ಕಿವಿ, ಮೈಗ್ರೇನ್ ಸಮಸ್ಯೆಗಳಿಗೆ ಸೂಕ್ತ ಪರಿಹಾರ
ಆಧುನಿಕ ಜೀವನಶೈಲಿಯಿಂದ ಬದುಕಿನ ಕ್ರಮವೇ ಬದಲಾಗುತ್ತಿದೆ. ಆಹಾರ ಸೇವನೆಯಲ್ಲಿ ಬದಲಾವಣೆ, ಜೀವನ ಕ್ರಮದಲ್ಲಿ ಬದಲಾವಣೆ, ಕೆಲಸದ ವಿಧಾನದಲ್ಲಿ ಬದಲಾವಣೆಗಳಾಗಿ ಅನೇಕ ರೀತಿಯ ದೈಹಿಕ, ಮಾನಸಿಕ ಒತ್ತಡಗಳಿಗೆ ಯುವಜನರು ಒಳಗಾಗುತ್ತಿದ್ದಾರೆ. ದೇಹದ ಸೂಕ್ಷ್ಮ ರೂಪ ಮನಸ್ಸು. ಮನಸ್ಸಿನ ಸ್ಥೂಲರೂಪ ದೇಹ. ಈ ಸತ್ಯವನ್ನು ಮರೆತು ದೇಹ ಬೇರೆ, ಮನಸ್ಸು ಬೇರೆ ಎಂದು ಅನೇಕ ರೋಗಗಳಿಂದ ಬಳಲುವವರೇ ಹೆಚ್ಚು. ಮನಸ್ಸು ವೇದನೆಗೆ ಒಳಗಾದರೆ, ದೇಹದಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತವೆ. ಮಾನಸಿಕ ಕಾಯಿಲೆಗಳಿಗೆ ಮುಕ್ತಿ ದೊರೆಯದ ಹೊರತು ದೈಹಿಕ ನೋವುಗಳಿಗೆ ಮುಕ್ತಿ ಇಲ್ಲ.
ಒತ್ತಡದ ಜೀವನಶೈಲಿಯಲ್ಲಿ ಮಾನಸಿಕ ವೇದನೆಗಳನ್ನು ಸರಿದೂಗಿಸಲಾಗದ ಸಂದರ್ಭದಲ್ಲಿ ಪ್ರಜ್ಞಾಪೂರ್ವಕವಾಗಾದರೂ ನರಮಂಡಲಗಳನ್ನು ಜಾಗೃತಿಗೊಳಿಸುವ ಮೂಲಕ ಮನಃ ಶಾಂತಿಯನ್ನು ಪಡೆಯಬೇಕಾಗುವುದು. ನರಮಂಡಲಗಳ ಜಾಗೃತಿಗಾಗಿ ನಾವು ಪ್ರತಿದಿನ ಹಸ್ತಮುದ್ರೆಗಳನ್ನು ಮಾಡುವ ಮೂಲಕ ಮೆದುಳನ್ನು ಸಕ್ರಿಯಗೊಳಿಸಿ ದೈಹಿಕ ನೋವು ಮತ್ತು ಮಾನಸಿಕ ವೇದನೆಯಿಂದ ಮುಕ್ತಿ ಪಡೆಯಬಹುದಾಗಿದೆ. ದೇಹದೊಳಗಿನ ಆಲಸ್ಯ, ಇಂದ್ರಿಯಗಳ ಗ್ರಹಿಕೆಯ ಕೊರತೆಯನ್ನು ಅನುಭಿಸುವವರ ಸಂಖ್ಯೆ ಆಧುನಿಕ ಜೀವನಶೈಲಿಯಲ್ಲಿ ಹೆಚ್ಚಾಗುತ್ತಿದೆ.
