ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತ
ಬೆಂಗಳೂರು: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯು ತಿರಸ್ಕಾರವಾದ ಬೆನ್ನೆಲ್ಲೇ ವಿಶೇಷ ತನಿಖಾ ತಂಡವು ಮಾಜಿ ಸಚಿವ ಹೆಚ್.ಡಿ.ರೇವಣ್ಣಅವರನ್ನು ವಶಕ್ಕೆ ಪಡೆದಿದೆ.
ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆ ಎಸ್ ಐಟಿ ಅಧಿಕಾರಿಗಳು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮನೆಯಲ್ಲಿ ಅವರನ್ನು ವಶಕ್ಕೆ ಪಡೆದು ಕರೆದುಕೊಯ್ದರು.
ಸಿಐಡಿ ಕಚೇರಿ ಆವರಣದಲ್ಲಿರುವ ತಮ್ಮಕಚೇರಿಗೆ ರೇವಣ್ಣ ಅವರನ್ನು ಕರೆದುಕೊಂಡು ಹೋಗಿದ್ದು, ಬಳಿಕ ವೈದ್ಯಕೀಯ ಪರೀಕ್ಷೆ ಒಳಪಡಿಸಿದ್ದು, ಬಂಧಿಸಿ ನ್ಯಾಯಾಧೀಶರ ಮುಂದೆ ಯಾವುದೇ ಸಂದರ್ಭದಲ್ಲಿ ಹಾಜರು ಪಡಿಸಬಹುದು.
ಮಹಿಳೆಯೊಬ್ಬರ ಅಪಹರಣ ಮಾಡಿದ ಆರೋಪದ ಪ್ರಕರಣದಲ್ಲಿ ಅಧಿಕಾರಿಗಳು ರೇವಣ್ಣ ಅವರನ್ನು ವಶಕ್ಕೆ ಪಡೆದಿದ್ದಾರೆ.
ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರು ಅತ್ಯಾಚಾರ ಎಸಗಿದ್ದಾರೆ ಎನ್ನಲಾದ ಸಂತಸ್ತ ಮಹಿಳೆ ಆರೋಪಿಸಿ ನೀಡಿದ್ದ ದೂರಿನ ತನಿಖೆಯನ್ನು ಎಸ್ ಐಟಿಗೆ ವಹಿಸಲಾಗಿದೆ.
ಅಲ್ಲದೆ, ಅವರ ಪುತ್ರ ಪ್ರಜ್ವಲ್ ಅವರದೆನ್ನಲಾದ ಲೈಂಗಿಕ ದೌರ್ಜನ್ಯದ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್ ಐಟಿ ಅಧಿಕಾರಿಗಳು ಈಗಾಗಲೇ ನೋಟಿಸ್ ನೀಡಿದ್ದು, ರೇವಣ್ಣ ಅವರನ್ನು ಮೊದಲ ಆರೋಪಿ ಹಾಗೂ ಪ್ರಜ್ವಲ್ ಅವರನ್ನು ಎರಡನೇ ಆರೋಪಿ ಮಾಡಲಾಗಿದೆ.
ಎಸ್ ಐಟಿ ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ ನೋಟಿಸ್ ಮೇಲೆ ನೋಟಿಸ್ ನೀಡಿದ್ದಲ್ಲದೆ, ಲುಕ್ ಔಟ್ ನೋಟಿಸ್ ನೀಡಲಾಗಿತ್ತು. ನಿಗದಿತ ಗಡುವಿನೊಳಗೆ ಇಬ್ಬರೂ ಹಾಜರಾಗದ ಹಿನ್ನೆಲೆಯಲ್ಲಿ ರೇವಣ್ಣ ಅವರನ್ನು ವಶಕ್ಕೆ ಪಡೆದಿರುವ ಎಸ್ ಐಟಿ ಅಧಿಕಾರಿಗಳು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ಮೇಲೆ ಆರೋಪ ಬಂದ ಕೂಡಲೇ ಸರ್ಕಾರ ಎಸ್ ಐಟಿ ತನಿಖಗೆ ವಹಿಸಿತ್ತು. ಈ ವಿಚಾರವು ಕಳೆದೊಂದು ವಾರದಿಂದಲೂ ಭಾರೀ ಸದ್ದು ಮಾಡುತ್ತಿದೆ.