ಬೆಂಗಳೂರು:ಮನೆ ಕೆಲಸದಾಕೆ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರಿಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 42ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರಾದ ಜೆ.ಪ್ರೀತ್, ತಾವು ಕಾಯ್ದಿರಿಸಿದ್ದ ತೀರ್ಪನ್ನು ಇಂದು ಪ್ರಕಟಿಸಿದರು.
ಐದು ಲಕ್ಷ ರೂ. ಬಾಂಡ್
ಐದು ಲಕ್ಷ ರೂ. ಮೊತ್ತದ ಬಾಂಡ್ ಹಾಗೂ ಇಷ್ಟೇ ಮೊತ್ತದ ಭದ್ರತೆ ನೀಡುವುದೂ ಸೇರಿದಂತೆ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಕಳೆದ ೧೭ ರಂದು ತೀರ್ಪು ಕಾಯ್ದಿರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇನ್ನೊಂದು ಪ್ರಕರಣದಲ್ಲಿ ಈಗಾಗಲೇ ಜಾಮೀನು ದೊರೆತಿರುವುದರಿಂದ ರೇವಣ್ಣಗೆ ಬಿಗ್ ರಿಲೀಫ್ ದೊರೆತಂತಾಗಿದೆ.
ಬರಿಗಾಲಲ್ಲಿ ಹಾಜರು
ಇಂದು ವಿಚಾರಣೆಗೆ ರೇವಣ್ಣ ಬರಿಗಾಲಲ್ಲೇ ಹಾಜರಾಗಿದ್ದರು. ಜಾಮೀನು ದೊರೆತ ಬಳಿಕ ಅವರ ಮುಖದಲ್ಲಿ ನಿರಾಳತೆ ಕಂಡುಬಂತು. ನಂತರ ಹಾಸನಕ್ಕೆ ತೆರಳಿದರು.
ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ರೇವಣ್ಣ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಪರ ವಾದ ಮಂಡಿಸಿದ ಎಸ್‌ಪಿಪಿ ಜಯ್ನಾ ಕೊಠಾರಿ, ರೇವಣ್ಣ ಅವರಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದರು.
ಪೊಲೀಸರ ವಶಕ್ಕೆ ನೀಡಲು ವಾದ
ಆರೋಪಿ ಅವರನ್ನು ಪೊಲೀಸರ ವಶಕ್ಕೆ ನೀಡಬೇಕು. ಇದೇ ಪ್ರಕರಣದ ಇನ್ನೊಬ್ಬ ಆರೋಪಿ ವಿಚಾರಣೆಗೆ ಹಾಜರಾಗಿಲ್ಲ. ಮತ್ತೊಬ್ಬ ಆರೋಪಿ ದೇಶ ಬಿಟ್ಟು ಹೋಗಿದ್ದಾರೆ. ಹೀಗಾಗಿ ಸಮಯ ನೀಡಬಾರದು. ಇಂದೇ ವಿಚಾರಣೆ ನಡೆಸಿ ಆದೇಶ ನೀಡಿ ಅಥವಾ ಪೊಲೀಸರ ವಶಕ್ಕೆ ನೀಡಬೇಕು ಎಂದು ವಾದಿಸಿದರು.
ಇದಕ್ಕೆ ಪ್ರತಿವಾದ ಮಂಡಿಸಿದ ರೇವಣ್ಣ ಪರ ವಕೀಲ ಸಿ.ವಿ.ನಾಗೇಶ್, ತಮ್ಮ ಕಕ್ಷಿದಾರರ ವಿರುದ್ಧ ಯಾವುದೇ ನಾನ್ ಬೇಲೆಬಲ್ ಸೆಕ್ಷನ್ ಇಲ್ಲ, ಜಾಮೀನು ನೀಡುವಂತಹ ಸೆಕ್ಷನ್‌ಗಳು ಇವೆ ಎಂದು ಹೇಳಿದರು.
