ಬೆಂಗಳೂರು:ಸಂಸದೆ ಸುಮಲತಾ ಅಂಬರೀಶ್ ಇಂದಿಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಪ್ರಸಕ್ತ ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿದು ಕಮಲದ ಚಿನ್ಹೆ ಹಿಡಿದ ಸುಮಲತಾ ಅವರನ್ನು ಪಕ್ಷದ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರವಾಲ್, ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಹಲವು ನಾಯಕರು ಸುಮಲತಾ ಅವರಿಗೆ ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು.
ಪಕ್ಷ ಸೇರ್ಪಡೆಗೊಂಡ ನಂತರ ಮಾತನಾಡಿದ ಸುಮಲತಾ ಅವರು, ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಬೇಕೆಂಬ ದೃಷ್ಟಿಯಿಂದ ಬಿಜೆಪಿ ಸೇರಿದ್ದೇನೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷಗಳಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿ ದೇಶದ ದೃಷ್ಟಿಕೋನವನ್ನು ಬದಲಿಸಿದ್ದಾರೆ.
ದೇಶದ ಹಿತದೃಷ್ಟಿಯಿಂದ ಪಕ್ಷ ಸೇರ್ಪಡೆ
2047ರ ವೇಳೆಗೆ ರಾಷ್ಟ್ರವನ್ನು ವಿಶ್ವದಲ್ಲೇ ಬಲಿಷ್ಠ ದೇಶವನ್ನಾಗಿ ರೂಪಿಸುವ ಕನಸು ಹೊಂದಿದ್ದಾರೆ, ಅವರ ಕನಸು ನನಸು ಮಾಡಲು ನಾವೆಲ್ಲರೂ ಒಗ್ಗೂಡಿ ದುಡಿಯೋಣ, ನಾನು ನನ್ನ ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಸೇರ್ಪಡೆಯಾಗಿಲ್ಲ, ಮಂಡ್ಯ ಮತ್ತು ದೇಶದ ಹಿತದೃಷ್ಟಿಯಿಂದ ಬಿಜೆಪಿ ಸೇರಿದ್ದೇನೆ.
ನನಗೆ, ಇಂದಿನ ದಿನವು ನನ್ನ ರಾಜಕೀಯ ಜೀವನದಲ್ಲಿ ಮಹತ್ವ ಪಡೆದಿರುವ ಸುದಿನವಾಗಿದೆ. ಐದು ವರ್ಷಗಳ ಹಿಂದೆ ಮಂಡ್ಯ ಕ್ಷೇತ್ರದಲ್ಲಿ ಐತಿಹಾಸಿಕ ಗೆಲುವು ಸಿಕ್ಕಿತ್ತು, ಆ ಚುನಾವಣೆ, ಆ ಸಂದರ್ಭವನ್ನು ಎಂದಿಗೂ ಮರೆಯುವುದಿಲ್ಲ.
ಮೋದಿ ಬೆಂಬಲ ಮರೆಯುವುದಿಲ್ಲ
ಮಂಡ್ಯದ ಜನತೆ, ಅಂಬರೀಶ್ ಅಭಿಮಾನಿಗಳ ಬಳಗ ನನಗೆ ಬೆನ್ನೆಲುಬಾಗಿ ನಿಂತಿದೆ, 5 ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಸಹಾ ನನಗೆ ಬೆಂಬಲ ನೀಡಿದ್ದರು, ಅದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ಮೊದಲ ಸಂದರ್ಭದಲ್ಲೇ ನನ್ನನ್ನು ಸಂಸದರ ಸಭೆಯಲ್ಲಿ ಕರೆದು ಕ್ಷೇತ್ರಕ್ಕೆ ಏನಾಗಬೇಕೆಂದು ಮಾಹಿತಿ ಪಡೆದು, ಜಿಲ್ಲೆಯ ಅಭಿವೃದ್ಧಿಗೆ ನಾಂದಿ ಹಾಡಿದರು.
