ಬೆಂಗಳೂರು:ಬೀದರ್ ಜಿಲ್ಲೆ ಔರಾದ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರೊಬ್ಬರು ಡಿಜಿಟಲ್ ಬಂಧನದ ಬ್ಲಾಕ್‌ಮೇಲ್‌ಗೆ ಹೆದರಿ ವಂಚಕರಿಗೆ 31 ಲಕ್ಷ ರೂ. ವರ್ಗಾಯಿಸಿ ಮೋಸ ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸಿಬಿಐ ಅಧಿಕಾರಿಗಳೆಂದು ಹಣ ಪಡೆದಿದ್ದು, ನಕಲಿ ವಿಡಿಯೊ ಕಾನ್ಫರೆನ್ಸಿಂಗ್ ನ್ಯಾಯಾಲಯ ಸೃಷ್ಟಿಸಿ, ವಾದ-ಪ್ರತಿವಿವಾದಗಳ ನಾಟಕವಾಡಿದ್ದಾರೆ.
ಮನಿ ಲಾಂಡರಿಂಗ್ ಆರೋಪ
ಕಳೆದ ಆಗಸ್ಟ್ 12ರ ಸಂಜೆ 6 ಗಂಟೆಗೆ ಮಾಜಿ ಶಾಸಕರಿಗೆ ಕರೆ ಮಾಡಿದ ವ್ಯಕ್ತಿ, ತಾನು ಸಿಬಿಐ ಅಧಿಕಾರಿಯಾಗಿದ್ದು, ನೀವು ಮನಿ ಲಾಂಡರಿಂಗ್‌ನಲ್ಲಿ ಭಾಗಿಯಾಗಿರುವ ಆರೋಪವಿದೆ, ಪುರಾವೆಯಾಗಿ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಮನೆ ಮೇಲೆ ದಾಳಿ ಮಾಡಿದಾಗ ನಿಮ್ಮ ಹೆಸರಿನ ಬ್ಯಾಂಕ್ ಖಾತೆಗಳು ಮತ್ತು ಡೆಬಿಟ್ ಕಾರ್ಡ್‌ಗಳು ಪತ್ತೆಯಾಗಿದ್ದು, ಮುಂಬೈನಲ್ಲಿ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿದ್ದಾನೆ.
ಮೊದಲಿಗೆ ಇದು ವಂಚನೆ ಎಂಬ ಅನುಮಾನ ಬಂದಿತಾದರೂ ತಾನು ತನಿಖಾಧಿಕಾರಿ ಎಂಬುದಾಗಿ ನಂಬಿಸುವಲ್ಲಿ ಯಶಸ್ವಿಯಾಗಿದ್ದಾನೆ.
ಸಾಕಷ್ಟು ಮಾತುಕತೆ ನಂತರ ವಂಚಕ ವ್ಯಕ್ತಿ ಮಾಜಿ ಶಾಸಕರ ಜೀವನ ಚರಿತ್ರೆ, ಆಸ್ತಿ ವಿವರ ಪಡೆದುಕೊಂಡು, ಕರೆಯನ್ನು ಇನ್ನೊಬ್ಬ ಹಿರಿಯ ಅಧಿಕಾರಿಗೆ ವರ್ಗಾಯಿಸುವುದಾಗಿ ಹೇಳಿದ್ದಾನೆ.
ವಿಚಾರಣೆಯಿಂದ ವಿನಾಯಿತಿ
ನಂತರ ನೀರಜ್ ಕುಮಾರ್ ಎಂಬ ವ್ಯಕ್ತಿ ಮಾತನಾಡಿ, ತಾನು ಡಿಸಿಪಿ ಎಂದು ಪರಿಚಯಿಸಿಕೊಂಡಾಗ ಮಾಜಿ ಶಾಸಕರು ಪ್ರಕರಣದ ವಿಚಾರಣೆಯಿಂದ ವಿನಾಯಿತಿ ನೀಡುವಂತೆ ಕೋರಿದ್ದಾರೆ.
ಆಗ ಆ ಅಧಿಕಾರಿ, ನಿಮ್ಮ ವಯಸ್ಸು ಮತ್ತು ಹಿನ್ನೆಲೆ ಪರಿಗಣಿಸಿ, ವರ್ಚುವಲ್ ತನಿಖೆ ನಡೆಸುವುದಾಗಿ ಮತ್ತು ಡಿಜಿಟಲ್ ಬಂಧನದಲ್ಲಿ ಇರಿಸುವುದಾಗಿ ತಿಳಿಸಿದ್ದಾನೆ.
ವಾಟ್ಸಾಪ್ ಕರೆ ಮೂಲಕ ಮಾಜಿ ಶಾಸಕರನ್ನು ಕಣ್ಗಾವಲಿನಲ್ಲಿ ಇರಿಸಿ, ಇದು ಬಹಳ ಸೂಕ್ಷ್ಮ ಪ್ರಕರಣವಾಗಿದ್ದು, ಯಾರಿಗೂ ತಿಳಿಸದಂತೆ ಎಚ್ಚರಿಸಿದ್ದಾರೆ.