ಇಂದ್ರಿಯಗಳ ಗ್ರಹಿಕೆಯ ಕೊರತೆಯಿಂದಾಗಿ ದೇಹದ ಕೆಲವು ಭಾಗಗಳಲ್ಲಿ ಅತಿಯಾದ ಮರಗಟ್ಟುವಿಕೆ ಅಥವಾ ಜುಮ್ ಎನಿಸುವ ಅನುಭವವಾಗುತ್ತದೆ. ಆಧುನಿಕ ಜೀವನಶೈಲಿಯಿಂದಾಗಿ ಥೈರಾಯಿಡ್ ನಂತಹ ಸಮಸ್ಯೆಗಳು ಸ್ತ್ರೀ- ಪುರುಷರಿಬ್ಬರಲ್ಲೂ ಕಂಡುಬರುತ್ತಿವೆ. ಗಂಟಲಿನ ಸಮಸ್ಯೆ, ವಸಡಿನ ಕಾಯಿಲೆಗಳು, ಕಿವಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಯೋಗಶಾಸ್ತ್ರದಲ್ಲಿ ಆಕಾಶ ಮುದ್ರೆ / ಶೂನ್ಯಮುದ್ರೆ / ಶುನಿಮುದ್ರೆ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಈ ಯೋಗಮುದ್ರೆಯು ಭೂಮಿಯ ಅಂಶದೊಂದಿಗೆ ಸಂಬಂಧವನ್ನು ಹೊಂದಿರುವುದರಿಂದ ತಾಳ್ಮೆಯನ್ನು ಹೆಚ್ಚಿಸುವುದು.
ಆಕಾಶ ಮುದ್ರೆ ಮಾಡುವ ವಿಧಾನ
ಮಧ್ಯದ ಬೆರಳಿನ ತುದಿಯನ್ನು ಹೆಬ್ಬೆರಳಿನ ತುದಿಗೆ ಒತ್ತುವ ಮೂಲಕ ಶುನಿಮುದ್ರೆ ರೂಪಗೊಳ್ಳುವುದು. ಇತರ ಬೆರಳುಗಳು ನೇರವಾಗಿ ಇರಬೇಕು. ಈ ಮುದ್ರೆಯನ್ನು ಮಾಡುವಾಗ ಸುಖಾಸನ, ಪದ್ಮಾಸನ ಅಥವಾ ವಜ್ರಾಸನದ ಭಂಗಿಯಲ್ಲಿ ಕುಳಿತುಕೊಳ್ಳಿ. ಬೆನ್ನು ಮತ್ತು ಕುತ್ತಿಗೆ ನೇರವಾಗಿರಲಿ. ನಿಮ್ಮ ಕೈಗಳನ್ನು ಮೊಣಕಾಲುಗಳ ಮೇಲೆ ಇರಿಸಿಕೊಂಡು ಅಂಗೈ ಆಕಾಶವನ್ನು ನೋಡುವಂತೆ ಇಟ್ಟುಕೊಳ್ಳಿ. ಎರಡೂ ಕೈಗಳಿಂದ ಈ ಮುದ್ರೆಯನ್ನು ಮಾಡಬೇಕಾಗುತ್ತದೆ.
ಮುದ್ರೆ ಮಾಡುವಂತಹ ಸಂದರ್ಭದಲ್ಲಿ ಉಸಿರಾಟದ ಮೇಲೆ ಏಕಾಗ್ರತೆ ಇರಲಿ. ನಿಧಾನವಾಗಿ ಉಸಿರಾಡಿ. ದೇಹದ ಒತ್ತಡಗಳಿಂದ ಹೊರಬರುತ್ತೀರಿ. ಧ್ಯಾನ ಮಾಡುವ ಸಂದರ್ಭದಲ್ಲಿ, ಪ್ರಾಣಾಯಾಮ ಮತ್ತು ಯೋಗಾಸನದ ಸಂದರ್ಭದಲ್ಲಿ ಈ ಮುದ್ರೆಯನ್ನು ಅಭ್ಯಾಸ ಮಾಡಬಹುದು. ಬ್ರಾಹ್ಮಿ ಮುಹೂರ್ತ ಅಥವಾ ರಾತ್ರಿ ಮಲಗುವ ಮುಂಚೆ ಪ್ರತಿದಿನ 20 ನಿಮಿಷಗಳ ಕಾಲ ಅಭ್ಯಾಸ ಮಾಡುವ ಮೂಲಕ ದೇಹದೊಳಗಿನ ಒತ್ತಡಗಳಿಂದ ಹೊರಬರಲಿದ್ದೀರಿ.
