ಬೆಂಗಳೂರು:ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ವಾರ್ಷಿಕ 10,000 ಕೋಟಿ ರೂ. ವಹಿವಾಟು ಗುರಿಯ ಚಿಟ್ ಫಂಡ್ ವ್ಯವಹಾರವನ್ನು ಸದ್ಯದಲ್ಲೇ ಆರಂಭಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಎಂಎಸ್‌ಐಎಲ್ ಸದ್ಯಕ್ಕೆ ವಾರ್ಷಿಕ 500 ಕೋಟಿ ರೂ. ಮೊತ್ತದ ಚಿಟ್ ಫಂಡ್ ನಡೆಸುತ್ತಿದೆ, ಕೇರಳ ಸರ್ಕಾರ ವರ್ಷಕ್ಕೆ ಒಂದು ಲಕ್ಷ ಕೋಟಿ ರೂ. ಮೊತ್ತದ ಚಿಟ್ ಫಂಡ್ ನಡೆಸುತ್ತಿದೆ.
ಡಿಜಿಟಲ್ ಸ್ವರೂಪದಲ್ಲಿ
ಎಂಎಸ್‌ಐಎಲ್ ಉಪಕ್ರಮ ಸಂಪೂರ್ಣ ಡಿಜಿಟಲ್ ಸ್ವರೂಪದಲ್ಲಿ ಇರಲಿದೆ, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಮಾತುಕತೆ ನಡೆಸಿದ್ದು, ಸದ್ಯದಲ್ಲೇ ಉದ್ಘಾಟನೆ ಮಾಡಲಾಗುವುದು.
ಒಂದು ಶತಮಾನದ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ ಮತ್ತು ಸೋಸಲೆ ಗರಳಪುರಿ ಶಾಸ್ತ್ರಿಗಳು ಒಟ್ಟಾಗಿ ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ ಆರಂಭಿಸಿದ್ದು, ಸಂಸ್ಥೆ ’ಕಾಂತಾರ- ಚಾಪ್ಟರ್-1’ ಚಲನಚಿತ್ರಕ್ಕೆ ಸುಗಂಧ ಭಾಗೀದಾರ ಆಗಿದೆ.
ಸಂಸ್ಥೆ ಉತ್ಪನ್ನಗಳಿಗೆ ಅಖಿಲ ಭಾರತ ಮಟ್ಟದಲ್ಲಿ ಮಾರುಕಟ್ಟೆ ಸಿಗಲಿದೆ, ಜೊತೆಗೆ ಚಿತ್ರ ಬಿಡುಗಡೆ ಮಾಡುವ 30 ದೇಶಗಳಲ್ಲಿ ಸಂಸ್ಥೆ ಉತ್ಪನ್ನಗಳು ಜನರನ್ನು ತಲುಪಲಿವೆ, ’ಕಾಂತಾರ’ ಸುಗಂಧ ಭಾಗೀದಾರ ಆಗುವ ಮೂಲಕ ಮಾರುಕಟ್ಟೆ ವಿಭಾಗ ಮತ್ತಷ್ಟು ಶಕ್ತಗೊಳ್ಳಲಿದೆ.
ಹೊಂಬಾಳೆ ಫಿಲಂಸ್ ಜೊತೆ ವ್ಯವಹಾರ
ಹೊಂಬಾಳೆ ಫಿಲಂಸ್ ಮತ್ತು ರಿಷಭ್ ಶೆಟ್ಟಿ ಈ ಸಂಬಂಧ ಕೆಎಸ್‌ಡಿಎಲ್ ಜತೆ ವ್ಯಾವಹಾರಿಕ ಆಸಕ್ತಿ ತೋರಿಸಿರುವುದು ಸಂತಸದ ಸಂಗತಿ ಎಂದರು.
ಕೆಎಸ್‌ಡಿಎಲ್ 1,700 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸುತ್ತಿದ್ದು, 415 ಕೋಟಿ ರೂ. ಲಾಭ ಗಳಿಸಿದೆ, ಮುಂದಿನ ದಿನಗಳಲ್ಲಿ ವಾರ್ಷಿಕ 10 ಸಾವಿರ ಕೋಟಿ ರೂ.ಗೆ ಕೊಂಡೊಯ್ಯಲಾಗುವುದು.
ಕಾಂತಾರ ಸಿನಿಮಾ ಏಕಕಾಲದಲ್ಲಿ ದೇಶ-ವಿದೇಶಗಳ 13,500 ತೆರೆಗಳಲ್ಲಿ ಪ್ರದರ್ಶನ ಕಾಣಲಿದೆ, ಕೆಎಸ್‌ಡಿಎಲ್ ಮೂಲಕ ಕಳೆದ ಎರಡು ವರ್ಷಗಳಲ್ಲಿ 22 ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಪಾಟೀಲ್ ತಿಳಿಸಿದರು.
