ಬೆಂಗಳೂರು:ಅನರ್ಹರು ಪಡೆದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್‌ಗೆ ವರ್ಗಾಯಿಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಇಂದಿಲ್ಲಿ ತಿಳಿಸಿದ್ದಾರೆ.
ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ನೀಡಿರುವ ಈ ಸವಲತ್ತನ್ನು ದೊಡ್ಡ ಪ್ರಮಾಣದಲ್ಲಿ ಅನರ್ಹರು ಪಡೆದುಕೊಂಡು ಸರ್ಕಾರದ ಎಲ್ಲಾ ಸವಲತ್ತುಗಳನ್ನು ಅನುಭವಿಸುತ್ತಿದ್ದಾರೆ.
ರದ್ದುಪಡಿಸಿಲ್ಲ
ಇಂತಹವರನ್ನು ನಮ್ಮ ಇಲಾಖೆ ಪತ್ತೆ ಹಚ್ಚಿ ಅವರ ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತಿಸುತ್ತಿದ್ದೇವೆ, ಆದರೆ, ಅವುಗಳನ್ನು ರದ್ದುಪಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಪಡಿತರ ಚೀಟಿ ದೊರೆತಿಲ್ಲದ ಬಡತನ ರೇಖೆಗಿಂತ ಕೆಳಗಿನವರಿಗೆ ಹೊಸದಾಗಿ ಪಡಿತರ ಚೀಟಿ ನೀಡುವ ಕಾರ್ಯವೂ ನಡೆದಿದೆ.
ನೆರೆ ರಾಜ್ಯಗಳಲ್ಲಿ ಶೇಕಡ 40ರಷ್ಟು ಮಂದಿಗೆ ಮಾತ್ರ ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ, ಆದರೆ, ನಮ್ಮಲ್ಲಿ ಶೇಕಡ 80ರಷ್ಟು ಮಂದಿ ಇಂತಹ ಚೀಟಿ ಹೊಂದಿದ್ದಾರೆ.
ಅನರ್ಹರಿಗೆ ಸವಲತ್ತು ಸಾಧ್ಯವಿಲ್ಲ
ಅನರ್ಹರಿಗೆ ಇಂತಹ ಸವಲತ್ತನ್ನು ಮುಂದುವರೆಸಲು ಸಾಧ್ಯವಿಲ್ಲ, ಆದರೆ, ಅವರು ಎಪಿಎಲ್ ಕಾರ್ಡ್ ಪಡೆದು ಅದರಲ್ಲಿ ಲಭ್ಯವಿರುವ ಸವಲತ್ತುಗಳನ್ನು ಪಡೆದುಕೊಳ್ಳಬಹುದು.
ಆದಾಯ ತೆರಿಗೆ ಪಾವತಿಸುವವರು, ಸುಸ್ಥಿತಿಯಲ್ಲಿರುವವರು ಈ ಸವಲತ್ತು ಪಡೆದು ಸರ್ಕಾರದ ಯೋಜನೆಗಳ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.
ಉಳ್ಳವರಿಗೆ ಇನ್ನು ಮುಂದೆ ಬಿಪಿಎಲ್ ಸವಲತ್ತು ನೀಡುವುದಿಲ್ಲ, ಪ್ರತಿಪಕ್ಷಗಳು ನಮ್ಮ ಈ ನಿರ್ಧಾರನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತವೆ, ನಾವು ಇದಕ್ಕೆ ಜಗ್ಗುವುದಿಲ್ಲ, ಅನರ್ಹ ಪಡಿತರ ಚೀಟಿಗಳ ನಿರ್ಮೂಲನೆ ಕಾರ್ಯ ಮುಂದುವರೆಸುತ್ತೇವೆ ಎಂದರು.