ಸಹಕಾರಿ ಸಚಿವರಾದ ನಂತರ ನಬಾರ್ಡ್ ಸಾಲ ಪ್ರಮಾಣ ಇಳಿಕೆ
ಬೆಂಗಳೂರು:ಅಮಿತ್ ಷಾ ಕೇಂದ್ರ ಸಹಕಾರಿ ಸಚಿವರಾದ ನಂತರ ಕರ್ನಾಟಕಕ್ಕೆ ನೀಡುವ ನಬಾರ್ಡ್ ಸಾಲ ಪ್ರಮಾಣ ಇಳಿಕೆಯಾಗುತ್ತಿದ್ದು, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಆರೋಪಿಸಿದೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರಾದ ಚಲುವರಾಯಸ್ವಾಮಿ ಹಾಗೂ ಕೆ.ರಾಜಣ್ಣ, ಪ್ರಸಕ್ತ ಸಾಲಿಗೆ ರಾಜ್ಯಕ್ಕೆ 9,000 ಕೋಟಿ ರೂ. ನೀಡುವಂತೆ ಕೇಳಿದರೆ, 2,340 ಕೋಟಿ ರೂ. ಮಾತ್ರ ಮಂಜೂರು ಮಾಡಲಾಗಿದೆ, ಯಾವುದೇ ಸೂಚನೆ ಇಲ್ಲದೇ ಕೃಷಿ ಸಾಲ ಮಿತಿ ಗಣನೀಯವಾಗಿ ಕಡಿಮೆಯಾಗಿದೆ ಎಂದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ಪತ್ರ ಬರೆಯಲಾಗಿದೆ, ರಾಜ್ಯಕ್ಕೆ ನ್ಯಾಯ ಕೊಡಿಸಲು ಕೇಂದ್ರ ಸರ್ಕಾರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ ಸಹಾಯಕ್ಕೆ ಬರಬೇಕು, ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಹಿರಿಯರಾಗಿದ್ದು, ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡಬೇಕು.
ರೈತರಿಗೆ ನ್ಯಾಯ ಕೊಡಿಸಬೇಕು
ಯಾವಾಗಲೂ ರೈತರ ಪರ ಅನ್ನೋ ಕುಮಾರಸ್ವಾಮಿ ನಬಾರ್ಡ್ ಸಾಲ ಪ್ರಮಾಣದ ಬಗ್ಗೆ ಏಕೆ ಬಾಯಿ ಬಿಡುತ್ತಿಲ್ಲ, ರಾಜ್ಯಕ್ಕೆ ಬಂದು ರಾಜಕಾರಣ ಮಾಡಲಿ, ಆದರೆ, ರೈತರ ವಿಚಾರದಲ್ಲಿ ನ್ಯಾಯ ಕೊಡಿಸಬೇಕಲ್ಲವೇ ಎಂದರು.
ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಬೇಕು, ಪ್ರತಿ ವರ್ಷ ರೈತರಿಗೆ ಸಾಲ ಸೌಲಭ್ಯ ವ್ಯವಸ್ಥೆ, ಬಿತ್ತನೆಬೀಜಕ್ಕೆ ಹಣಕಾಸಿನ ರೂಪದಲ್ಲಿ ಸಹಾಯ ಮಾಡುತ್ತೇವೆ, ಶೇಕಡ 4.5 ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿತ್ತು, ರೈತರಿಗೆ ಶಕ್ತಿ ತುಂಬಲು ಸಹಕಾರ ಸಂಘಗಳಿವೆ, ಇವುಗಳಿಗೆ ಬಲ ತುಂಬುವುದು ನಬಾರ್ಡ್.
ನಬಾರ್ಡ್‌ನಿಂದ ರಾಜ್ಯಕ್ಕೆ ಮಂಜೂರಾದ ಅಲ್ಪಾವಧಿ ಕೃಷಿ ಸಾಲ ಪ್ರಮಾಣದ ವರ್ಷಾವಾರು ವಿವರ ನೀಡಿದ ಅವರು, 2020/21ರಲ್ಲಿ 5,500 ಕೋಟಿ ರೂ., 21/22ರಲ್ಲಿ 5,483 ಕೋಟಿ ರೂ., 22/23ರಲ್ಲಿ 5,550 ಕೋಟಿ ರೂ., 23/24 ರಲ್ಲಿ 5,600 ಕೋಟಿ ರೂ. ಬಂದಿದ್ದರೆ, ಈ ಬಾರಿ ಕೇವಲ 2,300 ಕೋಟಿ ರೂ. ಬಂದಿದೆ, 2024/25ರಲ್ಲಿ ರಿಯಾಯಿತಿ ಬಡ್ಡಿ ದರದಲ್ಲಿ ಶೇಕಡಾ 58 ಕಡಿಮೆ ಮಾಡಲಾಗಿದೆ.
