ಬೆಂಗಳೂರು:ಕರ್ನಾಟಕದ ಉತ್ಪನ್ನಗಳಿಗೆ ಜಾಗತಿಕಮಟ್ಟದಲ್ಲಿ ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಸಾಧಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರ ಸಾಂದ್ರತೆಯಲ್ಲಿ ದೇಶದಲ್ಲೇ 3ನೇ ಸ್ಥಾನದಲ್ಲಿದ್ದು, ಪ್ರತೀದಿನ ಹತ್ತಾರು ಸಾವಿರ ಮಂದಿ ದೇಶ-ವಿದೇಶಗಳಿಂದ ಆಗಮಿಸುತ್ತಾರೆ.
ಕರ್ನಾಟಕ ವೈಭವ ಪರಿಚಯ
ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕರ್ನಾಟಕದ ವೈಭವ, ಪರಂಪರೆ ಮತ್ತು ಕೈಗಾರಿಕಾ ಉತ್ಪನ್ನಗಳ ಪರಿಚಯ ಮಾಡಿಕೊಡಲು ಕಲಾಲೋಕ ಮಳಿಗೆ ನಿರ್ಮಿಸಲಾಗಿದೆ ಎಂದರು.
ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ನಲ್ಲಿ ಸ್ಥಾಪಿಸಿರುವ ಕಲಾಲೋಕ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಅಭಿಮಾನದ ಪಯಣ ಅರ್ಥವಾಗಬೇಕು ಎಂಬಕಾರಣಕ್ಕೆ ಕಲಾಲೋಕ ಮಳಿಗೆ ಆರಂಭಿಸಲಾಗಿದೆ, ಕರ್ನಾಟಕದ ಕೈಗಾರಿಕಾ ಭೂಪಟದಲ್ಲಿ ಇದು ಸಂತಸದ ಕ್ಷಣವಾಗಿದೆ ಎಂದರು.
ದೇಶ-ವಿದೇಶಗಳ ಗ್ರಾಹಕರಿಗೆ ಕರ್ನಾಟಕದ ಹೆಮ್ಮೆಯ ಪಾರಂಪರಿಕ ಮತ್ತು ಜಿಐ ಮಾನ್ಯತೆಯ ವಿಶಿಷ್ಟ ಉತ್ಪನ್ನಗಳನ್ನು ತಲುಪಿಸುವ ಉದ್ದೇಶದಿಂದ ಕೈಗಾರಿಕಾ ಇಲಾಖೆ ಆಕರ್ಷಕ ಮತ್ತು ಸುಸಜ್ಜಿತ ಕಲಾಲೋಕ ಮಳಿಗೆ ಆರಂಭಿಸಿದೆ ಎಂದರು.
ಜಿ.ಐ. ಮಾನ್ಯತೆಯ 45 ಉತ್ಪನ್ನ
ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಟರ್ಮಿನಲ್-2ರ ಸಮೀಪ ನಿರ್ಮಿಸಿರುವ ಕಲಾಲೋಕ ಮಳಿಗೆಯಲ್ಲಿ ಪಾರಂಪರಿಕ ಉತ್ಪನ್ನಗಳಾದ ಮೈಸೂರು ಸ್ಯಾಂಡಲ್ ಸೋಪ್, ಗಂಧದ ಎಣ್ಣೆ, ಅಗರಬತ್ತಿ, ಮೈಸೂರು ಸಿಲ್ಕ್, ಚನ್ನಪಟ್ಟಣದ ಬೊಂಬೆ, ಲಿಡ್ಕರ್ ಉತ್ಪನ್ನಗಳು, ಪರಿಮಳಯುಕ್ತ ಕಾಫಿ ಪುಡಿ ಮತ್ತು ಪಾನೀಯ, ಕೈಮಗ್ಗ ಉತ್ಪನ್ನಗಳು, ಇಳಕಲ್ ಸೀರೆ, ಲಂಬಾಣಿ ಉಡುಪು, ಗಂಧದ ಕಲಾಕೃತಿ, ಬಿದಿರು ಕಲಾಕೃತಿ, ಮೈಸೂರು ಶೈಲಿ ಕಲಾಕೃತಿ ಸೇರಿದಂತೆ ಜಿ.ಐ. ಮಾನ್ಯತೆಯ 45 ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ ಎಂದರು.
ಪಾರಂಪರಿಕ ಮತ್ತು ಭೌಗೋಳಿಕ ವಿಶಿಷ್ಟತೆಯ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಆಶಯದೊಂದಿಗೆ ಮಳಿಗೆ ಆರಂಭಿಸಲಾಗಿದೆ.
ವಿಮಾನ ನಿಲ್ದಾಣಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ಪ್ರಯಾಣಿಕರಿಗೆ ಒಂದೇ ತಾಣದಲ್ಲಿ ಕರ್ನಾಟಕದ ಅಸ್ಮಿತೆಯ ಅನುಭವ ಆಗಲಿದೆ.
ವಿಮಾನ ನಿಲ್ದಾಣದ ಅಂತಾರಾಷ್ಟ್ರೀಯ ಪ್ರಯಾಣಿಕರ ನಿರ್ಗಮನ ವಲಯದಲ್ಲಿ 140 ಚದರ ಮೀಟರ್‌ನಲ್ಲಿ ಇಂತಹುದೇ ಮತ್ತೊಂದು ಮಳಿಗೆ ಆರಂಭಿಸಲಾಗುವುದು ಎಂದರು.


