಿಯರು 15 ನಿಮಿಷಗಳ ಕಾಲ ಈ ಮುದ್ರೆಯನ್ನು ಮಾಡಿದರೆ ಉಪಯುಕ್ತ. ಬ್ರಹ್ಮ ಮುಹೂರ್ತ, ಮುಂಜಾನೆ ಸಮಯದಲ್ಲಿ ಈ ಮುದ್ರೆ ಮಾಡುವುದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು. ಇಷ್ಟೇ ಅಲ್ಲದೆ, ವಾಯು ಮುದ್ರೆಯು ಕೆಲವೊಂದು ಅಧ್ಯಯನದ ಪ್ರಕಾರ ತೂಕ ನಷ್ಟವಾಗಲು ಪ್ರಯೋಜನಕಾರಿಯಾಗಿದೆ ಎಂದು ತಿಳಿದುಬಂದಿದೆ.
ಉಳುಕು ನೋವು ನಿವಾರಣೆಗೆ ಸಹಕಾರಿ
ಭಾರವಾದ ವಸ್ತುಗಳನ್ನು ಎತ್ತಿದ ನಂತರ ತಕ್ಷಣವೇ ಐದು ನಿಮಿಷಗಳ ಕಾಲ ವಾಯು ಮುದ್ರೆಯನ್ನು ಅಭ್ಯಾಸ ಮಾಡಬೇಕು. ಹಾಗೆಯೇ ಉಳುಕು ಇದ್ದಾಗ ಈ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ನೋವು ನಿವಾರಣೆಯಾಗಲಿದೆ.
ಜ್ವರ, ಶೀತದಿಂದ ಬಳಲುವವರು ವಾಯು ಮುದ್ರೆ ಮಾಡುವುದನ್ನು ನಿಲ್ಲಿಸಬೇಕು. ಮಣಿಕಟ್ಟು, ತೋಳು ಹಾಗೂ ಬೆರಳುಗಳಲ್ಲಿ ಗಾಯವಿದ್ದರೆ, ಇದರ ಅಭ್ಯಾಸದಿಂದ ದೂರವಿರುವುದು ಒಳ್ಳೆಯದು. ಈ ಮುದ್ರೆ ಮಾಡುವ ಸಂದರ್ಭದಲ್ಲಿ ಶಾಂತ ಮತ್ತು ಆಳವಾದ ಉಸಿರಾಟದೊಂದಿಗೆ “ಓಂ” ಪಠಣ ಮಾಡುವುದರೊಂದಿಗೆ ಮುದ್ರೆಯನ್ನು ಮಾಡುವುದರಿಂದ ಹೆಚ್ಚು ಪ್ರಯೋಜನ ಪಡೆಯಬಹುದು.