ಶೂನ್ಯ ಬಡ್ಡಿ ಸಾಲ
ರೈತರಿಗೆ ನಾವು ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡುತ್ತಿದ್ದೆವು, ಪ್ರಸ್ತುತ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಲಾಗಿದೆ, 3 ಲಕ್ಷದಿಂದ 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ಸಾಲ ಕೊಡುತ್ತಿದ್ದೇವೆ, ದೀರ್ಘಾವಧಿ ಸಾಲ 10 ರಿಂದ 15 ಲಕ್ಷ ರೂ. ಕೊಡುತ್ತೇವೆ.
ಆದರೆ, ನಬಾರ್ಡ್‌ನಿಂದ ಈ ಬಾರಿ ಸಾಲ ಪ್ರಮಾಣದಲ್ಲಿ ಕಡಿತವಾಗಿರುವ ಪರಿಣಾಮ ಸಹಕಾರಿ ಬ್ಯಾಂಕ್‌ಗಳ ಸಾಲ ನೀಡಿಕೆ ಪ್ರಮಾಣವೂ ಕಡಿಮೆಯಾಗಲಿದ್ದು, ರೈತರು ಖಾಸಗಿ ಬ್ಯಾಂಕ್ ಹಾಗೂ ಲೇವಾದೇವಿದಾರರ ಬಳಿ ಅಧಿಕ ಬಡ್ಡಿ ದರದ ಸಾಲ ಪಡೆಯಲು ಮುಂದಾಗುತ್ತಾರೆ.
ಹೆಚ್ಚಿನ ಬಡ್ಡಿಗೆ ಸಾಲ ಪಡೆಯುವ ರೈತರು, ಸಾಲ ತೀರಿಸಲಾಗದೆ, ಸಂಕಷ್ಟಕ್ಕೆ ಸಿಲುಕುತ್ತಾರೆ, ಇದಕ್ಕೆ ಕೇಂದ್ರ ಸರ್ಕಾರವೇ ಜವಾಬ್ದಾರಿ ಹೊರಬೇಕಾಗುತ್ತದೆ.
ಸುಪ್ರೀಂಕೋರ್ಟ್ ಮೊರೆ
ಈ ಹಿಂದೆ ನೆರವಿಗಾಗಿ ಕೇಂದ್ರಕ್ಕೆ ಬೇಡಿಕೆ ಇಟ್ಟಿದ್ದೆವು, ಸಚಿವರಾದ ಪ್ರಿಯಾಂಕ್ ಖರ್ಗೆ, ಕೃಷ್ಣಬೈರೇಗೌಡ ಅವರೊಂದಿಗೆ ದೆಹಲಿಗೆ ತೆರಳಿ ರಾಜ್ಯ ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರೆಯಲಿಲ್ಲ, ಅನಿವಾರ್ಯವಾಗಿ ಸುಪ್ರೀಂಕೋರ್ಟ್ ಮೊರೆ ಹೋಗಬೇಕಾಯಿತು ಎಂದರು.
ಎನ್‌ಡಿಆರ್‌ಎಫ್‌ನಲ್ಲಿ ಬರುವ ಹಣ ಕಡಿಮೆ ಆಗಿದೆ ಎಂದು ರೈತರು ಅಸಮಾಧಾನ ಹೊರಹಾಕಿದ್ದಾರೆ, ಕೇಂದ್ರ ಸರ್ಕಾರ, ಆರ್‌ಬಿಐ ಜೊತೆ ವ್ಯವಹರಿಸಿ ಅಲ್ಪಾವಧಿ ಕೃಷಿ ಸಾಲ ಪಡೆಯಲು ಸಹಕಾರ ನೀಡಬೇಕು, ಜಿಎಸ್‌ಟಿ ಹಣದಲ್ಲಿ ನಮಗೆ 52 ಸಾವಿರ ಕೋಟಿ ರೂ. ಬರಬೇಕಿದೆ.
