ಬೆಂಗಳೂರು:ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಘಟನೆಗೆ ಕಾಂಗ್ರೆಸ್ ನಡವಳಿಕೆ, ಅದರ ಆಡಳಿತವೇ ಕಾರಣ ಎಂದು ಜೆಡಿಎಸ್ ಮತ್ತು ಬಿಜೆಪಿ ತೀವ್ರ ತರಾಟೆಗೆ ತೆಗೆದುಕೊಂಡಿವೆ.
ರಾಜ್ಯದ ಕೆಲವು ಭಾಗಕ್ಕೆ ಮಾತ್ರ ಸೀಮಿತವಾಗಿದ್ದ ಇಂತಹ ಗಲಭೆ ಕಳೆದ ಎರಡು ವರ್ಷಗಳಿಂದ ಇಡೀ ರಾಜ್ಯಕ್ಕೆ ಹರಡಿ ಶಾಂತಿಯ ತೋಟಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಂಡ ಕಾರಿದ್ದಾರೆ.
ಬಿಜೆಪಿ-ಜೆಡಿಎಸ್ ತರಾಟೆ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತ್ಯೇಕ ಪತ್ರಿಕಾಗೋಷ್ಠಿ ಮತ್ತು ಹೇಳಿಕೆ ನೀಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹಿಂದೂಗಳು ಅಸಮಾಧಾನವಾಗುವ ರೀತಿ ಕಾಂಗ್ರೆಸ್ ಮಾಡುತ್ತಿದೆ, ಇದನ್ನು ನಾವು ರಾಜಕೀಯವಾಗಿ ಹೇಳುತ್ತಿಲ್ಲ, ರಾಜ್ಯದ ಹಲವೆಡೆ ಗಲಾಟೆ ಆಗಲು ಕಾಂಗ್ರೆಸ್ ಪಕ್ಷವೇ ಕಾರಣ.
ಇದರಿಂದ ಆ ಪಕ್ಷದ ಅವನತಿ ಆರಂಭವಾಗಿದೆ ಎಂದು ವಾಗ್ದಾಳಿ ಮಾಡಿರುವ ನಾಯಕರು, ಕಳೆದ ಶುಕ್ರವಾರ ಈದ್ ಮಿಲಾದ್ ಆಚರಣೆ ವೇಳೆ ಮುಸ್ಲಿಂ ಸಮುದಾಯ ಮೆರವಣಿಗೆಗಳನ್ನು ನಡೆಸಿದೆ, ಆದರೆ, ಎಲ್ಲಿಯೂ ಕಲ್ಲು ತೂರಾಟ ಮತ್ತು ಗಲಭೆಗಳು ನಡೆದಿಲ್ಲ.
ಹಿಂದೂಗಳನ್ನು ಕೆಣಕುವ ಕೆಲಸ
ಗಣೇಶ ವಿಸರ್ಜನೆ ವೇಳೆ ಮದ್ದೂರು ಅಷ್ಟೇ ಅಲ್ಲ, ರಾಜ್ಯದ ಕೆಲವು ಭಾಗಗಳಲ್ಲಿ ಈ ಸಮುದಾಯ ಕಲ್ಲು ತೂರಾಟ ನಡೆಸಿ ಹಿಂದೂಗಳನ್ನು ಕೆಣಕುವ ಕೆಲಸ ಮಾಡಿದ್ದಾರೆ, ಇದಕ್ಕೆ ಸರ್ಕಾರದ ಬೆಂಬಲವೇ ಕಾರಣ.
ಕಳೆದ ಎರಡು ವರ್ಷಗಳಿಂದ ಕೈಕಟ್ಟಿ ಕುಳಿತುಕೊಳ್ಳುವಂತೆ ಪೋಲಿಸರನ್ನು ನಿಸ್ಸಹಾಯಕ ಮಾಡಿದೆ, ಇದು ಪೋಲಿಸರ ವೈಫಲ್ಯವಲ್ಲ, ಗುಪ್ತಚರ ಮತ್ತು ಸರ್ಕಾರದ ವೈಫಲ್ಯ ಎಂದು ಗುಡುಗಿದ್ದಾರೆ.
ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವ ಏಕೈಕ ಉದ್ದೇಶದಿಂದ ಹಿಂದೂಗಳ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತಿದೆ, ಈ ಘಟನೆ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಎರಡನೇ ದರ್ಜೆ ಪ್ರಜೆ
ಜಾತ್ಯತೀತ ಸರ್ಕಾರದಲ್ಲಿ ಹಿಂದೂಗಳು ಎರಡನೇ ದರ್ಜೆ ಪ್ರಜೆಗಳಾಗಿದ್ದಾರೆ, ನಿಮ್ಮ ಬ್ರದರ‍್ಸ್‌ಗಳು ನಿರಂತರವಾಗಿ ದಾಳಿ ಮಾಡುತ್ತಿದ್ದರೂ, ನೀವು ಕೈಕಟ್ಟಿ ಕುಳಿತಿದ್ದೀರಿ ಎಂದು ಆರೋಪಿಸಿದ್ದಾರೆ.
