ಮನಸ್ಸಿನ ಏಕಾಗ್ರತೆಗೆ ; ಒತ್ತಡ ನಿವಾರಣೆಗೂ ಸಹಕಾರಿ
ಭಾರತೀಯ ಸಂಸ್ಕೃತಿಯಲ್ಲಿ ಅತಿಥಿಗಳನ್ನು ಸ್ವಾಗತಿಸಲು, ಹಿರಿಯರನ್ನು ಕಂಡಾಗ ಗೌರವಿಸಲು ಎರಡೂ ಹಸ್ತಗಳನ್ನು ಜೋಡಿಸಿ ವಂದನೆಗಳನ್ನು ಹೇಳಲಾಗುತ್ತಿತ್ತು. ಅಕ್ಷರಶಃ ಇದರ ಅರ್ಥ ನಿಮ್ಮಲ್ಲಿರುವ ದೈವತ್ವಕ್ಕೆ ನಾನು ನಮಸ್ಕರಿಸುತ್ತೇನೆ ಎಂಬುದಾಗಿರುತ್ತದೆ. ಪಾಶ್ಚಾತ್ಯ ಶಿಕ್ಷಣದಿಂದ ಪ್ರಭಾವಿತರಾದ ಅನೇಕರು ಪ್ರೀತಿ ಪಾತ್ರರನ್ನು ಕಂಡಾಗ ಕೈಕುಲುಕುವ ಅಥವಾ ಹಸ್ತಲಾಘವ ಮಾಡುವವರೇ ಹೆಚ್ಚು. ಆದರೆ, ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಮರಳಿ ನಮಸ್ಕಾರವನ್ನು ಮಾಡುವವರು ಹೆಚ್ಚಾಗಿದ್ದಾರೆ. ಈ ನಮಸ್ಕಾರ ಕ್ರಿಯೆಗೆ ಯೋಗ ಮುದ್ರೆಯಲ್ಲಿ ಅಂಜಲಿ ಮುದ್ರೆ ಎಂದು ಹೆಸರು. ಇದು ಒಬ್ಬರಿಗೆ ಗೌರವ ಕೊಡುವ ಹಾಗೂ ಮತ್ತೊಬ್ಬರಿಂದ ಗೌರವ ಸ್ವೀಕರಿಸುವುದರ ಸೂಚಕವೂ ಆಗಿದೆ.
ಅಂಜಲಿ ಎಂಬುದು ಸಂಸ್ಕೃತ ಪದವಾಗಿದ್ದು, ಇದರ ಅರ್ಥ ನಮಸ್ಕಾರ ಅಥವಾ ಅರ್ಪಣೆ ಎಂಬುದೇ ಆಗಿದೆ. ಯೋಗ ಮುದ್ರೆಗಳಲ್ಲಿ ಒಂದಾದ ಅಂಜಲಿ ಮುದ್ರೆಯು ಏಷ್ಯಾಖಂಡದ ಹೆಚ್ಚಿನ ದೇಶಗಳಲ್ಲಿ ಶುಭಾಷಯಗಳನ್ನು ವಿನಿಮಯ ಮಾಡಿಕೊಳ್ಳಲು ಬಳಸುವರು. ಶೈವ ಧರ್ಮದ ಪ್ರಕಾರ ಅಂಜಲಿ ಮುದ್ರೆಯನ್ನು ಸ್ವಯಂ ಪ್ರತಿಬಿಂಬ ಎಂದು ಪರಿಗಣಿಸಲಾಗುವುದು. ನಾವು ವ್ಯಾಯಾಮ ಮಾಡುವಾಗ ದೇಹದ ಒಂದು ಭಾಗ ಮಾತ್ರ ಕೆಲಸ ಮಾಡುತ್ತದೆ. ಆದರೆ, ಮುದ್ರೆಯನ್ನು ಮಾಡುವಾಗ ದೇಹದ ನರಮಂಡಲವನ್ನು ಜಾಗೃತಗೊಳಿಸುವುದರ ಜೊತೆಗೆ ದೇಹದ ಶಕ್ತಿಯನ್ನು ಒಟ್ಟಿಗೆ ಸೇರಿಸುತ್ತದೆ.
