ಚುನಾವಣೆ ಬೆನ್ನಲ್ಲೇ ಸರ್ಜರಿ
ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ನಿರ್ಧಿಸಿದ್ದಾರೆ. ಅಭಿವೃದ್ಧಿ ಕಾಮಗಾರಿಗಳಿಗೆ ಚುರುಕು ಕೊಡುವುದು ಒಂದೆಡೆಯಾದರೆ, ಕೆಲವು ಸಚಿವರು ಸ್ವಯಂ ಪ್ರೇರಿತರಾಗಿ ಉಸ್ತುವಾರಿ ಬದಲಾವಣೆಗೆ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂಧಿಸಿರುವ ಮುಖ್ಯಮಂತ್ರಿ ಅವರು, ಮೈಸೂರು ಜಿಲ್ಲಾ ಉಸ್ತುವಾರಿಯಾಗಿರುವ ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರಿಗೆ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ವಹಿಸಲಿದ್ದಾರೆ.
ಚಾಮರಾಜನಗರ ಉಸ್ತುವಾರಿಯಾಗಿರುವ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ನೀಡಲಿದ್ದಾರೆ. ಕೊಡಗು ಜಿಲ್ಲಾ ಉಸ್ತುವಾರಿಯಾಗಿರುವ ಎನ್. ಎಸ್. ಬೋಸರಾಜ್ ಅವರಿಗೆ ಅಲ್ಲಿಂದ ವಿಮುಕ್ತರನ್ನಾಗಿ ಮಾಡಿ ಕಲ್ಯಾಣ ಕರ್ನಾಟಕದ ಜಿಲ್ಲೆಯೊಂದರ ಉಸ್ತುವಾರಿ ನೀಡಲಿದ್ದಾರೆ.
ಸದಾ ವಿವಾದ ಎಬ್ಬಿಸುತ್ತಿರುವ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಅಲ್ಲಿಂದ ಬಿಡುಗಡೆಗೊಳಿಸಿ ಬೇರೆ ಜಿಲ್ಲೆಗೆ ಇಲ್ಲವೆ ಇಲಾಖಾ ಹೊಣೆಗಾರಿಕೆ ಮಾತ್ರ ನೀಡಲಿದ್ದಾರೆ. ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಅವಧಿ ಮುಗಿಯುತ್ತಿದ್ದಂತೆ ಈ ರೀತಿಯ ಬದಲಾವಣೆ ಆಗಲಿದೆ.
ಒಂದು ವರ್ಷದ ಆಡಳಿತಾವಧಿ ಪೂರ್ಣಗೊಳಿಸಿರುವ ಮುಖ್ಯಮಂತ್ರಿ ಅವರು ಸಂಪುಟ ಪುನಾರಚನೆ ಮಾಡುವ ಗೋಜಿಗೆ ಹೋಗುತ್ತಿಲ್ಲ. ಕೊಡಗು ಜಿಲ್ಲೆಗೆ ಭೋಸರಾಜು ಅವರ ಬದಲು ಬೇರೆಯವರು ಬರಲಿದ್ದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಹಲವರ ಹೆಸರುಗಳು ಕೊಡಗು ಜಿಲ್ಲೆಯ ಉಸ್ತುವಾರಿಗೆ ಕೇಳಿ ಬರುತ್ತಿದೆ.
ಕೋಲಾರ ಜಿಲ್ಲೆಯವರಾದ ಆಹಾರ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಅವರು ಸಧ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದು, ಕೋಲಾರ ಇಲ್ಲವೇ ಅಕ್ಕಪಕ್ಕದ ಯಾವುದಾದರೂ ಜಿಲ್ಲೆಗೆ ನೇಮಕ ಮಾಡುವಂತೆ ಮುಖ್ಯಮಂತ್ರಿಗಳನ್ನು ಕೋರಿದ್ದಾರೆನ್ನಲಾಗಿದೆ. ಇದೇ ರೀತಿ ಹಲವು ಸಚಿವರು ತಮಗೆ ನೀಡಲಾಗಿರುವ ಉಸ್ತುವಾರಿ ಜಿಲ್ಲೆಗಳ ಬದಲು ಬೇರೆ ಜಿಲ್ಲೆಗಳ ಉಸ್ತುವಾರಿಗೆ ನೇಮಕ ಮಾಡುವಂತೆ ಕೋರುತ್ತಿದ್ದಾರೆ ಎಂದು ತಿಳಿದು ಬಂದಿದೆ.