ನವದೆಹಲಿ:ಉಳಿದ ಮೂರು ವರ್ಷ ಅವಧಿಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಅವರ ಆರ್ಥಿಕ ಸಲಹೆಗಾರ ಹಾಗೂ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಬಹಿರಂಗಪಡಿಸಿದ್ದಾರೆ.
ಪಕ್ಷದ ಶಾಸಕರ ಅಸಮಾಧಾನದ ಹಿನ್ನೆಲೆಯಲ್ಲಿ, ಕೇಂದ್ರದಿಂದ ಆರ್ಥಿಕ ನೆರವು ತರಲು ಕಳೆದ ಎರಡು ದಿನಗಳಿಂದ ಮುಖ್ಯಮಂತ್ರಿ ದೆಹಲಿಯಲ್ಲಿ ಬಿಡಾರ ಹೂಡಿರುವ ಸಂದರ್ಭದಲ್ಲೇ ಈ ಹೇಳಿಕೆ ನೀಡಿದ್ದಾರೆ.
3 ವರ್ಷ ಒಳ್ಳೆಯ ಆಡಳಿತ
ಮುಖ್ಯಮಂತ್ರಿ ಪರ ಎಲ್ಲಾ ಶಾಸಕರು ಇದ್ದಾರೆ, ಅವರು ಮುಂದಿನ ಮೂರು ವರ್ಷ ಒಳ್ಳೆಯ ಆಡಳಿತ ನೀಡುತ್ತಾರೆ, ಅದನ್ನು ನೀಡಬೇಕು ಎಂಬುದಾಗಿ ಹೇಳಿದ್ದೇನೆ.
ಮುಖ್ಯಮಂತ್ರಿ ಅವರಿಗೆ ಬದ್ಧತೆ ಇದೆ, ಅದನ್ನು ಅವರು ಈಗಾಗಲೇ ತೋರಿಸಿದ್ದಾರೆ, ಭ್ರಷ್ಟಾಚಾರ ಎನ್ನುವುದು ಸರ್ಕಾರದ ಒಂದು ಭಾಗವಾಗಿ ಹೋಗಿದೆ.
ಕಡಿವಾಣಕ್ಕೆ ಕ್ರಮ
ಇದಕ್ಕೆ ಕಡಿವಾಣ ಹಾಕಲು ಸಿದ್ದರಾಮಯ್ಯ ಕೆಲವು ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದಾರೆ.
ಸಚಿವರು, ಶಾಸಕರ ಶಿಫಾರಸಿನ ಮೂಲಕ ವರ್ಗಾವಣೆ ನಡೆಯಬಾರದು ಎಂಬ ಉದ್ದೇಶ ಹಾಗೂ ಭ್ರಷ್ಟಾಚಾರ ತಡೆಯಲು ಅಬಕಾರಿ, ಗಣಿ, ಉಪನೋಂದಣಾಧಿಕಾರಿ, ವಾಣಿಜ್ಯ ತೆರಿಗೆ ಸೇರಿದಂತೆ ಕೆಲವು ಪ್ರಮುಖ ಇಲಾಖೆ ವರ್ಗಾವಣೆಗಳಿಗೆ ಕೌನ್ಸಿಲಿಂಗ್ ನಡೆಸುತ್ತಿರುವುದೇ ಸಾಕ್ಷಿಯಾಗಿದೆ ಎಂದರು.