ಪ್ರತಿ ಮಗುವಿಗೆ ಅಂಜಲಿ ಮುದ್ರೆಯನ್ನು ಸಂಸ್ಕಾರವೆಂಬಂತೆ ಕಲಿಸಲಾಗುವುದು. ಎರಡೂ ಅಂಗೈಗಳನ್ನು ಹೃದಯ ಚಕ್ರದ ಮುಂದೆ ಒಟ್ಟಿಗೆ ತಂದು ಬೆರಳುಗಳು ಆಕಾಶವನ್ನು ನೋಡುವಂತೆ ಕೈಗಳನ್ನು ಸಮನಾಗಿ ಮತ್ತು ದೃಢವಾಗಿ ಒಟ್ಟಿಗೆ ಸೇರಿಸುವುದೇ ಅಂಜಲಿ ಮುದ್ರೆಯಾಗಿದೆ. ಕೈಗಳನ್ನು ಅಂಜಲಿ ಮುದ್ರೆಯಲ್ಲಿ ತರುವುದರೊಂದಿಗೆ ಪ್ರತಿ ಸೂರ್ಯ ನಮಸ್ಕಾರವೂ ಪ್ರಾರಂಭವಾಗುತ್ತದೆ. ಸುಖಾಸನದ ಹೊರತಾಗಿ ಅಂಜಲಿ ಮುದ್ರೆಯನ್ನು ತಾಡಾಸನ, ವೃಕ್ಷಾಸನ ಸೇರಿದಂತೆ ಇತರ ಭಂಗಿಗಳಲ್ಲಿ ಬಳಸಲಾಗುವುದು.
ಧ್ಯಾನದ ಸಮಯದಲ್ಲಿ ಗಮನವನ್ನು ಕೇಂದ್ರೀಕರಿಸಲು ಅಂಜಲಿ ಮುದ್ರೆ ಉಪಯುಕ್ತವಾಗಿದೆ. ಅಂಜಲಿ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ಮಣಿಕಟ್ಟುಗಳು, ತೋಳಿನ ಕೀಲುಗಳಲ್ಲಿನ ಬಿಗಿತದ ಸಮಸ್ಯೆಗಳು ಪರಿಹಾರಗೊಳ್ಳಲಿವೆ. ಅನಾಹತದ ಚಕ್ರವನ್ನು ಉತ್ತೇಜಿಸುವುದು. ಮಾನಸಿಕ ನೆಮ್ಮದಿಗೂ ಅಂಜಲಿ ಮುದ್ರೆ ಸಹಾಯಕಾರಿಯಾಗಿದೆ. ನಮ್ಮೊಳಗಿನ ಆಂತರಿಕ ಅರಿವನ್ನು ಉತ್ತೇಜಿಸಲಿದೆ. ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ. ನಮ್ಮೊಳಗಿನ ದೋಷವನ್ನು ನಿವಾರಿಸುವುದರ ಜೊತೆಗೆ ಅದನ್ನು ಪರಿಹರಿಸಲು ಮಾರ್ಗವನ್ನು ಕಂಡುಕೊಳ್ಳಲು ಸಹಾಯಕವಾಗುವುದು.
ಅಂಜಲಿ ಮುದ್ರೆ ಮಾಡುವ ವಿಧಾನ
ಆರಾಮದಾಯಕ ಸ್ಥಿತಿಯಲ್ಲಿ ಕುಳಿತುಕೊಂಡು, ಕುರ್ಚಿ, ಕುಷನ್ ಅಥವಾ ಸುಖಾಸನದಲ್ಲಿ ಕುಳಿತು ಅಂಜಲಿ ಮುದ್ರೆ ಮಾಡಬಹುದು. ಬೆನ್ನು ನೇರವಾಗಿದ್ದು, ವಿಶ್ರಾಂತಿ ಸ್ಥಿತಿಯಲ್ಲಿ ಕುಳಿತುಕೊಳ್ಳಬೇಕು. ನಿಧಾನವಾಗಿ ನಿಮ್ಮ ಕೈಗಳನ್ನು ಎದೆಯ ಮುಂಭಾಗದಲ್ಲಿ ಅಥವಾ ಅನಾಹತ ಚಕ್ರದ ಮುಂದೆ ಒಟ್ಟಿಗೆ ತರಬೇಕು. ಆಗ ದೇಹದ ಇತರ ಬಿಂದುಗಳಿಂದ ಹೃದಯಕ್ಕೆ ಶಕ್ತಿಯ ಹರಿವು ಹೆಚ್ಚಾಗುವುದು. ಕಣ್ಣುಗಳನ್ನು ಮುಚ್ಚುವ ಅಥವಾ ತೆರೆದ ಸ್ಥಿತಿಯಲ್ಲಿ ಅಂಜಲಿ ಮುದ್ರೆಯನ್ನು ಅಭ್ಯಾಸಮಾಡಬಹುದು.