ಈ ಮಧ್ಯೆ, ಮದ್ದೂರು ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪೋಲಿಸ್ ಮಹಾನಿರ್ದೇಶಕರನ್ನು ಸಂಪರ್ಕಿಸಿ ಹೆಚ್ಚಿನ ಬಿಗಿ ಬಂದೋಬಸ್ತ್ ವಹಿಸಿ ಕಿಡಿಗೇಡಿಗಳನ್ನು ಬಂಧಿಸುವಂತೆ ಆದೇಶಿಸಿದ್ದಾರೆ.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರನ್ನು ಕರೆಸಿಕೊಂಡು ಘಟನೆ ಬಗ್ಗೆ ಮಾಹಿತಿ ಪಡೆದು, ಪರಿಸ್ಥಿತಿ ಶಾಂತಗೊಳ್ಳುವವರೆಗೆ ಮದ್ದೂರಿನಲ್ಲಿ ಬಿಡಾರ ಹೂಡುವಂತೆ ಸೂಚಿಸಿದ್ದಾರೆ.
೨೧ ಜನರ ಬಂಧನ
ಮುಖ್ಯಮಂತ್ರಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ, ಗಣೇಶ ಮೆರವಣಿಗೆ ವೇಳೆ ಮಸೀದಿ ಕಡೆಯಿಂದ ಕಲ್ಲುಗಳು ಎಸೆದ ಮಾಹಿತಿ ಇದೆ, ಈ ಬಗ್ಗೆ ವಿಚಾರಣೆ ನಂತರ 21 ಜನರನ್ನು ಬಂಧಿಸಲಾಗಿದೆ, ಯಾವ ಹಿಂದೂಗಳ ಮೇಲೂ ಕೇಸ್ ದಾಖಲಾಗಿಲ್ಲ, ಗಲಭೆ ನಡೆದ ಕೆಲವೇ ಗಂಟೆಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಘಟನೆ ನಡೆದ ತಕ್ಷಣ ಕ್ರಮ ತೆಗೆದುಕೊಂಡ ಪ್ರಕರಣ ಬೇರೆ ಯಾವುದೂ ಇಲ್ಲ, ಬಿಜೆಪಿ ಹಾಗೂ ಕೆಲವು ಜೆಡಿಎಸ್ ನಾಯಕರು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ, ಇನ್ನಷ್ಟು ಬಿಗಿ ಕ್ರಮ ತೆಗೆದುಕೊಳ್ಳಲು ಹೇಳಬಹುದಿತ್ತು, ಅದು ಬಿಟ್ಟು ಕೋಮುಗಲಭೆಗೆ ಪ್ರಚೋದನೆ ಕೊಡಬಾರದಿತ್ತು.
ಮದ್ದೂರಿನಲ್ಲಿ ಹಿಂದೆ ಎಂದೂ ಈ ರೀತಿ ಘಟನೆ ನಡೆದಿಲ್ಲ, ಹೊರಗಡೆಯಿಂದ ಬಂದು ಯಾರೋ ಗಲಭೆ ಮಾಡಿರಬಹುದು ಎಂಬ ಬಗ್ಗೆ ವಿಚಾರಣೆ ಮಾಡುತ್ತಿದ್ದೇವೆ, ಯಾವುದೇ ಸಮಾಜದವರಿದ್ರೂ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ, ಬಿಜೆಪಿ, ಜೆಡಿಎಸ್ ರಾಜಕಾರಣ ಮೂಲಕ ನಮ್ಮನ್ನು ಎದುರಿಸಲಾಗದೆ ಪ್ರಚೋದನೆ ಮಾಡುತ್ತಿದ್ದಾರೆ.
ಯಾರ ಓಲೈಕೆ
ನಾವು ಯಾರ ಓಲೈಕೆಯನ್ನೂ ಮಾಡುತ್ತಿಲ್ಲ, ಹಾಗಿದ್ದಿದ್ದರೆ 21 ಜನರ ಬಂಧನ ಏಕೆ ಮಾಡುತ್ತಿದ್ದೆವು.
ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ, ಸದನದಲ್ಲಿ ನಮ್ಮನ್ನು ಎದುರಿಸಲೂ ಆಗೋದಿಲ್ಲ, ಆದ್ದರಿಂದ ಇಂತಹಾ ಘಟನೆಗಳು ನಡೆದಾಗ ಪ್ರಚೋದನೆ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದರು.