ಪ್ರತಿ ವರ್ಷ ನಬಾರ್ಡ್ ಹೆಚ್ಚು ಹಣ ನೀಡುತ್ತಿತ್ತು, ಆದರೆ, ಈ ವರ್ಷ ಮಾತ್ರವೇ ಕಡಿಮೆ ಕೊಟ್ಟಿದ್ದಾರೆ, ನಬಾರ್ಡ್ ಕೇಂದ್ರ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತದೆ, ನಾವು ಕೇಂದ್ರ ಸರ್ಕಾರವನ್ನು ಕೇಳಿದರೆ ಸ್ಪಂದನೆಯೇ ಇಲ್ಲ.
ಬಡವರ ಯೋಜನೆಯಲ್ಲೂ ಹಣ ಕಡಿತ
ಜಿಎಸ್‌ಟಿಯಲ್ಲೂ ಕರ್ನಾಟಕಕ್ಕೆ ಅನ್ಯಾಯ ಆಗಿದೆ, ನಮ್ಮ ರಾಜ್ಯ 4 ಲಕ್ಷದ 50 ಸಾವಿರ ಕೋಟಿ ರೂ. ತೆರಿಗೆ ಪಾವತಿಸುತ್ತದೆ, ಆದರೆ, ನಮಗೆ ಹಿಂತಿರುಗಿ ಬರುವುದು ಕೇವಲ 52 ಸಾವಿರ ಕೋಟಿ ರೂ. ಮಾತ್ರ, ಪ್ರಧಾನಿ ಆವಾಸ್ ಯೋಜನೆಯಡಿ ಹಣ ನೀಡುತ್ತದೆ, ಬಡವರ ಯೋಜನೆಯಲ್ಲೂ ಹಣ ಕಡಿತವಾಗುತ್ತದೆ, ಇದು ಸಾಮಾನ್ಯರ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ.
ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ, ರಾಷ್ಟ್ರಮಟ್ಟದಲ್ಲಿ ಟಾಂಟಾಂ ಹೊಡೆಯುತ್ತಾರೆ, ಅದಕ್ಕಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ನಡೆದ ಸಭೆಯಲ್ಲಿ ನಮಗೆ ಹಲವು ಸೂಚನೆ ಕೊಟ್ಟಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ತುಮಕೂರಿನಲ್ಲಿ ಸರ್ಕಾರಿ ಸವಲತ್ತುಗಳ ಸಮಾವೇಶ ಮಾಡಲಿದ್ದಾರೆ, ಹಾಸನದಲ್ಲಿ ರಾಜಕೀಯ ಸಮಾವೇಶ ನಡೆಯಲಿದೆ, ಡಿಸೆಂಬರ್ 5 ರಂದು ಸಮಾವೇಶ ನಡೆಸಲು ಯೋಜನೆ ರೂಪಿಸಲಾಗುತ್ತಿದೆ, ಸಿದ್ದರಾಮಯ್ಯ ಅವರಿಗೆ ಶಕ್ತಿ ಇದೆ, ಇದು ಸಮಾನ ಮನಸ್ಕರ ಸಮಾವೇಶ, ಪಕ್ಷವನ್ನೊಳಗೊಂಡ ಸಮಾವೇಶ ಎಂದರು.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಅವರಿಗೆ ಇ.ಡಿ. ತನಿಖೆಯಿಂದ ಯಾವುದೇ ಒತ್ತಡ ಉಂಟಾಗಿಲ್ಲ, ಸಿದ್ದರಾಮಯ್ಯ ಅವರನ್ನು ಟಗರು ಅಂತಾ ಕರೀತಾರೆ, ಎಂಟತ್ತು ಹೆಣ್ಣು ಕುರಿಗಳಿದ್ದರೆ, ಒಂದೇ ಟಗರು ಇರುತ್ತೆ, ಅದು ಸಿದ್ದರಾಮಯ್ಯ, ಅದಕ್ಕೆಲ್ಲ ಹೆದರುವುದಕ್ಕೆ ಆಗುತ್ತೇನ್ರಿ ಎಂದರು.