ಎರಡೂ ಕೈಗಳನ್ನು ಒಟ್ಟಿಗೆ ತರುವುದರಿಂದ ಮೆದುಳಿನ ಎರಡೂ ಅರ್ಧ ಗೋಳಗಳು ಒಂದಕ್ಕೊಂದು ಜೋಡಣೆಗೆ ಬರುತ್ತವೆ. ಎಡ ಮೆದುಳಿನ ತಾರ್ಕಿಕ ಮತ್ತು ಬಲ ಮೆದುಳಿನ ಸೃಜನಶೀಲತೆ ಒಟ್ಟಿಗೆ ಬೆರೆತು ಅಂತಃಪ್ರಜ್ಞೆ ಮತ್ತು ತರ್ಕ ಸಂಯೋಜನೆಗೊಳ್ಳುತ್ತವೆ. ಪ್ರತಿಬಾರಿ ನೀವು ನಿಮ್ಮ ಕೈಗಳನ್ನು ಒಟ್ಟಿಗೆ ತಂದಾಗ, ಶಕ್ತಿಯ ಎರಡು ಬಿನ್ನ ಅಂಶಗಳು ಸಮತೋಲನಕ್ಕೆ ಬರುತ್ತವೆ. ಹೃದಯದ ಶಕ್ತಿಯನ್ನು ಹೆಚ್ಚಿಸಲು ಅಂಜಲಿ ಮುದ್ರೆಯನ್ನು ಬಳಸಬಹುದು.
ಅಂಜಲಿ ಮುದ್ರೆಯ ಪ್ರಯೋಜನಗಳು
ಅಂಜಲಿ ಮುದ್ರೆಯನ್ನು ಮಾಡುವುದರಿಂದ ಸಕಾರಾತ್ಮಕ ಆಲೋಚನೆಗಳು ವೃದ್ಧಿಯಾಗುತ್ತವೆ. ನಮ್ರತೆಯ ಭಾವನೆ ತಲೆದೋರುವುದು. ಅಂಜಲಿ ಮುದ್ರೆ ಮಾಡುವ ಸಂದರ್ಭದಲ್ಲಿ ನಿಧಾನವಾದ ಉಸಿರಾಟದ ಪ್ರಕ್ರಿಯೆಯಿಂದ ಹೃದಯಕ್ಕೆ ಸಾಕಷ್ಟು ಆಮ್ಲಜನಕ ರವಾನೆಯಾಗಲಿದೆ. ಉಸಿರಾಟದ ಕ್ರಿಯೆಯನ್ನು ಸರಾಗಗೊಳಿಸಲಿದೆ. ಪ್ರಕ್ಷುಬ್ಧ ಮನಸ್ಸು ಶಾಂತಗೊಳ್ಳಲಿದೆ. ಎರಡೂ ಕೈಗಳನ್ನು ಒಟ್ಟಿಗೆ ತಂದು ಅಂಜಲಿ ಮುದ್ರೆ ಮಾಡುವುದರಿಂದ ಮೆದುಳಿನಲ್ಲಿನ ಪಿಟ್ಯೂಟರಿ ಗ್ರಂಥಿ ಮತ್ತು ಮೂತ್ರ ಜನಕಾಂಗ ತಮ್ಮ ಕಾರ್ಯವನ್ನು ಸಮತೋಲಗೊಳಿಸಿಕೊಳ್ಳಲಿವೆ. ಈ ಮುದ್ರೆಯನ್ನು ನಿಯಮಿತವಾಗಿ ಹೆಚ್ಚು ಅಭ್ಯಾಸ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚಲಿದೆ. ಏಕಾಗ್ರತೆ ಕೂಡ ಅಧಿಕವಾಗಲಿದೆ.
