ಬೆಂಗಳೂರು:ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ನವೆಂಬರ್ 14ರಿಂದ ಯೂರೋಪ್ ಪ್ರವಾಸ ಕೈಗೊಳ್ಳುತ್ತಿರುವುದು ಕರ್ನಾಟಕದ ಅಧಿಕಾರ ಹಸ್ತಾಂತರ ತಿಕ್ಕಾಟ ಜೀವಂತವಾಗಿ ಉಳಿಯಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ಎರಡೂವರೆ ವರ್ಷಕ್ಕೆ ತಲುಪುತ್ತಿರುವ ಹಿನ್ನೆಲೆಯಲ್ಲಿ ಉಳಿದ ಅವಧಿಗೆ ತಮಗೆ ಅವಕಾಶ ನೀಡಬೇಕೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿ ವರಿಷ್ಠರ ಬೆನ್ನತ್ತಿದ್ದಾರೆ.
ದೆಹಲಿ ನಾಯಕರ ಮೇಲೆ ಒತ್ತಡ
ಇದರ ನಡುವೆ ಸಿದ್ದರಾಮಯ್ಯ ಪ್ರಸಕ್ತ ಅವಧಿ ಪೂರ್ಣಗೊಳಿಸಲು ಅವಕಾಶ ಮಾಡಿಕೊಡಬೇಕು ಹಾಗೂ ಕಾಮರಾಜ್ ಸೂತ್ರದಡಿ ಸಂಪುಟ ಪುನರ್ ರಚನೆಗೆ ಅನುವು ಮಾಡಿಕೊಡಬೇಕೆಂದು ಮತ್ತೊಂದೆಡೆ ಮುಖ್ಯಮಂತ್ರಿ, ದೆಹಲಿ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ.
ಇದೇ ಉದ್ದೇಶಕ್ಕಾಗಿ ನವೆಂಬರ್ 15ರಿಂದ ಸಿದ್ದರಾಮಯ್ಯ ನಾಲ್ಕೈದು ದಿನಗಳ ಮಟ್ಟಿಗೆ ದೆಹಲಿಗೆ ಖಾಸಗಿ ಕಾರ್ಯಕ್ರಮ ನಿಮಿತ್ತ ತೆರಳುತ್ತಿದ್ದಾರೆ.
ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಭೇಟಿ ಮಾಡಿ, ತಮ್ಮ ಸಂಪುಟದಲ್ಲಿ ಹೊಸಬರಿಗೆ ಅವಕಾಶ ಮಾಡಿಕೊಡುವಂತೆ ಕೋರಲು ತೆರಳುತ್ತಿದ್ದಾರೆ.
ಸಂಪುಟ ಪುನರ್ ರಚನೆ
ಸಂಪುಟ ಪುನರ್ ರಚನೆಗೆ ಅವಕಾಶ ಮಾಡಿಕೊಟ್ಟರೆ ನಾಯಕತ್ವ ವಿವಾದಕ್ಕೆ ತೆರೆ ಎಳೆದಂದಾಗುತ್ತದೆ ಎಂಬ ದೂರದೃಷ್ಟಿ ಮುಖ್ಯಮಂತ್ರಿ ಅವರದು.
ಮುಖ್ಯಮಂತ್ರಿ ಅವರ ಇಚ್ಛೆಗೆ ವಿರುದ್ಧವಾಗಿ ಶಿವಕುಮಾರ್ ಈಗಾಗಲೇ ದೆಹಲಿಯಲ್ಲಿ ರಾಜಕೀಯ ಕಸರತ್ತು ನಡೆಸಿ ನವೆಂಬರ್‌ನಲ್ಲೇ ಅಧಿಕಾರ ಪಡೆದುಕೊಳ್ಳಬೇಕೆಂದು ಪಟ್ಟು ಹಿಡಿದು, ತಮ್ಮದೇ ಮಾರ್ಗದಲ್ಲಿ ಹೋರಾಟ ಮುಂದುವರೆಸಿದ್ದಾರೆ.
ಅಧಿಕಾರ ಹಂಚಿಕೆ ವಿಷಯದಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ತಮ್ಮ ತಮ್ಮ ಪಟ್ಟುಗಳನ್ನು ಬಿಗಿ ಮಾಡಿಕೊಳುತ್ತಿದ್ದಂತೆ ರಾಹುಲ್ ಗಾಂಧಿ ಹಠಾತ್ತಾಗಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ.
ದೆಹಲಿಯಲ್ಲೇ ಬಿಡಾರ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನವೆಂಬರ್ 15ರಿಂದ ದೆಹಲಿಯಲ್ಲೇ ಬಿಡಾರ ಹೂಡಿ ಕಸರತ್ತು ನಡೆಸಲಿದ್ದರೆ, ಇದಕ್ಕೂ ಮುನ್ನವೇ 14ರ ತಡರಾತ್ರಿ ರಾಹುಲ್ ಗಾಂಧಿ ಫಿನ್‌ಲ್ಯಾಂಡ್‌ಗೆ ತೆರಳುತ್ತಿರುವುದು ಇವರಾರಿಗೂ ಭೇಟಿಗೆ ಅವಕಾಶ ದೊರೆಯದಂತಾಗಿದೆ.
ಫಿನ್‌ಲ್ಯಾಂಡ್‌ನಿಂದ ರಾಹುಲ್ ಗಾಂಧಿ ನವೆಂಬರ್ 22 ಇಲ್ಲವೇ 28ಕ್ಕೆ ಭಾರತಕ್ಕೆ ಹಿಂದಿರುಗುವ ಟಿಕೆಟ್ ಕಾಯ್ದಿರಿಸಿದ್ದಾರೆ.
ಈ ಅವಧಿಯಲ್ಲಿ ಅವರು ಕರ್ನಾಟಕದಲ್ಲಿ ಪಕ್ಷದ ಕಾರ್ಯಕ್ರಮ ಸೇರಿದಂತೆ ಒಟ್ಟು ನಾಲ್ಕು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಮಯ ನೀಡಿದ್ದರು.
ರಾಹುಲ್ ಕಚೇರಿ ಸಂದೇಶ
ನಿಗದಿತ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿಲ್ಲ ಎಂಬುದಾಗಿ ರಾಹುಲ್ ಕಚೇರಿ ಈಗಾಗಲೇ ಸಂಬಂಧಪಟ್ಟವರ ಗಮನಕ್ಕೆ ತಂದಿದೆಯಂತೆ.
ಶಿವಕುಮಾರ್ ನವೆಂಬರ್‌ನಲ್ಲೇ ಮುಖ್ಯಮಂತ್ರಿ ಆಗಬೇಕೆಂಬ ಪಟ್ಟು ಹಿಡಿದು ಕಳೆದ ಒಂದು ವಾರದಲ್ಲಿ ಎರಡು ಬಾರಿ ದೆಹಲಿ ಪ್ರವಾಸ ಕೈಗೊಂಡಿದ್ದಾರೆ.
ಕಳೆದ ಎರಡು ದಿನಗಳಿಂದ ದೆಹಲಿಯಲ್ಲೇ ಬಿಡಾರ ಹೂಡಿರುವ ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎರಡು ಬಾರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಖರ್ಗೆ ಅಲ್ಲದೆ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ನಾಲ್ವರು ಮುಖಂಡರನ್ನು ಭೇಟಿ ಮಾಡಿ ಅಧಿಕಾರ ಹಸ್ತಾಂತರಕ್ಕೆ ಮನವಿ ಮಾಡಿದ್ದಾರೆ.

