ಬೆಂಗಳೂರು:ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಅವಧಿ ವಿಸ್ತರಣೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟಪಡಿಸಿದ್ದು, ಹೈಕೋರ್ಟ್ ಆದೇಶದಂತೆ ಮಾಹಿತಿ ಸಂಗ್ರಹಣೆ ಕಾರ್ಯ ನಡೆಯಲಿದೆ ಎಂದರು.
ಸಮೀಕ್ಷೆ ಕಾರ್ಯ ಚುರುಕುಗೊಳಿಸಿ 11 ದಿನದಲ್ಲೇ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟಾದೇಶ ಮಾಡಿದ್ದೇನೆ.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಗಣತಿ ತಡೆಗೆ ರಾಜ್ಯ ಹೈಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಜಿಲ್ಲಾಡಳಿತಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಸ್ತುವಾರಿ ಸಚಿವರು ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿಕೊಂಡು ಸಮೀಕ್ಷೆಯ ಪ್ರಗತಿ ಕಾರ್ಯ ತ್ವರಿಗೊಳಿಸಲು ಸೂಚಿಸಲಾಗಿದೆ ಎಂದರು.
ಶಿಸ್ತುಕ್ರಮದ ಎಚ್ಚರಿಕೆ
ಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರು ವಹಿಸಲಾಗಿರುವ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸದಿದ್ದರೆ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪ್ರತಿದಿನ ಜಿಲ್ಲಾವಾರು ಕನಿಷ್ಠ ಶೇಕಡ 10ರಷ್ಟು ಸಮೀಕ್ಷಾ ಗುರಿ ಸಾಧಿಸಬೇಕು, ಗಣತಿಯಲ್ಲಿ ನಿರ್ಲಕ್ಷ್ಯ ತೋರುವ ಗಣತಿದಾರರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಆಯಾ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಕಟ್ಟಾದೇಶ ಮಾಡಿದ್ದೇನೆ.
ಸಮೀಕ್ಷೆ ಆರಂಭದಲ್ಲಿ ಕೆಲವು ತಾಂತ್ರಿಕ ತೊಂದರೆಯಿಂದ ಮಂದಗತಿಯಲ್ಲಿ ಸಾಗಿತ್ತು, ಈಗ ಎಲ್ಲಾ ತಾಂತ್ರಿಕ ಸಮಸ್ಯೆ ಪರಿಹರಿಸಲಾಗಿದೆ, ಇಂದಿನಿಂದಲೇ ಗಣತಿ ಕಾರ್ಯ ಚುರುಕುಗೊಳ್ಳಬೇಕು ಹಾಗೂ ನಿಗದಿತ ಸಮಯದೊಳಗೆ ಗುರಿ ಮುಟ್ಟಬೇಕು.
ಆನ್‌ಲೈನ್ ಸಮೀಕ್ಷೆಗೂ ಅವಕಾಶ
ಆನ್‌ಲೈನ್ ಮೂಲಕವೂ ಸಮೀಕ್ಷೆಯಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿದೆ, ಇದರ ಪ್ರಯೋಜನ ಪಡೆದುಕೊಳ್ಳಬೇಕು, ಸಮೀಕ್ಷೆ ಸಂದರ್ಭದಲ್ಲಿ ಮನೆಗಳಿಗೆ ಬೀಗ ಹಾಕಿದ್ದರೆ, ಅಂತಹ ಮನೆಗಳ ಗಣತಿ ಕಾರ್ಯವನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕು.
ಸಂಬಂಧಪಟ್ಟ ಅಧಿಕಾರಿಗಳು ಸಮೀಕ್ಷಾ ಕಾರ್ಯಕ್ಕೆ ತಾಂತ್ರಿಕ ತೊಂದರೆಗಳು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು, ತೊಂದರೆಗಳು ಎದುರಾದರೆ ತಕ್ಷಣ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಮೀಕ್ಷೆ ಕಾರ್ಯವನ್ನು ಎಲ್ಲಾ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು.
2 ಕೋಟಿಗೂ ಹೆಚ್ಚು ಕುಟುಂಬ
ರಾಜ್ಯದಲ್ಲಿ ಒಟ್ಟು 2 ಕೋಟಿಗೂ ಹೆಚ್ಚು ಕುಟುಂಬಗಳ ಸಮೀಕ್ಷೆ ನಡೆಸಬೇಕಿದ್ದು, ಇದುವರೆಗೆ 2,76,016 ಕುಟುಂಬಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲಾಗಿದೆ.