ಮಂಡ್ಯ ಸಕ್ಕರೆ ಕಾರ್ಖಾನೆ ಪುನರುಜ್ಜೀವನಕ್ಕೆ 50 ಕೋಟಿ ರೂ. ನೀಡುವ ಮೂಲಕ ಕಾರ್ಖಾನೆಯಲ್ಲಿ ಮತ್ತೆ ಕಬ್ಬು ಅರೆಯುವುದಕ್ಕೆ ಚಾಲನೆ ನೀಡಿದರು.
ಇಂದಿನ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕೆಲವರು ನಾವೇ ಎಲ್ಲಾ ಹೊಸದಾಗಿ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ, ಸತ್ಯ ಏನೆಂಬುದನ್ನು ನಿಮ್ಮ ಮುಂದಿಟ್ಟಿದ್ದೇನೆ ಎಂದರು.
ಬಿಜೆಪಿ ಗೆಲುವು ನಿಶ್ಚಿತ
ಸುಮಲತಾ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಮಾತನಾಡಿದ ವಿಜಯೇಂದ್ರ, ಕರ್ನಾಟಕ ಸೇರಿ ದೇಶಾದ್ಯಂತ ಬಿಜೆಪಿ ಹಾಗೂ ಮೋದಿ ಪರ ಅಲೆ ಇದೆ, ಮೋದಿ ಅವರ ನಾಯಕತ್ವ ಮೆಚ್ಚಿ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆಯಾಗಿದ್ದಾರೆ, ಇದರಿಂದ ಪಕ್ಷಕ್ಕೆ ಬಲ ಬಂದಿದೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದರು.
ಮೋದಿ ಪರ ಅಲೆಯಿಂದಾಗಿ ಕಾಂಗ್ರೆಸ್ಸಿನ ಯಾವುದೇ ಸಚಿವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿಲ್ಲ, 28ಕ್ಕೆ 28 ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಗೆಲುವಿನ ಸಂಕಲ್ಪ ನಮ್ಮದು ಎಂದರು.
ಇದೇ ಸಂದರ್ಭದಲ್ಲಿ ಕೊಪ್ಪಳ ಕ್ಷೇತ್ರದ ಮಾಜಿ ಸಂಸದ ಎಸ್.ಶಿವರಾಮೇಗೌಡ, ವಿಜಯಪುರ ಜಿಲ್ಲೆಯ ಯುವ ನಾಯಕ ಹಾಗೂ ಸಚಿವ ಶಿವಾನಂದ ಪಾಟೀಲ್ ಸಹೋದರನ ಪುತ್ರ ಹರ್ಷಗೌಡ ಶಿವಶರಣ ಪಾಟೀಲ್, ಮಾಜಿ ಕ್ರಿಕೆಟ್ ಪಟು ದೊಡ್ಡ ಗಣೇಶ್, ಗಾಯತ್ರಿ ತಿಮ್ಮಾರೆಡ್ಡಿ, ಉತ್ತರ ಕನ್ನಡ ಜಿಲ್ಲೆ ಹಳಿಯಾಳದ ಶ್ರೀನಿವಾಸ್, ತುಕಾರಾಂಗೌಡ ಪಾಟೀಲ್, ಕಾಂಗ್ರೆಸ್ ಮುಖಂಡ ಪ್ರಭುರಾಜ ಎಸ್. ಪಾಟೀಲ್, ಗಂಗಾವತಿ ತಾಲ್ಲೂಕು ಪಂಚಾಯತ್ ಅಧ್ಯಕ್ಷ ವೀರಭದ್ರಗೌಡ ಸೇರಿದಂತೆ ಹಲವು ಮಂದಿ ಪಕ್ಷ ಸೇರ್ಪಡೆಗೊಂಡರು.
1 comment
[…] ರಾಜಕೀಯ […]