ಶೂನ್ಯ ಅಥವಾ ಆಕಾಶ ಮುದ್ರೆ ಎಂದು ಕರೆಯಲ್ಪಡುವ ಶುನಿಮುದ್ರೆಯು ಭಾರತೀಯ ಪ್ರಾಚೀನ ಜೀವನಶೈಲಿಯಲ್ಲಿ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು ಬಂದಿದೆ. ಶೂನ್ಯ ಎಂದರೆ ಬ್ರಹ್ಮಾಂಡ. ಬ್ರಹ್ಮಾಂಡವನ್ನು ಜಯಿಸುವ ಶಕ್ತಿ ಈ ಮುದ್ರೆಯಿಂದ ಲಭಿಸುವುದು. ಅಗ್ನಿತತ್ವ ಮತ್ತು ಬಾಹ್ಯಾಕಾಶ ತತ್ವಗಳೆರಡೂ ಸ್ಪರ್ಶಿಸುವ ಮೂಲಕ ದೇಹದ ಒಳಗೆ ಶೂನ್ಯತ್ವವನ್ನು ಉಂಟು ಮಾಡುವುದು. ನೋಡಲು ಎಷ್ಟು ಸರಳವೆಂದು ತೋರುವ ಈ ಮುದ್ರೆಯು ಪ್ರಜ್ಞಾಪೂರ್ವಕವಾಗಿ ಅಭ್ಯಾಸ ಮಾಡಿದಾಗ ನಿಮ್ಮೊಳಗೆ ಸ್ಥಿರವಾದ ಶಕ್ತಿಯ ಭಾವ ನೆಲೆಸುವಂತೆ ಮಾಡುತ್ತದೆ.
ದೇಹದೊಳಗಿನ ವಾಯು ತತ್ವ ಮತ್ತು ಬೆಂಕಿಯ ಅಂಶಗಳು ಬಲಗೊಳ್ಳುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುವುದು ಹಾಗೂ ದೇಹದ ಉಷ್ಣತೆಯಲ್ಲಿ ಸಮತೋಲನ ಕಾಯ್ದುಕೊಳ್ಳುವುದು. ದೇಹದ ತೂಕ ಸಮತೋಲಗೊಳ್ಳುತ್ತದೆ. ಜೀರ್ಣಕ್ರಿಯೆ ಉತ್ತಮಗೊಳ್ಳುವುದರಿಂದ ಅತಿಸಣ್ಣ ಇರುವವರು ಆರೋಗ್ಯಕರ ತೂಕಕ್ಕೆ ಬರುತ್ತಾರೆ. ಧಡೂತಿ ದೇಹವುಳ್ಳವರು ದೇಹದ ತೂಕ ತಗ್ಗಿಸಿಕೊಂಡು ಆರೋಗ್ಯವಂತರಾಗುತ್ತಾರೆ. ದೈಹಿಕ, ಮಾನಸಿಕ ಲಾಭಗಳನ್ನು ಮೀರಿದ ಶುನಿ ಮುದ್ರೆಯು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸುವುದು. ಈ ಮುದ್ರೆಯನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದಾಗಿ ಏಕಾಗ್ರತೆಯ ಮಟ್ಟವನ್ನು ಹೆಚ್ಚಿಸುವುದು. ಒತ್ತಡದ ಮಾನಸಿಕ ಸ್ಥಿತಿ ಕಳೆದು ತಾಳ್ಮೆಯ ಜೀವನಶೈಲಿ ಈ ಮುದ್ರೆಯನ್ನು ಅಭ್ಯಾಸ ಮಾಡುವವರಿಗೆ ಲಭಿಸುವುದು.
ಪ್ರಯೋಜನಗಳು
ಆಕಾಶ ಮುದ್ರೆಯು ಕಿವಿ ಸಂಬಂಧಿತ ರೋಗಗಳಿಗೆ ಪರಿಹಾರವನ್ನು ನೀಡುತ್ತದೆ. ಹೃದ್ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ಥೈರಾಯಿಡ್ ನಂತಹ ಸಮಸ್ಯೆಗಳನ್ನು ನಿವಾರಿಸುವುದಲ್ಲದೆ, ಚಲನೆಯನ್ನು ಕಳೆದುಕೊಂಡು ಮರಗಟ್ಟಿರುವ ದೇಹದ ಭಾಗಗಳನ್ನು ಸರಿಪಡಿಸುವುದು. ದೈಹಿಕ ಮತ್ತು ಮಾನಸಿಕ ಆರೋಗ್ಯದ ಅಂತರವನ್ನು ಕಡಿಮೆ ಮಾಡುತ್ತದೆ. ಜೀವನದಲ್ಲಿ ಎಷ್ಟೇ ಸೋಲುಗಳನ್ನು ಅನುಭವಿಸಿ ಹತಾಶರಾದವರು ಶುನಿ ಮುದ್ರೆಯನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ಜ್ಞಾನೋದಯ ಮಾರ್ಗದಲ್ಲಿ ನಡೆಯುವರು.