ರಾಜ್ಯದ ಪ್ರತಿಯೊಂದು ಕುಟುಂಬಗಳ ಸಮೀಕ್ಷೆ ಕೈಗೊಳ್ಳಬೇಕು, ಯಾವುದೇ ಕುಟುಂಬ ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಬೇಕು.
ಸಮೀಕ್ಷೆ ಕಾರ್ಯಕ್ಕೆ ಒಟ್ಟು 1,20,728 ಗಣತಿದಾರರನ್ನು ನಿಯೋಜಿಸಲಾಗಿದೆ, ಒಟ್ಟು 1,22,085 ಗಣತಿ ಬ್ಲಾಕ್‌ಗಳನ್ನು ಗುರುತಿಸಲಾಗಿದ್ದು, ಅಕ್ಟೋಬರ್ 7ರ ಒಳಗೆ ಗಣತಿ ಕಾರ್ಯ ಪೂರ್ಣಗೊಳ್ಳಬೇಕು.
ಶಿಕ್ಷಕರಿಗೆ ಗೌರವಧನ
ಗಣತಿ ನಡೆಸುವ ಶಿಕ್ಷಕರಿಗೆ ಗೌರವಧನದ ಬಗ್ಗೆ ಅನುಮಾನ ಬೇಡ, ಈಗಾಗಲೇ ಗೌರವಧನ ಬಿಡುಗಡೆ ಮಾಡಿದ್ದೇವೆ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಗಣತಿ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು.
ಇದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಮೀಕ್ಷೆ ಮಾತ್ರವಲ್ಲ, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾ ಅಧಿಕಾರಿಗಳು ನಿಗದಿತ ಗುರಿಯ ಪ್ರಗತಿ ಬಗ್ಗೆ ಪ್ರತಿದಿನ ಪರಿಶೀಲನೆ ನಡೆಸಬೇಕು, ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದ್ದೇನೆ.
ಅನುದಾನಿತ ಶಿಕ್ಷಕರ ಸೇವೆ
ಕೆಲವು ಜಿಲ್ಲೆಗಳಲ್ಲಿ ಸಮೀಕ್ಷೆ ನಿಧಾನಗತಿಯಲ್ಲಿದ್ದು ಚುರುಕುಗೊಳಿಸಬೇಕು, ಅಗತ್ಯವಿರುವ ಕಡೆ ಅನುದಾನಿತ ಶಾಲೆಗಳ ಶಿಕ್ಷಕರ ಸೇವೆಯನ್ನೂ ಪಡೆದುಕೊಳ್ಳಬೇಕು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೂ ಸಂಪರ್ಕದಲ್ಲಿರಬೇಕು.
ಸಮೀಕ್ಷೆ ಕಾರ್ಯದ ಮೇಲ್ವಿಚಾರಣೆಗೆ ಪ್ರತಿ ತಾಲ್ಲೂಕಿಗೆ ಜಿಲ್ಲಾಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಯಾವುದೇ ತಾಂತ್ರಿಕ ತೊಂದರೆಗಳು ಎದುರಾದರೆ ಸ್ಥಳೀಯವಾಗಿ ಸಮಸ್ಯೆ ಬಗೆಹರಿಸಲು ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳಲ್ಲಿರುವ ಐಟಿ ತಂತ್ರಜ್ಞರ ನೆರವು ಪಡೆದುಕೊಳ್ಳಬೇಕು ಎಂದರು.
ಬೆಂಗಳೂರು ಸಮೀಕ್ಷೆ ಆರಂಭ
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಸಮೀಕ್ಷೆ ಕಾರ್ಯ ಇಂದಿನಿಂದ ಆರಂಭವಾಗಿದೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 50 ಲಕ್ಷ ಮನೆಗಳಿದ್ದು, ಆದಷ್ಟು ಬೇಗ ಗಣತಿ ಕಾರ್ಯ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು.
ಗುಡ್ಡಗಾಡು ಪ್ರದೇಶಗಳ ವ್ಯಾಪ್ತಿಯ ಶಾಲೆಗಳಲ್ಲಿ ಸಮೀಕ್ಷಾ ಕೇಂದ್ರಗಳನ್ನು ಆರಂಭಿಸಲು ಅವಕಾಶ ನೀಡಲಾಗಿದೆ, ಜನರು ಕೇಂದ್ರಕ್ಕೆ ಆಗಮಿಸಿ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದರು.