ಪೊಲೀಸ್ ಠಾಣೆ ಸೆಟಪ್
ಅಲ್ಲದೆ, ವಿಡಿಯೊ ಕರೆಯಲ್ಲಿ ಪೊಲೀಸ್ ಠಾಣೆಯಂತೆ ಕಾಣುವ ಸೆಟಪ್‌ನಲ್ಲಿ ವಂಚಕರು ತಮ್ಮ ಐಡಿ ಕಾರ್ಡ್‌ಗಳು, ಬಂಧನ ವಾರೆಂಟ್ ಮತ್ತು ದಾಖಲಾದ ಪ್ರಕರಣದ ಪ್ರತಿ ತೋರಿಸಿದ್ದಾರೆ.
ಮರುದಿನ ಮಧ್ಯಾಹ್ನ 1 ಗಂಟೆ ಸುಮಾರಿಗೆ, ವಂಚಕರು ಮಾಜಿ ಶಾಸಕರನ್ನು ವಿಡಿಯೊ ಕರೆ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಪೊಲೀಸರ ವಾದ ಮತ್ತು ಆರೋಪಿತ ವ್ಯಕ್ತಿಯ ವಾದ-ಪ್ರತಿವಾದ ಆಲಿಸಲಾಗಿದೆ.
ನಂತರ ನ್ಯಾಯಾಧೀಶರು, ನೀವು ವಂಚನೆ ಮಾಡಿಲ್ಲ ಎಂಬುದಾಗಿ ಮುಚ್ಚಳಿಕೆ ಬರೆದುಕೊಡಿ ಎಂಬುದಾಗಿ ಆದೇಶಿಸಿದ್ದಲ್ಲದೆ, ಪೊಲೀಸ್ ಅಧಿಕಾರಿಗಳು ಸೂಚಿಸಿದ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ 10.99 ಲಕ್ಷ ರೂ. ವರ್ಗಾಯಿಸಲು ತಿಳಿಸಿದಂತೆ ಆರೋಪಿತ ಮಾಜಿ ಶಾಸಕರು ಹಣ ವರ್ಗಾಯಿಸಿದ್ದಾರೆ.
ಪ್ರತಿದಿನ ವಿಚಾರಣೆ
ಇಷ್ಟಕ್ಕೆ ಸುಮ್ಮನಾಗದ ವಂಚಕರು, ಆಗಸ್ಟ್ 14 ರಿಂದ, ನೀರಜ್ ಕುಮಾರ್ ಮತ್ತು ಸಂದೀಪ್ ಕುಮಾರ್ ಎಂಬ ಮತ್ತೊಬ್ಬ ಅಧಿಕಾರಿ ಸೇರಿಕೊಂಡು ಪ್ರತಿದಿನ ಮಾಜಿ ಶಾಸಕರನ್ನು ವಿಚಾರಣೆಗೆ ಒಳಪಡಿಸಿದ್ದಲ್ಲದೆ, ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳು ಮತ್ತು ಇತರ ವೈಯಕ್ತಿಕ ವಿವರಗಳನ್ನೂ ಪಡೆದುಕೊಂಡಿದ್ದಾರೆ.
ನಾಲ್ಕು ದಿನಗಳ ನಂತರ, ಮತ್ತೆ ಕ್ಯಾಮೆರಾದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಆರೋಪಿಯ ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಸಿಬಿಐನಿಂದ ತನಿಖೆಗೊಳಪಡಿಸಲು 20 ಲಕ್ಷ ರೂ. ಠೇವಣಿ ಇಡುವಂತೆ ಪರಿಶೀಲನೆ ನಂತರ ಖಾತೆಗೆ ಹಣ ಹಿಂತಿರುಗಿಸಲಾಗುವುದು ಎಂಬುದಾಗಿ ನ್ಯಾಯಾಧೀಶರು ಭರವಸೆ ನೀಡಿದ್ದಾರೆ.
ಆಗಸ್ಟ್ 18ರಂದು ಆರ್‌ಟಿಜಿಎಸ್ ಮೂಲಕ ಮತ್ತೊಂದು ಖಾತೆಗೆ 20 ಲಕ್ಷ ರೂ. ವರ್ಗಾಯಿಸಲಾಗಿದೆ, ಕೆಲವು ದಿನಗಳ ನಂತರ, ಇದು ವಂಚನೆ ಪ್ರಕರಣ ಎಂದು ಅರಿತ ಮಾಜಿ ಶಾಸಕ ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ವಿಷಯ ತಿಳಿಸಿದ್ದಾರೆ.
ಪ್ರಕರಣ ದಾಖಲು
ಡಿಜಿಟಲ್ ವಂಚನೆಗೊಳಗಾದ ವ್ಯಕ್ತಿ ನೀಡಿದ ದೂರಿನನ್ವಯ ಸೈಬರ್ ಕ್ರೈಂ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಬಿಎನ್‌ಎಸ್ 318 ಮತ್ತು 319ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಾರ್ವಜನಿಕರು ಇಂತಹ ವಂಚನೆಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಪೊಲೀಸರು ಎಚ್ಚರಿಸಿದ್ದಾರೆ.


