ಬೆಂಗಳೂರು:ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಕಾಂಗ್ರೆಸ್‌ನ ಹಿರಿಯ ಶಾಸಕ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ ಬಾಂಬ್ ಸಿಡಿಸಿದ್ದಾರೆ.
ಹಣ ನೀಡದೆ ಸರ್ಕಾರದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಆಡಳಿತದ ವಿರುದ್ಧ ಕಿಡಿಕಾರಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ಆಗ್ರಹ
ಮತ್ತೊಂದೆಡೆ ಶಾಸಕ ಹಾಗೂ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ, ವಸತಿ ಸಚಿವ ಜಮೀರ್ ಅಹಮದ್ ಖಾನ್ ರಾಜೀನಾಮೆ ಕೇಳಿದ್ದಾರೆ.
ಬಿ.ಆರ್.ಪಾಟೀಲ್ ಭ್ರಷ್ಟಾಚಾರದ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಿದ್ದಂತೆ ಆಡಳಿತ ಪಕ್ಷದ ಶಾಸಕರು, ಸಚಿವರು ಒಬ್ಬೊಬ್ಬರೇ ಆಡಳಿತ ವೈಫಲ್ಯಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧವೇ ಆರೋಪ ಮಾಡುತ್ತಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಜುಕಾಗೆ, ಪಕ್ಷದ ಹಿರಿಯ ಶಾಶಕ ಬಿ.ಆರ್.ಪಾಟೀಲ್ ಹೇಳಿಕೆಯನ್ನು ಸಂಪೂರ್ಣ ಸಮರ್ಥಿಸಿ, ತಾವು ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಎಲ್ಲಾ ಪದವಿಗಳಿಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
ಅಧಿಕಾರಿಗಳು ಮಾತು ಕೇಳುತ್ತಿಲ್ಲ
ಬಿ.ಆರ್.ಪಾಟೀಲ್ ಹೇಳಿದ್ದಾರಲ್ಲ, ಅದಕ್ಕಿಂತ ಅದರಪ್ಪನ ಸ್ಥಿತಿ ನನ್ನದಾಗಿದೆ, ನಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಅಭಿವೃದ್ಧಿಯೇ ಇಲ್ಲ, ಅಧಿಕಾರಿಗಳು ಮಾತು ಕೇಳುತ್ತಿಲ್ಲ.
ಮುಖ್ಯಮಂತ್ರಿ ಅವರು ಕ್ಷೇತ್ರಕ್ಕೆ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವ ಪತ್ರವೊಂದೇ ಅಭಿವೃದ್ಧಿ ಆಗಿರುವುದು.
ಬಿಡುಗಡೆ ಆಗಿರುವ ಹಣಕ್ಕೆ ಅಧಿಕಾರಿಗಳು ಕ್ರಿಯಾ ಯೋಜನೆ ರೂಪಿಸುತ್ತಿಲ್ಲ, ಅವರು ನಮ್ಮ ಮಾತು ಕೇಳುತ್ತಿಲ್ಲ, ಒಟ್ಟಾರೆ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ.
ರಾಜೀನಾಮೆ ನೀಡುವ ಸ್ಥಿತಿ
ಇದರಿಂದ ನನ್ನ ಮನಸ್ಸಿಗೆ ಘಾಸಿಯಾಗಿದ್ದು ಕ್ಷೇತ್ರದ ಜನರಿಗೆ ಮುಖ ಕೊಟ್ಟು ಮಾತನಾಡಲಾಗದೆ ರಾಜೀನಾಮೆ ನೀಡುವ ಸ್ಥಿತಿ ಎದುರಾಗಿದೆ.
ಎರಡು ವರ್ಷ ಕಳೆದರೂ ಕಾಮಗಾರಿಗಳಿಗೆ ಕೆಲಸದ ಆದೇಶಗಳು ನೀಡುತ್ತಿಲ್ಲ ಎಂದರೆ ಏನರ್ಥ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ಪ್ರವಾಸದಿಂದ ಹಿಂತಿರುಗುತ್ತಿದ್ದಂತೆ ಅವರನ್ನು ಭೇಟಿ ಮಾಡಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ, ವಿಧಾನಸಭಾ ಅಧ್ಯಕ್ಷರನ್ನು ಭೇಟಿ ಮಾಡಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್‌ನಿಂದ ವಿಧಾನಸಭೆಗೆ
ಬೆಳಗಾವಿ ಜಿಲ್ಲೆ ಕಾಗವಾಡ ಕ್ಷೇತ್ರ ಪ್ರತಿನಿಧಿಸುವ ರಾಜುಕಾಗೆ ಮೂಲತಃ ಜನತಾ ಪರಿವಾರದವರು, ದಿವಂಗತ ಉಮೇಶ್ ಕತ್ತಿ ಆಪ್ತರಾಗಿದ್ದ ಅವರು ಬಿಜೆಪಿ ಸೇರಿ ನಂತರ ಕಾಂಗ್ರೆಸ್‌ನಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.
ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ವಸತಿ ಸಚಿವರ ಮೇಲೆ ಗಂಭೀರ ಆರೋಪ ಬಂದಿದೆ, ಆರೋಪ ಮಾಡಿರುವುದು ಅನ್ಯರಲ್ಲ, ನಮ್ಮ ಪಕ್ಷದ ಹಿರಿಯರೊಬ್ಬರು, ಹೀಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ.
ಆರೋಪದಿಂದ ಮುಕ್ತಗೊಂಡು ಮಂತ್ರಿಯಾಗಲಿ, ಈ ಹಿಂದೆ ರಾಜ್ಯದಲ್ಲಿ ಇಂತಹ ಹಲವಷ್ಟು ಘಟನೆಗಳು ನಡೆದಿವೆ ಎಂದರು.
ತೀವ್ರ ಅಸಮಾಧಾನ
ಸಚಿವರಾದ ಕೃಷ್ಣಬೈರೇಗೌಡ, ಎಚ್.ಕೆ.ಪಾಟೀಲ್, ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ್ ಆಡಳಿತಶಾಹಿ ವಿರುದ್ಧ ಗುಡುಗಿದ ಬೆನ್ನಲ್ಲೇ ಶಾಸಕ ರಾಜುಕಾಗೆ ವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆಗೆ ಮುಂದಾಗಿದ್ದಾರೆ.
ಆಡಳಿತ ವ್ಯವಸ್ಥೆ ಬಗ್ಗೆ ತಮ್ಮ ಆಪ್ತ ಬಳಗವೇ ತಿರುಗಿಬಿದ್ದಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ತುಟಿ ಬಿಚ್ಚದೆ ಮೌನ ವಹಿಸಿರುವುದು ಕಾಂಗ್ರೆಸ್ ನಾಯಕರಲ್ಲಿ ಗೊಂದಲಕ್ಕೆ ಎಡೆ ಮಾಡಿದೆ.

