ನಂದಿಬೆಟ್ಟ:ಸರ್ಕಾರ ಐದು ವರ್ಷಗಳ ಕಾಲ ಬಂಡೆಯಂತಿದ್ದು, ನಾನೇ ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸುತ್ತೇನೆ ಎಂದು ಸಿದ್ದರಾಮಯ್ಯ ಇಂದಿಲ್ಲಿ ಘೋಷಿಸಿದರು.
ರಾಜ್ಯ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ನಾಯಕತ್ವ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಮೂರು ದಿನಗಳಿಂದ ಪರೋಕ್ಷವಾಗಿ ಪಕ್ಷದ ಶಾಸಕರ ಅಭಿಪ್ರಾಯ ಸಂಗ್ರಹಿಸುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ಈ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂಡೆಯಂತಿದೆ
ನಂದಿಬೆಟ್ಟದಲ್ಲಿ ಜರುಗಿದ ಸಚಿವ ಸಂಪುಟ ಸಭೆಗೂ ಮುನ್ನ ಬೋಗ ನಂದೀಶ್ವರ ದೇವಸ್ತಾನದ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕದಲ್ಲಿ ಐದು ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಬಂಡೆ ರೀತಿ ಇರುತ್ತದೆ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು.
ಪತ್ರಿಕಾಗೋಷ್ಠಿ ಮುಗಿಯುವ ಹಂತಕ್ಕೆ ಬಂದ ಸಂದರ್ಭದಲ್ಲಿ, ನನ್ನ ನೇತೃತ್ವದಲ್ಲೇ ಕಾಂಗ್ರೆಸ್ ಆಡಳಿತಾವಧಿ ಪೂರ್ಣಗೊಳ್ಳುತ್ತದೆ, ನಾನೇ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರುತ್ತೇನೆ, ಇದರಲ್ಲಿ ಯಾರಿಗೂ ಅನುಮಾನ ಬೇಡ ಎಂದರು.
ಯಾವುದೇ ಗೊಂದಲಗಳಿಲ್ಲ
ನಾಯಕತ್ವ ವಿಚಾರವಾಗಿ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ, ಎಲ್ಲರೂ ಒಗ್ಗಟ್ಟಾಗಿದ್ದೇವೆ, ತಮ್ಮ ಅಧಿಕಾರಾವಧಿ ಮತ್ತು ಸರ್ಕಾರದ ಅಧಿಕಾರಾವಧಿ ಬಗ್ಗೆ ಮಾತನಾಡಲು ಬಿಜೆಪಿ ನಾಯಕರು ಯಾರು ಎಂದು ಪ್ರಶ್ನಿಸಿದರು.
ಆ ಪಕ್ಷದ ಆರ್.ಅಶೋಕ್, ವಿಜಯೇಂದ್ರ ನಮ್ಮ ಹೈಕಮಾಂಡ, ನಾನು ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸುವ ಬಗ್ಗೆ ಅವರಿಗೇಕೆ ಅನುಮಾನ ಎಂದು ಕೇಳಿದ ಅವರು, ಇದರಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲ ಎಂದರು.
ಸುಳ್ಳು ಹೇಳುವುದರಲ್ಲಿ ನಿಸ್ಸೀಮರು
ಬಿಜೆಪಿ ನಾಯಕರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು, ಆವರ ಮಾತುಗಳಿಗೆ ಯಾವುದೇ ಮಾನ್ಯತೆ ಕೊಡುವುದು ಬೇಡ, ಅವರು ನಾಲ್ಕು ವರ್ಷ ಆಡಳಿತ ನೀಡಿ, ಯಾವ ಸಾಕ್ಷಿಯ ಗುಡ್ಡೆ ಬಿಟ್ಟು ಹೋಗಿದ್ದಾರೆ ಎಂದು ಕೇಳಿದರು.
ನೀರಾವರಿ, ಲೋಕೋಪಯೋಗಿ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ಯಾವ ಇಲಾಖೆಯಲ್ಲಿ ಇವರು ಸಾಧನೆ ಮಾಡಿದ್ದಾರೆ.
ಇವರಿಗೆ ದೊರೆತ ಅವಕಾಶದಲ್ಲಿ ವ್ಯಾಪಕ ಅಕ್ರಮ, ಭ್ರಷ್ಟಾಚಾರ ನಡೆಸಿದ್ದಷ್ಟೇ ಇವರ ಸಾಧನೆ, ಅದನ್ನು ಮುಚ್ಚಿಕೊಳ್ಳಲು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಆಪಾದಿಸಿದರು.


