ಬೆಂಗಳೂರು: ಬಿಜೆಪಿ ಹೂಡಿರುವ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಅವರಿಗೆ ನಗರದ 42ನೇ ಎಸಿಎಂಎಂ ನ್ಯಾಯಾಲಯ ಇಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜಾಮೀನು ಮಂಜೂರು ನಂತರ ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಿತು.
75 ಲಕ್ಷ ರೂ. ಮೌಲ್ಯದ ಶ್ಯೂರಿಟಿ
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ಕಾಂಗ್ರೆಸ್ ಅಭ್ಯರ್ಥಿಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಅವರು ರಾಹುಲ್ ಗಾಂಧಿಗೆ 75 ಲಕ್ಷ ರೂ. ಮೌಲ್ಯದ ಶ್ಯೂರಿಟಿ ಒದಗಿಸಿದರು, ಕಾಗದಪತ್ರಗಳಿಗೆ ಸಹಿ ನಂತರ ರಾಹುಲ್ ಗಾಂಧಿ ನ್ಯಾಯಾಲಯದಿಂದ ಹೊರನಡೆದರು.
ಕಳೆದ ಬಾರಿ ವಿಚಾರಣೆ ವೇಳೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನ್ಯಾಯಾಧೀಶರ ಮುಂದೆ ಹಾಜರಾಗಿ ಷರತ್ತುಬದ್ಧ ಜಾಮೀನು ಪಡೆದಿದ್ದರು. ಪ್ರಕರಣದ ನಾಲ್ಕನೇ ಆರೋಪಿ ರಾಹುಲ್ ಗಾಂಧಿ ಗೈರಾಗಿದ್ದಕ್ಕೆ ಗರಂ ಆದ ನ್ಯಾಯಾಧೀಶರು, ಮುಂದಿನ ಬಾರಿ ರಾಹುಲ್ ಖುದ್ದು ಹಾಜರಿರಬೇಕು ಎಂದು ನಿರ್ದೇಶನ ನೀಡಿದ್ದರು.
ಚುನಾವಣೆ ಸಂದರ್ಭದಲ್ಲಿ ಆರೋಪ ಮಾಡಿದ್ದ ಕಾಂಗ್ರೆಸ್, 2019ರಿಂದ 2023ರವರೆಗೆ ಬಿಜೆಪಿ ಭ್ರಷ್ಟ ಆಡಳಿತ ನಡೆಸಿತ್ತು, ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ರೂ., ಸಚಿವ ಹುದ್ದೆಗಳಿಗೆ 500 ಕೋಟಿ ರೂ.ಗಳನ್ನು ಪಕ್ಷದ ಹೈಕಮಾಂಡ್ ನೀಡಿ ಪಡೆಯಲಾಗಿದೆ.
ಪರ್ಸೆಂಟೇಜ್ ಡೀಲ್ ಆರೋಪ
ಕೋವಿಡ್ ಸಮಯದಲ್ಲಿ ಕಿಟ್ ಪೂರೈಕೆ ಗುತ್ತಿಗೆಯಲ್ಲಿ 75% ಡೀಲ್, ಪಿಡಬ್ಲ್ಯೂಡಿ ಗುತ್ತಿಗೆಯಲ್ಲಿ 40% ಡೀಲ್, ಮಠಗಳ ಅನುದಾನದಲ್ಲಿ 30% ಡೀಲ್, ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆ ಪೂರೈಕೆ ಗುತ್ತಿಗೆಯಲ್ಲಿ 30% ಡೀಲ್, ರಸ್ತೆ ಕಾಮಗಾರಿಯಲ್ಲಿ 40% ಡೀಲ್ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಬಿಜೆಪಿ ಕಾರ್ಯದರ್ಶಿ ಕೇಶವ ಪ್ರಸಾದ್, 2023ರ ಮೇ 8ರಂದು 42ನೇ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿ, ಕಾಂಗ್ರೆಸ್ ನಾಯಕರು ಸುಳ್ಳು ಆರೋಪ ಮಾಡುವ ಮೂಲಕ ಬಿಜೆಪಿಗೆ ದಕ್ಕೆ ಉಂಟು ಮಾಡಿದ್ದಾರೆ, ಸುಳ್ಳು ಜಾಹೀರಾತು ನೀಡಿದ್ದರಿಂದ ಪಕ್ಷಕ್ಕೆ ಚುನಾವಣೆಯಲ್ಲಿ ಹಾನಿಯಾಗಿದೆ, ಆರೋಪಗಳಿಗೆ ದಾಖಲೆ ನೀಡಬೇಕು ಎಂದು ವಾದ ಮಾಡಿದ್ದರು.