ಅಂಜಲಿ ಮುದ್ರೆಯನ್ನು ಹಣೆಯ ಮುಂಭಾಗದಲ್ಲಿ ಹಿಡಿಯುವುದರಿಂದ ಆಜ್ಞಾ ಚಕ್ರವು ಉತ್ತೇಜನಗೊಳ್ಳುತ್ತದೆ. ಆಜ್ಞಾ ಚಕ್ರವು ಕಣ್ಣು ಹುಬ್ಬುಗಳ ಮಧ್ಯೆ ಇದೆ. ಹಣೆಯ ಮುಂಭಾಗದ ನಮಸ್ಕಾರ ಮುದ್ರೆಯು ನಿಮ್ಮ ಅರಿವು ಮತ್ತು ನರಗಳ ಕಾರ್ಯವನ್ನು ಹೆಚ್ಚಿಸುತ್ತದೆ. ನಿಮ್ಮ ಮೂರನೇ ಕಣ್ಣು ಹಾಗೂ ಆಧ್ಯಾತ್ಮಿಕ ಕೊಂಡಿಯನ್ನು ಬೆಸೆಯಲಿದೆ. ನೀವು ಅಂಜಲಿ ಮುದ್ರೆಯನ್ನು ಗಂಟಲಿನ ಮುಂದೆ ಮಾಡಿದಾಗ ಗಂಟಲು ಸುತ್ತಲಿನ ಪ್ರದೇಶವು ಆರೋಗ್ಯದ ಪ್ರಯೋಜನಗಳನ್ನು ಪಡೆಯುತ್ತದೆ. ಗಾಯನದ ಕಾರ್ಯಗಳು ಸುಧಾರಿಸುವುದರ ಜೊತೆಗೆ ಗಂಟಲಿನ ಸೋಂಕು ನಿವಾರಣಗೆಯಾಗುವುದು. ಗಂಟಲಿನ ಮುಂದೆ ಅಂಜಲಿ ಮುದ್ರೆ ಮಾಡುವುದರಿಂದ ಸಂವಹನ ಕ್ರಿಯೆಯಲ್ಲಿ ಸಾಮರಸ್ಯವನ್ನು ತರುತ್ತದೆ.
ನಿಮ್ಮ ತಲೆಯ ಮೇಲೆ ಅಂಜಲಿ ಮುದ್ರೆಯನ್ನು ತರುವುದರಿಂದ ಕಿರೀಟ ಚಕ್ರವು ಉತ್ತೇಜನಗೊಳ್ಳುವುದು. ತಲೆಯ ಮೇಲೆ ಅಂಜಲಿ ಮುದ್ರೆ ಮಾಡುವುದನ್ನು ಕೈಲಾಸ ಮುದ್ರೆ ಎಂದು ಸಹ ಕರೆಯಲಾಗುತ್ತದೆ. ಈ ರೀತಿ ಮಾಡುವುದರಿಂದ ದೇಹ ಮತ್ತು ಬಾಹ್ಯ ಶಕ್ತಿಗಳ ನಡುವೆ ಸೇತುವೆಯನ್ನು ನಿರ್ಮಿಸಿಕೊಳ್ಳಬಹುದಾಗಿದೆ. ಆಧ್ಯಾತ್ಮಿಕ ಜಾಗೃತಿಯನ್ನು ಪಡೆಯಲು, ಬ್ರಹ್ಮಾಂಡದ ಶಕ್ತಿಯನ್ನು ಅರಿಯಲು ಕೈಲಾಸ ಮುದ್ರೆ ಸಹಾಯಕವಾಗುತ್ತದೆ. ಐದು ಬೆರಳುಗಳು ಪಂಚೇಂದ್ರೀಯಗಳನ್ನು ಪ್ರತಿನಿಧಿಸುತ್ತವೆ.