ಮಧ್ಯದ ಬೆರಳು ಆಕಾಶ ತತ್ವವನ್ನು ಪ್ರತಿನಿಧಿಸುವುದರಿಂದ ನಮ್ಮೊಳಗಿನ ಶೂನ್ಯತ್ವವನ್ನು ಸಮತೋಲಗೊಳಿಸಿಕೊಳ್ಳುವ ಮನಸ್ಥಿತಿಯನ್ನು ಪಡೆಯುತ್ತಾರೆ. ವಾತದೋಷ ಹೊಂದಿರುವವರಿಗೆ ಈ ಮುದ್ರೆ ಸಹಕಾರಿಯಾಗಲಿದೆ. ದೇಹದೊಳಗಿನ ಗಂಟುಗಳನ್ನು ಕರಗಿಸುವ ಅಂಶವನ್ನು ಈ ಮುದ್ರೆ ಮಾಡುತ್ತದೆ. ಮೂಳೆ ಸಂಬಂಧಿತ ಕಾಯಿಲೆಗಳಿಗೆ ಹಾಗೂ ದೇಹದಲ್ಲಿ ಕ್ಯಾಲ್ಸಿಯಂ ಹೆಚ್ಚಿಸಲು ಸಹಕಾರಿಯಾಗಿದೆ.
ಹಲ್ಲುಗಳನ್ನು ಬಲಪಡಿಸುವುದಲ್ಲದೆ, ತಲೆ ತಿರುಗುವಿಕೆಯಂತಹ ಸಮಸ್ಯೆಗಳಿಗೆ ಔಷಧದಂತೆ ಕೆಲಸ ಮಾಡುತ್ತದೆ. ಸ್ಟಿರಾಯಿಡ್ ನಂತಹ ಔಷಧಿಯ ಸೇವನೆಯಿಂದ ಉಂಟಾಗಬಹುದಾದ ಅಡ್ಡಪರಿಣಾಮಗಳನ್ನು ಆಕಾಶ ಮುದ್ರೆಯನ್ನು ಅಭ್ಯಾಸ ಮಾಡುವ ಮೂಲಕ ಸರಿಪಡಿಸಿಕೊಳ್ಳಬಹುದಾಗಿದೆ. ಅತಿಯಾದ ಗೊರಕೆ ಸಮಸ್ಯೆ ಇರುವವರು ಈ ಮುದ್ರೆಯನ್ನು ಅಭ್ಯಾಸ ಮಾಡುವ ಮೂಲಕ ಸುಖ ನಿದ್ರೆಗೆ ಜಾರಬಹುದಾಗಿದೆ. ಮೈಗ್ರೇನ್ ನಂತಹ ಸಮಸ್ಯೆಗಳಿಗೆ ತಕ್ಷಣದ ಪರಿಹಾರವನ್ನು ಸೂಚಿಸುವುದು.
ಮುದ್ರೆಯ ಮಿತಿಗಳು
ಬುದ್ಧನ ಹೆಚ್ಚು ಪ್ರತಿಮೆಗಳಲ್ಲಿ ಈ ಆಕಾಶ ಮುದ್ರೆ ಇರುವುದನ್ನು ಗಮನಿಸಬಹುದು. ವಾತ ಪ್ರಕೃತಿ ಸಮಸ್ಯೆ ಇದ್ದವರು ಈ ಮುದ್ರೆಯನ್ನು ಅತಿ ಹೆಚ್ಚು ಅಭ್ಯಾಸ ಮಾಡಬಾರದು. ಹೆಬ್ಬೆರಳು ಮತ್ತು ಮಧ್ಯದ ಬೆರಳಿನ ತುದಿಯನ್ನು ಬಲವಾಗಿ ಸ್ಪರ್ಶಿಸಬಾರದು. ಆರಾಮದಾಯಕವಾದ ಉಡುಪು ಧರಿಸಿರಬೇಕು. ಗಟ್ಟಿಯಾದ ನೆಲದ ಮೇಲೆ ಅಭ್ಯಾಸ ಮಾಡುವುದು ಒಳ್ಳೆಯದಲ್ಲ.