ಬೆಂಗಳೂರು:ಕಾಂಗ್ರೆಸ್‌ನಲ್ಲಿ ಯಾವುದೇ ಅಸಮಾಧಾನವಿಲ್ಲ, ಪಕ್ಷ ಸಂಘಟನೆ ಸೇರಿದಂತೆ ಎಲ್ಲ ವಿದ್ಯಮಾನ ಗಮನಿಸಲು ಪ್ರಧಾನಕಾರ್ಯದರ್ಶಿ ಹಾಗೂ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯಕ್ಕೆ ಆಗಮಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿನಿಂದಲೇ ಚುನಾವಣೆಗೆ ತಯಾರಿ, ಜವಾಬ್ದಾರಿಗಳ ನಿರ್ವಹಣೆ ಹಾಗೂ ಜವಾಬ್ದಾರಿ ವಹಿಸುವ ಕುರಿತು ಚರ್ಚಿಸಲು ಸುರ್ಜೇವಾಲ ಬಂದಿದ್ದಾರೆ ಎಂದರು.
ಪಕ್ಷದಲ್ಲಿ ಶಿಸ್ತು ಮುಖ್ಯ
ಪಕ್ಷದಲ್ಲಿ ಶಿಸ್ತು ಮುಖ್ಯ, ಶಾಸಕ ಇಕ್ಬಾಲ್ ಹುಸೇನ್‌ಗೂ ನೋಟಿಸ್ ನೀಡುವೆ, ಬೇರೆಯವರಿಗೂ ನೋಟಿಸ್ ನೀಡಬೇಕಾಗುತ್ತದೆ, ನನ್ನ ಹೆಸರು ಹೇಳಿ, ನನ್ನನ್ನು ಮುಖ್ಯಮಂತ್ರಿ ಮಾಡಿ ಎನ್ನುವ ಅವಶ್ಯಕತೆಯಿಲ್ಲ, ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಇರುವಾಗ ಬೇರೆ ಹೆಸರು ಏಕೆ ಪ್ರಸ್ತಾಪಿಸಬೇಕು.
ನಾನೊಬ್ಬನೆ ಪಕ್ಷ ಕಟ್ಟಿದ್ದೇನೆಯೇ, ನನ್ನಂತೆ ನೂರಾರು, ಸಾವಿರಾರು, ಲಕ್ಷಾಂತರ ಜನ ಪಕ್ಷ ಕಟ್ಟಿದ್ದಾರೆ, ಮೊದಲು ಅವರ ನಂಬಿಕೆ ಉಳಿಸಿಕೊಳ್ಳೋಣ ಎಂದರು.
ನಾಡಪ್ರಭು ಕೆಂಪೇಗೌಡ ಮಾಗಡಿ ಸ್ಮಾರಕ ಅಭಿವೃದ್ಧಿ ಸೇರಿದಂತೆ ಬೆಂಗಳೂರಿನ ಚಿಕ್ಕಪುಟ್ಟ ನೀರಾವರಿ ಯೋಜನೆ ಅನುಷ್ಠಾನ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು.
ಬೆಂಗಳೂರು ಉತ್ತರ ಬೇಡಿಕೆ
ಕೋಲಾರ, ಚಿಕ್ಕಬಳ್ಳಾಪುರ ಭಾಗಕ್ಕೆ ಕುಡಿಯುವ ನೀರಿನ ಯೋಜನೆಗಳನ್ನು ನೀಡಿದ್ದೇವೆ, ಬೆಂಗಳೂರು ಗ್ರಾಮಾಂತರವನ್ನು ಬೆಂಗಳೂರು ಉತ್ತರ ಎಂದು ಮರುನಾಮಕರಣಕ್ಕೆ ಬೇಡಿಕೆ ಇಟ್ಟಿದ್ದಾರೆ, ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು.

ಈ ಮೊದಲು ಕನಕಪುರ, ಚನ್ನಪಟ್ಟಣ, ರಾಮನಗರ ಭಾಗ ಬೆಂಗಳೂರು ಗ್ರಾಮಾಂತರ ಕ್ಷೇತ್ರವಾಗಿತ್ತು, ಬೆಂಗಳೂರು ದಕ್ಷಿಣ ಜಿಲ್ಲೆ ನಾಮಕರಣ ನಂತರ ಬೆಂಗಳೂರು ಉತ್ತರ ಜಿಲ್ಲೆ ನಾಮಕರಣಕ್ಕೆ ಶಾಸಕರಿಂದ ಮನವಿ ಬಂದಿದೆ, ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.