ಔಷಧೋತ್ಪನ್ನಗಳ ಮೇಲೆ ಅಮೆರಿಕ ಸುಂಕ
ಭಾರತದ ಔಷಧೋತ್ಪನ್ನಗಳ ಮೇಲೆ ಅಮೆರಿಕ ಹೇರುತ್ತಿರುವ ವಿಪರೀತ ಸುಂಕ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತ್ವರಿತವಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಉತ್ಪಾದನೆ ಹಾಗೂ ರಫ್ತಿನಲ್ಲಿ ಚೀನಾ, ವಿಯಟ್ನಾಂ ನಮಗಿಂತ ಮುಂದಿವೆ, ಈ ರಾಷ್ಟ್ರಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ರಮವಾಗಿ ಶೇ.30 ಮತ್ತು ಶೇ.19ರಷ್ಟು ಮಾತ್ರ ಸುಂಕ ಹಾಕಿದ್ದಾರೆ, ಆದರೆ, ಭಾರತದ ಉತ್ಪನ್ನಗಳ ಮೇಲೆ ಶೇ.50ರಷ್ಟು ಸುಂಕ ಹೇರಿರುವುದು ನಮ್ಮ ದೇಶದ ಉತ್ಪಾದಕರಿಗೆ ಭಾರೀ ಹೊಡೆತ ಬೀಳುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಕಳೆದ ಬಾರಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ’ಅಬ್ ಕೀ ಬಾರ್ ಟ್ರಂಪ್’ ಎಂದು ಪ್ರಚಾರ ಮಾಡಿದ್ದರಾದರೂ, ಜೋ ಬೈಡನ್ ಗೆದ್ದರು, ಅವರು ಭಾರತದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಲಿಲ್ಲ, ಈ ಬಾರಿ ಗೆದ್ದು ಬಂದ ಟ್ರಂಪ್ ಭಾರತದ ಉತ್ಪನ್ನಗಳ ಆಮದು ಮೇಲೆ ಅತಾರ್ಕಿಕ ಸುಂಕ ವಿಧಿಸುತ್ತಿದ್ದು, ನಾವು ಇದರ ದುಷ್ಪರಿಣಾಮ ಎದುರಿಸಬೇಕಾಗಿದೆ.
ಆಘಾತಕಾರಿ ತೀರ್ಮಾನಗಳು
ಎಚ್1-ಬಿ ವೀಸಾ ಮೇಲೆ ವರ್ಷಕ್ಕೆ ಒಂದು ಲಕ್ಷ ಅಮೆರಿಕನ್ ಡಾಲರ್ ಶುಲ್ಕ ವಿಧಿಸಿರುವುದು ಆಘಾತಕಾರಿಯಾಗಿದೆ, ಇಂತಹ ತೀರ್ಮಾನಗಳು ಭಾರತದ ಐಟಿ ಸೇವೆ ಮತ್ತು ಎಫ್‌ಡಿಐ ಮೇಲೆ ಕರಿಛಾಯೆ ಮೂಡಿಸಿದೆ, ಇದನ್ನೂ ಪರಿಹರಿಸಬೇಕು.
ಭಾರತದ ಎಲೆಕ್ಟ್ರಾನಿಕ್ ಮತ್ತು ಫಾರ್ಮಾ ಉತ್ಪನ್ನಗಳಿಗೆ ಸುಂಕ ವಿನಾಯಿತಿ ನೀಡಲಾಗಿತ್ತು, ಆದರೆ, ಈಗ ಫಾರ್ಮಾ ಉತ್ಪನ್ನಗಳನ್ನೂ ಬಿಟ್ಟಿಲ್ಲ, ಇದರಿಂದ ಕರ್ನಾಟಕ ಮಾತ್ರವಲ್ಲ, ಇಡೀ ಭಾರತದ ಮೇಲೆ ಪರಿಣಾಮ ಉಂಟು ಮಾಡುತ್ತಿದೆ.
ಟ್ರಂಪ್ ಏನೇ ಮಾಡಲಿ, ನಾವು ದೇಶದ ಪರವಾಗಿದ್ದೇವೆ, ನಮ್ಮಲ್ಲಿ ಅಪಾರ ಪ್ರತಿಭೆ ಇದೆ ಎಂದು ಪಾಟೀಲ್ ತಿಳಿಸಿದ್ದಾರೆ.

