ಬಿಪಿಎಲ್ ಚೀಟಿ ದೊರೆಯದಿದ್ದರೆ ಅರ್ಜಿ ಸಲ್ಲಿಸಿ: ಸಿದ್ದರಾಮಯ್ಯ
ಬೆಂಗಳೂರು:ಬಡತನ ರೇಖೆಗಿಂತ ಕೆಳಗಿನ ಕುಟುಂಬಕ್ಕೆ ಬಿಪಿಎಲ್ ಪಡಿತರ ಚೀಟಿ ದೊರೆಯದಿದ್ದರೆ ಅಂತಹವರು ಅರ್ಜಿ ಸಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಶೇಕಡ20ರಷ್ಟು ಮಂದಿ ಅನರ್ಹರು ಬಿಪಿಎಲ್ ಪಡಿತರ ಚೀಟಿ ಪಡೆದು ಸರ್ಕಾರದ ಎಲ್ಲಾ ಸವಲತ್ತು ಪಡೆದುಕೊಳ್ಳುತ್ತಿದ್ದಾರೆ, ಅಂತಹವರಿಗೆ ಕಡಿವಾಣ ಹಾಕಲು ಇಲಾಖೆ ಮುಂದಾಗಿದೆ.
ಬಿಪಿಎಲ್, ಎಪಿಎಲ್ ಅಂದರೆ, ಬಡತನ ರೇಖೆಗಿಂತ ಕೆಳಗಿನವರು ಮತ್ತು ಮೇಲಿನವರು ಎಂದರ್ಥ ಆದರೆ, ಅನರ್ಹರು ಈ ಪಡಿತರ ಚೀಟಿಗಳನ್ನು ಪಡೆದು ಅರ್ಹರಿಗೆ ದಕ್ಕಬೇಕಾದ ಸವಲತ್ತುಗಳನ್ನು ಕಸಿದುಕೊಂಡಿದ್ದಾರೆ.
ಎಪಿಎಲ್ ಚೀಟಿಗಳಾಗಿ ಪರಿವರ್ತನೆ
ಅಂತಹವರ ಬಿಪಿಎಲ್ ಪಡಿತರ ಚೀಟಿಗಳನ್ನು ದೊಡ್ಡ ಪ್ರಮಾಣದಲ್ಲಿ ಎಪಿಎಲ್ ಚೀಟಿಗಳಾಗಿ ಪರಿವರ್ತಿಸುವ ಕಾರ್ಯ ನಡೆದಿದೆ, ಇದೇ ಸಂದರ್ಭದಲ್ಲಿ ಬಡತನ ರೇಖೆಗಿಂತ ಕೆಳಗಿನವರಿದ್ದರೆ, ಅಂತಹವರು ಅರ್ಜಿ ಹಾಕಿ ಪಡೆದುಕೊಳ್ಳಿ ಎಂದರು.
ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಬಡವರ ಅನ್ನ ಹಾಗೂ ಹಕ್ಕನ್ನು ಕಸಿಯುವುದಿಲ್ಲ.
ಪ್ರತಿಪಕ್ಷ ಬಿಜೆಪಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ, ಅರ್ಹರಿರುವವರಿಗೆ ಬಿಪಿಎಲ್ ಪಡಿತರ ಚೀಟಿ ಪಡೆದುಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದೇವೆ.
ಶೇಕಡ 80ರಷ್ಟು ಬಡವರ ಪ್ರಮಾಣ
ರಾಜ್ಯದಲ್ಲಿ ಶೇಕಡ 80ರಷ್ಟು ಬಡವರ ಪ್ರಮಾಣ ಇದೆಯೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಅವರು, ಸುಳ್ಳು ದಾಖಲೆಗಳನ್ನು ನೀಡಿ ಉಳ್ಳವರು ಬಿಪಿಎಲ್ ಕಾರ್ಡ್ ಪಡೆದಿರುವುದರಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ನಮ್ಮಲ್ಲಿ ಬಡತನ ಇದೆ ಎಂದು ತೋರಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಡವರಿಗೆ ಪಡಿತರ ಕಾರ್ಡ್, ಅಕ್ಕಿ, ಪಿಂಚಣಿ, ನಿವೇಶನ, ಆಶ್ರಯ ಯೋಜನೆ, ಉಳುವವನಿಗೆ ಭೂಮಿ ಸೇರಿದಂತೆ ಜನರಿಗೆ ಪ್ರಮುಖ ಯೋಜನೆ ಕೊಟ್ಟಿರುವುದು ಕಾಂಗ್ರೆಸ್ ಸರ್ಕಾರವೇ ಹೊರತು ಬಿಜೆಪಿಯಲ್ಲ ಎಂದರು.
