ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವಕ್ಕೆ ರಾಜ್ಯ ಸಚಿವ ಸಂಪುಟ ಇಂದಿಲ್ಲಿ ತನ್ನ ಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ಮತ್ತು ಲೋಕಾಯುಕ್ತ ತನಿಖೆ ನಡೆದಿರುವ ಬೆನ್ನಲ್ಲೇ ಆಡಳಿತ ಪಕ್ಷದಲ್ಲಿ ಕೇಳಿಬರುತ್ತಿರುವ ಒಳ ರಾಜಕೀಯ ಮಾತುಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿ ಸಂಪುಟ ನಿರ್ಣಯ ಕೈಗೊಂಡಿದೆ.
ಸಚಿವರುಗಳ ಸಭೆ ಪ್ರಸ್ತಾಪ
ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪರಿಶಿಷ್ಟ ಜಾತಿ ಮತ್ತು ವರ್ಗದ ಸಚಿವರುಗಳು ಆಗಿಂದಾಗ್ಯೆ ಸಭೆ ಸೇರಿ ಚರ್ಚೆ ಮಾಡುವುದು ಹಾಗೂ ಕೆಲವು ಶಾಸಕರನ್ನು ವಿಶ್ವಾಸಕ್ಕೆ ಪಡೆಯಲು ಹೊರಟಿರುವುದು ಸಭೆಯಲ್ಲಿ ಪ್ರಸ್ತಾಪವಾಗಿದೆ.
ಸಂಪುಟ ಸಭೆ ನಂತರ ಅಧಿಕಾರಿಗಳನ್ನು ಹೊರಗೆ ಕಳುಹಿಸಿ, ಪ್ರಸಕ್ತ ರಾಜಕೀಯ ಸನ್ನಿವೇಶ, ಕೆಲವು ಪ್ರಕರಣಗಳಲ್ಲಿ ಕೇಂದ್ರ ಇ.ಡಿ. ಮಧ್ಯ ಪ್ರವೇಶ ಮಾಡುತ್ತಿರುವ ಬಗ್ಗೆ ಚರ್ಚೆ ನಡೆದಿದೆ.
ಯಾವುದೇ ಚಟುವಟಿಕೆ ನಡೆಯುತ್ತಿಲ್ಲ
ಪರ್ಯಾಯ ನಾಯಕತ್ವದ ಬಗ್ಗೆಯೂ ಮಾತುಗಳು ಕೇಳಿಬರುತ್ತಿರುವ ಕುರಿತು ಹಿರಿಯ ಸಚಿವರೊಬ್ಬರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದಾಗ, ಅಂತಹ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ಆ ಗುಂಪಿನ ಸಚಿವರೊಬ್ಬರು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇರುವವರೆಗೂ ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದಾಗ, ಇಡೀ ಸಂಪುಟ ಸಭೆ ಬೆಂಬಲ ವ್ಯಕ್ತಪಡಿಸಿತಲ್ಲದೆ, ’ನಿಮ್ಮ ಜೊತೆ ನಾವಿದ್ದೇವೆ’ ಎಂದು ಸಚಿವರು ಒಕ್ಕೊರಲಿನ ಬೆಂಬಲ ವ್ಯಕ್ತಪಡಿಸಿದ್ದಾರೆ.