ನಾನ್ ಬೇಲೆಬಲ್ ಸೆಕ್ಷನ್ ಪ್ರಕರಣದಲ್ಲಿ ಸರ್ಕಾರದ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸುವ ಅಧಿಕಾರವೇ ಇಲ್ಲ, ಎಸ್‌ಪಿಪಿಗೆ ಆಕ್ಷೇಪಣೆ ಸಲ್ಲಿಸುವ ಅಧಿಕಾರ ಇದೆಯೇ ಎಂಬುದು ಮೊದಲು ನಿರ್ಧಾರ ಆಗಲಿ, ಈಗಾಗಲೇ ರೇವಣ್ಣ ಅವರನ್ನು ಬಂಧಿಸಲಾಗಿತ್ತು, ಆಗಲೇ ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಬಹುದಿತ್ತು, ಈಗ ಎಸ್‌ಐಟಿ ಕಸ್ಟಡಿಗೆ ಕೇಳುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಅರೇಬಿಯನ್ ನೈಟ್ಸ್ ಕಥೆ
ಪ್ರಕರಣದಲ್ಲಿ ದೂರನ್ನು ಹೇಗೆ ದಾಖಲಿಸಲಾಗಿದೆ ಎಂಬ ವಿವರಣೆ ಇದೆ, ಇದೊಂದು ರೀತಿಯಲ್ಲಿ ಅರೇಬಿಯನ್ ನೈಟ್ಸ್ ಕಥೆ ರೀತಿಯಲ್ಲಿದೆ, ಸಂತ್ರಸ್ತೆ ದೂರನ್ನು ಟೈಪ್ ಮಾಡಿ ದಾಖಲು ಮಾಡಲಾಗಿದೆ.
ಸಿಆರ್‌ಪಿಸಿ 154 ರಡಿ ಅತ್ಯಾಚಾರ ಆರೋಪ ಪ್ರಕರಣಗಳ ದೂರನ್ನು ಮಹಿಳಾ ಅಧಿಕಾರಿ ದಾಖಲಿಸಿಕೊಳ್ಳಬೇಕು, ಸಂತ್ರಸ್ತೆ ಹೇಳಿಕೆಯ ವಿಡಿಯೊ ಮಾಡಬೇಕಿತ್ತು, ಆದರೆ, ಯಾವುದನ್ನೂ ಪಾಲಿಸಿಲ್ಲ, ಎಫ್‌ಐಆರ್ ಅನ್ನೂ ಕಾನೂನುಬಾಹಿರವಾಗಿ ದಾಖಲಿಸಲಾಗಿದೆ ಎಂದು ವಾದ ಮಂಡಿಸಿದರು.
ದೂರುದಾರೆಯ ಹೇಳಿಕೆ ಸಂಪೂರ್ಣ ಗೊಂದಲಮಯವಾಗಿದೆ, ಬೇಕೆಂದೇ ನಮ್ಮ ಕಕ್ಷಿದಾರರನ್ನು ಇಲ್ಲಿ ಸಿಲುಕಿಸಲಾಗಿದೆ, ಇದೊಂದು ಸುಳ್ಳು ಕೇಸ್ ಎಂದು ವಾದಿಸಿದರು.
ದೂರುದಾರರು ಹೊಳೆನರಸೀಪುರ ಪೊಲೀಸ್ ಠಾಣೆಗೆ ದೂರು ನೀಡಿಲ್ಲ, ಹೊಳೆನರಸೀಪುರ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಒಬ್ಬರು ಬೆಂಗಳೂರಿಗೆ ಬಂದು ದೂರು ತಮಗೆ ನೀಡಿದಂತೆ ದೂರುದಾರರಿಂದ ಬರೆಸಿಕೊಂಡು ಹೋಗಿ ಕೇಸ್ ದಾಖಲಿಸಿದ್ದಾರೆ ಎಂದು ವಾದಿಸಿದರು.