ನಮ್ಮ ಸರ್ಕಾರದಿಂದ ಬಡವರಿಗೆ ತೊಂದರೆ ಆಗುವುದಿಲ್ಲ, ರಾಜಕೀಯ ಮಾಡಲು ವಿರೋಧ ಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುತ್ತಿವೆ, ಬಿಜೆಪಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಮ್ಮ ಸರ್ಕಾರದ ಮೇಲೆ ಟೀಕೆ ಮಾಡಲು ಬೇರೆ ವಿಚಾರಗಳಿಲ್ಲ, ಅವರ ಕಾಲದಲ್ಲಿ ಏನೇನು ಅನ್ಯಾಯ ಮಾಡಬೇಕೋ ಮಾಡಿದ್ದಾರೆ, ಅವರ ಸರ್ಕಾರದ ಅವಧಿಯಲ್ಲಿ ಬಡವರಿಗೆ ಸಹಾಯ ಮಾಡಲಿಲ್ಲ.
ರಾಜ್ಯಕ್ಕೆ ಕುಮಾರಸ್ವಾಮಿ ಕೊಡುಗೆ ಏನು
ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎನ್ನುವ ಕುಮಾರಸ್ವಾಮಿ, ಅಧಿಕಾರದಲ್ಲಿದ್ದಾಗ ಏನು ಮಾಡಿದರು, ರಾಜ್ಯಕ್ಕೆ ಅವರ ಕೊಡುಗೆ ಏನು, ಗಾಳಿಯಲ್ಲಿ ಗುಂಡು ಹೊಡೆಯುವುದೇ ಅವರ ಕೊಡುಗೆ, ಅವರ ಕಾಲದಲ್ಲಿ ಸರ್ಕಾರಕ್ಕೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಿದ್ದಾರಾ ಎಂದು ಪ್ರಶ್ನಿಸಿದರು.
ನಾವು ಬಂಡವಾಳ ತಂದು ರಾಜ್ಯದ ಆರ್ಥಿಕತೆಗೆ ಶಕ್ತಿ ತುಂಬುತ್ತಿದ್ದೇವೆ, ಟೆಕ್ ಸಮ್ಮಿಟ್ ಮಾಡಿದ್ದು ಉದ್ಯೋಗ ಸೃಷ್ಟಿ ಹಾಗೂ ಬಂಡವಾಳ ತರುವ ಉದ್ದೇಶದಿಂದ, ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟಿರುವ ಕೆಲಸವನ್ನು ಕುಮಾರಸ್ವಾಮಿ ಮಾಡಲಿ.
ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದಾರಲ್ಲ, ಅವರಿಗೆ ಎಷ್ಟು ಜಮೀನು ಬೇಕು ಪತ್ರ ಬರೆಯಲಿ, ಯಾವ ಕೈಗಾರಿಕೆ ತರುತ್ತಾರೆ ಎಂಬ ಬಗ್ಗೆ ಯೋಜನಾ ವರದಿ ಸಲ್ಲಿಸಲಿ, ನಾನೇ ನಿಂತು ಅಗತ್ಯ ಜಮೀನು ಕೊಡಿಸುತ್ತೇನೆ ಎಂದು ತಿರುಗೇಟು ನೀಡಿದರು.
ಬಿಡಿಎಲ್ ಕಾರ್ಡ್
ಕೆಲವು ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, ಆರ್ಥಿಕವಾಗಿ ಅನುಕೂಲವಾಗಿರುವವರು ಬಿಡಿಎಲ್ ಕಾರ್ಡ್ ಹೊಂದಿದ್ದಾರೆ, ಅಂತಹವರನ್ನು ಪರಿಶೀಲಿಸಲು ನಾವು ಮುಂದಾಗಿದ್ದೇವೆ, ಬಡವರೆಂದು ನಿರ್ಧರಿಸಲು ಕೇಂದ್ರ ಸರ್ಕಾರದ ಮಾನದಂಡವಿದೆ, ಅದರ ಆಧಾರದ ಮೇಲೆ ತೀರ್ಮಾನ ಮಾಡುತ್ತೇವೆ.
