ಸರ್ಕಾರ – ರಾಜಭವನದ ನಡುವೆ ಮುಂದುವರೆದ ಮುಸುಕಿನ ಗುದ್ದಾಟ
ಬೆಂಗಳೂರು : ರಾಜ್ಯ ಸರ್ಕಾರ ಹಾಗೂ ರಾಜಭವನದ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದ್ದು, ರಾಜ್ಯಪಾಲರು ಕೇಳಿರುವ ಪ್ರಶ್ನೆಗಳಿಗೆ ಸಚಿವ ಸಂಪುಟ ಸಭೆಯಲ್ಲಿ ಉತ್ತರ ನೀಡುವ ಕುರಿತು ತೀರ್ಮಾನವಾಗಲಿದೆ.
ಮುಡಾ ಹಗರಣದ ನಂತರ ರಾಜ್ಯಪಾಲರು, ಡಿ-ನೋಟಿಫೈ ಹೆಸರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ 520ಕ್ಕೂ ಹೆಚ್ಚು ರೀ-ಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ವರದಿ ಮತ್ತು ಮಾಹಿತಿಯನ್ನು ಈಗಾಗಲೇ ಕೇಳಿದ್ದಾರೆ.
ತದನಂತರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಣವನ್ನು ವರುಣಾ, ಶ್ರೀರಂಗಪಟ್ಟಣ ಕ್ಷೇತ್ರಗಳ ಅಭಿವೃದ್ಧಿಗೆ ಬಳಕೆ ಮಾಡಿರುವುದೂ ಸೇರಿದಂತೆ 26 ವಿಷಯಗಳ ಮೇಲೆ ಮಾಹಿತಿ ಹಾಗೂ ದಾಖಲೆಗಳನ್ನು ರಾಜಭವನದ ವಿಶೇಷ ಕಾರ್ಯದರ್ಶಿಗಳು ಸರ್ಕಾರವನ್ನು ಕೋರಿದ್ದಾರೆ.
ಹದಿಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವರಣೆ ಮತ್ತು ದಾಖಲೆ ನೀಡುವಂತೆ ಎರಡು ತಿಂಗಳ ಹಿಂದಿನಿಂದಲೇ ರಾಜ್ಯಪಾಲರು ಸರ್ಕಾರಕ್ಕೆ ವರದಿ ಕೇಳಿದ್ದರು. ರೀ-ಡೂ ವರದಿ ಮಾಹಿತಿ ಕೇಳುತ್ತಿದ್ದಂತೆ ಎಚ್ಚೆತ್ತ ಸರ್ಕಾರ, ಕಳೆದ ಸಂಪುಟ ಸಭೆಯಲ್ಲಿ ಮುಖ್ಯಕಾರ್ಯದರ್ಶಿ ಸೇರಿದಂತೆ ಯಾವುದೇ ಇಲಾಖಾ ಕಾರ್ಯದರ್ಶಿಗಳು ರಾಜ್ಯಪಾಲರು ಕೋರುವ ಮಾಹಿತಿಗೆ ಸ್ವತಂತ್ರವಾಗಿ ಉತ್ತರ ನೀಡಬಾರದು ಎಂಬ ತೀರ್ಮಾನ ಕೈಗೊಂಡಿತ್ತು.
ರಾಜಭವನ ಕೇಳುವ ಮಾಹಿತಿಗಳನ್ನು ಸಂಪುಟದ ಮುಂದಿಟ್ಟು ಅವುಗಳಿಗೆ ಅನುಮತಿ ನೀಡಿದರಷ್ಟೇ ಉತ್ತರಿಸುವಂತೆ ಕಟ್ಟಾದೇಶ ಮಾಡಿತ್ತು. ಸಂಪುಟ ಇಂತಹ ತೀರ್ಮಾನ ತೆಗೆದುಕೊಂಡ ನಂತರವೂ ರಾಜ್ಯಪಾಲರು ಮುಡಾ ಹಣ ದುರ್ಬಳಕೆ ಸೇರಿದಂತೆ ವಿವಿಧ ಸಚಿವರ ಮೇಲೆ ಬಂದಿರುವ ದೂರುಗಳಿಗೆ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಂದ ವಿವರಣೆ ಕೇಳಿದ್ದಾರೆ.
ಇದರ ಹಿನ್ನೆಲೆಯಲ್ಲೇ ಸಂಪುಟ ಸಭೆ ಸೇರಲಿದ್ದು, ರಾಜ್ಯಪಾಲರು ಎತ್ತಿರುವ 26 ಪ್ರಸ್ತಾವಗಳಿಗೂ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಿ ಉತ್ತರ ನೀಡಬೇಕೇ, ಬೇಡವೇ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ರಾಜ್ಯಪಾಲರ ನಡೆಯ ಬಗ್ಗೆ ಅಸಮಾಧಾನಗೊಂಡಿರುವ ಮುಖ್ಯಮಂತ್ರಿ ಅವರು, ಸಂಪುಟ ಸಭೆಯಲ್ಲಿ ಕಟು ನಿರ್ಣಯ ಕೈಗೊಳ್ಳಲು ಮುಂದಾಗಿದ್ದಾರಂತೆ.
ಸಂವಿಧಾನ ಬದ್ಧವಾಗಿ ಕೇಳುವ ಪ್ರಸ್ತಾವಗಳಿಗೆ ಸರ್ಕಾರದ ಉತ್ತರ ನೀಡೋಣ. ಅದನ್ನು ಬಿಟ್ಟು ರಾಜಕೀಯ ಕಾರಣಗಳಿಗಾಗಿ ಎತ್ತುವ ಪ್ರಸ್ತಾವಗಳಿಗೆ ಉತ್ತರ ನೀಡದೆ, ಅದರ ವಿರುದ್ಧ ಸಂಪುಟ ನಿರ್ಣಯ ಕೈಗೊಂಡು, ರಾಜಭವನ ಮತ್ತು ಕೇಂದ್ರಕ್ಕೆ ಅದರ ಪ್ರತಿ ಸಲ್ಲಿಸಲು ಮುಖ್ಯಮಂತ್ರಿ ಮುಂದಾಗಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.