ಹಲವು ಮುದ್ರೆಗಳಲ್ಲಿ ಕೆಲವು ಬೆರಳುಗಳನ್ನು ಮಾತ್ರ ಒಟ್ಟಿಗೆ ಸೇರಿಸಲಾಗುವುದು. ಆದರೆ, ಅಂಜಲಿ ಮುದ್ರೆಯಲ್ಲಿ ಐದೂ ಬೆರಳುಗಳು ಒಟ್ಟಿಗೆ ಸೇರುವುದರಿಂದ ಅಗ್ನಿ, ವಾಯು, ಆಕಾಶ, ಭೂಮಿ ಹಾಗೂ ನೀರು. ಈ ಪಂಚಭೂತದ ಅಂಶಗಳು ಒಟ್ಟಿಗೆ ಸೇರಿ ದೇಹದಲ್ಲಿನ ಪಂಚಭೂತದ ಅಂಶಗಳನ್ನು ಸಕ್ರಿಯಗೊಳಿಸುತ್ತವೆ. ಇದರಿಂದ ಎಲ್ಲಾ ಅಂಗಾಂಶಗಳು ಮತ್ತು ಅಂಗಾಂಗಗಳು ಸಮತೋಲ ಸ್ಥಿತಿಗೆ ಬರಲಿವೆ. ಅತ್ಯಂತ ಸರಳವಾದ ಅಂಜಲಿ ಮುದ್ರೆಯು ದೇಹ ಮತ್ತು ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಲಿದೆ.
ಅಭ್ಯಾಸದ ರೀತಿಗಳು
ಈ ಮುದ್ರೆಯನ್ನು ಹಲವಾರು ರೀತಿಗಳಲ್ಲಿ ಅಭ್ಯಾಸ ಮಾಡಬಹುದು. ಕೃತಜ್ಞತೆಯನ್ನು ತೋರಿಸಲು, ಅನ್ಯರನ್ನು ಸ್ವಾಗತಿಸಲು, ವಿನಂತಿಯನ್ನು ಸಲ್ಲಿಸಲು, ದೇವರನ್ನು ಪ್ರಾರ್ಥಿಸಲು ಸಹ ಈ ಮುದ್ರೆ ಬಳಸಲಾಗುವುದು. ಯಾವುದೇ ಮುದ್ರೆ ಮಾಡಲು ಬೆಳಗಿನ ವೇಳೆ ಸೂಕ್ತ ಸಮಯ. ಅಂಜಲಿ ಮುದ್ರೆಯ ಉತ್ತಮ ಫಲಿತಾಂಶ ಪಡೆಯಲು ಬೆಳಿಗ್ಗೆ ನಾಲ್ಕುಗಂಟೆಯಿಂದ ಆರು ಗಂಟೆಯ ಒಳಗೆ ಅಭ್ಯಾಸ ಮಾಡುವುದು ಒಳ್ಳೆಯದು. ಪ್ರತಿ ದಿನ 30 ನಿಮಿಷಗಳ ಕಾಲ ಈ ಮುದ್ರೆ ಮಾಡಬೇಕಾಗುತ್ತದೆ.
ಅಂಜಲಿ ಮುದ್ರೆ ಮಾಡುವಾಗ ಮೂರು ರೀತಿಯ ಉಸಿರಾಟ ಮಾಡಬಹುದು. ಕಿಬ್ಬೊಟ್ಟೆಯ ಉಸಿರಾಟ, ಎದೆಗೂಡಿನ ಉಸಿರಾಟ ಹಾಗೂ ಯೋಗದ ಉಸಿರಾಟ. ಆದರೆ, ಯೋಗದ ಉಸಿರಾಟಕ್ಕೆ ಪರಿಣಿತ ಯೋಗಪಟುಗಳಿಂದ ಮಾರ್ಗದರ್ಶನ ಪಡೆಯುವುದು ಸೂಕ್ತ. ಎಲ್ಲಾ ಮುದ್ರೆಗಳಲ್ಲಿ ಪ್ರತಿಕೂಲ ಪರಿಣಾಮಗಳಿವೆ. ಮುದ್ರೆಯ ಫಲಿತಾಂಶ ದೊರೆತ ನಂತರ ನಿಲ್ಲಿಸಬೇಕು. ಆದರೆ, ಈ ಮುದ್ರೆಯಲ್ಲಿ ಪ್ರತಿಕೂಲ ಪರಿಣಾಮಗಳು ಇಲ್ಲ. ನಿತ್ಯ ಮಾಡುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ವಯಸ್ಸಿನ ಮಿತಿಯೂ ಇಲ್ಲ. ಎಲ್ಲಾ ವರ್ಗದವರೂ, ಅನಾರೋಗ್ಯಕ್ಕೆ ಒಳಗಾದವರು ಮಾಡುವ ಮುದ್ರೆಯಾಗಿರುವುದು ಇದರ ವಿಶೇಷ.
1 comment
[…] ಅಂಕಣ […]