ಬಡವರ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ, ಅದನ್ನು ಸರಿಪಡಿಸಿ ಮತ್ತೆ ಅವರಿಗೆ ಅದೇ ಕಾರ್ಡ್ ನೀಡಲು ಮುಖ್ಯಮಂತ್ರಿ ಹಾಗೂ ನಮ್ಮ ಸರ್ಕಾರ ತೀರ್ಮಾನಿಸಿದೆ ಎಂದರು.
ಅಭಿವೃದ್ಧಿ ಯೋಜನೆಗಳಿಗೆ ಶಾಸಕರಿಗೆ ಅನುದಾನ ಸಿಗುತ್ತಿಲ್ಲ ಎಂಬುದಾಗಿ ಕಾಂಗ್ರೆಸ್‌ನ ಕೆಲವು ಶಾಸಕರು ತಮ್ಮದೇ ಲೆಕ್ಕಾಚಾರದಲ್ಲಿ ಹೇಳುತ್ತಿದ್ದು, ಕೆಲವರು ತಮ್ಮ ಕ್ಷೇತ್ರಕ್ಕೆ 100 ಕೋಟಿ ರೂ. ಅನುದಾನ ಬೇಕು ಎನ್ನುತ್ತಾರೆ, ಅವರು ಕೇಳಿದಾಕ್ಷಣ ಕೊಡಲು ಆಗುವುದಿಲ್ಲ, ಆಯಾ ಕ್ಷೇತ್ರಕ್ಕೆ ಎಷ್ಟು ಕೊಡಬೇಕು ಎಂಬ ಮಾನದಂಡ ಇರುತ್ತದೆ, ಅದರ ಆಧಾರದಲ್ಲಿ ನೀಡುತ್ತೇವೆ.
ಮಾಧ್ಯಮದಲ್ಲಿ ಚರ್ಚೆ ನಡೆಯುತ್ತಿಲ್ಲ
ಕಾಂಗ್ರೆಸ್ ಶಾಸಕರ ಖರೀದಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮದವರು ಬಿಜೆಪಿ ವಿಚಾರ ಚರ್ಚೆ ಮಾಡುತ್ತಿಲ್ಲ ಎಂಬುದು ನನ್ನ ಆರೋಪ, ಒಂದು ಸಾವಿರ ಕೋಟಿ ರೂ. ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಸ್ತಾಪ ಕುರಿತು ಮಾಧ್ಯಮದಲ್ಲಿ ಚರ್ಚೆ ನಡೆಯುತ್ತಿಲ್ಲ.
ಈ ವಿಚಾರ ಮೊದಲು ಯತ್ನಾಳ್ ಪ್ರಸ್ತಾಪಿಸಿದ್ದು, ಅದರ ಬಗ್ಗೆ ಚರ್ಚೆ ಮಾಡಿ, ಆ ಹಣ ಎಲ್ಲಿಂದ ಬಂತು, ಅದು ಯಡಿಯೂರಪ್ಪ, ಅಶೋಕ್, ವಿಜಯೇಂದ್ರ, ಅಶ್ವತ್ಥ್ ನಾರಾಯಣ್, ಕುಮಾರಸ್ವಾಮಿ ಯಾರ ಮನೆಯಲ್ಲಿದೆ ಎಂದು ಚರ್ಚೆ ಮಾಡಿ, ಯತ್ನಾಳ್ ಆರೋಪಕ್ಕೆ ಬಿಜೆಪಿ, ಅವರಿಗೆ ನೋಟಿಸ್ ಕೊಟ್ಟಿದ್ದಾರಾ, ಅದು ಸುಳ್ಳು ಎಂದು ಹೇಳಿದ್ದಾರಾ, ಮೊದಲು ಅಲ್ಲಿಂದ ಚರ್ಚೆ ಆರಂಭವಾಗಲಿ ಎಂದರು.
ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧ ಮದ್ಯ ಮಾರಾಟಗಾರರ ಅಸೋಸಿಯೇಷನ್ ಪ್ರತಿಭಟನೆ ನಡೆಸುವ ವಿಚಾರ ಆಲಿಸಲು ಮುಖ್ಯಮಂತ್ರಿ ಸಮಯಾವಕಾಶ ನೀಡಿದ್ದಾರೆ, ವರ್ತಕರಿಗೆ ಕಿರುಕುಳ ಆಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ, ನಾವು ಅದನ್ನು ಮಾಡುತ್ತೇವೆ ಎಂದರು.